ಬಡವರ ಉದ್ಧಾರದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಛತ್ತೀಸಗಢದ ಬಿಜೆಪಿ ಸರ್ಕಾರವು ತನ್ನ ಅಮಾನವೀಯ ಮುಖವನ್ನು ಅನಾವರಣಗೊಳಿಸಿದೆ. ರಾಜಧಾನಿ ರಾಯಪುರದ ವಿಮಾನ ನಿಲ್ದಾಣದ ಸಮೀಪವಿರುವ ನಕ್ಟಿ (ಸಮ್ಮಾನ್‌ಪುರ) ಗ್ರಾಮದಲ್ಲಿ ಶಾಸಕರ ವಸತಿ ಸಮುಚ್ಚಯ (ಎಂಎಲ್ಎ ಕಾಲೊನಿ) ನಿರ್ಮಿಸುವ ವಿಐಪಿ ದಾಹಕ್ಕಾಗಿ, ದಶಕಗಳಿಂದ ವಾಸವಿದ್ದ 70 ರಿಂದ 90ಕ್ಕೂ ಹೆಚ್ಚು ಬಡ ಕುಟುಂಬಗಳ ಸೂರುಗಳ ಮೇಲೆ ಸರ್ಕಾರಿ ಬುಲ್ಡೋಜರ್ ಹರಿಸಿ ನಿರ್ದಯವಾಗಿ ನೆಲಸಮ ಮಾಡಲಾಗಿದೆ.
ಬಿಜೆಪಿಯ ಡಬಲ್ ಎಂಜಿನ್ ಆಡಳಿತದ ಅತಿ ದೊಡ್ಡ ವೈಫಲ್ಯ ಮತ್ತು ವಿಪರ್ಯಾಸವೆಂದರೆ, ನೆಲಸಮಗೊಂಡ ಕಟ್ಟಡಗಳಲ್ಲಿ 30 ಮನೆಗಳು ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ (PMAY) ಹಾಗೂ ಎರಡು ಮನೆಗಳು ‘ಇಂದಿರಾ ಆವಾಸ್ ಯೋಜನೆ’ಯಡಿ ನಿರ್ಮಾಣವಾಗಿದ್ದವು. ಆಧಾರ್, ಪಡಿತರ ಚೀಟಿ ಪರಿಶೀಲಿಸಿ, ಸ್ವತಃ ಸರ್ಕಾರವೇ ಅನುದಾನ ನೀಡಿ ಕಟ್ಟಿಸಿದ ಮನೆಗಳನ್ನು ಇಂದು ಅದೇ ಸರ್ಕಾರ ಅಕ್ರಮ ಎಂದು ಹೇಳಿ ಕೆಡವಿರುವುದು ಈ ಆಡಳಿತದ ದಿವಾಳಿತನವನ್ನು ಎತ್ತಿತೋರಿಸುತ್ತದೆ.
ಇದು ‘ಸಾಮಾನ್ಯ ಗೋಮಾಳ’ ಜಾಗವಾಗಿದ್ದರೂ, ಕಳೆದ ಎಂಟು ತಲೆಮಾರುಗಳಿಂದ (1940ರ ದಶಕದಿಂದಲೂ) ಈ ಬಡವರ ಪೂರ್ವಜರು ಇಲ್ಲಿಯೇ ನೆಲೆಸಿದ್ದರು. ಪಿಎಂ ಆವಾಸ್ ಯೋಜನೆಯ ಹಣದ ಜೊತೆಗೆ, ಕನಸಿನ ಮನೆ ಕಟ್ಟಿಕೊಳ್ಳಲು ಈ ಕುಟುಂಬಗಳು 2 ರಿಂದ 3 ಲಕ್ಷ ರೂಪಾಯಿಗಳವರೆಗೆ ಖಾಸಗಿ ಸಾಲ ಮಾಡಿದ್ದವು. ಇದೀಗ ದಿಢೀರನೆ ಸೂರು ಕಸಿದುಕೊಂಡಿರುವ ಡಬಲ್ ಎಂಜಿನ್ ಸರ್ಕಾರ, ಬಡವರ ತಲೆಯ ಮೇಲೆ ಬೃಹತ್ ಸಾಲದ ಹೊರೆ ಹೊರಿಸಿ ಅವರನ್ನು ಅಕ್ಷರಶಃ ನಡುಬೀದಿಗೆ ತಳ್ಳಿದೆ.
ಈ ಲೇಖನ ಓದಿದ್ದೀರಾ?: 20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?
ತನ್ನ ಈ ಕ್ರೂರ ನಡೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿರುವ ಜಿಲ್ಲಾಡಳಿತವು, 9 ಹೆಕ್ಟೇರ್ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು ಎಂಬ ಸಬೂಬು ನೀಡಿದೆ. ಕಾರ್ಯಾಚರಣೆಗೂ ಮುನ್ನವೇ ನೋಟಿಸ್ ನೀಡಲಾಗಿತ್ತು ಮತ್ತು ನವ ರಾಯಪುರದ ಸೆಕ್ಟರ್-30ರಲ್ಲಿ ಸಂತ್ರಸ್ತರಿಗೆ ಪರ್ಯಾಯ ಫ್ಲಾಟ್‌ಗಳನ್ನು ನೀಡಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಆಡಳಿತ ಯಂತ್ರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ.
ಆದರೆ, ಆಡಳಿತ ವ್ಯವಸ್ಥೆ ನೀಡುತ್ತಿರುವ ಈ ಪುನರ್ವಸತಿಯು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಸರ್ಕಾರ ನೀಡುತ್ತಿರುವ ದೂರದ ಸಣ್ಣ ಫ್ಲಾಟ್‌ಗಳಲ್ಲಿ ವಾಸಿಸಲು ಸಾಧ್ಯವಿಲ್ಲ, ಅಲ್ಲಿ ದೈನಂದಿನ ಉದ್ಯೋಗವಿಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಸೌಲಭ್ಯಗಳಿಲ್ಲ ಎಂದು ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ. ಶಾಸಕರು ಮತ್ತು ವಿಐಪಿಗಳಿಗಾಗಿ ಬಡವರನ್ನು ಒಕ್ಕಲೆಬ್ಬಿಸಿ ಮೂಲಸೌಕರ್ಯಗಳಿಲ್ಲದ ಜಾಗಕ್ಕೆ ಎಸೆಯುವ ಸರ್ಕಾರದ ನೀತಿಯು ಅದರ ಜನವಿರೋಧಿ ಧೋರಣೆಗೆ ಕನ್ನಡಿ ಹಿಡಿದಿದೆ.
ಈ ಘಟನೆಯ ಕುರಿತು ಮಾಜಿ ಸಿಎಂ ಭೂಪೇಶ್ ಬಘೇಲ್ ಭೇಟಿ ನೀಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಡಬಲ್ ಎಂಜಿನ್ ಸರ್ಕಾರದೊಳಗಿನ ಗೊಂದಲ, ಸಮನ್ವಯದ ಕೊರತೆ ಹಾಗೂ ಬಡವರ ಪಾಲಿನ ದಬ್ಬಾಳಿಕೆಯನ್ನು ಜಗಜ್ಜಾಹೀರು ಮಾಡಿದೆ.




