ಅಸ್ಸಾಂ, ಕೇರಳ ಮತ್ತು ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. ಈ ಬಾರಿಯ ಚುನಾವಣೆ ಅನೇಕ ಚರ್ಚೆಗಳಿಗೆ ಕಾರಣವಾಗಿದೆ. ಅಸ್ಸಾಂನಲ್ಲಿ ಬಿಜೆಪಿ ತನ್ನ ಹಿಡಿತವನ್ನು ಮುಂದುವರಿಸಲು ಯತ್ನಿಸಿದೆ, ಕೇರಳದಲ್ಲಿ ಈ ಚುನಾವಣೆಯಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಪುದುಚೆರಿಯಲ್ಲಿ ಪರ್ಯಾಯ ರಾಜಕೀಯದ ಭರವಸೆ ನೀಡಿದ್ದ ವಿಜಯ್ ನೇತೃತ್ವದ ಟಿವಿಕೆ ಕೂಡ ಸ್ಪರ್ಧಿಸಿದೆ.
ಅಸ್ಸಾಂ: ಮತ್ತೆ ಬಿಜೆಪಿಯತ್ತ ಒಲವು?
ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ತನ್ನ ಹಿಡಿತವನ್ನು ಮುಂದುವರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆಯಾದರೂ, ಮತದಾನಕ್ಕೂ ಮುನ್ನ ಕಾಂಗ್ರೆಸ್, ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಮತ್ತು ಅವರ ಪತ್ನಿ ಮೇಲೆ ಮಾಡಿದ ಗಂಭೀರ ಆರೋಪ ಚುನಾವಣೆ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ. ಕಾಂಗ್ರೆಸ್ ಮಾಡಿರುವ ಆರೋಪ ನಿಜಕ್ಕೂ ಮತದಾರರ ಮೇಲೆ ಪರಿಣಾಮ ಬೀರಿದೆಯೋ, ಅಥವಾ ಇಲ್ಲವೋ ಎನ್ನುವುದು ಫಲಿತಾಂಶ ಬಂದ ಮೇಲೆಯೇ ತಿಳಿಯುತ್ತದೆ.
ಹಿಮಂತ ಬಿಸ್ವ ಶರ್ಮಾ ಅವರ ನೇತೃತ್ವದಲ್ಲಿ ಸರ್ಕಾರ ಜಾರಿಗೆ ತಂದ ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಎಂದು ಹೇಳಲಾಗುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ.
ಅಸ್ಸಾಂ ವಿಧಾನಸಭೆ ಚುನಾವಣೆ 2026ರ ಹೊಸ್ತಿಲಿನಲ್ಲಿರುವಾಗ, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಪತ್ನಿ ರಿಂಕಿ ಭುಯಾನ್ ಶರ್ಮ ಅವರ ಹೆಸರಿನಲ್ಲಿ ಮೂರು ವಿದೇಶಿ ಪಾಸ್‌ಪೋರ್ಟ್‌ಗಳಿವೆ ಎಂಬ ಕಾಂಗ್ರೆಸ್‌ನ ಆರೋಪ ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿತ್ತು.
ಅಸ್ಸಾಂನಲ್ಲಿ ‘ಅಸ್ಮಿತೆ’ ಒಂದು ದೊಡ್ಡ ವಿಷಯ. ಮುಖ್ಯಮಂತ್ರಿಯವರ ಕುಟುಂಬದವರು ವಿದೇಶಿ ಪೌರತ್ವ ಹೊಂದಿದ್ದಾರೆ ಎಂಬ ಆರೋಪ ಮತದಾರರಲ್ಲಿ ಗೊಂದಲ ಉಂಟುಮಾಡಿರಬಹುದು. ಆದರೆ, ದಾಖಲೆಗಳು ನಕಲಿ ಎಂದು ಬಿಜೆಪಿ ಸಾಬೀತುಪಡಿಸಿದ್ದರೆ, ಇದು ಕಾಂಗ್ರೆಸ್‌ಗೆ ತಿರುಗುಬಾಣ ಆಗುವ ಸಾಧ್ಯತೆಯೂ ಇತ್ತು. ಆದರೆ, ಆ ಬಗ್ಗೆ ಯಾವ ಪ್ರಯತ್ನವೂ ಆಗಿಲ್ಲ. ಹಿಮಂತ್ ಬಿಸ್ವ ಶರ್ಮ ಒಂಟಿಯಾಗಿ ಸಮರ್ಥಿಸಿಕೊಂಡರು ವಿನಃ ಬೇರೆ ಯಾವ ಬೆಳವಣಿಗೆಯಾಗಿಲ್ಲ.
ಕಾಂಗ್ರೆಸ್ ಶರ್ಮ ಅವರ ಪತ್ನಿ ಹೊಂದಿದ್ದಾರೆ ಎನ್ನಲಾಗುವ “ಮುಸ್ಲಿಂ ದೇಶಗಳ (ಯುಎಇ, ಈಜಿಪ್ಟ್) ಪಾಸ್‌ಪೋರ್ಟ್‌ಗಳ ಬಗ್ಗೆ ಪ್ರಶ್ನೆ ಎತ್ತಿತ್ತು. ಆದರೆ, ಅದು ಚುನಾವಣೆಯಲ್ಲಿ ಬಹಳ ದೊಡ್ಡ ಬದಲಾವಣೆಗೆ ಕಾರಣವಾಗಿದೆಯೇ ಎನ್ನುವ ಪ್ರಶ್ನೆಗೆ ಮೇ.04ರಂದೇ ಉತ್ತರ ದೊರಕಲಿದೆ.
ಈ ಆರೋಪಗಳ ಸತ್ಯಾಸತ್ಯತೆ ನ್ಯಾಯಾಲಯದಲ್ಲಿ ಅಥವಾ ಚುನಾವಣಾ ಆಯೋಗದ ಮುಂದೆ ಸಾಬೀತಾಗುವವರೆಗೆ, ಇದು ಮತದಾರರ ಮೇಲೆ ಅಂತಿಮ ನಿರ್ಧಾರ ಬದಲಿಸುವಷ್ಟು ಪ್ರಬಲವಾಗಿತ್ತೇ ಎಂದು ಹೇಳುವುದು ಕಷ್ಟ. ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ನಡೆದ ಈ ಆರೋಪ, ಪ್ರತ್ಯಾರೋಪಗಳು ಮತ ಸೆಳೆಯುವಲ್ಲಿ ಯಶಸ್ವಿಯಾಗಿದೆಯೇ ಎನ್ನುವದನ್ನು ಕಾದು ನೋಡಬೇಕಿದೆ.
ಹಿಮಂತ ಬಿಸ್ವ ಶರ್ಮ ಮೇಲೆ ಭ್ರಷ್ಟಾಚಾರ ಆರೋಪ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಮೇಲಿರುವ ಭ್ರಷ್ಟಾಚಾರ ಆರೋಪಗಳನ್ನು ವಿರೋಧ ಪಕ್ಷಗಳು ಇವುಗಳನ್ನು ‘ಅಸ್ತ್ರ’ವಾಗಿ ಬಳಸಿದೆ . ಪಾಸ್‌ಪೋರ್ಟ್ ಮತ್ತು ವಿದೇಶಿ ಆಸ್ತಿ ವಿವಾದ (2026), ಅಮೆರಿಕದ ವ್ಯೋಮಿಂಗ್‌ನಲ್ಲಿ 52,000 ಕೋಟಿ ರೂ. ಮೊತ್ತದ ಶೆಲ್ ಕಂಪನಿ ಮತ್ತು ದುಬೈನಲ್ಲಿ ಅಘೋಷಿತ ಆಸ್ತಿ ಹೊಂದಿದ್ದಾರೆ ಎಂಬ ಆರೋಪ, ಲೂಯಿಸ್ ಬರ್ಗರ್ ಲಂಚದ ಪ್ರಕರಣ (Louis Berger Scam), ಶಾರದಾ ಚಿಟ್ ಫಂಡ್ ಹಗರಣ (Saradha Scam), ಪಿಪಿಇ ಕಿಟ್ ಮತ್ತು ಸ್ಯಾನಿಟೈಸರ್ ಹಗರಣ (2022) ಹೀಗೆ ಹಲವು ಭ್ರಷ್ಟಾಚಾರದ ಆರೋಪಗಳಿವೆ.
ಇದನ್ನೂ ಓದಿ : ದಾಳವಾದ ಅಮೆರಿಕ, ತತ್ತರಿಸಿದ ಇಸ್ರೇಲ್; ಯುದ್ಧಭೂಮಿಯಲ್ಲಿ ಬೆತ್ತಲಾದ ದೊಡ್ಡಣ್ಣನ ದರ್ಪ
ರಾಹುಲ್ ಗಾಂಧಿ, ಹಿಮಂತ ಬಿಸ್ವ ಶರ್ಮ ಅವರನ್ನು “ಭಾರತದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ” ಎಂದು ಟೀಕಿಸಿದ್ದರು. ಆದರೆ, ಶರ್ಮ ಇದನ್ನು ‘ಅಸ್ಸಾಂನ ಅಸ್ಮಿತೆ’ ಮೇಲಿನ ‘ ದಾಳಿ ಎಂದು ಭಾವನಾತ್ಮಕ ವಿಷಯಾಂತರ ಮಾಡಲು ಯತ್ನಿಸಿದ್ದರು.
ಅಸ್ಸಾಂನ ಸಾಮಾನ್ಯ ಮತದಾರರಿಗೆ ಈ ಭ್ರಷ್ಟಾಚಾರದ ಆರೋಪಗಳಿಗಿಂತ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಹೆಚ್ಚು ಮುಖ್ಯವಾಗಿತ್ತೇ ಎಂಬುದು ಫಲಿತಾಂಶದಿಂದ ತಿಳಿಯಬೇಕಿದೆ.
ಕೇರಳ : ತ್ರಿಕೋನ ಸ್ಪರ್ಧೆ
ಕೇರಳದ ರಾಜಕೀಯ ಇತಿಹಾಸದಲ್ಲಿ ಸಾಮಾನ್ಯವಾಗಿ ಎಲ್.ಡಿ.ಎಫ್ (LDF) ಮತ್ತು ಯು.ಡಿ.ಎಫ್ (UDF) ನಡುವೆ ಅಧಿಕಾರ ಹಂಚಿಕೆಯಾಗುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಪಿಣರಾಯಿ ವಿಜಯನ್ ಸರ್ಕಾರ ಕೆಲವು ವಿವಾದಗಳನ್ನು ಎದುರಿಸಿದ್ದರಿಂದ ಎಲ್.ಡಿ.ಎಫ್‌ಗೆ ಈ ಚುನಾವಣೆ ಸವಾಲಾಗಿ ಪರಿಣಮಿಸಿದೆ. ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್ ಅಧಿಕಾರಕ್ಕೇರುವ ಉತ್ಸಾಹದಿಂದ ಸ್ಪರ್ಧಿಸಿದ್ದು, ಸಮಬಲದ ಪೈಪೋಟಿ ಎಂಬಂತೆ ಈ ಬಾರಿ ಚುನಾವಣೆ ಮುಗಿದಿದೆ.
ಮೂರನೇ ಶಕ್ತಿಯಾಗಿ ಬಿಜೆಪಿ ಕೆಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಮತಗಳನ್ನು ಪಡೆಯಬಹುದು, ಅಂತಹ ಕ್ಷೇತ್ರಗಳಲ್ಲಿ ಬಿಜೆಪಿ ಯಾವ ಪಕ್ಷದ ಕಡೆಗೆ ಹೋಗುತ್ತಿದ್ದ ಮತಗಳನ್ನು ಸೆಳೆದಿದೆ ಎನ್ನುವುದು ಮುಖ್ಯವಾಗುತ್ತದೆ.
ಕೇರಳದಲ್ಲಿ ಸಾಮಾನ್ಯವಾಗಿ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗುವ ಸಂಪ್ರದಾಯವಿತ್ತು. ಆದರೆ 2021ರಲ್ಲಿ ಪಿಣರಾಯಿ ವಿಜಯನ್ ಆ ಸಂಪ್ರದಾಯವನ್ನು ಮುರಿದು ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದಿದ್ದರು. ಈಗ 2026ರಲ್ಲಿ ಪ್ರಬಲ ಆಡಳಿತ ವಿರೋಧಿ ಅಲೆಯ ಸವಾಲನ್ನು ಎದುರಿಸಿದ್ದಾರೆ.
ಮುಖ್ಯವಾಗಿ ಶಬರಿಮಲೆ ಚಿನ್ನದ ಕಳವು ಪ್ರಕರಣದಂತಹ ಘಟನೆಯ ತನಿಖೆಯಲ್ಲಿನ ವಿಳಂಬ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ. ಇನ್ನು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜನಪ್ರಿಯತೆ ಇನ್ನೂ ಕಡಿಮೆಯಾಗದಿದ್ದರೂ, ಅವರ ಸಂಪುಟದ ಹಲವು ಸಚಿವರ ಕಾರ್ಯವೈಖರಿ ಮತ್ತು ವಿವಾದಾತ್ಮಕ ಹೇಳಿಕೆಗಳು ಮಧ್ಯಮ ವರ್ಗದ ಮತದಾರರನ್ನು ದೂರ ಮಾಡಿರಬಹುದು ಎಂಬ ಆತಂಕ ಆಡಳಿತರೂಢ ಎಲ್‌ಡಿಎಫ್ ಪಕ್ಷದಲ್ಲಿ ಮನೆಮಾಡಿದೆ. ಯು.ಡಿ.ಎಫ್ ಮೇಲೆ ಜನರಿಗಿರುವ ಒಲವಿಗಿಂತ ಹೆಚ್ಚಾಗಿ, ಎಲ್.ಡಿ.ಎಫ್ ಮೇಲಿನ ಅಸಮಾಧಾನ ಯು.ಡಿ.ಎಫ್‌ಗೆ ವರದಾನವಾಗುವ ಸಾಧ್ಯತೆ ಇದೆ.
ಇನ್ನು, ಬಿಜೆಪಿ ಕೆಲವು ಕ್ಷೇತ್ರಗಳಲ್ಲಿ (ತ್ರಿಶೂರ್, ನೆಮಮ್, ಪಾಲಕ್ಕಾಡ್) ಬಲವಾಗಿರುವುದು ಮತಗಳ ವಿಭಜನೆಗೆ ಕಾರಣವಾಗಬಹುದು. ಇದು ಆಡಳಿತಾರೂಢ ಎಲ್.ಡಿ.ಎಫ್‌ಗೆ ನಷ್ಟವಾಗುತ್ತದೆಯೇ ಅಥವಾ ಲಾಭವಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಹಾಸನ ಮಣ್ಣಿನ ಹೆಣ್ಣು ದನಿಗಳು | ಹಲವು ಮೊದಲುಗಳ ಅನನ್ಯ ರಂಗ ಭರವಸೆ- ಶ್ವೇತಾ…
ಒಟ್ಟಾರೆಯಾಗಿ ಹೇಳುವುದಾದರೆ, ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಖಂಡಿತವಾಗಿಯೂ ಇತ್ತು. ಆದರೆ, ಅದನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಯು.ಡಿ.ಎಫ್ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದನ್ನು ತಿಳಿಯಲು ಫಲಿತಾಂಶಕ್ಕಾಗಿ ಕಾಯಲೇಬೇಕಿದೆ. ಒಂದು ವೇಳೆ ಎಲ್.ಡಿ.ಎಫ್ ಮತ್ತೆ ಅಧಿಕಾರಕ್ಕೆ ಬಂದರೆ, ಕೇರಳ ಮತ್ತು ಭಾರತೀಯ ರಾಜಕೀಯದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ.
ಪುದುಚೆರಿ: ‘ಕಿಂಗ್ ಮೇಕರ್’ ಆಗಲಿದ್ದಾರೆಯೇ ವಿಜಯ್?
ತಮಿಳು ಚಿತ್ರನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪುದುಚೆರಿಯ ರಾಜಕೀಯ ಸಮೀಕರಣವನ್ನು ಬದಲಿಸಬಹುದು ಎಂದು ಹೇಳಲಾಗಿದೆ. ವಿಜಯ್ ಜನಪ್ರಿಯತೆ ಪುದುಚೆರಿಯ ಯುವ ಸಮೂಹದ ಮೇಲೆ ಭಾರಿ ಪ್ರಭಾವ ಬೀರಿದೆ ಎನ್ನಲಾಗಿದೆ. ಹಾಗಾಗಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಮತ್ತು ಎನ್.ಆರ್. ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟದ ನಡುವೆ ವಿಜಯ್ ಅವರ ಪಕ್ಷ ಗಮನಾರ್ಹ ಪ್ರಮಾಣದ ಮತಗಳನ್ನು ಸೆಳೆದಿರಬಹುದಾದ ನಿರೀಕ್ಷೆಯಿದೆ.
ಒಂದು ವೇಳೆ ಎರಡೂ ಮೈತ್ರಿಕೂಟಗಳಿಗೆ ಬಹುಮತ ಲಭ್ಯವಾಗದೇ ಇದ್ದಲ್ಲಿ, ವಿಜಯ್ ಅವರ ಬೆಂಬಲವಿಲ್ಲದೆ ಸರ್ಕಾರ ರಚನೆ ಅಸಾಧ್ಯವಾಗಬಹುದು. ಹೀಗಾಗಿ ವಿಜಯ್ ಪುದುಚೆರಿಯಲ್ಲಿ ‘ಕಿಂಗ್ ಮೇಕರ್’ ಆಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ.
ಟಿವಿಕೆ ಪಕ್ಷ ಎಲ್ಲಾ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಕನಿಷ್ಠ 2 ರಿಂದ 3 ಕ್ಷೇತ್ರಗಳನ್ನು ಗೆದ್ದರೂ ಸಹ ಸರ್ಕಾರ ರಚನೆಯಲ್ಲಿ ವಿಜಯ್ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಯುವ ಮತದಾರರು ಮತ್ತು ಆಡಳಿತರೂಢ ಸರ್ಕಾರದ ಬಗ್ಗೆ ಬೇಸತ್ತ ಮತದಾರರು ವಿಜಯ್ ಬೆನ್ನಿಗೆ ನಿಂತಿರಬಹುದು ಎಂದು ಹೇಳಲಾಗಿದೆ.
ಇನ್ನು, ಪುದುಚೆರಿಯಲ್ಲಿ ಎನ್.ಆರ್. ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟ ಎರಡನೇ ಅವಧಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದರೂ, ಮೈತ್ರಿಯಲ್ಲಿನ ಆಂತರಿಕ ಸಂಘರ್ಷ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿರುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ಪುದುಚೆರಿಗೆ ರಾಜ್ಯದ ಸ್ಥಾನಮಾನ ನೀಡಬೇಕೆಂದು ದಶಕಗಳಿಂದ ಒತ್ತಾಯಿಸುತ್ತಿದ್ದಾರೆ. ಈ ಹಿಂದೊಮ್ಮೆ ಅವರು ವಿಧಾನಸಭೆಯಲ್ಲಿ ಮಾತನಾಡುತ್ತಾ, “ಆಯ್ಕೆಯಾದ ಸರ್ಕಾರಕ್ಕೆ ಅಧಿಕಾರವಿಲ್ಲದಿದ್ದರೆ ಚುನಾವಣೆ ನಡೆಸಿ ಏನು ಪ್ರಯೋಜನ?” ಎಂದು ಕೇಂದ್ರ ಸರ್ಕಾರದ (ಬಿಜೆಪಿ) ನಿಯಂತ್ರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಮೈತ್ರಿಕೂಟದಲ್ಲಿನ ಅತೃಪ್ತಿಯನ್ನು ಬಹಿರಂಗಪಡಿಸಿದೆ. ಚುನಾಯಿತ ಮುಖ್ಯಮಂತ್ರಿಗಿಂತ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತಿದೆ ಎಂಬ ಡಿಎಂಕೆ ಮತ್ತು ಕಾಂಗ್ರೆಸ್‌ನ ಆರೋಪಗಳಿಗೆ ರಂಗಸ್ವಾಮಿ ಅವರು ಧ್ವನಿಗೂಡಿಸಿರುವುದು ಬಿಜೆಪಿಗೆ ಮುಜುಗರ ತಂದಿತ್ತು.
ಬಿಜೆಪಿ ಮತ್ತು ಎನ್.ಆರ್. ಕಾಂಗ್ರೆಸ್ ನಡುವೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಈ ಭಿನ್ನಾಭಿಪ್ರಾಯಗಳನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಕೂಟ ಬಳಸಿಕೊಂಡಿದೆ.
ಎನ್ ಆರ್ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಂತರಿಕ ಬಿರುಕುಗಳಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 3,000 ಕೋಟಿ ಮೌಲ್ಯದ ಯೋಜನೆಗಳು ಮತ್ತು ಮಹಿಳಾ ಫಲಾನುಭವಿಗಳಿಗೆ ನೀಡುತ್ತಿರುವ ಮಾಸಿಕ ಧನಸಹಾಯದಂತಹ ಯೋಜನೆಗಳು ಈ ಮೈತ್ರಿಕೂಟವನ್ನು ಗೆಲುವಿನ ದಡಕ್ಕೆ ಸೇರಿಸಬಹುದು ಎಂಬ ವಿಶ್ಲೇಷಣೆಯೂ ಇದೆ.




