ಸರ್ಕಾರಿ ಆಸ್ತಿಗಳನ್ನು ಮತ್ತು ಸಾರ್ವಜನಿಕ ಮೂಲಸೌಕರ್ಯಗಳನ್ನು ಕಳ್ಳತನ ಮಾಡುವುದರಲ್ಲಿ ಬಿಹಾರದ ಕಳ್ಳರು ದಾಖಲೆ ಬರೆಯುತ್ತಿದ್ದಾರೆ. ಈ ಹಿಂದೆ, ಬೃಹತ್ ರೈಲ್ವೆ ಸೇತುವೆ ಮತ್ತು ರೈಲು ಹಳಿಗಳನ್ನೇ ಕದ್ದಿದ್ದ ಖದೀಮರು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬರೋಬ್ಬರಿ 132 ಅಡಿ ಎತ್ತರದ ಬೃಹತ್ ಮೊಬೈಲ್ ಟವರ್ ಮತ್ತು 15 KVA ತೂಕದ ಜನರೇಟರ್‌ಅನ್ನೇ ಕದಿದ್ದಾರೆ.
ಈ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯ ಡುಮ್ರಾವ್ ಪ್ರದೇಶದಲ್ಲಿ ನಡೆದಿದೆ. ವಸತಿ ಪ್ರದೇಶದ ಮಧ್ಯದಲ್ಲೇ ಇದ್ದ ಇಷ್ಟು ದೊಡ್ಡ ಟವರ್ ಕಳ್ಳತನವಾಗಿರುವುದು ಸ್ಥಳೀಯರನ್ನೂ ಮತ್ತು ಪೊಲೀಸರನ್ನೂ ಆಶ್ಚರ್ಯಗೊಳಿಸಿದೆ.
ಡುಮ್ರಾವ್ ಪ್ರದೇಶದಲ್ಲಿ, ‘ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿ’ ನಿರ್ಮಿಸಿದ್ದ ಮೊಬೈಲ್ ಟವರ್ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿತ್ತು. ಇತ್ತೀಚೆಗೆ ಕಂಪನಿಯ ತಾಂತ್ರಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಅದರ ದುರಸ್ತಿ ಕಾರ್ಯಕ್ಕಾಗಿ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ, ಆ ಜಾಗದಲ್ಲಿದ್ದ ಟವರ್ ನಾಪತ್ತೆಯಾಗಿರುವುದು ಕಂಡುಬಂದಿದೆ.
132 ಅಡಿಯ ಬೃಹತ್ ಕಬ್ಬಿಣದ ಟವರ್ ನಿಂತಿದ್ದ ಜಾಗದಲ್ಲಿ ಕೇವಲ ಖಾಲಿ ನೆಲವಿರುವುದನ್ನು ಕಂಡು ಅಧಿಕಾರಿಗಳು ದಿಗ್ಭ್ರಮೆಗೊಂಡಿದ್ದಾರೆ. ಟವರ್ ಮಾತ್ರವಲ್ಲದೆ, ಅಲ್ಲಿದ್ದ ಬೆಲೆಬಾಳುವ 15 ಕೆವಿಎ ಜನರೇಟರ್ ಸೆಟ್ ಮತ್ತು ಇತರೆ ತಾಂತ್ರಿಕ ಉಪಕರಣಗಳೂ ಮಾಯವಾಗಿದ್ದವು. ಈ ಕುರಿತು ಕಂಪನಿಯ ಪ್ರತಿನಿಧಿಗಳು ತಕ್ಷಣವೇ ಡುಮ್ರಾವ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
“ಟವರ್ ನಾಪತ್ತೆಯಾಗಿರುವ ಬಗ್ಗೆ ಕಂಪನಿಯಿಂದ ದೂರು ಬಂದಿದೆ. ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಭೂಮಿಯ ಮಾಲೀಕರನ್ನು ಮತ್ತು ಸ್ಥಳೀಯರನ್ನು ವಿಚಾರಣೆ ನಡೆಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಬಕ್ಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಂ ಆರ್ಯಾ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಈ ಟವರ್ ಅನ್ನು ಸುಮಾರು 15 ವರ್ಷಗಳ ಹಿಂದೆ ಅಳವಡಿಸಲಾಗಿತ್ತು. ಆದರೆ, ಭೂಮಿಯ ಮಾಲೀಕ ಹರೇನಾಥ್ ಯಾದವ್ ಹೇಳಿವಂತೆ; “ಕಂಪನಿಯೊಂದಿಗೆ ಮಾಡಿಕೊಂಡಿದ್ದ 10 ವರ್ಷಗಳ ಒಪ್ಪಂದವು 2022ರಲ್ಲೇ ಮುಗಿದಿತ್ತು. ಅದಾದ ನಂತರ ಕಂಪನಿಯು ಜಾಗದ ಬಾಡಿಗೆ ನೀಡುವುದನ್ನು ನಿಲ್ಲಿಸಿತ್ತು. ಬಾಡಿಗೆ ಪಾವತಿಸುವಂತೆ ನಾವು ನಾಲ್ಕು ಬಾರಿ ನೋಟಿಸ್ ನೀಡಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈಗ ದಿಢೀರನೆ ಟವರ್ ನಾಪತ್ತೆಯಾಗಿದೆ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ
ಬಿಹಾರದಲ್ಲಿ ಇಂತಹ ವಿಚಿತ್ರ ಕಳ್ಳತನಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳ್ಳರ ಇತಿಹಾಸ ಕೆದಕಿದರೆ ರೋಚಕ ಉದಾಹರಣೆಗಳಿವೆ. 2022ರಲ್ಲಿ, ರೋಹ್ತಾಸ್ ಜಿಲ್ಲೆಯ ಡೆಹ್ರಿ-ಆನ್-ಸೋನ್ ಪ್ರದೇಶದಲ್ಲಿ ಸೋನ್ ನದಿಗೆ ಅಡ್ಡಲಾಗಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ 60 ಅಡಿ ಉದ್ದ ಮತ್ತು 500 ಟನ್ ತೂಕದ ಕಬ್ಬಿಣದ ರೈಲ್ವೆ ಸೇತುವೆಯನ್ನು ಕಳ್ಳರು ಕದ್ದಿದ್ದರು. ಇಲಾಖೆಯ ಅಧಿಕಾರಿಗಳಂತೆ ನಟಿಸಿ, ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ಇಡೀ ಸೇತುವೆಯನ್ನೇ ಗುಜರಿಗೆ ಸಾಗಿಸಿದ್ದರು.
ಇನ್ನು, 2023ರಲ್ಲಿ; ಸಮಸ್ತಿಪುರ ಜಿಲ್ಲೆಯಲ್ಲಿ ಸುಮಾರು 2 ಕಿಲೋಮೀಟರ್ ಉದ್ದದ ರೈಲು ಹಳಿ ಮತ್ತು ಅದರ ಸ್ಕ್ರಾಪ್ ಸಾಮಗ್ರಿಗಳನ್ನು ಕಳ್ಳರು ಯಾರಿಗೂ ತಿಳಿಯದಂತೆ ಕದ್ದೊಯ್ದಿದ್ದರು.
ಈ ಎರಡೂ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದ್ದರೂ ಪೊಲೀಸರಿಗೆ ಯಾವುದೇ ಪ್ರಮುಖ ಸುಳಿವು ಸಿಕ್ಕಿರಲಿಲ್ಲ. ಈಗ ವಸತಿ ಪ್ರದೇಶದ ನಡುವೆ ಇದ್ದ ಇಡೀ ಮೊಬೈಲ್ ಟವರ್ ಅನ್ನೇ ಕಳ್ಳರು ಕದ್ದಿದ್ದಾರೆ.



