‘ದಾಳಿ’ಯಿಂದ ಕುಟುಂಬ ಉಳಿಸಿಕೊಳ್ಳಲು ಮೈತ್ರಿ ಮೊರೆ ಹೋದರೆ ಎಚ್ ಡಿ ದೇವೇಗೌಡರು?

Date:

ಹಿರಿಯ ರಾಜಕಾರಣಿ ಎಸ್.ಎಂ ಕೃಷ್ಣರ ಕೊನೆ ದಿನಗಳಲ್ಲಿ ದಾಳಿಗೆ ಬೆದರಿ ಬಿಜೆಪಿಗೆ ಹೋಗಿದ್ದನ್ನು ಹಾಗೂ ಅವರ ಕುಟುಂಬದಲ್ಲಾದ ಸಾವು-ನೋವುಗಳನ್ನು ಬಹಳ ಹತ್ತಿರದಿಂದ ಕಂಡ ದೇವೇಗೌಡರು,  ಅದು ತಮ್ಮ ಕುಟುಂಬದಲ್ಲಾಗಬಾರದು ಎಂಬ ಏಕೈಕ ಕಾರಣದಿಂದ, ತಮ್ಮ ಇಷ್ಟು ವರ್ಷದ ಸಿದ್ಧಾಂತಬದ್ಧ ರಾಜಕಾರಣಕ್ಕೆ ತಿಲಾಂಜಲಿ ಇಟ್ಟು, ಕೋಮುವಾದಿಗಳೊಂದಿಗೆ ಕೈ ಜೋಡಿಸುತ್ತಿದ್ದಾರೆ 

ʻಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಹೋರಾಟ ನಡೆಸಲಿದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಕಳೆದ ಸೋಮವಾರ ಹಾಸನದಲ್ಲಿ ಮಾತನಾಡಿದ್ದರು.

ಮುಂದುವರೆದು, ‘ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟ್ಟಾಗಿ ಹೋಗುತ್ತಾರೆ ಎಂದು ಹೇಳಿದ್ದಾರೆ. ಆದರೆ ಇಲ್ಲಿ ಬಿಜೆಪಿಯವರೇ ಒಗ್ಗಟ್ಟಾಗಿಲ್ಲ, ಇದುವರೆಗೂ ಅವರ ನಾಯಕ ಯಾರು ಎಂದು ಗುರುತಿಸಲು ಸಾಧ್ಯವಾಗಿಲ್ಲ, ಇಂತಹ ಸಂದರ್ಭದಲ್ಲಿ ನಾವು ಹೊಂದಾಣಿಕೆ ಕುರಿತು ಯಾರ ಜತೆ ಮಾತನಾಡಲು ಆಗುತ್ತೆ’ ಎಂದೂ ಹೇಳಿದ್ದರು.

ಅಂದರೆ, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಏಕಾಂಗಿಯಾಗಿ ಹೋರಾಡಲಿದೆ, ಹೋರಾಟಕ್ಕೆ ಸಿದ್ಧರಾಗಿ ಎಂದು ಕಾರ್ಯಕರ್ತರಿಗೆ ಕರೆ ಕೊಡುವುದು; ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಾರೆ ಎಂದು ಲೇವಡಿ ಮಾಡುವುದು; ಅದರ ಜೊತೆ ಜೊತೆಗೇ ಬಿಜೆಪಿ ಜತೆ ಮೈತ್ರಿಗೆ ಸಿದ್ಧವಾಗಿದ್ದೇವೆ ಎಂಬ ಸಂದೇಶವನ್ನು ಯಾರಿಗೆ ರವಾನಿಸಬೇಕೋ ಅವರಿಗೆ ರವಾನಿಸುವುದು ಗೌಡರ ಹೇಳಿಕೆಯ ಒಟ್ಟು ಸಾರಾಂಶವಾಗಿತ್ತು. ಮತ್ತು ಆ ಹೇಳಿಕೆ ಆ ಸಮಯಕ್ಕಷ್ಟೇ ಸೀಮಿತವಾಗಿತ್ತು. 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇವತ್ತಿನ ಪತ್ರಕರ್ತರು ಕೂಡ ಈ ಕ್ಷಣಕ್ಕಷ್ಟೇ ಸೀಮಿತರಾಗಿದ್ದಾರೆ. ದೇವೇಗೌಡರನ್ನಷ್ಟೇ ಅಲ್ಲ, ಯಾವ ರಾಜಕಾರಣಿಗೂ ಮರುಪ್ರಶ್ನೆ ಹಾಕುವುದಿಲ್ಲ. ಅವರು ಹೇಳಿದ್ದನ್ನು ಬರೆದುಕೊಂಡು ಬರುವ ಸ್ಟೆನೋಗ್ರಾಫರ್ ಗಳಾಗಿ ಬಹಳ ಕಾಲವಾಗಿದೆ, ಇರಲಿ.

ಗೌಡರು ಹೀಗೆ ಹೇಳಿ ನಾಲ್ಕು ದಿನ ಕಳೆಯುವುದರೊಳಗೆ, ಅತ್ತ ಕಡೆಯಿಂದ- ದಿಲ್ಲಿಯ ಬಿಜೆಪಿಯ ವರಿಷ್ಠರಿಂದ- ಕೂಡಾವಳಿ ಸಂದೇಶ ಬಂದಿದೆ. ಅದರ ಫಲವಾಗಿ ಶುಕ್ರವಾರ ಬೆಂಗಳೂರಿನಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ, ‘ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಒಪ್ಪಿಗೆ ನೀಡಿದ್ದಾರೆ. ರಾಜ್ಯದ ಒಟ್ಟು 28 ಲೋಕಸಭಾ ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಅಮಿತ್ ಶಾ ಅವರು ಒಪ್ಪಿದ್ದಾರೆ’ ಎಂದು ಮೈತ್ರಿ ವಿಚಾರವನ್ನು ಖಚಿತಪಡಿಸಿದರು.

ಇಲ್ಲಿಯೂ ಅಷ್ಟೇ, ಯಡಿಯೂರಪ್ಪನವರಿಗೆ ನಿಮಗೆ ಅಧಿಕಾರ ಹಸ್ತಾಂತರಿಸದ ಕುಮಾರಸ್ವಾಮಿ ಅವರೊಂದಿಗೆ ಮೈತ್ರಿಗೆ ನಿಮ್ಮದೇನೂ ತಕರಾರಿಲ್ಲವೇ, ನಾಲ್ಕು ತಿಂಗಳ ಹಿಂದೆ ಬಹಿರಂಗವಾಗಿ ಬಡಿದಾಡಿಕೊಂಡಿದ್ದ ಕಾರ್ಯಕರ್ತರಿಗೆ ಕಸಿವಿಸಿಯಾಗುವುದಿಲ್ಲವೇ? ಎಂಬಂತಹ ಪ್ರಶ್ನೆಗಳನ್ನೇನೂ ಪತ್ರಕರ್ತರು ಕೇಳಲಿಲ್ಲ, ಇರಲಿ.

ಒಂದಂತೂ ಸ್ಪಷ್ಟ- ರಾಜ್ಯ ಕಾಂಗ್ರೆಸ್ ಬಲಿಷ್ಠವಾಗಿದೆ. ಅದರ ಬಳಿ ಅಧಿಕಾರ ಮತ್ತು ಹಣಬಲವಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಅದು ಇನ್ನಷ್ಟು ಜನರಿಗೆ ಹತ್ತಿರವಾಗಿದೆ. ಜನಪ್ರಿಯ ಸರ್ಕಾರವಾಗಿ ಹೊರಹೊಮ್ಮಿದೆ. ಹಾಗಾಗಿ, ಸದ್ಯಕ್ಕೆ ಬಿಜೆಪಿ ಮತ್ತು ಜೆಡಿಎಸ್- ಇಬ್ಬರಿಗೂ ಸಮಾನಶತ್ರು ಕಾಂಗ್ರೆಸ್. ಅದನ್ನು ಮಣಿಸಬೇಕಾದರೆ ಮೈತ್ರಿಯೊಂದೇ ಮಾರ್ಗ ಎನ್ನುವುದನ್ನು ಎರಡೂ ಪಕ್ಷಗಳು ಒಪ್ಪಿ ಅಪ್ಪಿಕೊಂಡಿವೆ. ಬಿಜೆಪಿಗೆ ಸಮರ್ಥ ನಾಯಕನಿಲ್ಲ, ಜೆಡಿಎಸ್‌ಗೆ ಸಂಪನ್ಮೂಲವಿಲ್ಲ. ಹೀಗಾಗಿ ಕೊಡು-ಕೊಳ್ಳುವ ವ್ಯವಹಾರ ಇಬ್ಬರಿಗೂ ಅಗತ್ಯ ಮತ್ತು ಅನಿವಾರ್ಯ ಎನಿಸಿದೆ.

ರಾಜಕಾರಣದಲ್ಲಿ ಮೈತ್ರಿ ಎಲ್ಲ ಕಾಲಕ್ಕೂ ನಡೆಯುವ ವಿದ್ಯಮಾನ. ಅಲ್ಲಿ ಸರಿ-ತಪ್ಪುಗಳನ್ನು ಒರೆಗೆ ಹಚ್ಚುವುದು, ವಿಶ್ಲೇಷಿಸುವುದು ಅಷ್ಟು ಸರಿಯಲ್ಲ. ಆದರೆ ಮತದಾರರ ಒಲವು-ನಿಲುವುಗಳನ್ನು ನಿರ್ಲಕ್ಷಿಸುವುದು ಹಾಗೂ ತಾವು ನಂಬಿದ ತತ್ವ-ಸಿದ್ಧಾಂತಗಳನ್ನು ಬಲಿ ಕೊಟ್ಟು- ಮತ್ತದೇ ಜನಸೇವೆ, ಸಂವಿಧಾನ, ಪ್ರಜಾಪ್ರಭುತ್ವ ಕುರಿತು ಒಣಭಾಷಣ ಬಿಗಿಯುವುದು ಮಹಾಪರಾಧ.

ಇತ್ತೀಚೆಗೆ ನಡೆದ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುದ್ದಿಯೊಂದು ಚಾಲ್ತಿಯಲ್ಲಿತ್ತು. ಅದೇನೆಂದರೆ, ಕರ್ನಾಟಕದ ಎರಡು ಬಲಿಷ್ಠ, ಬಲಾಢ್ಯ, ಬಹುಸಂಖ್ಯಾತ ಜಾತಿಗಳಾದ ಲಿಂಗಾಯತರು ಮತ್ತು ಒಕ್ಕಲಿಗರು- ಬಿಜೆಪಿ, ಜೆಡಿಎಸ್ ಪಕ್ಷಗಳ ಬೆಂಬಲಿಗರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ, ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಪ್ರಾಬಲ್ಯವಿದೆ. ಅಲ್ಲಿಯವರೆಗೆ ನಡೆದ ಚುನಾವಣೆಗಳು ಕೂಡ ಅದನ್ನು ಗಟ್ಟಿಗೊಳಿಸಿವೆ ಎನ್ನಲಾಗಿತ್ತು. ಆದರೆ 2023ರ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಬೇರೆಯಾಗಿತ್ತು. ಕಾಂಗ್ರೆಸ್ ಗೆದ್ದು ಗದ್ದುಗೆ ಹಿಡಿದಿತ್ತು. ಬಿಜೆಪಿ-ಜೆಡಿಎಸ್‌ಗೆ ಗುದ್ದು ಕೊಟ್ಟು ಗುದ್ದಿಗೆ ಹಾಕಿತ್ತು.

ಇವೆರಡೂ ಪಕ್ಷಗಳಿಗೆ ಕರ್ನಾಟಕದ ಮತದಾರರು ಕೊಟ್ಟ ಮರ್ಮಾಘಾತದಿಂದ ಚೇತರಿಸಿಕೊಳ್ಳುವುದೇ ಕಷ್ಟವಾಗಿತ್ತು. ಬರಲಿರುವ 2024ರ ಲೋಕಸಭಾ ಚುನಾವಣೆ, ಬಿಡುಗಡೆಯ ಭಾಗ್ಯ ಕಲ್ಪಿಸಿದೆ, ಅವಕಾಶ ಸೃಷ್ಟಿಸಿದೆ. ಸೋತು ಸೊರಗಿರುವ ಇಬ್ಬರಿಗೂ ಇದು ಬಹಳ ಮುಖ್ಯವಾಗಿದೆ. ಅದರಲ್ಲೂ ದಿಲ್ಲಿಯ ಬಿಜೆಪಿ ನಾಯಕರಿಗೆ ಈ ಚುನಾವಣೆ ಬಹಳ ಮುಖ್ಯವಾಗಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲೇಬೇಕಾಗಿದೆ. ಅದು ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದೇ ರೀತಿ, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ. ಪಕ್ಷವನ್ನು ಉಳಿಸಿಕೊಳ್ಳಲು ಪಕ್ಷದ ‘ಜಾತ್ಯತೀತʼ ಸಿದ್ಧಾಂತವನ್ನೇ ಬಲಿ ಕೊಡಲು ಸಿದ್ಧವಾಗಿದೆ.

ಈ ಮಟ್ಟಕ್ಕೆ ಇವೆರಡೂ ಪಕ್ಷಗಳಿಗೆ ಈ ಮೈತ್ರಿ ಅಗತ್ಯವಾಗಿರುವಾಗ, ಅಸಲಿಗೆ ಯಾರಿಗೆ ಎಷ್ಟು ಲಾಭವಾಗಬಹುದು ಎಂಬುದು ಸದ್ಯಕ್ಕೆ ರಾಜಕೀಯ ವಲಯದಲ್ಲಿ ಚರ್ಚೆಯ ವಸ್ತುವಾಗಿದೆ.

ರಾಜ್ಯ ಬಿಜೆಪಿ ನಾಯಕರನ್ನು ಕಾಲಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದ, ಕರ್ನಾಟಕ ಎಂದಾಕ್ಷಣ ಕೆಂಡಾಮಂಡಲವಾಗುತ್ತಿದ್ದ ಮೋಶಾಗಳು ಚುನಾವಣೆಯ ಕಾರಣಕ್ಕಾಗಿ ಒಂದಿಷ್ಟು ಬಗ್ಗಬೇಕಾಗಿ ಬಂದಿದೆ. ಜೆಡಿಎಸ್‌ನೊಂದಿಗೆ ಮೈತ್ರಿಗೆ ಮುಂದಾಗಿದ್ದಾರೆ. ಈ ಹಿಂದಿನ ಕಹಿ ಅನುಭವವನ್ನೂ ಮರೆತ ರಾಜ್ಯ ಬಿಜೆಪಿ ನಾಯಕರು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಕೇವಲ ಒಂದು ಫೋನ್ ಕರೆಗೆ ಹಿರಿಹಿರಿ ಹಿಗ್ಗಿಹೋಗಿದ್ದಾರೆ. ಪಕ್ಷಕ್ಕೆ ಲಿಂಗಾಯತರ ಅಗತ್ಯವಿಲ್ಲ ಎಂದು ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟಿ ಪಕ್ಷವನ್ನು ಪಾತಾಳಕ್ಕೆ ಹಾಕಿದ್ದ ವಿಘ್ನಸಂತೋಷಿಗಳ ಕುಕೃತ್ಯವನ್ನೂ ಮರೆತು ಯಡಿಯೂರಪ್ಪ, ಬೊಮ್ಮಾಯಿ, ಸೋಮಣ್ಣ ಒಂದಾಗಿದ್ದಾರೆ. ಯತ್ನಾಳ್, ರೇಣುಕಾಚಾರ್ಯ, ನಿರಾಣಿ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ತಣ್ಣಗಾಗಿದ್ದಾರೆ. ಸಿ.ಟಿ ರವಿ, ಅಶೋಕ್, ಅಶ್ವತ್ಥ್ ನಾರಾಯಣ ಅತಂತ್ರರಾಗಿದ್ದಾರೆ. ಸುನಿಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಬೇಲಿ ಮೇಲೆ ಕೂತು ನೋಡುತ್ತಿದ್ದಾರೆ. ಪ್ರಲ್ಹಾದ್ ಜೋಶಿ, ಸಂತೋಷ್, ತೇಜಸ್ವಿ ಸೂರ್ಯ, ಸುರೇಶ್ ಕುಮಾರ್, ನಾಗೇಶ್, ಕಾಗೇರಿ ಮೌನಕ್ಕೆ ಶರಣಾಗಿದ್ದಾರೆ. ಡಿ.ವಿ ಸದಾನಂದಗೌಡ, ಪ್ರಭಾಕರ ಕೋರೆ, ಸಿದ್ದೇಶ್, ಜಿ.ಎಸ್ ಬಸವರಾಜು, ಶಿವಕುಮಾರ್ ಉದಾಸಿ, ಗೋವಿಂದ ಕಾರಜೋಳ ಅವರನ್ನು ಕೇಳುವವರೇ ಇಲ್ಲವಾಗಿದೆ.

ರಾಜ್ಯ ಬಿಜೆಪಿ ಒಡೆದ ಮನೆಯಂತಾಗಿದೆ. ಹಲವು ಗುಂಪುಗಳಾಗಿ ಹರಿದು ಹಂಚಿಹೋಗಿದೆ. ಮೋದಿಯವರಿಗಾಗಿ ಇವರೆಲ್ಲ ಒಂದಾದರೂ, ಲಿಂಗಾಯತ ಮತದಾರರು ಒಂದಾಗಿ ಬಿಜೆಪಿಯನ್ನು ಬೆಂಬಲಿಸುತ್ತಾರೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಏಕೆಂದರೆ, ಗೆದ್ದರೆ ಕೇಂದ್ರದಲ್ಲಿ ಮೋದಿ ಕೈ ಬಲಪಡಿಸಬಹುದೇ ಹೊರತು ಲಿಂಗಾಯತರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬುದು ಖಾತ್ರಿ ಇಲ್ಲ. 2019ರ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿ ಕಳಿಸಿದರೂ, ಲಿಂಗಾಯತರಿಗೆ ಉತ್ತಮ ಸ್ಥಾನ-ಮಾನವನ್ನೇನೂ ನೀಡಲಿಲ್ಲ. ಡಬಲ್ ಎಂಜಿನ್ ಸರ್ಕಾರವಿದ್ದರೂ ಕೇಂದ್ರದಿಂದ ಅನುದಾನ ಹರಿದು ಬರಲಿಲ್ಲ. ನೆರೆಯತ್ತ ನೋಡಲಿಲ್ಲ. ಕಳಸಾ-ಬಂಡೂರಿ, ಕೃಷ್ಣೆ, ಕಲ್ಯಾಣ ಕರ್ನಾಟಕದ ಸಮಸ್ಯೆಗಳೇನೂ ನೀಗಲಿಲ್ಲ. ಪರಿಸ್ಥಿತಿ ಹೀಗಿರುವಾಗ ಉತ್ತರ ಕರ್ನಾಟಕ ಬಿಜೆಪಿಯ ಕೈ ಹಿಡಿಯುತ್ತದೆಯೇ? ಮೈತ್ರಿ ಅನುಕೂಲಕರ ವಾತಾವರಣ ಸೃಷ್ಟಿಸಲು ಸಾಧ್ಯವೇ?

ಇದೇ ಮಾತುಗಳನ್ನು ಜಾತ್ಯತೀತ ಜನತಾ ಪಕ್ಷಕ್ಕೆ ಹೇಳಲಾಗುವುದಿಲ್ಲ. ಏಕೆಂದರೆ, ಜೆಡಿಎಸ್, ತನ್ನ ಜಾತ್ಯತೀತ ಕಾರ್ಡು ಹೊಂದಾಣಿಕೆಯಾಗುವ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಾಗ, 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದು ಒಂದೇ ಒಂದು ಸ್ಥಾನವನ್ನು. ಅದೂ ತಮ್ಮದೇ ತವರು ಜಿಲ್ಲೆಯಾದ ಹಾಸನವನ್ನು ಮಾತ್ರ. ಗೌಡರು ಗೆಲ್ಲುತ್ತಿದ್ದ ಕ್ಷೇತ್ರವನ್ನು ತಮ್ಮದೇ ಕುಟುಂಬದ ಕುಡಿಗೆ ಉಡುಗೊರೆಯಾಗಿ ಕೊಟ್ಟು, ಗೌಡರು ಹಾಸನದಿಂದ ತುಮಕೂರಿಗೆ ಬಂದಿದ್ದರು. ಆ ಮೂಲಕ ತುಮಕೂರನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಯೋಜಿಸಿದ್ದರು. ಹಾಗೆಯೇ ಮೈತ್ರಿಯ ಕಾರಣಕ್ಕೆ ಮಂಡ್ಯದಿಂದ ಮತ್ತೊಬ್ಬ ಮೊಮ್ಮಗನಾದ ಕುಮಾರಸ್ವಾಮಿಯವರ ಪುತ್ರ ನಿಖಿಲ್ ರನ್ನು ಕಣಕ್ಕಿಳಿಸಿದ್ದರು. ಆದರೆ ತುಮಕೂರಿನಲ್ಲಿ ಗೌಡರು, ಮಂಡ್ಯದಲ್ಲಿ ನಿಖಿಲ್ ಸೋತು, ರೇವಣ್ಣನವರ ಪುತ್ರ ಪ್ರಜ್ವಲ್ ಮಾತ್ರ ಗೆದ್ದಿದ್ದರು.

ಈ ಬಾರಿ ಜೆಡಿಎಸ್ ತನ್ನ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಬರುವ ಆರು ಕ್ಷೇತ್ರಗಳನ್ನು- ಹಾಸನ, ತುಮಕೂರು, ಕೋಲಾರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕೇಳಿದೆ. ವಶೀಲಿಬಾಜಿ ನಡೆದು ಬಿಜೆಪಿ ಹಾಸನ, ತುಮಕೂರು, ಕೋಲಾರ, ಮಂಡ್ಯ- ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಡಬಹುದು. ಅದರಲ್ಲಿ ಜೆಡಿಎಸ್ ಎರಡನ್ನು ಗೆದ್ದರೂ ಅದು ಬಹಳ ದೊಡ್ಡ ಗೆಲುವೇ.  ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದನ್ನು ಒಕ್ಕಲಿಗರ ಬೆಲ್ಟ್, ಜೆಡಿಎಸ್ ಪ್ರಾಬಲ್ಯ ಎಂದು ಗುರುತಿಸಲಾಗುತ್ತಿತ್ತೋ, ಅದೇ ಹಳೇ ಮೈಸೂರು ಭಾಗದಲ್ಲಿ ಮತ ಗಳಿಕೆಯಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಎರಡನೇ ಸ್ಥಾನಕ್ಕೇರಿತ್ತು. ಈಗ ಈ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ಪಕ್ಷಗಳೆರಡೂ ಒಂದಾಗಿ, ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದರೆ- ಅದು ಜೆಡಿಎಸ್‌ಗೆ ಲಾಭವಾಗುತ್ತದೆ. ಹಾಸನ ಮತ್ತು ಮಂಡ್ಯವನ್ನು ಗೆಲ್ಲುವ ಮೂಲಕ ಮೈತ್ರಿಯಿಂದ ಬಹಳ ದೊಡ್ಡ ಲಾಭವನ್ನು ಜೆಡಿಎಸ್ ಗಳಿಸಿಕೊಂಡಂತಾಗುತ್ತದೆ.

ಹಾಗೆಯೇ 2019ರಲ್ಲಿ ಮಂಡ್ಯ ಕ್ಷೇತ್ರದಿಂದ ಮಗ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿ, ಸುಮಲತಾ ಎಂಬ ರಾಜಕೀಯವೇ ಗೊತ್ತಿಲ್ಲದ ಸಿನೆಮಾ ನಟಿಯಿಂದ ಸೋತು ಅವಮಾನಕ್ಕೆ ಈಡಾಗಿದ್ದ ಕುಮಾರಸ್ವಾಮಿ, ಮಂಡ್ಯ ಕ್ಷೇತ್ರವನ್ನು ಮೈತ್ರಿಯ ಭಾಗವಾಗಿ ಕೇಳಿ ಪಡೆದು, ಸುಮಲತಾಗೆ ಈ ಬಾರಿ ಟಿಕೆಟ್ ಸಿಗದಂತೆ ನೋಡಿಕೊಳ್ಳಬಹುದು. ಆ ಮೂಲಕ ಕಳೆದ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಬಹುದು. ಏಕೆಂದರೆ ಗೌಡರ ಕುಟುಂಬಕ್ಕೆ ಚುನಾವಣೆ ಗೆಲ್ಲುವುದಕ್ಕಿಂತಲೂ ಸೇಡು ತೀರಿಸಿಕೊಳ್ಳುವುದು ಬಹಳ ಮುಖ್ಯ. ಅದನ್ನು ಅವರ ಕೌಟುಂಬಿಕ ರಾಜಕಾರಣ ನಡೆದು ಬಂದ ಹಾದಿಯನ್ನೊಮ್ಮೆ ತಿರುಗಿ ನೋಡಿದರೆ ತಿಳಿಯುತ್ತದೆ.  

ಇದನ್ನು ಓದಿದ್ದೀರಾ?: ನಿಜವಾಗೂ ನಾನು ಈ ಹೋರಾಟಕ್ಕೆ ಬರಲು ಮುಖ್ಯ ಪ್ರೇರಣೆ ನನ್ನ ಅವ್ವಂದಿರು : ಎಸ್.ಆರ್ ಹಿರೇಮಠ

ಇದಕ್ಕಿಂತಲೂ ಮುಖ್ಯವಾಗಿ, ಬಿಜೆಪಿಯ ದಿಲ್ಲಿವಾಲಾಗಳಿಂದ ಆಗಬಹುದಾದ ಐಟಿ, ಇಡಿ, ಸಿಬಿಐ ದಾಳಿಗಳಿಂದ ಗೌಡರ ಕುಟುಂಬ ಬಚಾವಾಗಬಹುದು. ವಯಸ್ಸಾದ ಹಿರಿಯ ರಾಜಕಾರಣಿ ದೇವೇಗೌಡರಿಗೆ ಈ ಹೊತ್ತಿನಲ್ಲಿ ಚುನಾವಣೆಗಳನ್ನು ಗೆಲ್ಲುವುದಕ್ಕಿಂತಲೂ ಮುಖ್ಯ ಬಿಜೆಪಿಯ ದಾಳಿಗಳಿಂದ ದೂರ ಇರುವುದು. ಏಕೆಂದರೆ ಗೌಡರಿಗಿಂತ ವಯಸ್ಸಿನಲ್ಲಿ ಹಿರಿಯರಾದ ಎಸ್.ಎಂ ಕೃಷ್ಣರ ಕೊನೆ ದಿನಗಳಲ್ಲಿ ದಾಳಿಗೆ ಹೆದರಿ ಬಿಜೆಪಿಗೆ ಹೋಗಿದ್ದನ್ನು ಹಾಗೂ ಅವರ ಕುಟುಂಬದಲ್ಲಾದ ಸಾವು-ನೋವುಗಳನ್ನು ಬಹಳ ಹತ್ತಿರದಿಂದ ಕಂಡ ದೇವೇಗೌಡರು, ಅದು ತಮ್ಮ ಕುಟುಂಬದಲ್ಲಾಗಬಾರದು ಎಂಬ ಏಕೈಕ ಕಾರಣದಿಂದ, ತಮ್ಮ ಇಷ್ಟು ವರ್ಷದ ಸಿದ್ಧಾಂತಬದ್ಧ ರಾಜಕಾರಣಕ್ಕೆ ತಿಲಾಂಜಲಿ ಇಟ್ಟು, ಕೋಮುವಾದಿಗಳೊಂದಿಗೆ ಕೈ ಜೋಡಿಸುತ್ತಿದ್ದಾರೆ ಎಂಬ ಅಪವಾದವನ್ನು ಹೊತ್ತುಕೊಂಡರೂ, ಕುಟುಂಬವನ್ನು ಕಾಪಾಡುವುದು ಗೌಡರ ಮೊದಲ ಆದ್ಯತೆಯಾಗಿದೆ ಎನ್ನುತ್ತಿದ್ದಾರೆ ಅವರ ಆಪ್ತರು.   

ಒಟ್ಟಿನಲ್ಲಿ ನಾಲ್ಕು ತಿಂಗಳ ಹಿಂದೆ ಹಾವು-ಮುಂಗುಸಿಯಂತಿದ್ದ ಬಿಜೆಪಿ-ಜೆಡಿಎಸ್, ಲೋಕಸಭಾ ಚುನಾವಣೆಗಾಗಿ- ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದಕ್ಕಾಗಿ- ಒಂದಾಗಿವೆ. ಒಂದಾಗುವ ಮೂಲಕ ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು. ಮೂಲೆಗುಂಪಾಗಿರುವ ಯಡಿಯೂರಪ್ಪನವರ ಗುಂಪು ಮತ್ತೆ ಮುನ್ನಲೆಗೆ ಬರಬಹುದು. ಹಾಗೆಯೇ ಗೆದ್ದು ಹಾರಾಡುತ್ತಿರುವ ಕಾಂಗ್ರೆಸ್ಸಿನ ಹಾರಾಟವನ್ನು ಹದ್ದುಬಸ್ತಿಗೆ ತರಬಹುದು. ಕಾಂಗ್ರೆಸ್ ಏನು ಸತ್ಯಹರಿಶ್ಚಂದ್ರರ ಪಕ್ಷವಲ್ಲ. ಅದು ಗೆದ್ದು ದಿಲ್ಲಿ ಗದ್ದುಗೆಯನ್ನು ಹಿಡಿಯುವುದು ಅಷ್ಟು ಸುಲಭವಲ್ಲ. ಒಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಇಷ್ಟೆಲ್ಲ ರಾಜಕೀಯ ಬದಲಾವಣೆಗಳಾದರೂ, ಕರ್ನಾಟಕದ ಜನತೆಗೆ ಮಾತ್ರ ಮೂರು ಕಾಸಿನ ಪ್ರಯೋಜನವೂ ಇಲ್ಲ ಎನ್ನುವುದು ಸತ್ಯ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

  1. ದಿಟ್ಟ ಬರಹ.ಈ ಮೈತ್ರಿ ಕರ್ನಾಟಕ‌ದ ಹಿತಾಸಕ್ತಿಗೆ ಪೂರಕವೇನಲ್ಲ. ಡಬಲ್ ಇಂಜಿನ್ ಟುಸ್ ಪಟಾಕಿ ಆಗಿ ಚುನಾವಣೆಯಲ್ಲಿ ಸೋತು ಸುಮ್ಮನಾಗಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಟ್ ಕಾಯಿನ್ ಹಗರಣ​ | ಸೈಬರ್ ಕ್ರೈಂ ಠಾಣೆ ಇನ್ಸ್​ಪೆಕ್ಟರ್ ಚಂದ್ರಾಧರ್​ ಬಂಧನ

ಬಿಟ್‌ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ಸ್‌ಪೆಕ್ಟರ್ ಚಂದ್ರಾಧರ್ ಎಂಬುವವರನ್ನು ಸಿಐಡಿ ಪೊಲೀಸರು...

ಹಿಂದುತ್ವ | ಭಾರತೀಯ ಸಮಾಜವನ್ನು ಒಳಗಿನಿಂದಲೇ ವಂಚಿಸುವ ‘ಗೋಮುಖ ವ್ಯಾಘ್ರ’

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಭಾರತದ ಅತಿದೊಡ್ಡ ರಾಜಕೀಯ ಶಕ್ತಿಯಾಗಿದೆ. ಆದರೆ,...

ಸಂತ್ರಸ್ತೆ ಅಪಹರಣ ಪ್ರಕರಣ | ಮೇ 31ಕ್ಕೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ತೀರ್ಪು

ಕೆ ಆರ್‌ ನಗರ ಮಹಿಳೆ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ...