ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ಈಗ ಏಳನೇ ನ್ಯಾಯಾಧೀಶರ ಕೈ ಸೇರಿದೆ. ಹಿಂದುತ್ವ ಗುಂಪುಗಳಿಗೆ ಸೇರಿದ 17 ಆರೋಪಿಗಳ ವಿರುದ್ಧ 2018ರ ನವೆಂಬರ್‌ನಲ್ಲಿ ಆರೋಪಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಪ್ರಕರಣದ ವಿಚಾರಣೆ ತೆವಳುತ್ತಾ ಸಾಗಿದೆ.
ಹಿಂದಿನ ನ್ಯಾಯಾಧೀಶ ಎಂ. ಚಂದ್ರಶೇಖರ ರೆಡ್ಡಿ ಅವರನ್ನು ಕರ್ನಾಟಕ ಹೈಕೋರ್ಟ್‌ನ ಹಿರಿಯ ಆಡಳಿತಾತ್ಮಕ ಹುದ್ದೆಗೆ ವರ್ಗಾಯಿಸಲಾಗಿದೆ. ಬೆಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಅಧಿಕಾರ ವಹಿಸಿಕೊಂಡಿರುವ ನೂತನ ನ್ಯಾಯಾಧೀಶರಾದ ಕೆ.ಎಸ್. ಭರತ್ ಕುಮಾರ್ ಅವರು ಮಂಗಳವಾರ ಪ್ರಕರಣದ ವಿಚಾರಣೆ ಆರಂಭಿಸಿದ್ದಾರೆ. ಪ್ರಕರಣದ ಸುಮಾರು 400 ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿಗಳಲ್ಲಿ 216ನೇ ಸಾಕ್ಷಿಯ ಹೇಳಿಕೆಯನ್ನು ಹೊಸ ನ್ಯಾಯಾಧೀಶರು ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ಗೌರಿ ಲಂಕೇಶ್ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ ಕರೆ; ದೂರು ದಾಖಲು
ವಿಶೇಷ ತನಿಖಾ ದಳ (ಎಸ್‌ಐಟಿ) ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ 18 ಜನರನ್ನು ಆರೋಪಿಗಳೆಂದು ಗುರುತಿಸಲಾಗಿದ್ದು, ಅದರಲ್ಲಿ 17 ಜನರನ್ನು ಬಂಧಿಸಲಾಗಿತ್ತು. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಕಾನೂನು ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬದ ಆಧಾರದ ಮೇಲೆ, ಎಲ್ಲಾ 17 ಆರೋಪಿಗಳೂ ಈಗಾಗಲೇ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ.
2017ರ ಸೆಪ್ಟೆಂಬರ್‌ನಲ್ಲಿ ಆದ ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ 2018ರ ನವೆಂಬರ್‌ನಲ್ಲಿಯೇ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಆದರೆ ಸುಮಾರು ನಾಲ್ಕು ವರ್ಷಗಳ ನಂತರ, ಕೋವಿಡ್ ಲಾಕ್‌ಡೌನ್ ಹಾಗೂ ತಾಂತ್ರಿಕ ಕಾರಣಗಳಿಂದಾಗಿ 2022ರ ಜುಲೈ 4 ರಂದು ವಿಚಾರಣೆ ಆರಂಭವಾಯಿತು. ಅಂದಿನಿಂದ ಇದುವರೆಗೆ ಒಟ್ಟು 7 ನ್ಯಾಯಾಧೀಶರು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ನಿಯಮಿತ ವರ್ಗಾವಣೆಗಳು ಅಥವಾ ಮುಂಬಡ್ತಿಯ ಕಾರಣದಿಂದ ಬದಲಾಗಿದ್ದಾರೆ. ಕರ್ನಾಟಕ ಸರ್ಕಾರ ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ಮುಂದಾಗಿದೆ ಎಂಬ ಚರ್ಚೆಯೂ ಈ ನಡುವೆ ನಡೆದಿತ್ತು.
ಗೌರಿ ಲಂಕೇಶ್ ಪ್ರಕರಣದ ಆಳಅಗಲ ಬಲ್ಲವರಾದ ಚಿಂತಕ ಶಿವಸುಂದರ್ ಅವರು ಪ್ರತಿಕ್ರಿಯಿಸಿ, “ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಸರ್ಕಾರ ಎರಡು ಬಾರಿ ಮನವಿ ಮಾಡಿತ್ತು. ಆದರೆ ಹೈಕೋರ್ಟ್ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಈ ರೀತಿಯ ಪ್ರಕರಣಗಳು ಸಾಕಷ್ಟು ವಿಲೇವಾರಿಯಾಗದೆ ಉಳಿದಿವೆ, ಹೀಗೆ ವಿಶೇಷ ಕೋರ್ಟ್ ಸ್ಥಾಪಿಸುವುದಕ್ಕೆ ಸಾಧ್ಯವಿಲ್ಲ ಎಂಬುದು ಹೈಕೋರ್ಟ್ ನಿಲುವಾಗಿತ್ತು” ಎಂದರು.
ಇದನ್ನು ಓದಿದ್ದೀರಾ? ಸೆ. 5 | ಗೌರಿ ಲಂಕೇಶ್‌ಗೆ 7ನೇ ವರ್ಷದ ನುಡಿನಮನ: ಬೆಂಗಳೂರಿನಲ್ಲಿ ‘ಗೌರಿ ನೆನಪು’ ಕಾರ್ಯಕ್ರಮ
“ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನ ಹಾಲ್ ನಂ.1ರಲ್ಲಿ ವಿಚಾರಣೆ ನಡೆಸುವ ಜಡ್ಜ್, ಇಡೀ ಕೋರ್ಟ್ನ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುವ ಹಿರಿಯ ನ್ಯಾಯಾಧೀಶರೂ ಆಗಿರುತ್ತಾರೆ. ಇವರಿಗೆ ಆಡಳಿತಾತ್ಮಕ ಜವಾಬ್ದಾರಿಯೂ ಇರುತ್ತದೆ. ಜೊತೆಗೆ ಪ್ರಕರಣಗಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ. ಅತಿಯಾದ ಕೇಸ್ ಲೋಡ್ ಇರುವುದು ವಾಸ್ತವ. ಸಾಮಾನ್ಯವಾಗಿ ಈ ಪೀಠದಲ್ಲಿ ಕೂರುವ ಹಿರಿಯ ನ್ಯಾಯಾಧೀಶರು ಬಡ್ತಿ ಹೊಂದಿ, ಹೈಕೋರ್ಟ್‌ಗೆ ವರ್ಗಾವಣೆಯಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇಲ್ಲಿಗೆ ಬರುವ ಜಡ್ಜ್‌ಗಳು ಆರೇಳು ತಿಂಗಳಲ್ಲಿ ನಿವೃತ್ತರಾಗುತ್ತಾರೆ ಅಥವಾ ಹೈಕೋರ್ಟ್‌ಗೆ ಮುಂಬಡ್ತಿ ಪಡೆಯುತ್ತಾರೆ. ಹೀಗಾಗಿ ಪ್ರಕರಣ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಪ್ರಕರಣದ ಆರಂಭದಲ್ಲಿ ಆರೋಪಿ ಪರವಾದ ವಕೀಲರು ಹೆಚ್ಚಿನ ಸಮಯಾವಕಾಶವನ್ನು ಕೋರಿದ್ದು ಕೂಡ ನಿಧಾನಗತಿಗೆ ಕಾರಣವಾಯಿತು” ಎನ್ನುತ್ತಾರೆ ಶಿವಸುಂದರ್.
ಕೆಲವು ಸಾಕ್ಷಿಗಳು ಉಲ್ಟಾ ಹೇಳಿಕೆ ನೀಡಿರುವ ಸಂಬಂಧ ವಿವರಿಸಿದ ಅವರು, “ಈ ಹಿಂದೆಯೇ ಇಬ್ಬರು ಸಾಕ್ಷಿಗಳು ಉಲ್ಟಾ ಹೇಳಿಕೆ ನೀಡಿದ್ದರು. ಆದರೆ ಪ್ರಮುಖ ಸಾಕ್ಷಿಗಳ್ಯಾರೂ ತದ್ವಿರುದ್ಧ ಹೇಳಿಕೆಗಳನ್ನು ನೀಡಿಲ್ಲ. ಪ್ರಕರಣ ಈಗಲೂ ಬಲವಾಗಿಯೇ ಇದೆ. ಆದರೆ ಆರೋಪಿಗಳು ಹೊರಗಡೆ ಬಂದ ಮೇಲೆ ಸಾಮಾಜಿಕ ಮನ್ನಣೆ ಸಿಕ್ಕಿರುವುದು ಅಪಾಯಕಾರಿ” ಎಂದು ಆತಂಕ ವ್ಯಕ್ತಪಡಿಸಿದರು.





