HPCL ನಿಂದ ಅಕ್ರಮವಾಗಿ ವಜಾಗೊಂಡಿರುವ ಮಹಿಳಾ ಗುತ್ತಿಗೆ ಕಾರ್ಮಿಕರ ಧರಣಿ 80 ದಿನ ಪೂರೈಸಿದೆ. ಇಂದು ಮಹಿಳಾ ಕಾರ್ಮಿಕರ ಜೊತೆ ನಾಗರಿಕ ಹೋರಾಟ ಸಮಿತಿ ನಾಯಕರು ಹಾಗೂ ಮಾಜಿ ಶಾಸಕ ಮೊಯಿಯುದ್ದೀನ್ ಬಾವ ಅವರು ಭೇಟಿ ನೀಡಿ ಸಹಭೋಜನ ಮಾಡುವ ಮೂಲಕ ಹೋರಾಟವನ್ನು ಬೆಂಬಲಿಸಿದರು.
ಸುರತ್ಕಲ್ ನ ಬಾಳ ದಲ್ಲಿರುವ HPCL ಬಾಟ್ಲಿಂಗ್ ಘಟಕದಲ್ಲಿ ಹತ್ತು ವರ್ಷಗಳಿಗಿಂತೂ ದೀರ್ಘ ಅವಧಿಗೆ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ಬಾಗಲಕೋಟೆ ಜಿಲ್ಲೆಯ ಶರಣವ್ವ ಭಜಂತ್ರಿ, ಸೂರವ್ವ ಕೊಲ್ಲದ್, ಪಾರ್ವತಿ ಗಾಣಿಗೇರ, ಸುವರ್ಣ ಪಾಟೀಲ ಅವರುಗಳನ್ನು ಕಂಪೆನಿಯ ಅಧಿಕಾರಿಗಳು ಕಾರಣ ನೀಡದೆ ಕೆಲಸದಿಂದ ತೆಗದೆ ಹಾಕಿದ್ದರು. ಇದನ್ನು ಪ್ರಶ್ನಿಸಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದೆ.

ಈ ನಡುವೆ ಎರಡು ಸಲ ಕೇಂದ್ರ ಕಾರ್ಮಿಕ ಇಲಾಖೆಯ ಉಪ ಆಯುಕ್ತರು ಕಂಪೆನಿಯ ಅಧಿಕಾರಿಗಳನ್ನು ಕರೆಸಿ ಕೆಲಸಕ್ಕೆ ಮರು ನೇಮಕಗೊಳಿಸುವಂತೆ ಸೂಚಿಸಿದ್ದರು. ಆದರೆ, ಕಂಪೆನಿಯ ಆಡಳಿತ ಮಹಿಳೆಯರನ್ನು ಇನ್ನೂ ಕೆಲಸಕ್ಕೆ ಸೇರಿಸಿಕೊಳ್ಳದಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಹೋರಾಟ 80 ನೇ ದಿನಕ್ಕೆ ಕಾಲಿರಿಸಿದ್ದು, ಧರಣಿ ಸ್ಥಳದಲ್ಲಿ ನಾಗರಿಕ ಹೋರಾಟ ಸಮಿತಿ ಸದಸ್ಯರು ಮಹಿಳಾ ಕಾರ್ಮಿಕರ ಜೊತೆ ಸಹಭೋಜನ ನಡೆಸಿದರು. ಇದೇ ಸಂದರ್ಭ ಸುರತ್ಕಲ್ ನ ಮಾಜಿ ಶಾಸಕ ಮೊಯ್ದಿನ್ ಬಾವ ಬೆಂಬಲವಾಗಿ ಧರಣಿ ಸ್ಥಳಕ್ಕೆ ಬಂದು ಸಹ ಭೋಜನದಲ್ಲಿ ಪಾಲ್ಗೊಂಡರು.

ನಾಳೆ (ನವಂಬರ್ 20) ಕೇಂದ್ರ ಕಾರ್ಮಿಕ ಇಲಾಖೆಯ ALC ಈ ಕುರಿತು ಕಂಪೆನಿ ಅಧಿಕಾರಿಗಳನ್ನು ವಿಚಾರಣೆಯ ನೋಟೀಸು ನೀಡಿದ್ದು, ಅವರ ಸಮ್ಮುಖ ಸಭೆ ನಡೆಯಲಿದೆ. ಜಿಲ್ಲಾಧಿಕಾರಿ ಕಂಪೆನಿಯ ಅಧಿಕಾರಿಗಳಿಗೆ ನ್ಯಾಯ ಒದಗಿಸುವಂತೆ ಸೂಚಿಸಿದ್ದು, ಮಹಿಳಾ ಕಾರ್ಮಿಕರು ನ್ಯಾಯ ದೊರಕುವ ನಿರೀಕ್ಷೆಯಲ್ಲಿದ್ದಾರೆ.
ಒಂದು ವೇಳೆ ನಾಳೆಯೂ ಕಂಪೆನಿ ವಿಷಯವನ್ನು ನ್ಯಾಯಯುತವಾಗಿ ಇತ್ಯರ್ಥ ಮಾಡದಿದ್ದದಲ್ಲಿ ಜಿಲ್ಲೆಯ ಜನಪರ ಸಂಘಟನೆಗಳು ಜೊತೆ ಸೇರಿ ಮಹಿಳಾ ಕಾರ್ಮಿಕರ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ. ಹೋರಾಟ ಹೊಸ ಸ್ವರೂಪ ತಾಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




