- ಮೂರು ಸಂಘಟನೆಗಳಿಂದ ಮಜ್ದೂರ್ ಕಿಸಾನ್ ಸಂಘರ್ಷ ಸಮಾವೇಶ
- ಕೇಂದ್ರದ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ಖಂಡನೆ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಖಂಡಿಸಿ ಮಜ್ದೂರ್ ಕಿಸಾನ್ ಸಂಘರ್ಷ ಎಂಬ ಹೆಸರಿನಲ್ಲಿ ಸಾವಿರಾರು ರೈತರು ಮತ್ತು ಕಾರ್ಮಿಕರು ಬುಧವಾರ (ಏಪ್ರಿಲ್ 5) ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಾರ್ಮಿಕ ಸಂಘಟನೆಗಳ ಕೇಂದ್ರ (ಸಿಐಟಿಯು), ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ (ಎಐಎಡಬ್ಲ್ಯುಯು) ಜಂಟಿಯಾಗಿ ಮಜ್ದೂರ್ ಕಿಸಾನ್ ಸಂಘರ್ಷ ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದವು.
ದೇಶದ ನಾನಾ ಮೂಲೆಗಳಿಂದ ಸಾವಿರಾರು ರೈತರು, ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ ಮೊದಲಾದ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯು ಕೇಂದ್ರದ ದಮನಕಾರಿ ನೀತಿಗಳ ವಿರುದ್ಧ ರೈತರು ಹಾಗೂ ಕಾರ್ಮಿಕರ ಆಕ್ರೋಶದ ದ್ಯೋತಕವಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿಕೆಯೊಂದರಲ್ಲಿ ತಿಳಿಸಿವೆ.
ಬಡ ರೈತ ಹಾಗೂ ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಉತ್ತಮ ಜೀವನ ಕಲ್ಪಿಸಲು ಸರ್ಕಾರದ ನೀತಿಗಳು ರೂಪುಗೊಳ್ಳಲಿ ಎಂದು ರೈತರು ಹಾಗೂ ಕಾರ್ಮಿಕರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಮೊಘಲ್ ಅರಸರ ಕುರಿತ ಅಧ್ಯಯನ ಕಡಿತ
ರೈತ ಹಾಗೂ ಕಾರ್ಮಿಕ ಸಂಘಟನೆಗಳು ಕರೆದಿರುವ ಮಜ್ದೂರ್ ಕಿಸಾನ್ ಸಂಘರ್ಷ ಸಮಾವೇಶದಲ್ಲಿ ಭಾಗವಹಿಸಿದ್ದ ರೈತ ಹಾಗೂ ಕಾರ್ಮಿಕ ನಾಯಕರು ತಾತ್ಕಾಲಿಕವಾಗಿ ನಿರ್ಮಿಸಿದ್ದ ಶಿಬಿರದಲ್ಲಿ ಕುಳಿತು ಬಿಸಿಲಿನಿಂದ ರಕ್ಷಣೆ ಪಡೆದರು.
ಇನ್ನೊಂದೆಡೆ ಭಾರತೀಯ ಕಿಸಾನ್ ಸಂಘದ (ಬಿಕೆಯು) ಸದಸ್ಯರು ಪಟಿಯಾಲದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದರು.