ಹೈಕಮಾಂಡ್ಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಹೊಸ ಸಿಎಂ ಅಧಿಕಾರ ಸ್ವೀಕರಿಸುವ ಮುನ್ನವೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪರ್ವ ತೀವ್ರಗೊಂಡಿದೆ. ಈ ಮಧ್ಯೆ ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
ವಿವಿಧ ಸಮುದಾಯಗಳಿಗೆ ಜಾತಿ ಲೆಕ್ಕಚಾರದಿಂದ ರಾಜಕೀಯ ಪ್ರತಿನಿಧಿತ್ವ ನೀಡುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ 3 ರಿಂದ 4 ಡಿಸಿಎಂ ಹುದ್ದೆ ಸೃಜಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದ್ದು, ಈ ಮಹತ್ವದ ಬೆಳವಣಿಗೆ ನಡುವೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಮಾಡಬೇಕು ಅಥವಾ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಬೇಕೆಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ.
ಎರಡನೇ ಅವಧಿಯಲ್ಲಿ ಮೂರು ವರ್ಷ ಆಡಳಿತ ನಡೆಸಿ ಸಿಎಂ ಗಾದಿ ಬಿಟ್ಟು ನಿರ್ಗಮಿಸಿದ ಸಿದ್ದರಾಮಯ್ಯ ಅವರ ಬೆನ್ನಲೇ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಡಿ.ಕೆ.ಶಿವಕುಮಾರ ಅವರೇ ಬಹುತೇಕ ಖಚಿತ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಇನ್ನು ಉಪಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಮಾತುಗಳು ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಮುಂದಿನ ಎರಡು ವರ್ಷಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಿಎಂ, ಡಿಸಿಎಂ ಹಾಗೂ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿದೆ. ಹೊಸ ನಾಯಕತ್ವ ನೇತ್ರತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ನ ಎರಡನೇ ಇನಿಂಗ್ಸ್ ಶುರುವಾಗುವ ಕಾಲ ಕೊನೆಗೂ ಕೂಡಿ ಬಂದಿದೆ. ವಿವಿಧ ಸಮುದಾಯಗಳಿಗೆ ಸಮತೋಲನ ಸಾಧಿಸುವ ತಂತ್ರ ರೂಪಿಸುತ್ತಿದ್ದು, ದಲಿತ, ಲಿಂಗಾಯತ, ಮುಸ್ಲಿಂ ಹಾಗೂ ಕುರುಬ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಮೂರ್ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸಿ ಎಲ್ಲ ಸಮುದಾಯಗಳ ನಾಯಕರಿಗೂ ಸಮಧಾನ ಪಡಿಸುವ ಲೆಕ್ಕಚಾರ ಹೈಕಮಾಂಡ್ ಅಂಗಳದಲ್ಲಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಗ್ರಾಮೀಣಾಭಿವೃದ್ಧಿ ಹಾಗೂ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರುಗಳು ಉಪಮುಖ್ಯಮಂತ್ರಿ . ಈ ನಡುವೆ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆದ ಈಶ್ವರ ಖಂಡ್ರೆ ಅವರ ಹೆಸರು ಮುನ್ನೆಲೆಗೆ ಬಂದಿದ್ದು, ಅವರ ಬೆಂಬಲಿಗರು, ವಿವಿಧ ಮಠಾಧೀಶರು, ಕಾಂಗ್ರೆಸ್ ಕಾರ್ಯಕರ್ತರು ಅದಕ್ಕೆ ಬೇಡಿಕೆಯಿಟ್ಟಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ಧಿಗೆ ಈಶ್ವರ ಖಂಡ್ರೆ ಡಿಸಿಎಂ ಆಗಲಿ
ಬೀದರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ್ ಅಪ್ಪೆ ಅವರ ನೇತೃತ್ವದಲ್ಲಿ ರಾಜ್ಯದ ಅರಣ್ಯ, ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಈಶ್ವರ ಖಂಡ್ರೆ ಅವರ ಫೋಟೊ ಕೈಯಲ್ಲಿ ಹಿಡಿದು ಡಿಸಿಎಂ ಮಾಡಬೇಕೆಂದು ಒತ್ತಾಯಿಸಿ ಈಶ್ವರ ಖಂಡ್ರೆ ಪರ ಘೋಷಣೆ ಕೂಗಿದರು.
ʼರಾಜ್ಯ ರಾಜಕಾರಣದಲ್ಲಿ ಚುರುಕಾಗಿ ಕೆಲಸ ಮಾಡುತ್ತಿರುವ ಜನಪರ ನಾಯಕರು, ಎಲ್ಲಾ ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಈಶ್ವರ ಖಂಡ್ರೆ ಅವರಲ್ಲಿದೆ. ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾಗದೇ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಯತ್ತ ಕೆಲಸ ಮಾಡುತ್ತಿದ್ದಾರೆʼ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜನಪರ ಆಡಳಿತ ನೀಡುತ್ತಿದ್ದು, ಅದೇ ರೀತಿಯಲ್ಲಿ ಈಶ್ವರ ಖಂಡ್ರೆ ಅವರು ಕೂಡ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಸಚಿವರಾಗಿ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠವಾಗಲಿದೆʼ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಸ್ಥಾನ ನೀಡುವ ಕುರಿತು ಗಂಭೀರವಾಗಿ ಪರಿಗಣಿಸಬೇಕು. ಇದು ಕೇವಲ ನಮ್ಮೊಬ್ಬರ ಬೇಡಿಕೆ ಅಲ್ಲ. ಬೀದರ ಜಿಲ್ಲೆಯ ಜನರ ಮನದಾಳದ ಕೂಗು. ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಸ್ಥಾನ ನೀಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ವಿನೋದಕುಮಾರ್ ಅಪ್ಪೆ ಹೇಳಿದರು.
ಈಶ್ವರ ಖಂಡ್ರೆಗೆ ಉಪ ಮುಖ್ಯಮಂತ್ರಿ ನೀಡುವಂತೆ ನಮ್ಮ ಕರ್ನಾಟಕ ಸೇನೆ ಆಗ್ರಹ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಈಶ್ವರ ಖಂಡ್ರೆ ಅವರನ್ನು ರಾಜ್ಯದ ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಮಾಡಬೇಕು ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಆಗ್ರಹಿಸಿದ್ದಾರೆ.
“ಈಶ್ವರ ಖಂಡ್ರೆ ರಾಜ್ಯದಾದ್ಯಂತ ಪ್ರಭಾವ ಹೊಂದಿರುವ ನಾಯಕರಾಗಿದ್ದಾರೆ. ಎಲ್ಲೆಡೆ ಅವರ ಬೆಂಬಲಿಗರು, ಅಭಿಮಾನಿಗಳು ಇದ್ದಾರೆ. ಉಪ ಮುಖ್ಯಮಂತ್ರಿಯಾದರೆ ಜನಪರ ಆಡಳಿತ ನೀಡುವ ವಿಶ್ವಾಸ ಎಲ್ಲರಿಗೆ ಇದೆ. ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಚಿವರಾಗಿ ಜನ ಪರವಾಗಿ ಕಾರ್ಯ ನಿರ್ವಹಿಸಿದ್ದಾರೆ” ಎಂದರು.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಲಿಂಗಾಯತ ಸಮಾಜದ ಅಗ್ರಗಣ್ಯ ನಾಯಕರಲ್ಲೊಬ್ಬರಾಗಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಉಪ ಮುಖ್ಯಮಂತ್ರಿ ಹುದ್ದೆಗೆ ಅವರನ್ನು ಪರಿಗಣಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈಶ್ವರ ಖಂಡ್ರೆಗೆ ಉಪ ಮುಖ್ಯಮಂತ್ರಿ ಮುಖಂಡರ ಆಗ್ರಹ
ಕಾಂಗ್ರೆಸ್ ಹಿರಿಯ ಮುಖಂಡ ಈಶ್ವರ ಖಂಡ್ರೆ ಅವರಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಕೊಡಬೇಕು ಎಂದು ವೈದ್ಯರು, ವಿವಿಧ ಸಮಾಜಗಳ ಮುಖಂಡರು ಆಗ್ರಹಿಸಿದ್ದಾರೆ.
ಈಶ್ವರ ಖಂಡ್ರೆ ಅವರು ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಎರಡು ಬಾರಿ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಡಾ. ಸಿ.ಆನಂದರಾವ್, ಡಾ.ಹಣಮಶೆಟ್ಟಿ, ಡಾ.ಮಕ್ಸೂದ್ ಚಂದಾ, ಸಂಗಪ್ಪ ಪಾಟೀಲ ಮಾಮುಡ್ಗಿ ಹಾಗೂ ವೈಜಿನಾಥ ನಿಡೋದಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಕಲ್ಯಾಣ ಕರ್ನಾಟಕದ ಪ್ರಭಾವಿ ನಾಯಕರಾಗಿದ್ದಾರೆ. ರಾಜ್ಯದ ದೂರದೃಷ್ಟಿಯ ನೇತಾರರಲ್ಲಿ ಒಬ್ಬರಾಗಿದ್ದಾರೆ. ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇಟ್ಟಿದ್ದಾರೆ. ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವ ಸಾಮಥ್ರ್ಯ ಹೊಂದಿದ್ದಾರೆ. ರಾಜ್ಯದ ಹಿತಕ್ಕಾಗಿ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು” ಎಂದು ಬೇಡಿಕೆ ಮಂಡಿಸಿದ್ದಾರೆ.
ಈಶ್ವರ ಖಂಡ್ರೆಗೆ ಡಿಸಿಎಂ ಇಲ್ಲವೇ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಿ
ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಕಾಂಗ್ರೆಸ್ ಹಿರಿಯ ಮುಖಂಡ ಈಶ್ವರ ಖಂಡ್ರೆ ಅವರಿಗೆ ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಇಲ್ಲವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮುಸ್ಲಿಮ್ ಸಮುದಾಯದ ಮುಖಂಡ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲೀಂ ಕೋರಿದ್ದಾರೆ.
ಈಶ್ವರ ಖಂಡ್ರೆ ಅವರು ರಾಜ್ಯದ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದಾರೆ. ಸರ್ವ ಧರ್ಮ, ಜಾತಿ, ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜಾತ್ಯತೀತ ನಾಯಕರಾಗಿದ್ದಾರೆ. ಪಕ್ಷ ಹಾಗೂ ಸರ್ಕಾರಕ್ಕೆ ಹೊಸ ಚೈತನ್ಯ ನೀಡುವ ಶಕ್ತಿ ಅವರಿಗೆ ಇದೆ. ಖಂಡ್ರೆ ಅವರು ನಾಲ್ಕು ಬಾರಿ ಶಾಸಕರಾಗಿದ್ದಾರೆ. ಎರಡು ಬಾರಿ ಸಚಿವರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಜನ ಮನ್ನಣೆ ಗಳಿಸಿದ್ದಾರೆ. ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಹೀಗಾಗಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ 2028ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ನೆರವಾಗಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ, ಕೆಪಿಸಿಸಿ ಕಾರ್ಯಾಧ್ಯಕ್ಷ ಸೇರಿ ಪಕ್ಷದ ವಿವಿಧ ಪ್ರಮುಖ ಹುದ್ದೆಗಳನ್ನು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. ಎಲ್ಲ ಜಾತಿ, ಸಮುದಾಯದರೊಂದಿಗೆ ಉತ್ತಮ ಬಾಂಧವ್ಯ ಇದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಈಶ್ವರ ಖಂಡ್ರೆಗೆ ನೀಡಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಅಧ್ಯಕ್ಷ ಸ್ಥಾನವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ. ಬಿ. ಖಂಡ್ರೆ ಅವರಿಗೆ ನೀಡಿ ಎಂದು ಭಾಲ್ಕಿಯ ಕಾಂಗ್ರೆಸ್ ಮುಖಂಡರಾದ ಅಂಬರೀಶ ಮಲ್ಲೇಶಿ, ಅನಿಲ ಹಾಲ್ಲೆಪುರ್ಗೆ, ರಾಜಕುಮಾರ ಡಾವರಗಾಂವ್, ಸತೀಶ ಬೋಸ್ಲೆ, ನರೇಶ ಶಿಂಧೆ, ಪ್ರಶಾಂತ ಸೂರ್ಯವಂಶಿ, ಸೀಮನ್ ಸರಪಂಚ ಒತ್ತಾಯಿಸಿದ್ದಾರೆ.
ಖಂಡ್ರೆಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿ : ಬಸವಲಿಂಗ ಪಟ್ಟದ್ದೇವರು
ರಾಜ್ಯದಲ್ಲಿ ಹೊಸದಾಗಿ ರಚನೆ ಆಗಲಿರುವ ಕಾಂಗ್ರೆಸ್ ಸರಕಾರದಲ್ಲಿ ಅರಣ್ಯ ಇಲಾಖೆ ಸಚಿವರಾಗಿ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿರುವ ಭಾಲ್ಕಿ ಕ್ಷೇತ್ರದ ಶಾಸಕರೂ ಆದ ಈಶ್ವರ ಖಂಡ್ರೆ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಖಂಡ್ರೆ ಅವರು ಅರಣ್ಯ ಇಲಾಖೆ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ವಿನೂತನ ಯೋಚನೆ ಮತ್ತು ಯೋಜನೆಯಿಂದ ಅರಣ್ಯ ಇಲಾಖೆಗೆ ಹೊಸ
ಆಯಾಮ ನೀಡಿದ್ದಾರೆ. ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಭರಪೂರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಿದ್ದಾರೆʼ ಎಂದರು.
ʼಅದಲ್ಲದೇ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿ ಗುರುತಿಸಿ ಕೊಂಡಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಮುದಾಯವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇದು ವರೆಗೂ ಸರಕಾರ ಮತ್ತು ಪಕ್ಷ ನೀಡಿರುವ ಎಲ್ಲ ಹುದ್ದೆಗಳಿಗೆ ಗೌರವ ತಂದು ಕೊಡುವ ಕೆಲಸ ಮಾಡಿದ್ದಾರೆʼ ಎಂದು ತಿಳಿಸಿದ್ದಾರೆ.
“ಈಗಾಗಲೇ ಸತತ ಎರಡು ದಶಕಗಳಿಂದ ಶಾಸಕರಾಗಿ ಮತ್ತು ಎರಡು ಬಾರಿ ಸಚಿವರಾಗಿ, ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಲಿಂಗಾಯತ ಅತಿದೊಡ್ಡ ಸಮುದಾಯವಾಗಿದೆ. ಹಾಗಾಗಿ ಹಿರಿತನ, ಅನುಭವ, ಲಿಂಗಾಯತ ಸಮುದಾಯವನ್ನು ಪರಿಗಣಿಸಿ ಈಶ್ವರ ಖಂಡ್ರೆ ಅವರನ್ನು ಹೊಸ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದರ ಜತೆಗೆ ಅತ್ಯುತ್ತಮ ಖಾತೆಯನ್ನು ನೀಡಬೇಕು” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಜವಾಬ್ದಾರಿ ಸಿಗುವ ವಿಶ್ವಾಸ ನನಗಿದೆ : ಈಶ್ವರ ಖಂಡ್ರೆ
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿಭಾಯಿಸುತ್ತೇನೆ. ಈ ಹಿಂದೆ ಪೌರಾಡಳಿತ ಸಚಿವನಾಗಿ ಉತ್ತಮ ಆಡಳಿತ ನೀಡಿದ್ದೇನೆ. ಐದು ವರ್ಷಗಳ ಕಾಲ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದೇನೆ. ಈಗ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವನಾಗಿ ಅನೇಕ ಸುಧಾರಣೆ ಕೈಗೊಂಡು ಜನರ ಮೆಚ್ಚುಗೆಗೆ ಪಾತ್ರನಾಗಿದ್ದೇನೆ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನನ್ನ ಕಾರ್ಯಶೈಲಿ, ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಉನ್ನತ ಸ್ಥಾನ ದೊರಕಲಿದೆ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಪಕ್ಷ ನನಗೆ ಹೆಚ್ಚಿನ ಜವಾಬ್ದಾರಿ ನೀಡಲಿದೆ ಎಂಬ ವಿಶ್ವಾಸ ನನಗಿದೆ” ಎಂದು ಅವರು ಹೇಳಿದ್ದಾರೆ.
ಹುಲಸೂರ ಶ್ರೀ ಆಗ್ರಹ :
ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಈಶ್ವರ ಖಂಡ್ರೆ ಅವರಂತಹ ಅನುಭವಿ ನಾಯಕತ್ವದ ಅಗತ್ಯವಿದೆ. ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯೋಚಿಸಿ ಖಂಡ್ರೆ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಈಶ್ವರ ಖಂಡ್ರೆಗೆ ಡಿಸಿಎಂ ಸ್ಥಾನ: ಕಾಂಗ್ರೆಸ್ಸಿಗರ ಬೇಡಿಕೆ
ಬೀದರ್: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರ್ಕಾರದಲ್ಲಿ ಅರಣ್ಯ, ಪರಿಸರ, ಜೀವಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಬೇಡಿಕೆ ಮಂಡಿಸಿದ್ದಾರೆ.
ಈಶ್ವರ ಖಂಡ್ರೆ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಲ್ಲೊಬ್ಬರಾಗಿದ್ದಾರೆ. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ದುಡಿದಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಅವರ ಶ್ರಮವೂ ಅಪಾರವಾಗಿದೆ ಎಂದು ತಿಳಿಸಿದ್ದಾರೆ.
ನಾಲ್ಕನೇ ಬಾರಿ ಶಾಸಕರಾಗಿದ್ದಾರೆ. ಹಿಂದೆ ಪೌರಾಡಳಿತ ಸಚಿವರಾಗಿ ಮಾದರಿಯಾಗಿ ಕೆಲಸ ಮಾಡಿದ್ದರು. ಈಗ ಅರಣ್ಯ, ಪರಿಸರ, ಜೀವಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಸಿರು ಕ್ರಾಂತಿಗೆ ಪ್ರಯತ್ನಿಸಿದ್ದಾರೆ. ರಾಜ್ಯದ ಪ್ರಭಾವಿ ಸಚಿವರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ರಾಜ್ಯದಾದ್ಯಂತ ವರ್ಚಸ್ಸು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇಟ್ಟಿದ್ದಾರೆ. ದೂರದೃಷ್ಟಿಯ ನೇತರರಾಗಿದ್ದಾರೆ. 2028 ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಈಶ್ವರ ಖಂಡ್ರೆ ಅವರಂಥ ಧುರೀಣರಿಗೆ ಒಳ್ಳೆಯ ಸ್ಥಾನಮಾನ ಕೊಡುವುದು ಅವಶ್ಯಕವಾಗಿದೆ.
ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ಕಲ್ಯಾಣ ಕರ್ನಾಟಕ ಹಾಗೂ ರಾಜ್ಯ ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎಂ.ಎಂ. ಸಮಿ, ಜಾರ್ಜ್ ಫರ್ನಾಂಡೀಸ್, ಕಾರ್ಯದರ್ಶಿ ಸುನೀಲ್ ಬಚ್ಚನ್, ರವೀಂದ್ರ, ಕೆಪಿಸಿಸಿ ಸದಸ್ಯ ಬಾಬುರಾವ್ ತುಂಬಾ, ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಚನ್ನಶೆಟ್ಟಿ, ಭಾಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವಾಣ್, ನಿಸಾರ್ ಅಹಮ್ಮದ್, ಬಸವಕಲ್ಯಾಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್, ಔರಾದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಬಿಡಿಎ ಸದಸ್ಯರಾದ ಭಗವಾನರಾವ್ ಪಾಂಡ್ರೆ, ವಿನೋದಕುಮಾರ ಬಂದಿಗೆ, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ. ಸಂಜುಕುಮಾರ, ಜಯಸೂರ್ (ರೊಯ್), ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶ್ ಕುರುಬಖೇಳಗಿ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ವಕ್ತಾರ ಶಂಕರ ಜ್ಯಾಂತಿಕರ್ ಮತ್ತಿತರರು ತಿಳಿಸಿದ್ದಾರೆ.
ʼಕಲ್ಯಾಣʼಕ್ಕೆ ಸಿಗಲಿ ಪ್ರಾತಿನಿಧ್ಯ
ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಉತ್ತಮ ಆಡಳಿತ ನೀಡುವ ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಗಾಗಿ ಶ್ರಮಿಸಿದ ಈಶ್ವರ ಖಂಡ್ರೆ ಅವರಿಗೆ ಈ ಬಾರಿ ಉಪಮುಖ್ಯಮಂತ್ರಿ ಕೊಡಲೇಬೇಕು ಎಂಬ ಅವರ ಬೆಂಬಲಿಗರ ಬೇಡಿಕೆ ಈಗ ಜೋರಾಗಿ ಕೇಳಿಬರುತ್ತಿದೆ. ಈ ಹಿಂದೆಯೂ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಮುಖ ಸ್ಥಾನದೊಂದಿಗೆ ಗುರ್ತಿಸಿಕೊಂಡು ಸಮಾಜದ ಏಳಿಗಾಗಿ ದುಡಿದ ಅವರು ಈಚೆಗೆ ಅದರ ರಾಷ್ಟ್ರೀಯ ಅಧ್ಯಕ್ಷರಾಗಿಯೂ ನೇಮಕವಾದ ಹಿನ್ನೆಲೆ ಸಮಾಜದ ಮುಂಚೂಣಿ ನಾಯಕರಾಗಿಯೂ ಈಶ್ವರ ಖಂಡ್ರೆ ಗುರ್ತಿಸಿಕೊಂಡಿದ್ದಾರೆ. ಅವರನ್ನು ಡಿಸಿಎಂ ಮಾಡಿದರೆ ಪಕ್ಷ ಜೊತೆಗೆ ಸಮಾಜಕ್ಕೆ ಗೌರವ ಸಿಗುವಂತಾಗುತ್ತದೆ ಎಂಬ ಇಂಗಿತ ಅವರ ಬೆಂಬಲಿಗರದ್ದಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಮೂರು ಅಥವಾ ನಾಲ್ಕು ಜನ ಡಿಸಿಎಂ ಹುದ್ದೆ ಸೃಷ್ಟಿಸಿ ದೊಡ್ಡ ಸಮುದಾಯಗಳ ನಾಯಕರಿಗೆ ಪಟ್ಟ ಕಟ್ಟಲು ಹೊರಟಿರುವ ಬಗ್ಗೆ ಎಲ್ಲೆಡೆ ಕೇಳಿ ಬರುತ್ತಿದೆ. ಇನ್ನು ಲಿಂಗಾಯತ ಸಮುದಾಯಕ್ಕೆ ಬಂದರೆ ಎಂ.ಬಿ.ಪಾಟೀಲ್ ಅವರ ಹೆಸರು ಡಿಸಿಎಂ ಹುದ್ದೆಗಾಗಿ ಮುಂಚೂಣಿಯಲ್ಲಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದರೆ ಪ್ರಿಯಾಂಕ್ ಖರ್ಗೆ ಹಾಗೂ ಈಶ್ವರ ಖಂಡ್ರೆ ಅವರ ಹೆಸರು ಸದ್ಯಕ್ಕೆ ಡಿಸಿಎಂ ಹುದ್ದೆಗಾಗಿ ಕೇಳಿ ಬರುತ್ತಿವೆ. ಆದರೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಎರಡು ಡಿಸಿಎಂ ಸಿಗುವುದು ಕಷ್ಟ ಸಾಧ್ಯ. ಇನ್ನು ಉತ್ತರಕರ್ನಾಟಕ ವಿಷಯಕ್ಕೆ ಬಂದರೆ ಎಂ.ಬಿ.ಪಾಟೀಲ್ ಸೇರಿದಂತೆ ಇತರ ನಾಯಕರು ಡಿಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹೆಚ್ಚಿನ ಸ್ಥಾನ ಸಿಗಲಿ
ರಾಜ್ಯ ಸರ್ಕಾರದ ನೂತನ ಮಂತ್ರಿಮಂಡಲದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕನಿಷ್ಠ 8ಕ್ಕೂ ಮೇಲ್ಪಟ್ಟು ಮಂತ್ರಿ ಸ್ಥಾನಗಳು ನೀಡಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.
ʼಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ನೀರಾವರಿ, ಲೋಕೋಪಯೋಗಿ, ಕೈಗಾರಿಕೆ, ಪ್ರೌಢ ಶಿಕ್ಷಣ, ಯೋಜನಾ, ಆರೋಗ್ಯ ಮತ್ತು ವೈದ್ಯಕೀಯ, ಉನ್ನತ ಶಿಕ್ಷಣ , ಪ್ರವಾಸೋಧ್ಯಮ ಸೇರಿದಂತೆ ಅಭಿವೃದ್ಧಿಗೆ ಪೂರಕವಾದ ಸ್ಥಾನಗಳು ನೀಡಬೇಕು. ಗೋವಿಂದರಾವ ಸಮಿತಿ ವರದಿಯನ್ನು ಆಧಾವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಅದರಂತೆ ಈಗಾಗಲೇ ಸರ್ಕಾರ ತೀರ್ಮಾನಿಸಿರುವಂತೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಸಚಿವಾಲಯ ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ಸಮಾರೋಪಾದಿಯಲ್ಲಿ ಕ್ರಮ ಕೈಗೊಳ್ಳವುದು ಅತಿ ಅವಶ್ಯಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣದ ಜನಮಾನಸದ ಬೇಡಿಕೆಯಾದ ಕಲ್ಯಾಣದ ಪ್ರತ್ಯೇಕ ಸಚಿವಾಲಯ ಸ್ಥಾನ ನೀಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ನೂತನ ಮಂತ್ರಿಮಂಡಲದಲ್ಲಿ ಕಲ್ಯಾಣದ ಸಚಿವರಿಗೆ ಮಾತ್ರ ನೀಡಬೇಕು. ಒಟ್ಟಾರೆ ಕಲ್ಯಾಣ ಕರ್ನಾಟಕ ಪ್ರದೇಶದ ಹಿಂದುಳುವಿಕೆಯನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಪ್ರಬಲ ಖಾತೆಗಳು ಕಲ್ಯಾಣಕ್ಕೆ ನೀಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಮತ್ತು ಅಭಿವೃದ್ಧಿಗೆ ಕೈಗೊಳ್ಳುಬೇಕಾದ ಕ್ರಮಗಳ ಬಗ್ಗೆ ಎಳೆ ಎಳೆಯಾಗಿ ಅರಿತಿರುವ ರಾಷ್ಟ್ರ ಮಟ್ಟದ ನಾಯಕರು ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರು ಈ ವಿಷಯಕ್ಕೆ ಸಂಬಂಧಿಸಿ ಗಂಭೀರವಾಗಿ ಪರಿಗಣಿಸಬೇಕೆಂದು ಹೋರಾಟ ಸಮಿತಿ ಒತ್ತಾಯಿಸಿದೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಉಪಮುಖ್ಯಮಂತ್ರಿ ಸ್ಥಾನ ಸಿಗುವುದು ಈ ಭಾಗದ ಪ್ರಾತಿನಿಧ್ಯ ವಿಷಯಕ್ಕೆ ಸಂಬಂಧಿಸಿದೆ. ಹೀಗಾಗಿ ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಹುದ್ದೆ ಸಿಗಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಇಬ್ಬರಿಗೂ ಅವಕಾಶ ನೀಡಿದರೆ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಲಭಿಸುವ ಜೊತೆಗೆ ಎರಡು ಪ್ರಮುಖ ಸಮುದಾಯಗಳ ಬೇಡಿಕೆಗೆ ಮನ್ನಣೆ ದಕ್ಕುವಂತಾಗುತ್ತದೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನಲೆಗೆ ಬಂದಾಗ ಕೆಪಿಸಿಸಿ ಅಧ್ಯಕ್ಷರ ಹುದ್ದೆಯನ್ನು ಬದಲಾಯಿಸಬೇಕು, ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮ ಅನ್ವಯವಾಗಬೇಕು ಎನ್ನುವ ಕೂಗು ಜೋರಾಗುತ್ತಿತ್ತು. ಹಲವು ನಾಯಕರ ಹೆಸರು ಕೂಡಾ ಮುನ್ನಲೆಗೆ ಬಂದಿತ್ತು. ಈ ಹಿಂದೆಯೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಹೆಸರು ಹೆಚ್ಚು ಚರ್ಚೆಯಲ್ಲಿತ್ತು. ಇದೀಗ ಡಿ.ಕೆ.ಶಿವಕುಮಾರ ಅವರಿಗೆ ನೂತನ ಸಿಎಂ ಜವಾಬ್ದಾರಿ ಹೊತ್ತ ಬೆನ್ನಲ್ಲೇ, ಕೆಪಿಸಿಸಿಗೆ ನೂತನ ಸಾರಥಿ ನೇಮಕ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಸಿದ್ದರಾಮಯ್ಯ ರಾಜೀನಾಮೆ; ವಿವಿಧ ಪಕ್ಷಗಳ ರಾಷ್ಟ್ರ ನಾಯಕರ ಶ್ಲಾಘನೆ!
ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಈಶ್ವರ ಖಂಡ್ರೆ ಅವರಿಗೆ ಪಕ್ಷ ಸಂಘಟಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಹಿಂದೆಯೂ ಈಶ್ವರ ಖಂಡ್ರೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ನೀಡಬೇಕೆಂಬ ಕೂಗು ಮುನ್ನೆಲೆಗೆ ಬಂದಿತು. ಹೀಗಾಗಿ ಈಶ್ವರ ಖಂಡ್ರೆ ಉಪಮುಖ್ಯಮಂತ್ರಿ ಆಗ್ತಾರಾ ಅಥವಾ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಪಟ್ಟ ಒಲಿಯುತ್ತಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಏನಾಗುತ್ತದೊ ಎಂಬುದು ಕಾದು ನೋಡಬೇಕಷ್ಟೇ!

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



