ಬೀದರ್ ದಕ್ಷಿಣ ಕ್ಷೇತ್ರದ ಆಮ್ ಆದ್ಮಿ ಪಕ್ಷದ ನೂತನ ಅಧ್ಯಕ್ಷರಾಗಿ ಡಾ.ಅಶೋಕ ಜಾಯ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ನ್ಯೂ ಆದರ್ಶ ಕಾಲೋನಿಯಲ್ಲಿರುವ ಆಮ್ ಆದ್ಮಿ ಪಾರ್ಟಿ ಕಚೇರಿಯಲ್ಲಿ ಬುಧವಾರ ನಡೆದ ದಕ್ಷಿಣ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅಶೋಕ ಜಾಯ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ಎಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಉಸ್ತುವಾರಿ ರಾಜಕುಮಾರ ಎನ್.ಪಾಟೀಲ್ ತಿಳಿಸಿದ್ದಾರೆ.

ನೂತನ ಅಧ್ಯಕ್ಷರು ತಕ್ಷಣವೇ ಅಧಿಕಾರ ವಹಿಸಿಕೊಂಡು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಕಚೇರಿಯಲ್ಲಿ ಅಶೋಕ ಜಾಯ್ ಅವರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಲಾಯಿತು.
ರಾಜಕುಮಾರ ಎನ್. ಪಾಟೀಲ್ ಮಾತನಾಡಿ, “ಆಮ್ ಆದ್ಮಿ ಪಾರ್ಟಿಯ ಸಿದ್ಧಾಂತವನ್ನು ಒಪ್ಪಿಕೊಂಡು ಯುವಕರು, ಹಿರಿಯರು ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟು ಬಲ ದೊರೆಯುತ್ತಿದೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ಜಿಪಂ, ತಾಪಂ, ಗ್ರಾಪಂ ಹಾಗೂ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಫರ್ಧಿಸಲು ಪಕ್ಷ ಸಜ್ಜಾಗಿದೆ” ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಜಿಲ್ಲಾ ಪಂಚಾಯತಿ 34, ತಾಲೂಕು ಪಂಚಾಯತಿ 123 ಸ್ಥಾನಗಳಿಗೆ ಮೀಸಲಾತಿ ಪ್ರಕಟ
ಸಭೆಯಲ್ಲಿ ಬೀದರ್ ಕ್ರಿಶ್ಚಿಯನ್ ಕಮ್ಯುನಿಟಿ ಜಿಲ್ಲಾ ಅಧ್ಯಕ್ಷ ಡಿ.ಕೆ.ಯೋಹಾನ, ತಾಲೂಕು ಅಧ್ಯಕ್ಷ ಕಂಟೆಪ್ಪಾ ಗುಪ್ತಾ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.




