ತನ್ನ ವಿಚ್ಛೇದಿತ ಪತ್ನಿಯನ್ನು ಬೈಕ್‌ಗೆ ಕಟ್ಟಿ ದುರುಳನೋರ್ವ ರಸ್ತೆಯುದ್ದಕ್ಕೂ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಾನ್‌ಪಾರಾ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ರಾಮಗಾಂವ್ ಪ್ರದೇಶದ ಮುಸಲ್ಲಂಪುರ ಗ್ರಾಮದ ನಿವಾಸಿ ರಹೀಸ್ ಎಂದು ಗುರುತಿಸಲಾಗಿದೆ. ಈತ ಸುಮಾರು ಒಂದು ವರ್ಷದ ಹಿಂದೆ ನಾನ್‌ಪಾರಾ ನಿವಾಸಿ ರೇಷ್ಮಾ ಅವರನ್ನು ವಿವಾಹವಾಗಿದ್ದ. ಮನಸ್ತಾಪದ ಕಾರಣ ಇಬ್ಬರೂ ಬೇರ್ಪಟ್ಟು ವಿಚ್ಛೇದನ ಪಡೆದಿದ್ದರು.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ಕುದುರೆ ಮೇಲೆ ಮೆರವಣಿಗೆ: ದಲಿತ ವರನ ಮೇಲೆ 40 ಮಂದಿ ಪ್ರಬಲ ಜಾತಿಯ ದುರುಳರಿಂದ ಹಲ್ಲೆ
ವಿಚ್ಛೇದನದ ಬಳಿಕ ಮಹಿಳೆ ತನ್ನ ಪೋಷಕರ ಮನೆಯಲ್ಲೇ ವಾಸಿಸುತ್ತಿದ್ದಳು. ಬುಧವಾರ ನಾನ್‌ಪಾರಾಕ್ಕೆ ರಹೀಸ್ ಬಂದಾಗ ಅಚಾನಕ್ ಆಗಿ ರೇಷ್ಮಾ ಸಿಕ್ಕಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ರಹೀಸ್ ತನ್ನ ಬೈಕ್‌ನಿಂದ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ.
ಅದಾದ ಬಳಿಕ ಆಕೆಯನ್ನು ಬೈಕ್‌ಗೆ ಕಟ್ಟಿ ರಸ್ತೆಯ ಉದ್ದಕ್ಕೂ ಎಳೆದುಕೊಂಡು ಹೋಗಿದ್ದಾನೆ. ಆಕೆಯ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಆಕೆಯನ್ನು ರಕ್ಷಿಸಿದ್ದಾರೆ. ಆಕ್ರೋಶಗೊಂಡ ಸ್ಥಳೀಯರು ಆರೋಪಿಯನ್ನು ಥಳಿಸಿದ್ದಾರೆ. ಅದಾದ ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಯನ್ನು ವಶಕ್ಕ ಪಡೆದಿದ್ದಾರೆ. ಸದ್ಯ ಗಾಯಾಳುಗಳಿಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
“ಸದ್ಯ ಆರೋಪಿ ವಿರುದ್ಧ ಕೊಲೆ ಯತ್ನ, ಕಳ್ಳತನ, ಕ್ರಿಮಿನಲ್ ಬೆದರಿಕೆ ಮತ್ತು ಅವಮಾನ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನ ಬಂಧನ ಮಾಡಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ವೃತ್ತ ಅಧಿಕಾರಿ ಪಹೂಪ್ ಸಿಂಗ್ ತಿಳಿಸಿದ್ದಾರೆ.




