ದೇಶದಲ್ಲಿ 16ನೆ ಜನಗಣತಿಯು ಏಪ್ರಿಲ್ 1ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಕೋವಿಡ್-19 ಕಾರಣದಿಂದಾಗಿ ವಿಳಂಬವಾಗಿದ್ದ 2021ರ ಜನಗಣತಿಯನ್ನು ಈಗ ‘ಡಿಜಿಟಲ್ ಜನಗಣತಿ’ಯಾಗಿ ಎರಡು ಹಂತಗಳಲ್ಲಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಡುವೆ ಹಲವು ಪ್ರಶ್ನೆಗಳನ್ನು ಜನ ಸಾಮಾನ್ಯರು ಎತ್ತಿದ್ದಾರೆ. ಈ ಪ್ರಶ್ನೆಗಳಲ್ಲಿ “ಲಿವ್‌ಇನ್‌ನಲ್ಲಿರುವವರನ್ನು ವಿವಾಹಿತರೆಂದು ಪರಿಗಣಿಸಲಾಗುತ್ತದೆಯೇ” ಎಂಬ ಪ್ರಶ್ನೆಯೂ ಒಂದು.
ಹೊಸದಾಗಿ ಪ್ರಾರಂಭಿಸಲಾದ ಸ್ವಯಂ-ಗಣತಿ ಪೋರ್ಟಲ್‌ನಲ್ಲಿ ಒಟ್ಟು 33 ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು (FAQs) ಮಾರ್ಚ್ 30ರ ಸೋಮವಾರದಂದು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. 2026ರ ಜನಗಣತಿಯಲ್ಲಿ ಲಿವ್‌ಇನ್‌ನಲ್ಲಿರುವವರನ್ನು ‘ವಿವಾಹಿತರು’ ಎಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ವಿವಾಹಿತ ಪುರುಷ ಸಮ್ಮತಿಯ ಲಿವ್‌ಇನ್ ಸಂಬಂಧದಲ್ಲಿರುವುದು ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್
ಅಧಿಕೃತ ಮಾರ್ಗಸೂಚಿಗಳ ಪ್ರಕಾರ, ಸ್ಥಿರವಾದ ಸಂಬಂಧದಲ್ಲಿರುವ ಲಿವ್‌ಇನ್ ದಂಪತಿಗಳನ್ನು ಜನಗಣತಿಯ ಸಮಯದಲ್ಲಿ ‘ವಿವಾಹಿತ’ ಎಂದೇ ಪರಿಗಣಿಸಲಾಗುತ್ತದೆ. ಹಾಗೆಯೇ ಕುಟುಂಬಗಳ ನೈಜ ರಚನೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸಾಮಾಜಿಕ ಬದಲಾವಣೆಗಳಿಗೆ ಅನುಗುಣವಾಗಿ ನಿಖರವಾದ ದತ್ತಾಂಶವನ್ನು ಸಂಗ್ರಹಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಜನಗಣತಿಯ ಮೊದಲ ಹಂತ (ಮನೆ ಪಟ್ಟಿ) ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನಡೆಯಲಿದೆ. ಎರಡನೇ ಹಂತ (ಜನಸಂಖ್ಯಾ ಎಣಿಕೆ) 2027ರ ಫೆಬ್ರವರಿಯಿಂದ ಪ್ರಾರಂಭವಾಗಲಿದೆ. 30 ಲಕ್ಷಕ್ಕೂ ಅಧಿಕ ಕ್ಷೇತ್ರ ಗಣತಿದಾರರು ಸುರಕ್ಷಿತ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿ ಡೇಟಾ ಸಂಗ್ರಹ ಮಾಡಲಿದ್ದಾರೆ. ಇನ್ನು ಗಣತಿದಾರರು ತಮ್ಮ ಮನೆಗೆ ಭೇಟಿ ನೀಡುವ ಮೊದಲು ನಾಗರಿಕರು ಲಾಗಿನ್ ಆಗಿ ತಮ್ಮ ಸ್ವಂತ ಮನೆಯ ವಿವರಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬಹುದು.




