ಪುರುಷರ ಶವಗಳ ಗುಪ್ತಾಂಗದ ಕುರಿತು ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮದಲ್ಲಿ ಅಸಭ್ಯವಾಗಿ ಮಾತನಾಡಿ ತೀವ್ರ ವಿವಾದಕ್ಕೀಡಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಸೇಜಲ್ ಪವಾರ್ ವಿರುದ್ಧ ಮುಂಬೈನ ಕೆಇಎಂ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಮೊದಲ ಸುತ್ತಿನ ಶಿಸ್ತುಕ್ರಮ ಕೈಗೊಂಡಿದೆ. ವಿದ್ಯಾರ್ಥಿನಿಯನ್ನು 15 ದಿನಗಳ ಕಾಲ ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಆಡಳಿತ ಮಂಡಳಿ, ಆಸ್ಪತ್ರೆಯ ಆವರಣ, ಕಾಲೇಜು ಮತ್ತು ಹಾಸ್ಟೆಲ್ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ.
ವೈರಲ್ ಆಗಿರುವ ವಿಡಿಯೊದಲ್ಲಿರುವ ಯುವತಿ ಸೇಜಲ್ ಪವಾರ್ ಎಂಬುದನ್ನು ಕಾಲೇಜು ಆಡಳಿತ ಮಂಡಳಿಯು ನಡೆಸಿದ ಪ್ರಾಥಮಿಕ ತನಿಖೆ ದೃಢಪಡಿಸಿದೆ. ಮೇಲ್ನೋಟಕ್ಕೆ ಆಕೆಯ ಹೇಳಿಕೆಗಳು ಅಸಮಂಜಸ ಹಾಗೂ ಸ್ವೀಕಾರಾರ್ಹವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿನಿಯನ್ನು ಸದ್ಯ ಆಕೆಯ ಕುಟುಂಬಸ್ಥರ ಸುಪರ್ದಿಗೆ ಒಪ್ಪಿಸಲಾಗಿದ್ದು, ಈ 15 ದಿನಗಳ ಅವಧಿಯಲ್ಲಿ ಯಾವುದೇ ಶೈಕ್ಷಣಿಕ ಅಥವಾ ಕಾಲೇಜು ಸಂಬಂಧಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ, ವಿದ್ಯಾರ್ಥಿನಿಯ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಸೇಜಲ್ ಭಾವುಕರಾಗಿ ಕಣ್ಣೀರು ಹಾಕಿದ್ದು, ತಮ್ಮ ಹೇಳಿಕೆಗೆ ಲಿಖಿತ ವಿಷಾದ ವ್ಯಕ್ತಪಡಿಸಿದ್ದಾರೆ. ಈ ವಿವಾದದಿಂದ ಆಕೆಯ ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮವನ್ನು ಅರಿತಿರುವ ಕಾಲೇಜು, ಖಿನ್ನತೆ ತಡೆಗಟ್ಟಲು ವೃತ್ತಿಪರ ಆಪ್ತಸಮಾಲೋಚನೆ ಪಡೆಯುವಂತೆ ಆಕೆಗೆ ಸಲಹೆ ನೀಡಿದೆ. ಇದಲ್ಲದೆ, ಪ್ರಕರಣದ ಸಮಗ್ರ ತನಿಖೆಗಾಗಿ ನಿವೃತ್ತ ಹಿರಿಯ ಪ್ರಾಧ್ಯಾಪಕರು, ಹಿರಿಯ ಪತ್ರಕರ್ತರು ಹಾಗೂ ಮೂವರು ಉಪನ್ಯಾಸಕರಿರುವ ಐವರು ಸದಸ್ಯರ ಸಮಿತಿಯನ್ನು ರಚಿಸಲು ಕಾಲೇಜು ನಿರ್ಧರಿಸಿದೆ. ಈ ಸಮಿತಿಯು ವೈರಲ್ ವಿಡಿಯೊವನ್ನು ಪರಿಶೀಲಿಸಿ 7 ದಿನಗಳೊಳಗೆ ವರದಿ ಸಲ್ಲಿಸಲಿದ್ದು, ಆ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಇದನ್ನು ಓದಿದ್ದೀರಾ? 43ರ ಗಾರ್ಡನ್‌ನಿಂದ 17ರ ಮೊರಾವರೆಗೆ: ಫಿಫಾ ವಿಶ್ವಕಪ್‌ನ ಅಚ್ಚರಿಯ ಸಂಗತಿಗಳು
ಗುರುಗ್ರಾಮದಲ್ಲಿ ನಡೆದಿದ್ದ ಸ್ಟ್ಯಾಂಡ್-ಅಪ್ ಕಾಮಿಡಿ ಶೋವೊಂದರಲ್ಲಿ ಹಾಸ್ಯ ಕಲಾವಿದ ಪ್ರಣೀತ್ ಮೋರೆ ಅವರೊಂದಿಗೆ ಸೇಜಲ್ ಪವಾರ್ ನಡೆಸಿದ ಸಂಭಾಷಣೆ ಈ ವಿವಾದಕ್ಕೆ ಕಾರಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಪ್ರಣೀತ್ ಮೋರೆ, “ಜನರೊಂದಿಗೆ ಮಾತನಾಡುವ ಭರದಲ್ಲಿ ನನ್ನಿಂದ ತಪ್ಪಾಗಿದೆ. ಕಾರ್ಯಕ್ರಮದ ನಡುವೆ ಆತ (ಸೇಜಲ್ ಜೊತೆಗಿದ್ದ ವ್ಯಕ್ತಿ) ಕೆಟ್ಟ ಪದಗಳನ್ನು ಬಳಸಿದಾಗ ನಾನು ಆತನನ್ನು ತಡೆಯಬೇಕಿತ್ತು. ಯಾರೆಲ್ಲಾ ಇದರಿಂದ ನೋವುಂಡಿದ್ದೀರೋ ಅವರೆಲ್ಲರಲ್ಲೂ ಕ್ಷಮೆ ಯಾಚಿಸುತ್ತೇನೆ” ಎಂದು ಹೇಳಿದ್ದು, ಕಾನೂನು ಪ್ರಕ್ರಿಯೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಮಹಿಳೆಯರು, ಸಮ್ಮತಿ (ಕನ್ಸೆಂಟ್) ಹಾಗೂ ಮೃತದೇಹಗಳ ಕುರಿತು ಆಕ್ಷೇಪಾರ್ಹ ಹಾಗೂ ಅಸಭ್ಯ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಸೈಬರ್ ಪೊಲೀಸರು ಹಾಸ್ಯ ಕಲಾವಿದ ಪ್ರಣೀತ್ ಮೋರೆ, ಹಿಮಾಂಶು ಜಾಂಗ್ರಾ, ಸೇಜಲ್ ಪವಾರ್ ಹಾಗೂ ಇತರರ ವಿರುದ್ಧ ನೂತನ ‘ಭಾರತೀಯ ನ್ಯಾಯ ಸಂಹಿತೆ’ (BNS)-2023 ಮತ್ತು ‘ಮಾಹಿತಿ ತಂತ್ರಜ್ಞಾನ ಕಾಯ್ದೆ-2000’ರ ಸೆಕ್ಷನ್ 67 ರ ಅಡಿ ಎಫ್‌ಐಆರ್ (FIR) ದಾಖಲಿಸಿದ್ದಾರೆ.




