ಅಸ್ಸಾಂನ ಒಂದು ಲೋಕಸಭಾ ಕ್ಷೇತ್ರ ಮತ್ತು ಪಶ್ಚಿಮ ಬಂಗಾಳ, ತಮಿಳುನಾಡು, ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಐದು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಬಿಗಿ ಭದ್ರತೆಯ ನಡುವೆ ಪ್ರಾರಂಭವಾಗಿದೆ. ಅಕ್ಟೋಬರ್ 6ರಂದು ಈ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಈ ಪೈಕಿ ನಂಗಿಗ್ರಾಮ, ನಗಾಂವ್ ಕ್ಷೇತ್ರದ ಫಲಿತಾಂಶವು ಹೆಚ್ಚು ಕುತೂಹಲಕಾರಿಯಾಗಿದೆ.
ಕಾಂಗ್ರೆಸ್ ಸಂಸದರಾಗಿದ್ದ ಪ್ರದ್ಯುತ್ ಬೋರ್ಡೊಲೊಯ್ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರವು ಉಪಚುನಾವಣೆ ಎದುರಿಸಿದೆ. ಬಿಜೆಪಿಯ ದೇವಾಶಿಶ್ ಶರ್ಮಾ, ಕಾಂಗ್ರೆಸ್‌ನ ಶಿವಮಣಿ ಬೋರಾ ಮತ್ತು ಎಐಯುಡಿಎಫ್‌ನ ಬದ್ರುದ್ದೀನ್ ಅಜ್ಮಲ್ ನಡುವೆ ಇಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರದಲ್ಲಿಯೂ ಉಪಚುನಾವಣೆ ನಡೆದಿದೆ. ಹೈ-ವೋಲ್ಟೇಜ್ ಕ್ಷೇತ್ರವಾದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಬಿಜೆಪಿಯಿಂದ ಹಸಿರಾಣಿ ರಥ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನ ಮಿಲನ್ ಪ್ರಧಾನ್ ಅವರಿಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಣ ಬೆಂಬಲ ನೀಡಿದೆ.
ಇದನ್ನೂ ಓದಿ: ಬಂಗಾಳ ಚುನಾವಣೆ | ನಂದಿಗ್ರಾಮದಲ್ಲಿ ಮತಪಟ್ಟಿಯಿಂದ ಹೊರಹಾಕಿದ ಮತದಾರದಲ್ಲಿ 95% ಮಂದಿ ಮುಸ್ಲಿಮರು
ರೇಜಿನಗರ ಶಾಸಕ ಹಾಗೂ ಆಮ್ ಜನತಾ ಉನ್ನಯನ್ ಪಾರ್ಟಿ (AJUP) ಮುಖ್ಯಸ್ಥ ಹುಮಾಯೂನ್ ಕಬೀರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದಾಗಿ ಇಲ್ಲಿ ಉಪಚುನಾವಣೆ ನಡೆದಿದೆ. ಹುಮಾಯೂನ್ ಕಬೀರ್ ಅವರು ರೇಜಿನಗರ ಮತ್ತು ನೌಡಾ ಎಂಬ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಜಯಗಳಿಸಿದ್ದರು. ಚುನಾವಣಾ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಎರಡು ಕ್ಷೇತ್ರಗಳ ಶಾಸಕರಾಗಿ ಮುಂದುವರಿಯಲು ಅವಕಾಶವಿರುವುದಿಲ್ಲ. ಈ ಕಾರಣದಿಂದಾಗಿ ಅವರು ನೌಡಾ ಕ್ಷೇತ್ರವನ್ನು ತಮ್ಮ ಬಳಿ ಉಳಿಸಿಕೊಂಡು, ರೇಜಿನಗರ ಕ್ಷೇತ್ರವನ್ನು ತ್ಯಜಿಸಿ ಅದಕ್ಕೆ ರಾಜೀನಾಮೆ ನೀಡಿದರು.
ಪಶ್ಚಿಮ ಬಂಗಾಳದ ಈ ಎರಡು ಕ್ಷೇತ್ರಗಳ ಪೈಕಿ ನಂದಿಗ್ರಾಮವು ಹಲವು ರಾಜಕೀಯ ಘಟನೆಗಳಿಗೆ ಸಾಕ್ಷಿಯಾದ ಕ್ಷೇತ್ರ. ನಂದಿಗ್ರಾಮ ವಿಧಾನಸಭಾ ಉಪಚುನಾವಣೆಯ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣದ ಅಭ್ಯರ್ಥಿ ಸಂಚಿತಾ ಪ್ರಧಾನ್ ದೇ ನಾಮಪತ್ರ ಸಲ್ಲಿಸಿದ್ದರು. ಶಿಕ್ಷಕಿಯಾಗಿರುವ ಅಭ್ಯರ್ಥಿ ಸಂಚಿತಾ ಪ್ರಧಾನ್ ಅವರು ತಮ್ಮ ಪತಿ ಸತ್ಯಜಿತ್ ಅವರೊಂದಿಗೆ ರಾಜ್ಯ ಸಚಿವಾಲಯಕ್ಕೆ ತೆರಳಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದರು. ಈ ಭೇಟಿಯಾದ ಕೆಲವೇ ಗಂಟೆಗಳಲ್ಲಿ, ನಾಮಪತ್ರ ಹಿಂಪಡೆಯಲು ಇದ್ದ ಕೊನೆಯ ದಿನಕ್ಕೆ ಒಂದು ದಿನ ಬಾಕಿ ಇರುವಾಗಲೇ ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದರು.
ಈ ಬೆಳವಣಿಗೆಯಿಂದಾಗಿ ನಂದಿಗ್ರಾಮ ಉಪಚುನಾವಣಾ ಕಣದಲ್ಲಿ ಮಮತಾ ಬ್ಯಾನರ್ಜಿ ಟಿಎಂಸಿಗೆ ಯಾವುದೇ ಅಭ್ಯರ್ಥಿ ಇಲ್ಲದಂತಾಯಿತು. ತಮ್ಮ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ತಕ್ಷಣವೇ ಕಾರ್ಯಪ್ರವೃತ್ತರಾದ ಮಮತಾ ಬ್ಯಾನರ್ಜಿ ಅವರು, ಇಂಡಿಯಾ ಒಕ್ಕೂಟದ ಒಗ್ಗಟ್ಟನ್ನು ಉಲ್ಲೇಖಿಸಿ ನಂದಿಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ಘೋಷಿಸಿದರು. ಬ್ಯಾನರ್ಜಿ ಬೆಂಬಲ ಘೋಷಿಸುತ್ತಿದ್ದಂತೆ ಮಿಲನ್ ಪ್ರಧಾನ್ ಅವರನ್ನು 2007ರ ಹಳೆಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಯಿತು. ಇದು ರಾಜಕೀಯ ದುರ್ಬುದ್ಧಿಯಿಂದ ಕೂಡಿದ ಕ್ರಮ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಆರೋಪಿಸಿದ್ದರು. ಸದ್ಯ ಕೋಲ್ಕತ್ತಾ ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ.
ಇದನ್ನೂ ಓದಿ: ನಂದಿಗ್ರಾಮ ಉಪಚುನಾವಣೆ: ಮಮತಾ ಬೆಂಬಲ ಘೋಷಿಸಿದ ಗಂಟೆಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಬಂಧನ!
ಇನ್ನು ತಮಿಳುನಾಡಿನ ಮಧುರಾಂತಕಂ ಮತ್ತು ಧಾರಾಪುರಂ ಕ್ಷೇತ್ರದಲ್ಲೂ ಉಪಚುನಾವಣೆ ನಡೆದಿದ್ದು ಇಂದು ಫಲಿತಾಂಶ ಹೊರಬರಲಿದೆ. ಈ ವರ್ಷ ನಡೆದಿದ್ದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆಯಿಂದ ಮಧುರಾಂತಕಂ ಕ್ಷೇತ್ರದಲ್ಲಿ ಕೆ. ಮರಗತಂ ಕುಮಾರವೇಲ್ ಹಾಗೂ ಧಾರಾಪುರಂ ಕ್ಷೇತ್ರದಲ್ಲಿ ಪಿ. ಸತ್ಯಭಾಮಾ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಆಯ್ಕೆಯಾದ ಕೆಲವೇ ತಿಂಗಳುಗಳಲ್ಲಿ ಈ ಇಬ್ಬರೂ ಎಐಎಡಿಎಂಕೆ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೇರ್ಪಡೆಗೊಂಡರು. ಶಾಸಕರು ರಾಜೀನಾಮೆ ನೀಡಿದ್ದರಿಂದ ಈ ಎರಡೂ ಕ್ಷೇತ್ರಗಳು ತೆರವಾದವು. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈ ಕ್ಷೇತ್ರಗಳಿಗೆ ಉಪಚುನಾವಣೆಯನ್ನು ಘೋಷಿಸಿದೆ. ವಿಧಾನಸಭೆ ಚುನಾವಣೆಯ ನಂತರ ತಮಿಳುನಾಡು ರಾಜಕೀಯ ಚಿತ್ರಣದಲ್ಲಿ ಬದಲಾವಣೆ ಕಂಡುಬಂದಿದ್ದು, ಟಿವಿಕೆ ಮತ್ತು ಎಐಎಡಿಎಂಕೆ ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿದೆ.
ಇನ್ನು ಪುದುಚೇರಿಯ ತಟ್ಟಂಚಾವಡಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲು ಮುಖ್ಯ ಕಾರಣ ಮುಖ್ಯಮಂತ್ರಿ ಎನ್. ರಂಗಸಾಮಿ ಅವರು ತಮ್ಮ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ನೀಡಿರುವುದು. ಇತ್ತೀಚೆಗೆ ನಡೆದಿದ್ದ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ (AINRC) ಮುಖ್ಯಸ್ಥ ಎನ್. ರಂಗಸಾಮಿ ಅವರು ‘ತಟ್ಟಂಚಾವಡಿ’ ಮತ್ತು ‘ಮಂಗಲಂ’ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡರಲ್ಲೂ ಜಯಗಳಿಸಿದ್ದರು. ರಂಗಸಾಮಿ ಅವರು ಮಂಗಲಂ ಕ್ಷೇತ್ರವನ್ನು ತಮ್ಮ ಬಳಿ ಉಳಿಸಿಕೊಂಡು, ತಟ್ಟಂಚಾವಡಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಹಿನ್ನೆಲೆಯಲ್ಲಿ ತಟ್ಟಂಚಾವಡಿ ಉಪಚುನಾವಣೆ ನಡೆದಿದೆ. ಇಲ್ಲೂ ಕೂಡ ಎನ್‍ಡಿಎ ಹಾಗೂ ವಿಪಕ್ಷ ಮೈತ್ರಿಕೂಟಗಳ ನಡುವೆ ಕಟು ಸ್ಪರ್ಧೆ ಕಂಡುಬಂದಿದೆ.




