ತ್ಯಾಗಕ್ಕೆ ಮತ್ತೊಂದು ಹೆಸರು ಭಗವಾನ್ ಮಹಾವೀರರು. ಅವರು ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ವಿಜಯಪುರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರು ಹೇಳಿದರು.
ವಿಜಯಪುರ ನಗರದ ಕಂದಗಲ್ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಾತಿ ಪದ್ಧತಿ ನಿರಾಕರಿಸಿ ಎಲ್ಲರೂ ಸಮಾನರು ಎಂದು ಬೋಧಿಸಿದ ಮಹಾನ್ ಪುರುಷ ಭಗವಾನ್ ಮಹಾವೀರರು ಎಂದು ಬಣ್ಣಿಸಿದರು. ಭಗವಾನ್ ಮಹಾವೀರರು ಮನುಕುಲಕ್ಕೆ ಸಾರಿದ ಸತ್ಯ, ಅಹಿಂಸೆಯಂತಹ ಮೌಲ್ವಿಕ ತತ್ವಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳನ್ನು ಯುವಕರು ಅರ್ಥೈಸಿಕೊಂಡು ಆದರ್ಶ ಜೀವನ ನಡೆಸಬೇಕೆಂದರು.
ಅಹಿಂಸೆಯ ಪಾಠ ಹೇಳಿಕೊಟ್ಟ ಭಗವಾನ್ ಮಹಾವೀರರು, ಅಹಿಂಸೆ ಆಚರಣೆಯ ಮಾರ್ಗದಲ್ಲಿ ಜೀವನದ ಸಾಕ್ಷಾತ್ಕಾರದ ಪಥ ತೋರಿಸಿದ ಮಹಾನ್ ಯುಗ ಪುರುಷ. ಮಹಾವೀರರು ಎಲ್ಲರಿಗೂ ಒಳಿತನ್ನು ಬಯಸುವ ಮೂಲಕ ಜಗತ್ತಿಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಮಹಾವೀರರು ಬೋಧಿಸಿದ ಪ್ರತಿ ಸಂದೇಶದಲ್ಲಿ ಅಪಾರ ಅನುಭಾವವಿದೆ, ಶಾಂತಿಮಂತ್ರ ಅನುಸರಿಸುವ ಮೂಲಕ ಜೀವನದ ಔಚಿತ್ಯದ ಮಹತ್ವ ಸಾರಿದ್ದಾರೆ. ಹಾಗಾಗಿ ಮಹಾವೀರ ಅವರು ಅಹಿಂಸೆ, ತ್ಯಾಗ ಹಾಗೂ ವೈರಾಗ್ಯದ ಸಾಕಾರಮೂರ್ತಿಯಾಗುವ ಮೂಲಕ ತಮ್ಮ ಕೀರ್ತಿಯನ್ನು ಜಗತ್ತಿಗೆ ಸಾರಿದ್ದಾರೆ ಎಂದರು.
ಸಂತರು, ಸತ್ಪುರುಷರು, ದಾರ್ಶನಿಕರ ಜೀವನಾದರ್ಶಗಳು ಹಾಗೂ ಅವರು ನೀಡಿದ ಸಂದೇಶಗಳನ್ನು ಅರಿತುಕೊಳ್ಳುವ ಮೂಲಕ ಯುವಕರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದರು. ದಾರ್ಶನಿಕರು ನೀಡಿದ ಮೌಲಿಕ ವಿಚಾರಧಾರೆಗಳಡಿ ಸತ್ಯದ ಪಥದಲ್ಲಿ ಜೀವನ ಸಾಗಿಸಬೇಕು ಎಂದ ಅವರು ತನ್ಮೂಲಕ ನಮ್ಮ ಯೋಚನೆಯ ಲಹರಿಯನ್ನು ಸಕಾರಾತ್ಮಕತೆಯಡೆಗೆ ಕೊಂಡೊಯ್ಯಬೇಕು ಎಂದರು.
ಹೀರಾಚಂದ್ ಗಾಂಧಿ ಉಪನ್ಯಾಸ ನೀಡಿ, ಭಗವಾನ ಮಹಾವೀರರ ಹಲವು ಸಂದೇಶಗಳನ್ನು ಸಾರಿದರು. ಸತ್ಯ, ಅಹಿಂಸೆ, ಅಸ್ತೆಯ, ಅಪರಿಗ್ರಹ ಹಾಗೂ ಬ್ರಹ್ಮಚರ್ಯವನ್ನು ಅನುಸರಿಸುವುದರಿಂದ ವ್ಯಕ್ತಿಯು ಮೋಕ್ಷ ಪಡೆಯುತ್ತಾನೆ. ಮಹಾವೀರರ ಚಿಂತನೆ-ಬೋಧನೆಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ ಮಾತನಾಡಿ, ಭಗವಾನ್ ಮಹಾವೀರರ ಚಿಂತನೆಗಳು ಸಾರ್ವಕಾಲಿಕವಾಗಿದೆ ಎಂದರು. ಭಾರತ ಎಂದು ಭಾರತ ದೇಶಕ್ಕೆ ನಾಮಕರಣ ಮಾಡಲು ಭರತ ಎಂಬ ಮುಖ್ಯ ಕಾರಣ ಎಂದು ಅವರು ಹೇಳಿದರು. ಬಾಹುಬಲಿ ಮತ್ತು ಭರತ ನಡುವಿನ ಪ್ರತಿಷ್ಠೆಯ ಯುದ್ಧಗಳಾದ ಮುಷ್ಟಿಯುದ್ಧ ದೃಷ್ಟಿಯಿಂದ ಮತ್ತು ಜಲ ಯುದ್ಧ ಮಾಡಿ ಅದರಲ್ಲಿ ಬಾಹುಬಲಿ ಜಯಶಾಲಿಯಾದರು ಎಂದು ಅಣ್ಣತಮ್ಮಂದಿರ ಯುದ್ಧದ ಬಗ್ಗೆ ಹಾಗೂ ಬಾಹುಬಲಿಯು 12 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಜ್ಞಾನವನ್ನು ಪಡೆದರು ಎಂದು ಅವರು ಹೇಳಿದರು.
ಇದನ್ನೂ ಓದಿ: ವಿಜಯಪುರ | ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ನೀರು ಹರಿಸಲು ರೈತ ಸಂಘ ಒತ್ತಾಯ
ಶೀತಲ್ ಕುಮಾರ್ ಓಫಿ ಮಾತನಾಡಿ, ಸರ್ಕಾರವು ನಮ್ಮ ಸಮುದಾಯಕ್ಕೆ ನೀಡುತ್ತಿರುವ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಭಗವಾನ್ ಶ್ರೀ ಮಹಾವೀರರು ಈ ಜಗತ್ತಿಗೆ ಬೆಳಕು ನೀಡಿದವರು ನಾವು ಅವರು ನೀಡಿರುವ ಬೆಳಕಿನಲ್ಲಿಯೇ ನಡೆಯಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ಪೂಜಾರಿ, ಎಂ.ಎಂ. ವಸ್ತ್ರದ, ಮಣಿಕಂಠ ಶಹಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೋಹನ ಕಟ್ಟಿಮನಿ ಸ್ವಾಗತಿಸಿದರು.




