ವಾರದೊಳಗೆ ರಾಷ್ಟ್ರವ್ಯಾಪಿ ಸಿಎಎ ಜಾರಿಯ ಬಗ್ಗೆ ಕೇಂದ್ರ ಸಚಿವ ನೀಡಿದ ಭರವಸೆಯ ನಂತರ ಇಕ್ಕಟ್ಟಿಗೆ ಸಿಲುಕಿದ ಕೇಂದ್ರದ ಬಿಜೆಪಿ ಸರ್ಕಾರ
ಪಶ್ಚಿಮ ಬಂಗಾಳದ ಮತುವಾ ಸಮುದಾಯದ ಬಿಜೆಪಿ ಸಂಸದ ಮತ್ತು ಕೇಂದ್ರ ಬಂದರು ಖಾತೆಯ ರಾಜ್ಯ ಸಚಿವ ಶಂತನು ಠಾಕೂರ್ ಅವರು ಒಂದು ವಾರದೊಳಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೆ ತರುತ್ತೇವೆ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ‘ಬಾಯಿತಪ್ಪಿ ಬಂದ ಮಾತು’ ಎಂದು ಸ್ಪಷ್ಟನೆ ನೀಡಬೇಕಾಗಿ ಬಂದಿದೆ.
ವಾರದೊಳಗೆ ಬಂಗಾಳದಲ್ಲಿ ಮಾತ್ರವಲ್ಲ, ರಾಷ್ಟ್ರವಿಡೀ ಸಿಎಎ ಜಾರಿ ಮಾಡಲಾಗುವುದು ಎಂದು ಪಶ್ಚಿಮ ಬಂಗಾಳದ ದಕ್ಷಿಣದ ಪ್ರದೇಶವಾದ ಕುಲ್ಪಿಯಲ್ಲಿ ಜನವರಿ 28ರಂದು ಠಾಕೂರ್ ನೀಡಿದ ಹೇಳಿಕೆಗೆ ಸಂಬಂಧಿಸಿ ಬಿಜೆಪಿ ಹೈಕಮಾಂಡ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
ವಾಸ್ತವದಲ್ಲಿ ಸಿಎಎ ವಿಚಾರವಾಗಿ ಬಿಜೆಪಿ ಎರಡು ಬೆಂಬಲ ಪಡೆಗಳ ನಡುವೆ ಇಕ್ಕಟ್ಟಿಗೆ ಬಿದ್ದಿದೆ. ರಾಜಬಂಶಿ ಸಮುದಾಯ ಸಿಎಎ ಜಾರಿಯನ್ನು ವಿರೋಧಿಸಿದೆ. ಆದರೆ ಮತುವಾ ಸಮುದಾಯ ಜಾರಿಗೆ ಒತ್ತಾಯಿಸುತ್ತಿದೆ. ಇದೇ ಕಾರಣದಿಂದ ಠಾಕೂರ್ ಹೇಳಿಕೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಸಮಜಾಯಿಶಿ ನೀಡಿದ ಠಾಕೂರ್, “ಬಾಯಿತಪ್ಪಿ ಮಾತು ಹೋಗಿದೆ. ಕಾಯ್ದೆಯನ್ನು ವಾರದೊಳಗೆ ಜಾರಿಗೆ ತರಲಾಗುತ್ತದೆ ಎಂದು ನಾನು ಹೇಳಿದ್ದೆ. ಆದರೆ ನನ್ನ ಉದ್ದೇಶ ಅದಾಗಿರಲಿಲ್ಲ. ವಾರದೊಳಗೆ ಸಿಎಎ ನಿಯಮಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಏಕರೂಪದ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬರುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಬಜೆಟ್ ಅಧಿವೇಶನದಲ್ಲಿಯೇ ಈ ಕಾಯ್ದೆಗಳು ಜಾರಿಗೆ ಬರುವ ನಿರೀಕ್ಷೆಗಳಿದ್ದವು. ಆದರೆ ಇದೀಗ ಬಿಜೆಪಿ ಸಂಸದ ಬಂಗಾಳದಲ್ಲಿ ತಮ್ಮ ಸಮುದಾಯದ ಮುಂದೆ ಸ್ಪಷ್ಟನೆ ನೀಡಿದ್ದಾರೆ.
ಬಂಗಾಳದಲ್ಲಿ ಮತುವಾ ಸಮುದಾಯ ಬಿಜೆಪಿಯ ಅತಿದೊಡ್ಡ ಬೆಂಬಲಪಡೆಯಾಗಿದ್ದು, ವರ್ಷಗಳಿಂದ ಸಿಎಎ ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದಾರೆ. ಮತುವಾ ಸಮುದಾಯದವರೇ ಆಗಿರುವ ಮತ್ತು ಅಖಿಲ ಭಾರತ ಮತುವಾ ಮಹಾಸಂಘದ ಅಧ್ಯಕ್ಷರಾದ ಬಂಗಾಳದ ಬಿಜೆಪಿ ಸಂಸದ ಠಾಕೂರ್ ಅವರು ಮೋದಿ ಸರ್ಕಾರ ಇದೇ ವಾರದೊಳಗೆ ಸಿಎಎ ಜಾರಿಗೆ ತರುವುದಾಗಿ ಸಮುದಾಯಕ್ಕೆ ಭರವಸೆ ನೀಡಿದ್ದರು.
ಠಾಕೂರ್ ಮಾತ್ರವಲ್ಲ, ನಿತೀಶ್ ಪ್ರಮಾಣಿಕ್ ಅವರೂ ಶೀಘ್ರವೇ ಸಿಎಎ ಜಾರಿಗೆ ತರುವುದಾಗಿ ತಿಳಿಸಿದ್ದರು. ಇದೀಗ ಠಾಕೂರ್ ತಮ್ಮ ಮಾತನ್ನು ಬದಲಿಸಿ, ಏಳು ದಿನಗಳ ಒಳಗೆ ಕಾಯ್ದೆಯ ನಿಯಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ನಂತರ 2014 ಡಿಸೆಂಬರ್ 31ರ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲಿಮೇತರ ಅಲ್ಪಸಂಖ್ಯಾತ ಧರ್ಮಗಳು (ಹಿಂದೂಗಳು, ಸಿಖ್ಖರು, ಪಾರ್ಸಿಗಳು, ಜೈನರು, ಬೌದ್ಧಮತೀಯರು ಹಾಗೂ ಕ್ರಿಶ್ಚಿಯನ್ನರು) ವೇಗವಾಗಿ ಪೌರತ್ವ ಪಡೆಯಬಹುದಾಗಿದೆ.