ನೆನಪು | ಅರಸು ಹಾಕಿದ ‘ಕರ್ನಾಟಕ’ದ ಅಡಿಗಲ್ಲಿಗೆ ಐವತ್ತರ ಸಂಭ್ರಮ

Date:

'ಕರ್ನಾಟಕ'ವೆಂದು ನಾಮಕರಣ ಮಾಡುವ ಮೂಲಕ ನಾಡಿನ ಸಾಂಸ್ಕೃತಿಕ ಚಹರೆಯನ್ನು ಬದಲಿಸಿದ, ಚರಿತ್ರೆಯನ್ನು ನಿರ್ಮಿಸಿದ ದೇವರಾಜ ಅರಸು ಅವರು ಕೈಗೊಂಡ ಕಾರ್ಯಗಳು ಅವರನ್ನು ಚಿರಸ್ಥಾಯಿಯನ್ನಾಗಿ ಮಾಡಿವೆ. ಇಂದು ದೇವರಾಜ ಅರಸು ಅವರ ಜನ್ಮದಿನ, ಅವರು ಹಾಕಿದ 'ಕರ್ನಾಟಕ'ದ ಅಡಿಗಲ್ಲಿಗೆ ಐವತ್ತರ ಸಂಭ್ರಮ

‘ವಿಶಾಲ ಮೈಸೂರು’ ರಾಜ್ಯವನ್ನು ಕನ್ನಡಿಗರ ಕರುನಾಡನ್ನಾಗಿ, ‘ಕರ್ನಾಟಕ’ವನ್ನಾಗಿ ನಾಮಕರಣ ಮಾಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ.

ಅಷ್ಟೇ ಅಲ್ಲ, ಅರಸು ಮುಖ್ಯಮಂತ್ರಿಯಾದ ನಾಲ್ಕು ತಿಂಗಳೊಳಗೆ, ಜುಲೈ 26, 1972ರಲ್ಲಿ ಮೈಸೂರನ್ನು ಕರ್ನಾಟಕ ರಾಜ್ಯ ಎಂದು ಬದಲಿಸಲು ವಿರೋಧ ಪಕ್ಷಗಳ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಒತ್ತಾಸೆಯಾಗಿ ನಿಂತ ಮುಖ್ಯಮಂತ್ರಿ ದೇವರಾಜ ಅರಸು ವಿಧಾನಸಭೆಯಲ್ಲಿ ಕರ್ನಾಟಕ ಎಂದು ಹೆಸರು ಬದಲಿಸುವ ನಿರ್ಣಯ ಮಂಡಿಸಿದರು, ಸರ್ವಾನುಮತದ ಅನುಮೋದನೆಯನ್ನೂ ಪಡೆದುಕೊಂಡರು. ಅದನ್ನು ಕೇಂದ್ರಕ್ಕೂ ಕಳುಹಿಸಿಕೊಟ್ಟರು.

ಆ ಮಸೂದೆಯನ್ನು ಜುಲೈ 27, 1973ರಂದು ಲೋಕಸಭೆಯಲ್ಲಿ ಗೃಹ ರಾಜ್ಯ ಸಚಿವ ಕೆ.ಸಿ. ಪಂತ್ ಮಂಡಿಸಿದರು. ಮಸೂದೆಯನ್ನು ಎಲ್ಲರೂ ಸ್ವಾಗತಿಸಿದರು. ಕನ್ನಡಿಗರ ಬಹುಕಾಲದ ಕನಸು ನನಸಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಅದರ ಫಲವಾಗಿ ದೇವರಾಜ ಅರಸು ನವೆಂಬರ್‌ 1, 1973ರಂದು ಕರ್ನಾಟಕವೆಂದು ನಾಮಕರಣ ಮಾಡಿದರು, ಆಡಳಿತದಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಿದರು. ಇದೇ ನವೆಂಬರ್ 1ಕ್ಕೆ ಅರಸರ ಆ ಐತಿಹಾಸಿಕ ನಿರ್ಧಾರಕ್ಕೆ 50 ವರ್ಷ ತುಂಬಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆಂಧ್ರಪ್ರದೇಶ ರಚನೆಯಾದ ನಂತರ ಭಾಷೆಯ ಆಧಾರದಲ್ಲಿ ಪ್ರಾಂತ್ಯ ಪುನರ್ವಿಂಗಡನೆಯ ಬೇಡಿಕೆ ತೀವ್ರಗೊಂಡಿತು. ಕೇಂದ್ರ ಸರ್ಕಾರವು ರಾಜ್ಯಗಳ ಪುನರ್ ವಿಂಗಡಣೆಯನ್ನು ಕುರಿತು ವರದಿ ನೀಡಲು ʼರಾಜ್ಯ ಪುನರ್ವಿಂಗಡಣಾ ಆಯೋಗʼವನ್ನು ನೇಮಿಸಿತು. ಫಜಲ್ ಅಲಿ ಅದರ ಅಧ್ಯಕ್ಷರಾದರು. ಈ ಆಯೋಗವು 1955 ರಲ್ಲಿ ವರದಿ ಸಲ್ಲಿಸಿತು. ನಾಡಿನ ಎಲ್ಲಾ ಪಕ್ಷಗಳು ವರದಿಯನ್ನು ಮಾನ್ಯ ಮಾಡಿದವು. ಅದರ ಆಧಾರದ ಮೇಲೆ ಕೇಂದ್ರ ಸರ್ಕಾರವು ವರದಿಯನ್ನು ಒಪ್ಪಿದ್ದರಿಂದ 1956 ನವೆಂಬರ್ 1 ರಂದು ʼವಿಶಾಲ ಮೈಸೂರು ರಾಜ್ಯʼ ಅಸ್ತಿತ್ವಕ್ಕೆ ಬಂತು. 1956 ರಲ್ಲಿ ಏಕೀಕೃತ ವಿಶಾಲ ಮೈಸೂರು ರಾಜ್ಯಕ್ಕೆ ಎಸ್.ನಿಜಲಿಂಗಪ್ಪನವರು ಪ್ರಥಮ ಮುಖ್ಯಮಂತ್ರಿಗಳಾದರು.

ಕನ್ನಡ ನಾಡಿನ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪರಂಪರೆಗಳ ವೈವಿಧ್ಯತೆಯನ್ನು ಗುರುತಿಸಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡುವ ಬಗ್ಗೆ ಹಲವು ಗಂಭೀರ ಚರ್ಚೆಗಳು ಕಾಲಕಾಲಕ್ಕೆ ನಡೆಯುತ್ತಲೇ ಇದ್ದವು. ಎಸ್. ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ, ತದನಂತರ ವೀರೇಂದ್ರ ಪಾಟೀಲರ ಆಡಳಿತಾವಧಿಯಲ್ಲಿ ಅದು ಮುಂದುವರೆದಿತ್ತು. ಅಂತಿಮವಾಗಿ, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮತ್ತೆ ಅದಕ್ಕೆ ಚಾಲನೆ ಸಿಕ್ಕಿತು.

ಅದರ ಫಲವಾಗಿ ನವೆಂಬರ್ 1, 1973ರಂದು ಕರ್ನಾಟಕವೆಂಬ ಹೆಸರು ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ನಾಮಕರಣದ ಹಿಂದೆ ಭಾಷಾಭಿಮಾನ ಮತ್ತು ಪ್ರಾಂತ್ಯಾಭಿಮಾನಗಳೆರಡೂ ಶಕ್ತಿಶಾಲಿಯಾಗಿತ್ತು. ರಾಷ್ಟ್ರೀಯತೆಯ ದೃಷ್ಟಿಯಿಂದ ಕನ್ನಡ ಭಾಷಾಭಿಮಾನವೆನ್ನುವುದು ದೇಶಾಭಿಮಾನವಾಗಿ ಬೆಳೆದಿತ್ತು. ಕನ್ನಡಿಗರ ಆಶಯಕ್ಕೆ ತಕ್ಕಂತೆ ದೇವರಾಜ ಅರಸು, ಮೈಸೂರು ಎಂದಿದ್ದ ರಾಜ್ಯದ ಹೆಸರನ್ನು ಕರ್ನಾಟಕವೆಂದು ಅಧಿಕೃತವಾಗಿ ಘೋಷಿಸಿದ್ದು, ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಅಂಗೀಕರಿಸಿದ್ದು ಚಾರಿತ್ರಿಕವಾಗಿ ದಾಖಲಾಗಿತ್ತು.

ʼನಮ್ಮ ಅರಸುʼ ಕೃತಿಗಾಗಿ ರಾಜ್ಯದಾದ್ಯಂತ ದೇವರಾಜ ಅರಸು ಅವರ ಒಡನಾಡಿಗಳ ಖುದ್ದಾಗಿ ಕಂಡು ಮಾತನಾಡಿಸುವಾಗ, ಕರ್ನಾಟಕ ನಾಮಕರಣದ ಹಿಂದಿನ ಬೆಳವಣಿಗೆಗಳನ್ನು, ಅರಸರ ಮುತ್ಸದ್ದಿತನವನ್ನು ಹಂಚಿಕೊಂಡಿದ್ದರು. ಅರಸರ ಇಚ್ಛಾಶಕ್ತಿಯನ್ನು ಕೊಂಡಾಡಿದ್ದರು.

ʻಕರ್ನಾಟಕʼ ಎಂದು ನಾಮಕರಣ ಮಾಡುವ ನಿಟ್ಟಿನಲ್ಲಿ ದೇವರಾಜ ಅರಸು ತಳೆದ ನಿಲುವು, ನಿರ್ಧಾರಗಳನ್ನು ಕುರಿತು ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿಗಳಾದ ಅಗ್ರಹಾರ ಕೃಷ್ಣಮೂರ್ತಿಯವರು, ‘ನಾಡಿನ ಯಾವ ಬುದ್ಧಿಜೀವಿಯೂ ಕರ್ನಾಟಕ ಎಂದು ನಾಮಕರಣ ಮಾಡಲು ಒತ್ತಡ ಹಾಕಿದ್ದಿಲ್ಲ. ಅರಸು ಮಾಡುವಾಗ ಬೆಂಬಲಕ್ಕೆ ನಿಂತಿದ್ದೂ ಇಲ್ಲ. ಆದರೆ ಸಾಂಸ್ಕೃತಿಕ ಚರಿತ್ರೆ ನಿರ್ಮಿಸುವ, ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಅವರು ಕೈಗೊಂಡ ಕಾರ್ಯಗಳು ಅವರನ್ನು ಚಿರಸ್ಥಾಯಿಯನ್ನಾಗಿ ಮಾಡಿವೆ. ನಾಡಿಗೆ ‘ಕರ್ನಾಟಕ’ ಅಂತ ನಾಮಕರಣ ಮಾಡಿದ್ದಿದೆಯಲ್ಲ, ಅದನ್ನು ಯಾರು ಬೇಕಾದರೂ ಮಾಡಬಹುದಿತ್ತು. ಆದರೆ ಅರಸು ಅವರಿಗೆ ನಾಡಿನ ಬಗ್ಗೆ, ಕನ್ನಡದ ಬಗ್ಗೆ ಇದ್ದ ಅದಮ್ಯ ಪ್ರೀತಿ ಮತ್ತು ಕಾಳಜಿ, ಒಟ್ಟು ಕನ್ನಡದ ಚೈತನ್ಯವನ್ನು ಒಗ್ಗೂಡಿಸುವ ಕೆಲಸಕ್ಕೆ ಪ್ರೇರೇಪಿಸಿತು’ ಎನ್ನುತ್ತಾರೆ.

ದೇವರಾಜ ಅರಸರ ಪ್ರೀತಿ-ಕಾಳಜಿಗಳನ್ನು ಕುರಿತ ಅಗ್ರಹಾರ ಕೃಷ್ಣಮೂರ್ತಿಯವರ ಅಭಿಪ್ರಾಯವನ್ನು ಅನುಮೋದಿಸುವ ಜೊತೆಗೆ ಕೊಂಚ ಭಿನ್ನವಾದ ಅನಿಸಿಕೆಯನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಹಂಚಿಕೊಂಡಿದ್ದರು. ‘1962 ರಲ್ಲಿ ನಾನು ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಗೆದ್ದು ಶಾಸಕನಾಗಿದ್ದಾಗ, ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದರು. ನಿಜಲಿಂಗಪ್ಪನವರ ನಾಯಕತ್ವದ ಸರ್ಕಾರದಲ್ಲಿ ದೇವರಾಜ ಅರಸರು ರೇಷ್ಮೆ ಸಚಿವರಾಗಿದ್ದರು. ನಮ್ಮದು ವಿರೋಧ ಪಕ್ಷ, ಅರಸರದು ಆಡಳಿತ ಪಕ್ಷ. ನನಗೆ ಜ್ಞಾಪಕವಿರುವಂತೆ, 1956ರಲ್ಲಿಯೇ ಕರ್ನಾಟಕ ಏಕೀಕರಣ ಆಗಿಹೋಗಿತ್ತು. ಹೆಸರು ಮಾತ್ರ ಮೈಸೂರು ಅಂತಾನೇ ಇತ್ತು. ಅದನ್ನು ಬದಲಿಸಬೇಕೆಂದು ಆಡಳಿತ ಪಕ್ಷ ಒಂದು ನಿರ್ಣಯ ಕೈಗೊಂಡು, ಅಧಿವೇಶನದಲ್ಲಿ ಮಂಡಿಸಿತು. ನಮ್ಮದು ವಿರೋಧ ಪಕ್ಷವಾದ್ದರಿಂದ, ಆಡಳಿತ ಪಕ್ಷದ ನಿರ್ಣಯಕ್ಕೆ ವಿರುದ್ಧವಾಗಿ ವಾದ ಮಂಡಿಸಿ, ಪ್ರತಿಭಟಿಸಿದೆ. ಭಾರೀ ಆಶ್ಚರ್ಯಕರ ಸಂಗತಿ ಎಂದರೆ, ಸರಕಾರದ ಭಾಗವಾದ, ಸಚಿವರಾದ ದೇವರಾಜ ಅರಸು, ನನ್ನ ವಾದವನ್ನು ಬೆಂಬಲಿಸಿ, ಸರಕಾರದ ನಿರ್ಣಯವನ್ನು ತೀವ್ರವಾಗಿ ವಿರೋಧಿಸಿದರು. ಅರಸು ಆ ನಿರ್ಣಯವನ್ನು ವಿರೋಧಿಸಿ, ಆಡಳಿತ ಪಕ್ಷಕ್ಕೆ ಶಾಕ್ ನೀಡಿದರು. ಹಾಗಂತ ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲ, ಹಳೆ ಮೈಸೂರನ್ನು ಪ್ರತಿನಿಧಿಸುವವರ ದಿಟ್ಟ ನಿಲುವು. ನಮ್ಮಿಬ್ಬರ ಆಲೋಚನೆ, ಕಲ್ಪನೆ, ನಿಲುವು-ಧೋರಣೆ ಒಂದೇ ಆಗಿದ್ದವು. ಏಕೀಕೃತವಾಗಿದ್ದವು’ ಎನ್ನುವ ಕೃಷ್ಣರ ನೆನಪುಗಳಲ್ಲಿ ಅರಸು ಮೈಸೂರು ರಾಜ್ಯದ ಪರವಾಗಿದ್ದದ್ದು ಎದ್ದು ಕಾಣುತ್ತದೆ.

ಇವರಿಬ್ಬರ ಅಭಿಪ್ರಾಯ, ಅನಿಸಿಕೆಗಳಿಗೆ ಪೂರಕವಾಗಿ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು, ‘ಕರ್ನಾಟಕ ಏಕೀಕರಣದ ಪರವಾಗಿ ನಿಜಲಿಂಗಪ್ಪನವರಿದ್ದರು. ಆದರೆ ಅವರ ಶಿಷ್ಯ ಅರಸು ಏಕೀಕರಣದ ವಿರುದ್ಧವಿದ್ದರು. ಅರಸು ಮತ್ತವರ ಗುಂಪಿಗೆ ವಿಶಾಲ ಮೈಸೂರು ರಾಜ್ಯ, ಮೈಸೂರು ರಾಜ್ಯವಾಗಿಯೇ ಉಳಿಯಬೇಕೆಂಬ ಹಟವಿತ್ತು. ಹಾಗಾಗಿ ಅವರೆಲ್ಲ ಏಕೀಕರಣದ ವಿರುದ್ಧವಿದ್ದರು. ಆದರೆ ಮುಖ್ಯಮಂತ್ರಿಯಾದ ನಿಜಲಿಂಗಪ್ಪನವರು ಇಡೀ ರಾಜ್ಯದ ಹಿತದೃಷ್ಟಿಯಿಂದ, ಅಖಂಡತೆಯ ಕಾರಣದಿಂದ ಏಕೀಕರಣದ ಪರವಿದ್ದರು. ಹೀಗಿರುವಾಗಲೇ, ಮೈಸೂರಿನ ಗೌರವಾನ್ವಿತ ವ್ಯಕ್ತಿ ಸಾಹುಕಾರ್ ಚೆನ್ನಯ್ಯನವರ ಬಳಿ ಹೋದ ಮುಖ್ಯಮಂತ್ರಿ ನಿಜಲಿಂಗಪ್ಪನವರು, ಅವರನ್ನು ಏಕೀಕರಣದ ಪರವಿರುವಂತೆ ಮನವೊಲಿಸಿದ್ದರು. ಆದರೆ ಮೈಸೂರು ಕಡೆಯ ಅರಸರ ಗುಂಪು ಅವರ ಬ್ರೈನ್ ವಾಷ್ ಮಾಡಿ, ಏಕೀಕರಣದ ವಿರುದ್ಧವಿರುವಂತೆ ನೋಡಿಕೊಂಡಿತು. ಅಂದರೆ, ಅಷ್ಟರಮಟ್ಟಿಗೆ ಅರಸು ಏಕೀಕರಣದ ವಿರುದ್ಧ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿದ್ದರು.

‘ಇದನ್ನೆಲ್ಲ ನಾನು ಏಕೆ ಹೇಳಿದೆನೆಂದರೆ, ಏಕೀಕರಣದ ಪರ-ವಿರುದ್ಧ ಆಗ ದೊಡ್ಡ ಮಟ್ಟದಲ್ಲಿ ಚರ್ಚೆಗಳು, ವಾದ ವಿವಾದಗಳು ನಡೆಯುತ್ತಿದ್ದವು. ನಾನು 1967ರಿಂದ 1974ರವರೆಗೆ ಶಾಸಕನಾಗಿದ್ದು, ಕರ್ನಾಟಕ ಏಕೀಕರಣ ಮತ್ತು ನಾಮಕರಣ ಪರವಿದ್ದೆ. ದೇವರಾಜ ಅರಸು ಮೊದಲಿನಿಂದಲೂ ಕರ್ನಾಟಕ ಏಕೀಕರಣ ಮತ್ತು ಕರ್ನಾಟಕ ನಾಮಕರಣದ ವಿರುದ್ಧವಿದ್ದರು. ಅಷ್ಟೇ ಅಲ್ಲ, ಶಾಸನ ಸಭೆಯಲ್ಲಿ ‘ನನ್ನ ಹೆಣದ ಮೇಲೆ ಕರ್ನಾಟಕ ಆಗಲಿ’ ಎಂದಿದ್ದರು. ಇಷ್ಟೆಲ್ಲ ಕಟು ನಿಲುವು ತಳೆದಿದ್ದ ದೇವರಾಜ ಅರಸು, 1972ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಂತೆ, ವಿಶಾಲ ದೃಷ್ಟಿಕೋನ ಅಳವಡಿಸಿಕೊಂಡರು. ಸಮಸ್ತ ಕನ್ನಡಿಗರ ಪ್ರತಿನಿಧಿಯಂತೆ ವರ್ತಿಸಿದರು. ಏಕೀಕರಣ ಮತ್ತು ನಾಮಕರಣಕ್ಕೆ ಒಪ್ಪಿದರು. ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು’ ಎಂದರು.

1973, ನವೆಂಬರ್ 1ರಂದು ವಿಧಾನಸಭೆಯಲ್ಲಿ ಕರ್ನಾಟಕದ ನಾಮಕರಣ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ದೇವರಾಜ ಅರಸು, ‘ನಾನು ಕರ್ನಾಟಕ ನಾಮಕರಣ ಮತ್ತು ಏಕೀಕರಣದ ವಿರುದ್ಧವಿದ್ದವನು. ಬಲವಾದ ಕಾರಣಗಳನ್ನಿಟ್ಟುಕೊಂಡು ವಿರೋಧಿಸಿದವನು. ಅದು ನನ್ನ ವೈಯಕ್ತಿಕ ನಿಲುವು ಮತ್ತು ಅಭಿಪ್ರಾಯ. ಈಗ ನಾನು ಈ ನಾಡಿನ ಮುಖ್ಯಮಂತ್ರಿ. ನಾಡಿನ ಜನತೆಯ ಬೇಡಿಕೆಗೆ, ಆಶೋತ್ತರಗಳಿಗೆ ತಲೆಬಾಗಿ, ಕರ್ನಾಟಕ ಎಂದು ನಾಮಕರಣ ಮಾಡಲು ನಿರ್ಣಯಿಸಿದ್ದೇನೆ’ ಎಂದರು. ಇದು ಐತಿಹಾಸಿಕ ನಿರ್ಣಯ. ಕನ್ನಡಿಗರ ಪಾಲಿಗೆ ಅವಿಸ್ಮರಣೀಯ ಕ್ಷಣ. ಆ ಐತಿಹಾಸಿಕ ನಿರ್ಣಯಕ್ಕೆ ಕಾರಣರಾದವರು ದೇವರಾಜ ಅರಸು.

ಮುಖ್ಯಮಂತ್ರಿಗಳು ಕರ್ನಾಟಕ ನಾಮಕರಣ ನಿರ್ಣಯ ಮಂಡಿಸುವ ಬಗ್ಗೆ ಮೊದಲೇ ತಿಳಿದಿದ್ದ ವಾಟಾಳ್‌ ನಾಗರಾಜ್‌, ಆ ವಿಶೇಷ ಕ್ಷಣವನ್ನು ಅಜರಾಮರವನ್ನಾಗಿಸಲು, ಕರ್ನಾಟಕದ ಇತಿಹಾಸದ ಪುಟಗಳಲ್ಲಿ ದಾಖಲು ಮಾಡಲು ಸಕಲ ಸಿದ್ಧವಾಗಿಯೇ ಬಂದಿದ್ದರು. ಅಲ್ಲಿಯವರೆಗೆ ಸದನ ಕಾಣದ, ಯಾರೂ ಮಾಡಿರದ ಕೆಲಸವನ್ನು ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ಮಾಡಬೇಕೆಂದು ಯೋಚಿಸಿದ್ದರು. ʻಯಾವಾಗ ಮುಖ್ಯಮಂತ್ರಿ ನಿರ್ಣಯ ಮಂಡಿಸಿ, ಸ್ಪೀಕರ್ ಮುಂದಿನ ಕ್ರಮ.. ಎಂದರೋ ನಾನು ಸದನದ ಗ್ಯಾಲರಿಗೆ ಹೋಗಿ, ಮೇಲಿನಿಂದ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಸಭಾಧ್ಯಕ್ಷರಾದ ಕೆ.ಎಸ್.ನಾಗರತ್ನಮ್ಮನವರ ಮೇಲೆ ಒಂದು ಗೂಡೆ ಮಲ್ಲಿಗೆ ಹೂವನ್ನು ಸುರಿದೆ. ಇಡೀ ವಿಧಾನ ಮಂಡಲವೇ ಮಲ್ಲಿಗೆ ಹೂವಿನ ವಾಸನೆಯಿಂದ ಘಮ್ಮೆಂದು ಆಹ್ಲಾದಕರ ವಾತಾವರಣ ಸೃಷ್ಟಿಸಿತು. ಶಾಸಕರು, ಮಂತ್ರಿಗಳು, ಅಧಿಕಾರಿಗಳು ಅಚ್ಚರಿಗೊಳಗಾದರು. ವಿಧಾನ ಮಂಡಲದ ವರದಿ ಮಾಡಿದ ‘ಪ್ರಜಾವಾಣಿ’ ಪತ್ರಿಕೆಯ ಜಯಶೀಲರಾವ್, ‘ಕರ್ನಾಟಕ ನಿರ್ಣಯದ ಮೇಲೆ ಮಲ್ಲಿಗೆಯ ಮಳೆ’ ಎಂದು ಬರೆದರುʼ ಎಂದು ಸ್ಮರಿಸಿಕೊಳ್ಳುತ್ತಾರೆ.

ಮುಖ್ಯಮಂತ್ರಿ ದೇವರಾಜ ಅರಸು ಕರ್ನಾಟಕವೆಂದು ನಾಮಕರಣ ಮಾಡಿದ ಮೇಲೆ ವಾಟಾಳ್‌, ತಮ್ಮ ಸಂಘಟನೆಯ ವತಿಯಿಂದ ದೇವರಾಜ ಅರಸರಿಗೆ ಸನ್ಮಾನ ಸಮಾರಂಭವೇರ್ಪಡಿಸಿದರು. ಅದೂ ಎಲ್ಲಿ, ವಿಧಾನಸೌಧದ ಮೆಟ್ಟಿಲುಗಳ ಮೇಲೆ. ಭಾರೀ ಜನಸ್ತೋಮ. ಭವ್ಯವಾದ ವ್ಯವಸ್ಥೆ. ಅರಸು ಮತ್ತವರ ಮಡದಿ ಚಿಕ್ಕಮ್ಮಣ್ಣಿಯವರನ್ನು ವಿಶೇಷವಾಗಿ ಆಹ್ವಾನಿಸಿ, ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಹೂವಿನ ಮಳೆಗರೆದು ಸನ್ಮಾನಿಸಲಾಯಿತು. ಆ ಕಾರ್ಯಕ್ರಮ ಕೂಡ ಅವಿಸ್ಮರಣೀಯವೇ.

ದೇವರಾಜ ಅರಸು ಅವರಿಗೆ ತೀರಾ ಆತ್ಮೀಯರಾಗಿದ್ದ ಹಿರಿಯ ಪತ್ರಕರ್ತರಾದ ವಡ್ಡರ್ಸೆ ರಘುರಾಮಶೆಟ್ಟರು, ಕರ್ನಾಟಕ ನಾಮಕರಣ ಕುರಿತು ‘ಬಹುರೂಪಿ ಅರಸು’ ಕೃತಿಯಲ್ಲಿ ದಾಖಲಿಸಿರುವುದು ಹೀಗಿದೆ: ದೇವರಾಜ ಅರಸರ ಐತಿಹಾಸಿಕ ಕೆಲಸವಾದ ‘ಕರ್ನಾಟಕ’ ಪುನರ್ನಾಮಕರಣ ಆ ದಿನಗಳಲ್ಲಿ ರಾಜಕೀಯ ವೀಕ್ಷಕರು, ಪತ್ರಕರ್ತರು, ಸಾಹಿತಿಗಳು, ಬುದ್ಧಿಜೀವಿಗಳು ಮೊದಲಾದವರಿಗೆ ಸಖೇದಾಶ್ಚರ್ಯವನ್ನುಂಟು ಮಾಡಿತ್ತು. ಅಲ್ಲಿ ಎರಡು ಕಾರಣಗಳು ಚರ್ಚೆಗೊಳಗಾದವು. ಒಂದು, ಮೈಸೂರು ರಾಜಮನೆತನದ ದೂರದ ಸಂಬಂಧಿಯಾದ ದೇವರಾಜ ಅರಸು ಇಂಗಿತ ಈ ರಾಜ್ಯವನ್ನು ‘ಮೈಸೂರು’ ಎಂದೇ ಕರೆಯಬೇಕೆಂಬ ರಾಜಕೀಯ ವಿಚಾರಧಾರೆಗೆ ಸೇರಿದವರೆಂಬುದು. ಎರಡನೆಯದು, ಈ ಕನ್ನಡನಾಡಿನ ಏಕೀಕರಣಕ್ಕಾಗಿ ತಮ್ಮ ರಾಜಕೀಯ ಭವಿಷ್ಯವನ್ನೇ ಪಣವಾಗಿ ಇಟ್ಟಿದ್ದ ಹಾಗೂ ಕರ್ನಾಟಕ ಏಕೀಕರಣದ ಶಿಲ್ಪಿ ಎನಿಸಿಕೊಂಡಿದ್ದ ನಿಜಲಿಂಗಪ್ಪನವರಿಂದ ಆಗದ ಕೆಲಸಕ್ಕೆ ಈ ದೇವರಾಜ ಅರಸು ಕೈ ಹಾಕಿದರಲ್ಲ ಎಂಬುದು.

‘ಈ ರಾಜ್ಯಕ್ಕೆ ಕರ್ನಾಟಕವೆಂದು ಪುನರ್ನಾಮಕರಣದ ನಿರ್ಣಯವನ್ನು ಅರಸು ವಿಧಾನಸಭೆಯಲ್ಲಿ ಮಂಡಿಸಿದಾಗ ಕೃತಕ ಭಾವುಕತೆಯನ್ನು ತೋರಿಸಲಿಲ್ಲ; ನಾಟಕೀಯ ಪ್ರದರ್ಶನವನ್ನೂ ಮಾಡಲಿಲ್ಲ. ಈ ರಾಜ್ಯವನ್ನು ಕರ್ನಾಟಕವೆಂದು ಕರೆಯಬೇಕೆಂಬ ಆಸೆ ಜನತೆಗೆ ಇದೆ. ಅದಕ್ಕೀಗ ತಾನು ಓಗೊಡುತ್ತಿರುವೆನೆಂಬ ನೈಜವಾದ ಮಾತುಗಳನ್ನು ಆಡಿದರು’ ಎಂದಿದ್ದಾರೆ.

ಅದನ್ನು ನೆನಪು ಮಾಡಿಕೊಳ್ಳುವ ರಘುರಾಮ ಶೆಟ್ಟರು, ʻಆ ದಿನ ನಾನು ದೇವರಾಜ ಅರಸರಲ್ಲಿ ಅಸಾಮಾನ್ಯವಾದ ರಾಜಕೀಯ ಮುತ್ಸದ್ದಿತನವನ್ನು ಗುರುತಿಸಿದೆ. ಅಂದು ದೇವರಾಜ ಅರಸು ಸ್ಥಾನದಲ್ಲಿ ಇನ್ಯಾರಾದರೂ ಇರುತ್ತಿದ್ದರೆ ‘ಕರ್ನಾಟಕದ ಶಿಲ್ಪಿʼಯಿಂದ ಆಗದಿದ್ದ ಕೆಲಸವನ್ನು ಮಾಡುತ್ತಿರುವೆನೆಂದು ಕೊಚ್ಚಿಕೊಳ್ಳುತ್ತಿದ್ದರು. ಅರಸು ತಮ್ಮ ಭಾಷಣದಲ್ಲಿ ಅಂತಹ ಯಾವುದೇ ಸಣ್ಣತನ ತೋರಿಸಲಿಲ್ಲ. ಎಲ್ಲವೂ ಕಾಲ-ಮಾನ ಹಾಗೂ ಜನಾಂಗದ ಆಶೋತ್ತರಗಳಿಂದಾಯಿತು ಎಂದ ಅರಸು ನಾಡು ಕಂಡ ಧೀಮಂತ ರಾಜಕಾರಣಿʼ ಎಂದಿದ್ದಾರೆ.

ಇದನ್ನು ಓದಿದ್ದೀರಾ?: ಅಲೆಮಾರಿ ಬದುಕು: ಉಳಿಯೋಕೆ ಒಂದಿಷ್ಟು, ಹೂಳೋಕೆ ಒಂದಿಷ್ಟು ಜಾಗ ಕೊಡಿ ನಮಗೆ..!

‘ಕರ್ನಾಟಕ’ವೆಂದು ನಾಮಕರಣ ಮಾಡುವ ಮೂಲಕ ನಾಡಿನ ಸಾಂಸ್ಕೃತಿಕ ಚಹರೆಯನ್ನು ಬದಲಿಸಿದ, ಚರಿತ್ರೆಯನ್ನು ನಿರ್ಮಿಸಿದ ದೇವರಾಜ ಅರಸು ಅವರು ಕೈಗೊಂಡ ಕಾರ್ಯಗಳು ಅವರನ್ನು ಚಿರಸ್ಥಾಯಿಯನ್ನಾಗಿ ಮಾಡಿವೆ. ಅಂತಹ ಅರಸರ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಬಗೆಗಿನ ಪ್ರೀತಿ, ಕಾಳಜಿಗಳನ್ನು ಹಾಗೂ ನಿಸ್ಪೃಹ ಕೆಲಸಗಳನ್ನು ಆಗಾಗ ನೆನಪು ಮಾಡಿಕೊಳ್ಳುವುದು, ಹೊಸ ತಲೆಮಾರಿಗೆ ತಲುಪಿಸುವುದು ನಿರಂತರವಾಗಿ ನಡೆಯುತ್ತಲೇ ಇರಬೇಕು.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂ. ಗ್ರಾ | ಸಾರ್ವಜನಿಕವಾಗಿ ಧೂಮಪಾನ ತಡೆಗೆ ಸ್ಟಾಪ್ ಟ್ಯೊಬ್ಯಾಕೋ ಮೊಬೈಲ್ ಆಪ್‌ನಲ್ಲಿ ದೂರು ನೀಡಿ:ಜಿಲ್ಲಾಧಿಕಾರಿ ಶಿವಶಂಕರ

ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಭಿತ್ತಿ ಪತ್ರಗಳು, ನಾಮಫಲಕಗಳನ್ನು ಶಾಲೆ-ಕಾಲೇಜು,...

ಜುಲೈ 5ರಂದು ಬಡ ಮಹಿಳೆಯರ ಖಾತೆಗೆ 8,500 ರೂ ಜಮೆ: ರಾಹುಲ್ ಗಾಂಧಿ

ಮಹಾಲಕ್ಷ್ಮೀ ಯೋಜನೆ ದೇಶದಲ್ಲಿರುವ ಬಡ ಮಹಿಳೆಯರ ಬ್ಯಾಂಕ್ ಖಾತೆಗೆ ಜುಲೈ 5ರಂದು...

ಗದಗ | ಮುಖ್ಯ ರಸ್ತೆ ದುರಸ್ಥಿ ಮಾಡುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ

ಗದಗ ಮುಖ್ಯ ರಸ್ತೆ ರೈಲ್ವೆ ಇಲಾಖೆಗೆ ಸಂಬಂಧಪಟ್ಟಿದ್ದು ಈ ರಸ್ತೆಯ ದುರಸ್ತಿ...

ಬೀದರ್‌ | ಬೆಂಕಿ ಅವಘಡ ; ಹೊತ್ತಿ ಉರಿದ ಜೆಸ್ಕಾಂ ಕಚೇರಿ

ಟ್ರಾನ್ಸ್‌ಫಾರ್ಮಾರ್‌ ರಿಪೇರಿ ಮಾಡುವ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಧಗ ಧಗನೆ...