ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಪಿಎಸ್ಐ ಮರುಪರೀಕ್ಷೆ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ಬಹಳ ದಿನದಿಂದ ನನೆಗುದಿಗೆ ಬಿದ್ದಿದ್ದ ಪಿಎಸ್ಐ ಪರೀಕ್ಷೆ ಇವತ್ತು ನಡೆಯುತ್ತಿದೆ. ಕಳೆದ ಬಾರಿಯ ರೀತಿ ಆಗದಂತೆ ಈ ಪರೀಕ್ಷೆಯನ್ನ ಎಚ್ಚರಿಕೆಯಿಂದ ನಡೆಸುತ್ತಿದ್ದೇವೆ. ಹೈಕೋರ್ಟ್ ಆದೇಶದ ಪ್ರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸವಿದೆ” ಎಂದರು.
“ಕಳೆದ ಬಾರಿ ಅಕ್ರಮದ ಕುರಿತು ನ್ಯಾ. ವೀರಪ್ಪ ಅವರ ಆಯೋಗ ವರದಿ ಕೊಟ್ಟಿದೆ. ನಾನು ಅ ವರದಿಯನ್ನ ನೋಡಿಲ್ಲ. ಮುಖ್ಯಮಂತ್ರಿಯವರಿಗೆ ನೀಡಿದ್ದಾರೆ. ವರದಿಯಲ್ಲಿ ಏನು ಶಿಫಾರಸು ಮಾಡಿದ್ದಾರೋ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಅದರಲ್ಲಿ ಯಾರ ಹೆಸರು ಇದೆ ಎಂಬುದು ಗೊತ್ತಿಲ್ಲ. ನಾವೆಲ್ಲ ಸಿಎಂ ಜೊತೆ ಕುಳಿತು ವರದಿ ವಿಶ್ಲೇಷಣೆ ಮಾಡುತ್ತೇವೆ. ಅಕ್ರಮದ ಬಗ್ಗೆ ಬಹಿರಂಗ ಹೇಳಿಕೆ ನೀಡಿದವರು ಸಮಿತಿಯು ವಿಚಾರಣೆ ವೇಳೆ ಕರೆದಾಗ ಹೋಗಿರಲಿಲ್ಲ. ಅದು ಯಾವ ರೀತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ನಿರ್ಧಾರ ಏನು ಎಂಬುದನ್ನು ತೀರ್ಮಾನಿಸುತ್ತೇವೆ” ಎಂದು ಹೇಳಿದರು
“ಆಡಿಯೋ ವೈರಲ್ ಪ್ರಕರಣಕ್ಕೂ ಪಿಎಸ್ಐ ಮರುಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಎಸ್ಐ ಲಿಂಗಯ್ಯ ಎಂಬುವರನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಆರೋಪಿತ ಎಸ್ಐ ಇಂಟಲಿಜೆನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಪರೀಕ್ಷೆಯಲ್ಲಿಯೂ ಅಕ್ರಮ ನಡೆಯುತ್ತಿರಬಹುದು. ಅದರ ಸುಳಿವು ಸಿಗಬಹುದು ಎಂಬ ನಿಟ್ಟಿನಲ್ಲಿ ನಕಲಿ (Fake call) ಕರೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಸಿಸಿಬಿ ಅವರು ತನಿಖೆ ಮುಂದುವರಿಸಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುವಜನರ ವಿಶ್ವಾಸ ಉಳಿಸಿಕೊಳ್ಳುವುದೇ ಕೆಪಿಎಸ್‌ಸಿ?
“ರಾಹುಲ್ ಗಾಂಧಿ ಅವರು ಹಿಂದೆ ಭಾರತ್ ಜೋಡೋ ಪಾದಯಾತ್ರೆ ಮಾಡಿದ್ದರು. ದೇಶದಲ್ಲಿ ಒಳ್ಳೆ ವಾತಾವರಣ ನಿರ್ಮಾಣ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ನೆಲೆಸಬೇಕು ಎಂಬುದು ಪಾದಯಾತ್ರೆಯ ಉದ್ದೇಶ. ಯಾತ್ರೆಯ ಮುಂದುವರೆದ ಭಾಗವಾಗಿ ಈಗ 6 ಸಾವಿರ ಕಿ.ಮೀ ಮತ್ತೆ ಪಾದಯಾತ್ರೆ ಆರಂಭಿಸಿದ್ದಾರೆ. ಶಾಂತಿಯುತವಾಗಿದ್ದು, ಶಾಂತಿ ಸಂದೇಶ ಸಾರಲು ನಡೆಸುತ್ತಿದ್ದಾರೆ. ಆದರೆ ಅಸ್ಸಾಂ ಮುಖ್ಯಮಂತ್ರಿಗಳು ಬೇಕಂತಲೇ ಅಡ್ಡಿ ಪಡಿಸುತ್ತಿದ್ದಾರೆ” ಎಂದರು.
“ಬಿಜೆಪಿಯವರು ಉದ್ದೇಶಪೂರ್ವಕವಾಗಿ ಪಾದಯಾತ್ರೆಯನ್ನು ತಡೆಯುವುದು, ಯಾತ್ರಿಗಳ ಮೇಲೆ ಗಲಾಟೆ ಮಾಡುತ್ತಿದ್ದಾರೆ. ಯಾತ್ರೆಯಿಂದ ಬಿಜೆಪಿಗೆ ಭಯ ಆಗುತ್ತಿರಬಹುದು ಅನ್ನಿಸುತ್ತದೆ. ಅಸ್ಸಾಂ ಮುಖ್ಯಮಂತ್ರಿಗೆ ಏನು ನೋವಿದೆಯೋ ಗೊತ್ತಿಲ್ಲ. ಅವರು ನಮ್ಮ ಪಕ್ಷದಲ್ಲಿ ಇದ್ದವರು. ಇಂತಹ ಯಾತ್ರೆಗೆ ಅವಕಾಶ ಕೊಡಲಿಲ್ಲ ಅಂದರೆ ಹೇಗೆ. ರಾಹುಲ್ ಗಾಂಧಿಗೇ ಹೀಗಾದರೆ, ದೇಶದಲ್ಲಿನ ಸಾಮಾನ್ಯ ಜನರ ಕಥೆ ಏನು? ಹೀಗಾಗಿ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ” ಎಂದು ಹೇಳಿದರು.
ನಿಗಮ-ಮಂಡಳಿ ನೇಮಕದ ಬಗ್ಗೆ ನಮ್ಮನ್ನು ಕೇಳಿಲ್ಲ
“ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡುವಾಗ ನಮ್ಮ ಅಭಿಪ್ರಾಯವನ್ನು ಯಾರು ಕೇಳಿಲ್ಲ. ಒಂದೆರಡು ಹೆಸರು ಕೊಡಿ ಅಂದಾಗ ಕೊಟ್ಟಿದ್ದೇನೆ. ಆದರೆ, ನಮ್ಮ ಜತೆ ಮಾತಾಡಿ ಪಟ್ಟಿ ಮಾಡಿಲ್ಲ. ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮುಖಂಡರ ಕೆಲಸ ನಮಗೆ ಗೊತ್ತಿರುತ್ತೆ. ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಇದ್ದಾರೆ. ಆಯ್ಕೆ ವಿಚಾರದ ಜವಾಬ್ದಾರಿಯನ್ನು ಅವರಿಗೆ ಬಿಡಬೇಕು” ಎಂದು ಹೇಳಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ ನಾಯಕರ ಜತೆ ಮಾತಾಡಿ ಪಟ್ಟಿ ಮಾಡಬೇಕು. ಆದರೆ ಈಗ ಪಕ್ಷದ ಪ್ರಧಾನ ಕಾರ್ಯದರ್ಶಿಯವರೇ ಮಾಡುತ್ತಿದ್ದಾರೆ. ಹೀಗಾಗಿ ಪಟ್ಟಿ ಸಿದ್ಧಪಡಿಸುವುದು ನಿಧಾನವಾಗಿದೆ. ನೋಡೋಣ ಏನ್ ಮಾಡ್ತಾರೆ” ಎಂದರು.
“ನಾನು ಸಹ 8 ವರ್ಷ ಪಕ್ಷದ ಅಧ್ಯಕ್ಷನಾಗಿದ್ದೆ. ಯಾರು ಯಾರು ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಹತ್ತಾರು ವರ್ಷ ಪಕ್ಷಕ್ಕೆ ದುಡಿದವರಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರುವುದರಿಂದ ಹೀಗೆ ಆಗಿದೆ. ಕೆಲಸ ಮಾಡದವರಿಗೆ ಅಧಿಕಾರ ಕೊಟ್ಟರೆ, ಕೆಲಸ ಮಾಡಿರುವವರಿಗೆ ನೋವು, ಅಸಮಾಧಾನವಾಗುತ್ತದೆ. ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರ ಸಲಹೆಗಳನ್ನು ಕೇಳಬೇಕಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜೈ ಶ್ರೀರಾಮ್ ಅಂದರೆ ತಪ್ಪೇನು?
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಅಂದರೆ ತಪ್ಪೇನು. ನಾವೆಲ್ಲರೂ ಜೈ ಶ್ರೀರಾಮ್ ಅಂತ ಹೇಳಿದ್ದೇವೆ. ಹೇಳದೇ ಇದ್ದರೆ ಶ್ರೀರಾಮನ ವಿರೋಧಿಗಳು ಅಂತಾರೆ. ಹೇಳಿದರೆ ಹೀಗೆ ಅಂತಾರೆ. ಇದರಲ್ಲಿ ಯಾವುದು ಸರಿ. ನಾವೆಲ್ಲ ಶ್ರೀರಾಮನ ಭಕ್ತರೇ. ಒಂದಲ್ಲ ಒಂದು ರೀತಿ ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು ಅಂತ ಹೇಳುತ್ತೀವಿ. ಶ್ರೀರಾಮ ಬರೀ ನಾಲ್ಕು ಜನಕ್ಕೆ ಸೀಮಿತವಲ್ಲ. ನಮಗೆ ದಶರಥ ರಾಮ ಬೇಕು. ಮೋದಿಯ ರಾಮ ಬೇಕಾಗಿಲ್ಲ. ನಮಗೆ ಈ ದೇಶವನ್ನು ರಾಮರಾಜ್ಯ ಮಾಡಿದ ದಶರಥ ರಾಮ ಬೇಕೆ ಹೊರತು, ರಾಮನ ಹೆಸರು ಹೇಳಿಕೊಂಡು ಒಡೆದಾಳುವ ನೀತಿ ಆಚರಣೆ ಮಾಡುವವರು ಬೇಕಿಲ್ಲ” ಎಂದು ಹೇಳಿದರು.