- ಒಂದು ಸಂಘಟನೆ ನಿಷೇಧಿಸಿದರೆ ಮತ್ತೊಂದು ಹುಟ್ಟಿಕೊಳ್ಳುತ್ತದೆ
- ದಲಿತರಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ ತಿಳಿಹೇಳಬೇಕು
“ಒಂದು ಸಂಘಟನೆ ನಿಷೇಧ ಮಾಡಿದರೆ ಇನ್ನೊಂದು ಸಂಘಟನೆ ಹುಟ್ಟಿಕೊಳ್ಳುತ್ತದೆ. ಬದಲಾಗಿ ಆರ್‌ಎಸ್‌ಎಸ್‌ನಲ್ಲಿರುವ ದಲಿತರು, ಶೂದ್ರರು ಮತ್ತು ಕೆಳವರ್ಗದವರನ್ನು ಸೆಳೆಯಬೇಕಿದೆ” ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ಆರ್‌ಎಸ್‌ಎಸ್‌ನಲ್ಲಿರುವ ದಲಿತರು, ಶೂದ್ರರು ಮತ್ತು ಕೆಳವರ್ಗದವರಿಗೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆ ತಿಳಿಹೇಳುವ ಪ್ರಯತ್ನ ಮಾಡುತ್ತೇವೆ. ಆರ್‌ಎಸ್‌ಎಸ್‌ನಲ್ಲಿರುವ ದಲಿತರನ್ನು ಸೆಳೆಯುವ ಮೂಲಕ ಅಹಿಂದಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ. ಯಾವುದೇ ಸಂಘಟನೆ ಬ್ಯಾನ್ ಮಾಡುವುದು ನಮಗೆ ಪರಿಹಾರವಲ್ಲ” ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ರದ್ದು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಈ ಎಲ್ಲ ಕಾಯ್ದೆಗಳ ಬಗ್ಗೆ ಚರ್ಚೆ ಆಗಬೇಕು. ತಕ್ಷಣವೇ ನಿಷೇಧ ಕಾಯ್ದೆ ಜಾರಿ ಅಸಾಧ್ಯ. ಈ ಬಗ್ಗೆ ಸರ್ಕಾರ ಹಾಗೂ ಪಕ್ಷದಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಆಗಬೇಕು. ಸಂಪೂರ್ಣ ಚರ್ಚೆ ಆದ ಮೇಲೆಯೇ ಈ ಸಂಬಂಧ ಸರ್ಕಾರದಿಂದ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ನಿಂದ ದೇಶಭಕ್ತಿ ಕಲಿಯಲಿ : ಬಿಜೆಪಿ
ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಕುರಿತು ಟ್ಟಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ, “ಆರ್‌ಎಸ್‌ಎಸ್‌ನ್ನು ನೆನೆಯದಿದ್ದರೆ ಕಾಂಗ್ರೆಸ್ ನಾಯಕರಿಗೆ ಜೀರ್ಣವಾಗುವುದಿಲ್ಲ. ಅಂದಹಾಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಇಲ್ಲಸಲ್ಲದ್ದನ್ನು ಊಹಿಸಿಕೊಂಡು ಮಾತನಾಡುವುದನ್ನು ಬಿಟ್ಟು, ಕಾಂಗ್ರೆಸಿನ ನಾಯಕರಿಗೆ ಅತೀವವಾಗಿ ಕೊರತೆ ಇರುವ ದೇಶಭಕ್ತಿಯನ್ನು ಆರ್‌ಎಸ್‌ಎಸ್‌ನಿಂದ ಕಲಿಯಲಿ” ಎಂದು ತಿರುಗೇಟು ನೀಡಿದೆ.