ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರನ್ನು ಬಂಧಿಸಿರುವುದನ್ನು ದೇಶದ ವಿವಿಧ ವಿಪಕ್ಷ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಈ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನೆಪದಲ್ಲಿ ನಡೆದಿರುವ ಅಕ್ರಮಗಳನ್ನು ವಿರೋಧಿಸಿ ಸಿಇಸಿ ವಿರುದ್ಧ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂದೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಆದರೆ ಅನುಮತಿಯಿಲ್ಲದೆ ಜಂತರ್ ಮಂತರ್ ಪ್ರವೇಶಿಸಿದ್ದಾರೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಅಜಿಂಕ್ಯ ಶಿಂದೆ ಅವರನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಸೌರವ್ ಮತ್ತು ರಾಂಕಾ ಅವರಿಗೆ ಐದು ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಇದನ್ನೂ ಓದಿ: ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್ಎಫ್ಐ, ಡಿವೈಎಫ್ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ
ಸಿಜೆಪಿ ಮುಖಂಡರ ಬಂಧನವನ್ನು ‘ಪ್ರಜಾಪ್ರಭುತ್ವದ ಮೇಲಿನ ದಾಳಿ’ ಎಂದು ಬಣ್ಣಿಸಿರುವ ವಿಪಕ್ಷ ನಾಯಕರು, ಕೇಂದ್ರ ಸರ್ಕಾರದ ಮತ್ತು ದೆಹಲಿ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಬಂಧಿತ ನಾಯಕರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆದು ತಕ್ಷಣವೇ ನಿರಪರಾಧಿಗಳನ್ನು ಬಿಡುಗಡೆ ಮಾಡಬೇಕೆಂದು ಜಂಟಿಯಾಗಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, “ಯಾವುದರ ಅತಿಕ್ರಮಣ? ಜಂತರ್ ಮಂತರ್ ನಾಗರಿಕರ ಆಸ್ತಿ ಮತ್ತು ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ನಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಹಾಗೆಯೇ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರಿಗೂ ಆ ಹಕ್ಕಿದೆ. ದೆಹಲಿ ಏನೂ ಮೋದಿಯವರ ಅಪ್ಪನ ಆಸ್ತಿಯಲ್ಲ” ಎಂದಿದ್ದಾರೆ. ಹಾಗೆಯೇ ಇನ್ನೊಂದು ಪೋಸ್ಟ್ನಲ್ಲಿ ಮೂವರು ಸಿಜೆಪಿ ನಾಯಕ ಚಿತ್ರ ಹಾಕಿ “ನಾನು ನಿಮ್ಮೊಂದಿಗಿದ್ದೇನೆ ಹುಡುಗರೇ. ಈ ಪುಂಡರು ಮತ್ತು ಲೂಟಿಕೋರರಿಂದ ನಾವು ಈ ದೇಶವನ್ನು ಮರಳಿ ಪಡೆಯುತ್ತೇವೆ” ಎಂದು ಹೇಳಿದ್ದಾರೆ.
ಇನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಜಂತರ್ ಮಂತರ್ನಲ್ಲಿ ಶಾಂತಿಯುತ ಪ್ರತಿಭಟನೆಯ ವೇಳೆ ತ್ರಿವರ್ಣ ಧ್ವಜವನ್ನು ಹಾರಿಸುವುದು ಅಪರಾಧವಲ್ಲ. ಇದಕ್ಕಾಗಿ ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೆಲಸ. ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು ಮತ್ತು ‘ಇಂಡಿಯಾ’ ಒಕ್ಕೂಟ – ಹೀಗೆ ವಿವಿಧ ವೇದಿಕೆಗಳಿದ್ದರೂ ಉದ್ದೇಶವೊಂದೇ ಆಗಿದೆ. ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಆಗ್ರಹಿಸುವ ನಾಗರಿಕರ ಹೋರಾಟವಿದು. ಜಂತರ್ ಮಂತರ್ ಭಾರತದ ಜನರಿಗೆ ಸೇರಿದ್ದು. ನಾವು ಅದನ್ನು ಮರಳಿ ಪಡೆಯುತ್ತೇವೆ” ಎಂದು ಪೋಸ್ಟ್ ಮಾಡಿದ್ದಾರೆ.
ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಸಿಜೆಪಿ ನಾಯಕರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಪ್ರಜಾಪ್ರಭುತ್ವದಲ್ಲಿ, ಪ್ರತಿಭಟನೆಯ ಹಕ್ಕನ್ನು ಎಂದಿಗೂ ಕೇವಲ ಒಂದು ನಿರ್ದಿಷ್ಟ ಸ್ಥಳಕ್ಕೆ ಮಾತ್ರ ಸೀಮಿತಗೊಳಿಸಬಾರದು. ಆದರೆ ಮೋದಿ ಸರ್ಕಾರದ ಆಡಳಿತದಲ್ಲಿ, ಆ ಸೀಮಿತ ಅವಕಾಶವನ್ನೂ ಕಸಿದುಕೊಳ್ಳಲಾಗುತ್ತಿದೆ” ಎಂದು ದೂರಿದ್ದಾರೆ.
ಹಾಗೆಯೇ, “ಇದೊಂದು ವಿಪರ್ಯಾಸದ ಸಂಗತಿ. ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸುವ ಸರ್ಕಾರವೇ, ಪ್ರತಿಭಟನೆಯ ಭಾಗವಾಗಿ ಅದೇ ಧ್ವಜವನ್ನು ಬೀಸಿದ ಸೌರವ್ ದಾಸ್, ಅಶುತೋಷ್ ರಂಕಾ ಮತ್ತು ಅಜಿಂಕ್ಯ ಸಿಜೆಪಿ ಅವರಂತಹ ಯುವ ನಾಯಕರನ್ನು ವಶಕ್ಕೆ ಪಡೆಯುತ್ತಿದೆ. ಧ್ವಜವು ಜನರಿಗೆ ಸೇರಿದ್ದೇ ಹೊರತು, ಅಧಿಕಾರದಲ್ಲಿರುವವರಿಗಲ್ಲ” ಎಂದು ಹೇಳಿದ್ದಾರೆ.
“ಜಂತರ್ ಮಂತರ್ ಅನ್ನು ಮರಳಿ ಪಡೆಯಲು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ನಮ್ಮ ಹಕ್ಕನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಒಗ್ಗೂಡಬೇಕು. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಮತ್ತು ಕಾನೂನು ಕ್ರಮವನ್ನು ಎದುರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಈ ಬಂಧನವನ್ನು ಖಂಡಿಸಿದ್ದಾರೆ. ದೇಶದಲ್ಲಿ ರಾಷ್ಟ್ರಧ್ವಜ ಹಾರಿಸುವುದು ಯಾವಾಗಿನಿಂದ ಅಪರಾಧವಾಯಿತು ಎಂದು ದೆಹಲಿ ಪೊಲೀಸರನ್ನು ದೀಪ್ಕೆ ಪ್ರಶ್ನಿಸಿದ್ದಾರೆ. ಈ ಘಟನೆಯನ್ನು “ಸರ್ವಾಧಿಕಾರಿ ಮನಸ್ಥಿತಿಯ ಪರಮಾವಧಿ” ಎಂದು ದೀಪ್ಕೆ ಬಣ್ಣಿಸಿದ್ದಾರೆ. ಬಂಧನದಲ್ಲಿರುವ ನಾಯಕರನ್ನು ಭೇಟಿಯಾಗಲು ಅವರ ವಕೀಲರಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ.
ಮತ್ತೊಂದೆಡೆ, ಈ ಬಂಧನಗಳನ್ನು ಪ್ರತಿಭಟಿಸಿ ಇತರ ಹಲವಾರು ಯುವ ಮತ್ತು ವಿದ್ಯಾರ್ಥಿ ಸಂಘಟನೆಗಳು ಸಹ ದೆಹಲಿಯಲ್ಲಿ ಧರಣಿ ಮುಂದುವರಿಸಿದ್ದು, ರಾಜಧಾನಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.




