ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ (2027ರ ಫೆಬ್ರವರಿ–ಮಾರ್ಚ್ನಲ್ಲಿ ನಡೆಯುವ ನಿರೀಕ್ಷೆಯಿದೆ) ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತದಾರರನ್ನು ಸೆಳೆಯಲು ಹೊಸ ಯೋಜನೆಗಳನ್ನ ಘೋಷಿಸುತ್ತಿದ್ದಾರೆ. ಹಸು ಖರೀದಿಗೆ ಶೇ. 50ರಷ್ಟು ಸಬ್ಸಿಡಿ, ಬಡ ಕುಟುಂಬಗಳಿಗೆ ಉಚಿತವಾಗಿ 100 ಕೋಳಿ ಮರಿಗಳು, ಲಕ್ಷಾಂತರ ಬೋಧಕೇತರ ಸಿಬ್ಬಂದಿಗೆ ನಗದುರಹಿತ ಆರೋಗ್ಯ ಸೇವೆ ಸೇರಿದಂತೆ ₹1,700 ಕೋಟಿಗೂ ಹೆಚ್ಚಿನ ಯೋಜನೆಗಳಿಗೆ ಒಪ್ಪಿಗೆ ನೀಡುವ ಮೂಲಕ ಬಿಜೆಪಿ ಸರ್ಕಾರ ಚುನಾವಣಾ ತಂತ್ರಕ್ಕೆ ಚಾಲನೆ ನೀಡಿದೆ.
ಹೊರರಾಜ್ಯಗಳಿಂದ ಹಸು ಖರೀದಿಸುವವರಿಗೆ ಶೇ. 50ರಷ್ಟು ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದೆ. ಗರಿಷ್ಠ ಎರಡು ಹಸುಗಳ ಖರೀದಿಗೆ ಈ ಸೌಲಭ್ಯ ಅನ್ವಯವಾಗಲಿದೆ. ₹50,000 ಮೌಲ್ಯದ ಹಸುವಿಗೆ ₹25,000 ಸಬ್ಸಿಡಿ ಸಿಗಲಿದೆ. ಇದು ಬಿಜೆಪಿಯ ಸಾಂಪ್ರದಾಯಿಕ ‘ಹಿಂದುತ್ವ/ಗೋ ಸಂರಕ್ಷಣೆ’ ಅಜೆಂಡಾಕ್ಕೆ ಪೂರಕವಾಗಿದೆ. ಜೊತೆಗೆ ಬಡ ಕುಟುಂಬಗಳಿಗೆ ತಲಾ 100 ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಧರಂಪಾಲ್ ಸಿಂಗ್ ತಿಳಿಸಿದ್ದಾರೆ. ಈ ಮೂಲಕ ಎಸ್ಸಿ/ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಮತಬ್ಯಾಂಕ್ನ್ನು ಗಟ್ಟಿಗೊಳಿಸಿಕೊಳ್ಳಲು ಸರ್ಕಾರ ಯತ್ನಿಸಿದೆ. ಈ ಯೋಜನೆಗಳು ಗ್ರಾಮೀಣ ಕುಟುಂಬಗಳ ಆದಾಯ ಹೆಚ್ಚಿಸಲು ಎಷ್ಟರ ಮಟ್ಟಿಗೆ ನೆರವಾಗಲಿವೆ ಎಂಬುದು ಅನುಷ್ಠಾನದ ಬಳಿಕ ಸ್ಪಷ್ಟವಾಗಲಿದೆ.
ಹಾಲು ಉತ್ಪಾದನೆ ಹೆಚ್ಚಿಸುವುದು, ಜಾನುವಾರುಗಳ ತಳಿಯನ್ನು ಸುಧಾರಿಸುವುದು ಮತ್ತು ರೈತರ ಆದಾಯ ವೃದ್ಧಿಸುವ ಉದ್ದೇಶದಿಂದ ರಾಜ್ಯ ಜಾನುವಾರು ಮಿಷನ್ ಆರಂಭಿಸಲು ಸಂಪುಟ ಅನುಮೋದನೆ ನೀಡಿದೆ. ಹಸುಗಳ ವಿಮಾ ಕಂತಿನ ಶೇ. 85ರಷ್ಟು ಮೊತ್ತವನ್ನು ಸರ್ಕಾರ ಭರಿಸಲಿದ್ದು, ಉಳಿದ ಶೇ. 15ರಷ್ಟು ಮೊತ್ತವನ್ನು ರೈತರು ಪಾವತಿಸಬೇಕು.
ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮತ್ತು ಸಂಸ್ಕೃತ ಪ್ರೌಢಶಾಲೆಗಳ 48,062 ಬೋಧಕೇತರ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರಿಗೆ ₹5 ಲಕ್ಷದವರೆಗೆ ಉಚಿತ ನಗದು ರಹಿತ ಚಿಕಿತ್ಸೆ ಒದಗಿಸಲಾಗುವುದು. ಇದಕ್ಕಾಗಿ ಸರ್ಕಾರವೇ ತಲಾ ₹3,000 ವಾರ್ಷಿಕ ವಿಮಾ ಕಂತು ಪಾವತಿಸಲಿದೆ. ಇದಲ್ಲದೆ ಬೇಸಿಕ್ ಎಜುಕೇಶನ್ ಕೌನ್ಸಿಲ್ ಹಾಗೂ ಸಮಗ್ರ ಶಿಕ್ಷಣ ಯೋಜನೆಯ 1,22,304 ಸಿಬ್ಬಂದಿಗೂ ಈ ಯೋಜನೆ ವಿಸ್ತರಿಸಲಾಗಿದೆ.
‘ಉತ್ತರ ಪ್ರದೇಶ ಒಳನಾಡು ಜಲಸಾರಿಗೆ ನಿಯಮಾವಳಿ’ಗೆ ಅನುಮೋದನೆ ನೀಡಲಾಗಿದ್ದು, ಗಂಗಾ, ಯಮುನಾ, ಸರಯೂ, ಘಾಘ್ರಾ ಸೇರಿದಂತೆ 11 ನದಿಗಳಲ್ಲಿ ಸಂಚರಿಸುವ ದೋಣಿಗಳು ಮತ್ತು ಸ್ಟೀಮರ್ಗಳಿಗೆ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಪ್ರಯಾಣಿಕರಲ್ಲದ ದೋಣಿಗಳಿಗೆ ₹50 ಶುಲ್ಕ ನಿಗದಿಪಡಿಸಲಾಗಿದೆ. ಅನಾಹುತಗಳನ್ನು ತಡೆಯಲು ಮತ್ತು ಭದ್ರತೆ ಹೆಚ್ಚಿಸಲು ಪ್ರಯಾಣಿಕರು ಹಾಗೂ ದೋಣಿ ಚಾಲಕರಿಗೆ ವಿಮೆ ಒದಗಿಸಲಾಗುತ್ತದೆ.
ಗ್ರಾಮ ಪಂಚಾಯತಿ ಚುನಾವಣೆಯ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕನಿಷ್ಠ 6 ತಿಂಗಳಿನಿಂದ ಆ ಗ್ರಾಮದಲ್ಲಿ ವಾಸಿಸುತ್ತಿರುವ, 18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಅರ್ಹರಾಗಿರುತ್ತಾರೆ ಎಂದು ಕಾಯ್ದೆಗೆ ಸ್ಪಷ್ಟ ತಿದ್ದುಪಡಿ ತರಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯ್ದೆ
ಗೌತಮ್ ಬುದ್ಧ ನಗರದಲ್ಲಿ (ನೋಯ್ಡಾ) ಐಟಿ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಪ್ರಮುಖ ನಾಲ್ಕು ಕಂಪನಿಗಳ ಹೂಡಿಕೆ ಪ್ರಸ್ತಾವನೆಗಳಿಗೆ ಸಂಪುಟ ಒಪ್ಪಿಗೆ ನೀಡಿದೆ. ಹ್ಯಾವೆಲ್ಸ್ (₹879 ಕೋಟಿ), ಎಲ್ಜಿ ಸಾಫ್ಟ್ (₹634 ಕೋಟಿ), ಅಮೆರಿಪ್ರೈಸ್ (₹112.84 ಕೋಟಿ) ಮತ್ತು ಮೆಟ್ಲೈಫ್ (₹84 ಕೋಟಿ) ಕಂಪನಿಗಳು ಹೂಡಿಕೆ ಮಾಡಲಿವೆ.
ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಬ್ಸಿಡಿ, ಉಚಿತ ವಿತರಣೆ ಮತ್ತು ಆರೋಗ್ಯ ಸೌಲಭ್ಯಗಳಂತಹ ಘೋಷಣೆಗಳಿಂದ, ಇವು ಸರ್ಕಾರಕ್ಕೆ ಗ್ರಾಮೀಣ, ಬಡ ಮತ್ತು ನೌಕರರ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ರಾಜಕೀಯ ಉಪಕರಣಗಳಾಗಿವೆ. ಇಂತಹ ಬೃಹತ್ ಯೋಜನೆಗಳು ಚುನಾವಣಾ ಲಾಭ ತಂದುಕೊಡುತ್ತವೆಯೇ ಅಥವಾ ಘೋಷಣೆಗಳಾಗಿಯೇ ಉಳಿಯುತ್ತವೆಯೇ ಎಂಬುದು ಮುಂಬರುವ ದಿನಗಳಲ್ಲಿ ಇವುಗಳನ್ನು ಯೋಗಿ ಸರ್ಕಾರ ನೆಲಮಟ್ಟದಲ್ಲಿ ಎಷ್ಟು ಪಾರದರ್ಶಕವಾಗಿ ಮತ್ತು ವೇಗವಾಗಿ ಜಾರಿಗೆ ತರುತ್ತದೆ ಎಂಬುದರ ಮೇಲೆ ಆಧಾರಿತವಾಗಿದೆ.





