ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಮತ್ತೊಮ್ಮೆ ತೀವ್ರ ರಾಜಕೀಯ ಸಮರ ಏರ್ಪಟ್ಟಿದೆ. ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪರಸ್ಪರ ವಾಗ್ವಾದಕ್ಕಿಳಿದಿದ್ದಾರೆ. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆಯನ್ನು ಒಂದಕ್ಕೊಂದು ತಳುಕು ಹಾಕಿರುವ ಕುರಿತು ಚರ್ಚೆಗಳು ನಡೆದಿವೆ.
ಕಾಂಗ್ರೆಸ್‌ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಒಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ಮಹಿಳೆಯರು ಸ್ವತಂತ್ರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ ಭಾರತವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಮಹಿಳೆಯರ ಸ್ವಾತಂತ್ರ್ಯವು ಕೇವಲ ವಾಣಿಜ್ಯ ಅಥವಾ ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ, ಅವರು ರಸ್ತೆಗಳಲ್ಲಿ ಭಯವಿಲ್ಲದೆ ಓಡಾಡುವ ಮತ್ತು ತಮ್ಮ ಪೋಷಕರು, ಪತಿ ಹಾಗೂ ಸಹೋದರರನ್ನು ಪ್ರಶ್ನಿಸುವ ಮಟ್ಟಿಗೆ ಇರಬೇಕು. ಭಾರತ ಮುನ್ನಡೆಯಬೇಕಾದರೆ ಪುರುಷರ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಪಿತೃಪ್ರಭುತ್ವದ ಮನಸ್ಥಿತಿಯಿಂದ ಮಹಿಳೆಯರಿಗೆ ಮುಕ್ತಿ ಸಿಗುವುದು ಅಗತ್ಯ” ಎಂದಿದ್ದರು.
ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದ ಸಚಿವ ಕಿರಣ್ ರಿಜಿಜು, “ರಾಹುಲ್ ಗಾಂಧಿ ಅವರಲ್ಲಿ ಮನಃ ಪರಿವರ್ತನೆ ಕಾಣಿಸುತ್ತಿದೆ. ಕಾಂಗ್ರೆಸ್ ಪಕ್ಷವು ಇನ್ಮುಂದೆ ಮಹಿಳಾ ಮೀಸಲಾತಿ ಮಸೂದೆಯನ್ನು ಯಾವುದೇ ಷರತ್ತುಗಳಿಲ್ಲದೆ ಬೆಂಬಲಿಸಲಿದೆ ಎಂಬುದಾಗಿ ಭಾವಿಸುತ್ತೇವೆ” ಎಂದಿದ್ದರು.
ರಿಜಿಜು ಅವರ ಪೋಸ್ಟ್‌ಗೆ ತಕ್ಷಣವೇ ಪ್ರತ್ಯುತ್ತರ ನೀಡಿದ ರಾಹುಲ್ ಗಾಂಧಿ, “2023ರಲ್ಲೇ ಮಹಿಳಾ ಮೀಸಲಾತಿ ಮಸೂದೆಯನ್ನು (ನಾರಿ ಶಕ್ತಿ ವಂದನ್ ಅಧಿನಿಯಮ) ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದೆ. ಅದಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿತ್ತು ಎಂಬುದನ್ನು ಸಂಸದೀಯ ವ್ಯವಹಾರಗಳ ಸಚಿವರಾಗಿ ರಿಜಿಜು ನೆನಪಿಟ್ಟುಕೊಳ್ಳಬೇಕು. ಮಸೂದೆ ಅಂಗೀಕಾರವಾಗಿ ಮೂರು ವರ್ಷಗಳು ಕಳೆದರೂ ಅದನ್ನು ಯಾಕಾಗಿ ಜಾರಿಗೆ ತಂದಿಲ್ಲ ಮತ್ತು ಈಗ ಅದನ್ನು ಅನಗತ್ಯವಾಗಿ ಕ್ಷೇತ್ರ ಮರುವಿಂಗಡಣೆಯೊಂದಿಗೆ ಏಕೆ ಜೋಡಿಸಲಾಗುತ್ತಿದೆ” ಎಂದು ಹೇಳಿದ್ದಾರೆ. ಯಾವುದೇ ಷರತ್ತುಗಳಿಲ್ಲದೆ 2023ರ ಕಾಯ್ದೆಯನ್ನು ತಕ್ಷಣವೇ ಅನುಷ್ಠಾನಕ್ಕೆ ತರಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಪ್ರತಿಕ್ರಿಯೆಗೆ ಉತ್ತರಿಸಿದ ರಿಜಿಜು, “ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವುದು 106ನೇ ಸಂವಿಧಾನ ತಿದ್ದುಪಡಿ ಕಾಯ್ದೆ-2023ರ ಅಡಿಯಲ್ಲಿ ಮಾಡಲಾಗಿದೆ ಎಂಬುದು ರಾಹುಲ್ ಗಾಂಧಿಯವರಿಗೆ ಚೆನ್ನಾಗಿ ತಿಳಿದಿದೆ. ಈ ಕಾಯ್ದೆಯು 2023ರ ನಂತರ ಪ್ರಕಟವಾಗುವ ಜನಗಣತಿ ಆಧಾರಿತ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯ ನಂತರವಷ್ಟೇ ಜಾರಿಗೆ ಬರಲು ಸಾಧ್ಯ” ಎಂದಿದ್ದಾರೆ.
ಆದಾಗ್ಯೂ, ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಬೆಸೆಯುವ ಸರ್ಕಾರದ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ. ಕ್ಷೇತ್ರ ಪುನರ್‌ವಿಂಗಡಣೆಯು ಲೋಕಸಭಾ ಸ್ಥಾನಗಳ ಹಂಚಿಕೆಯಲ್ಲಿ ರಾಜ್ಯಗಳ ನಡುವೆ ಬೇರೆಯದೇ ಆದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಜಠಿಲ ಪ್ರಕ್ರಿಯೆಯೊಂದಿಗೆ ಮಹಿಳಾ ಮೀಸಲಾತಿಯನ್ನು ತಳುಕು ಹಾಕುವುದು ಮಹಿಳೆಯರಿಗೆ ಮಾಡುವ ಅನ್ಯಾಯ ಎಂದು ಕಾಂಗ್ರೆಸ್ ವಾದಿಸಿದೆ.
ಕಾಂಗ್ರೆಸ್ ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಮಾತನಾಡಿ, “2011ರ ಹಳೆಯ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ನಡೆಸಲು ಸರ್ಕಾರವು ಮಹಿಳಾ ಮೀಸಲಾತಿಯನ್ನು ಒಂದು ಕಣ್ಣೊರೆಸುವ ತಂತ್ರವಾಗಿ ಬಳಸಿಕೊಳ್ಳುತ್ತಿದೆ. ಹೊಸ ಜನಗಣತಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದ ಕಾರಣ, 15 ವರ್ಷಗಳಷ್ಟು ಹಳೆಯದಾದ ಅಂಕಿಅಂಶಗಳನ್ನು ಬಳಸಿ ಕ್ಷೇತ್ರ ಮರುವಿಂಗಡಣೆ ಮಾಡಲು ಸರ್ಕಾರ ಹೊರಟಿದೆ. ಬಿಹಾರ ಮತ್ತು ತೆಲಂಗಾಣ ರಾಜ್ಯಗಳು ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಜಾತಿ ಗಣತಿಯನ್ನು ಪೂರ್ಣಗೊಳಿಸಿರುವಾಗ, ಕೇಂದ್ರ ಸರ್ಕಾರವು ವಿಳಂಬ ಮಾಡುತ್ತಿರುವುದೇಕೆ” ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಕಿರಣ್ ರಿಜಿಜು ಅವರು ಕರ್ನಾಟಕ ಸರ್ಕಾರದ ಉದಾಹರಣೆಯನ್ನು ನೀಡಿ ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. “ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಒಬ್ಬರೇ ಒಬ್ಬರೂ ಮಹಿಳಾ ಸಚಿವರಿಲ್ಲ. 33% ಮೀಸಲಾತಿಯ ಬಗ್ಗೆ ಕಾಂಗ್ರೆಸ್‌ಗೆ ಇರುವ ಬದ್ಧತೆಯನ್ನು ಇದು ಪ್ರಶ್ನಿಸುವಂತೆ ಮಾಡುತ್ತದೆ” ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಕಾಂಗ್ರೆಸ್ ಪಕ್ಷವು ಮಹಿಳಾ ಪ್ರಾತಿನಿಧ್ಯಕ್ಕೆ ಸದಾ ಬದ್ಧವಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದ ಪ್ರಮುಖ ಪಕ್ಷಗಳಲ್ಲಿ ಕಾಂಗ್ರೆಸ್ ಒಂದಾಗಿದೆ. ಈ ಕಾಯ್ದೆಯನ್ನು ತಂದವರೂ ನಾವೇ ಮತ್ತು ಅದನ್ನು ಅಂಗೀಕರಿಸಿದವರೂ ನಾವೇ” ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಸಂಸತ್ತಿನ ಕಲಾಪಗಳ ನಿರ್ವಹಣೆ ವಿಷಯವಾಗಿ ರಿಜಿಜು ಮತ್ತು ರಾಹುಲ್ ಗಾಂಧಿ ನಡುವೆ ನಿರಂತರ ಮಾತುಕತೆ ನಡೆಯುತ್ತಿವೆ. ರಿಜಿಜು ಅವರು ರಾಹುಲ್ ಗಾಂಧಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡಣೆ ಕ್ರಮಗಳಿಗೆ ವಿರೋಧ ಪಕ್ಷದ ಬೆಂಬಲ ಕೋರಿದ್ದರು. ಆದರೆ, ಈ ಪ್ರಸ್ತಾವಿತ ಶಾಸನದ ಕುರಿತು ಚರ್ಚಿಸಲು ಸರ್ಕಾರವು ಸರ್ವಪಕ್ಷ ಸಭೆ ಕರೆಯಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದರು.



