ಮಳೆಯಿಂದಾಗಿ ಕೆಸರುಮಯವಾಗಿರುವ ಶಾಲೆ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ 200ಕ್ಕೂ ಹೆಚ್ಚು ಜೆನ್-ಆಲ್ಫಾ ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಜಿಲ್ಲಾಧಿಕಾರಿ (DM) ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಕೈಯಲ್ಲಿ ತ್ರಿವರ್ಣ ಧ್ವಜ ಹಾಗೂ ಬ್ಯಾನರ್‌ಗಳನ್ನು ಹಿಡಿದು ಸಾಲು ಸಾಲಾಗಿ ಸಾಗಿದ ಈ ‘ಜೆನ್-ಆಲ್ಫಾ’ ವಿದ್ಯಾರ್ಥಿಗಳ ಆಕ್ರೋಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಮೀರ್‌ಪುರ ಜಿಲ್ಲೆಯ ಕುರಾರಾ ಬ್ಲಾಕ್‌ನ ಚಂದುಪುರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಶಾಲೆಗೆ ತಲುಪಲು ಸುಮಾರು 1.5 ಕಿ.ಮೀ ಉದ್ದದ ಕಚ್ಚಾ ರಸ್ತೆಯನ್ನೇ ನೆಚ್ಚಿಕೊಳ್ಳಬೇಕಾಗಿದೆ.
ಇದನ್ನೂ ಓದಿ: ‘ಮಾತೆ’ ಎನ್ನುತ್ತಾ ಡಿಜಿಟಲ್ ನಿಂದನೆ: ಸಿಜೆಪಿ ಮಹಿಳಾ ಪ್ರತಿಭಟನಾಕಾರರಿಗೆ ಬಿಜೆಪಿ ‘ಡಾಕ್ಸಿಂಗ್’ ದಾಳಿ
ಪ್ರತಿ ಮುಂಗಾರು ಋತುವಿನಲ್ಲೂ ಈ ರಸ್ತೆ ಸಂಪೂರ್ಣ ಕೆಸರುಮಯವಾಗಿ ಪರಿಣಮಿಸುವುದರಿಂದ ಮಕ್ಕಳು ಶಾಲೆಗೆ ಹೋಗಲು ತೀವ್ರ ತೊಂದರೆ ಎದುರಿಸುತ್ತಿದ್ದರು. ಜೊತೆಗೆ, ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ಹರಸಾಹಸ ಪಡುವಂತಾಗಿತ್ತು.
ಹಿಂದೆ ತಾತ್ಕಾಲಿಕವಾಗಿ ರಸ್ತೆಗೆ ಮಣ್ಣು ಹಾಕಲಾಗಿದ್ದರೂ, ಮಳೆಗೆ ಅದು ಮತ್ತೆ ಕೆಸರು ಗುಂಡಿಯಾಗಿ ಮಾರ್ಪಟ್ಟಿತ್ತು. ಇದರಿಂದ ಬೇಸತ್ತ ಚಂದುಪುರ್ ಗ್ರಾಮದ ಮಕ್ಕಳು ಮತ್ತು ಪೋಷಕರು ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಕಚೇರಿಯತ್ತ ಮೆರವಣಿಗೆ ಆರಂಭಿಸಿದರು.
ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಯತ್ತ ಆಗಮಿಸುತ್ತಿದ್ದಂತೆ, ಸ್ಥಳಕ್ಕೆ ಧಾವಿಸಿದ ಉಪ ವಿಭಾಗಾಧಿಕಾರಿ (SDM) ಅಭಿಷೇಕ್ ಕುಮಾರ್ ಹಾಗೂ ಸರ್ಕಲ್ ಆಫೀಸರ್ (CO) ಯಶ್‌ಪಾಲ್ ಸಿಂಗ್ ನೇತೃತ್ವದ ಪೊಲೀಸ್ ಪಡೆ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿತು. ಆದರೆ, ಅಧಿಕಾರಿಗಳ ಮನವೊಲಿಕೆಗೆ ಬಗ್ಗದ ಜೆನ್ -ಆಲ್ಫಾ ವಿದ್ಯಾರ್ಥಿಗಳು ನೇರವಾಗಿ ಕಚೇರಿಯ ಮುಖ್ಯ ಗೇಟ್‌ಗೆ ತೆರಳಿ ಧರಣಿ ಕುಳಿತರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಚರ್ಚೆ ನಡೆಸಿದ ಜಿಲ್ಲಾಡಳಿತದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಸುಮಾರು ₹2 ಕೋಟಿ ವೆಚ್ಚದಲ್ಲಿ ಈ ರಸ್ತೆ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಆಡಳಿತ ಮಂಡಳಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.




