ನಮ್ಮ ಸಚಿವರು | ಡಾ. ಎಂ ಸಿ ಸುಧಾಕರ್: ಅಹಂ ಹೆಚ್ಚು; ಕೆಲಸದಲ್ಲಿ ಅಚ್ಚುಮೆಚ್ಚು

Date:

ದಂತ ವೈದ್ಯರಾದ ಸುಧಾಕರ್ ಉತ್ತಮ ಕೆಲಸಗಾರರು. ಅಭಿವೃದ್ಧಿ ವಿಚಾರದಲ್ಲಿ ದೂರದೃಷ್ಟಿ, ಮುನ್ನೋಟ ಇರುವವರು. ಆದರೆ, ಅವರ ಸಮಸ್ಯೆ ಎಂದರೆ, ಅವರಿಗೆ ಅಹಂ ಹೆಚ್ಚು ಎನ್ನುವುದು ಅವರ ಕ್ಷೇತ್ರದ ಜನ ಹೇಳುವ ಮಾತು; ಯಾರ ಮಾತನ್ನೂ ಕೇಳದ ವ್ಯಕ್ತಿ ಎನ್ನುವುದು ಅವರ ವಿರುದ್ಧ ಇರುವ ದೊಡ್ಡ ಆರೋಪ. 

ಸಿದ್ದರಾಮಯ್ಯ ಸಂಪುಟದಲ್ಲಿ ಚಿಂತಾಮಣಿ ಶಾಸಕ, ದಂತ ವೈದ್ಯ ಡಾ. ಎಂ ಸಿ ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕೋಟಾದಲ್ಲಿ ಎಂ ಸಿ ಸುಧಾಕರ್ ಸಚಿವರಾಗಿದ್ದಾರೆ. ಐದು ಬಾರಿ ಗೌರಿಬಿದನೂರಿನ ಶಾಸಕರಾಗಿದ್ದ ಎನ್ ಎಚ್ ಶಿವಶಂಕರ ರೆಡ್ಡಿ ಈ ಬಾರಿ ಸೋತಿದ್ದರಿಂದ ಸುಧಾಕರ್ ಅವರಿಗೆ ಮಂತ್ರಿಗಿರಿ ದಕ್ಕಿದೆ. ವಿಶೇಷವೆಂದರೆ, ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ ಕೆ ಸುಧಾಕರ್ ಕೂಡ ವೈದ್ಯರಾಗಿದ್ದರು; ಅವರು ಚಿಕ್ಕಬಳ್ಳಾಪುರ ಜಿಲ್ಲೆಯ, ಚಿಕ್ಕಬಳ್ಳಾಪುರ ಕ್ಷೇತ್ರದವರು.

ಒಂದೇ ಹೆಸರಿನ, ಒಂದೇ ಜಿಲ್ಲೆಯ, ಒಂದೇ ವಿದ್ಯಾರ್ಹತೆಯ ಇಬ್ಬರು ಎರಡು ಸರ್ಕಾರಗಳಲ್ಲಿ ಸಚಿವರಾಗಿದ್ದು ವಿಶೇಷವಾಗಿತ್ತು. ಇನ್ನೂ ಒಂದು ವಿಶೇಷತೆಯಿದೆ. ಅದೇನೆಂದರೆ, ಇಬ್ಬರೂ ದೂರದ ಸಂಬಂಧಿಗಳು. ಕೆ ಸುಧಾಕರ್ ವಿರುದ್ಧ ಚುನಾವಣಾ ಪ್ರಚಾರಕ್ಕೆಂದು ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾಗ ಸ್ವತಃ ಎಂ ಸಿ ಸುಧಾಕರ್ ಅವರೇ ಈ ಮಾಹಿತಿ ನೀಡಿದ್ದರು. ಇಷ್ಟು ಸಾಮ್ಯತೆ ಬಿಟ್ಟರೆ ವ್ಯಕ್ತಿತ್ವದಲ್ಲಿ, ಕೆಲಸದಲ್ಲಿ, ಬದ್ಧತೆಯಲ್ಲಿ ಇಬ್ಬರೂ ವಿರುದ್ಧ ಧ್ರುವಗಳಂತೆ ಇದ್ದಾರೆ.

ಡಾ ಎಂ ಸಿ ಸುಧಾಕರ್‌ಗೆ ಶಾಸಕತ್ವ ಎನ್ನುವುದು ಒಂದು ರೀತಿ ಪಿತ್ರಾರ್ಜಿತವಾಗಿ ಬಂದ ಬಳುವಳಿ. ಸುಧಾಕರ್ ಅವರ ಕುಟುಂಬ 1951ರಿಂದಲೂ ರಾಜಕಾರಣದಲ್ಲಿದೆ. ಅವರ ತಾತ ಆಂಜನೇಯ ರೆಡ್ಡಿ ಎರಡು ಬಾರಿ ಚಿಂತಾಮಣಿಯ ಶಾಸಕರಾಗಿದ್ದರು. ಅವರ ತಂದೆ ಚೌಡರೆಡ್ಡಿ ಐದು ಬಾರಿ ಶಾಸಕರಾಗಿದ್ದರು. 1989ರಲ್ಲಿ ಚೌಡರೆಡ್ಡಿ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಗೃಹಸಚಿವರಾಗಿದ್ದರು. ಅವರು ನಗರಾಭಿವೃದ್ಧಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂಥ ಕುಟುಂಬದ ಮೂರನೇ ತಲೆಮಾರಿನ ಎಂ ಸಿ ಸುಧಾಕರ್, ಮೊದಲು ಶಾಸಕರಾಗಿದ್ದು 2004ರಲ್ಲಿ; ಕಾಂಗ್ರೆಸ್‌ನಿಂದ ಗೆದ್ದಿದ್ದ ಸುಧಾಕರ್, 2008ರಲ್ಲಿಯೂ ಅದೇ ಪಕ್ಷದಿಂದ ಗೆದ್ದು ಶಾಸಕರಾದರು.   2013ರ ಹೊತ್ತಿಗೆ ಸಮಸ್ಯೆಗಳು ಶುರುವಾದವು. ಕೋಲಾರದ ಮಾಜಿ ಸಂಸದ ಹಾಗೂ ಹಾಲಿ ಸಚಿವ ಕೆ ಎಚ್ ಮುನಿಯಪ್ಪ ಅವರಿಗೂ ಸುಧಾಕರ್ ಅವರಿಗೂ ಎಣ್ಣೆ ಸೀಗೆ ಸಂಬಂಧ. ಕೆ ಎಚ್ ಮುನಿಯಪ್ಪ ಮೇಲಿನ ಮುನಿಸಿನಿಂದ ಕಾಂಗ್ರೆಸ್ ತೊರೆದ ಎಂ ಸಿ ಸುಧಾಕರ್, 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. 2018ರಲ್ಲಿಯೂ ಅವರು ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೆ ಸೋತರು.      

ಈ ಸುದ್ದಿ ಓದಿದ್ದೀರಾ: ನಮ್ಮ ಸಚಿವರು | ಹೈಕಮಾಂಡ್‌ ಆಪ್ತ ಬೋಸರಾಜು

2023ರ ಹೊತ್ತಿಗೆ ಮರಳಿ ಕಾಂಗ್ರೆಸ್ ಸೇರಿದ ಸುಧಾಕರ್, ಚಿಂತಾಮಣಿಯಲ್ಲಿ ಸತತ ಎರಡು ಬಾರಿ ಶಾಸಕರಾಗಿ, ಜನಪ್ರಿಯತೆ ಗಳಿಸಿದ್ದ ಜೆ ಕೃಷ್ಣಾರೆಡ್ಡಿ ಅವರನ್ನು ಸೋಲಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರಿಗೀಗ ಮಂತ್ರಿಗಿರಿಯೂ ಒಲಿದುಬಂದಿದೆ.

ದಂತ ವೈದ್ಯರಾದ ಸುಧಾಕರ್ ಉತ್ತಮ ಕೆಲಸಗಾರರು. ತನಗೆ ಅಭಿವೃದ್ಧಿ ವಿಚಾರದಲ್ಲಿ ದೂರದೃಷ್ಟಿ ಮತ್ತು ಮುನ್ನೋಟ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. ಅದು ನಿಜವೂ ಹೌದು. ಜೊತೆಗೆ ಬಿಜೆಪಿ ಮತ್ತು ಜೆಡಿಎಸ್ ಅನ್ನು ಎದುರಿಸುದಕ್ಕೆ ಅವರು ಸಮರ್ಥರು. ಈ ಬಾರಿಯ ಚುನಾವಣೆಯ ವೇಳೆ ತನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಲೇ ಪಕ್ಕದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹೋಗಿ ಡಾ ಕೆ ಸುಧಾಕರ್ ವಿರುದ್ಧ ಪ್ರಚಾರ ಮಾಡಿದ್ದರು. ದಾಖಲೆ ಸಮೇತ ಕೆ ಸುಧಾಕರ್ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದರು. ತನಗೆ ಎದುರಾಳಿಯೇ ಇಲ್ಲ ಎನ್ನುವಂತೆ ಆಡುತ್ತಿದ್ದ ಕೆ ಸುಧಾಕರ್‌ಗೆ ಸ್ಥಳೀಯ ಮಟ್ಟದಲ್ಲಿಯೇ ಸಮರ್ಥವಾಗಿ ಸಡ್ಡು ಹೊಡೆದಿದ್ದರು.     

ಎಂ ಸಿ ಸುಧಾಕರ್ ಜನಾನುರಾಗಿ ಎನ್ನುವ ಮಾತುಗಳಿವೆ. ವೈದ್ಯಕೀಯ ಪದವಿ ಪಡೆದಿರುವ ಎಂ ಸಿ ಸುಧಾಕರ್, ಕೊರೊನಾ ಸಂದರ್ಭದಲ್ಲಿ ತಾನು ಶಾಸಕನಲ್ಲದಿದ್ದರೂ ಜನರ ನೆರವಿಗೆ ಧಾವಿಸಿದ್ದನ್ನು ಅಲ್ಲಿಯ ಜನ ನೆನಪಿಸಿಕೊಳ್ಳುತ್ತಾರೆ.             

ಎಂ ಸಿ ಸುಧಾಕರ್ ಅವರ ದೊಡ್ಡ ಸಮಸ್ಯೆ ಎಂದರೆ, ಅವರಿಗೆ ಅಹಂ ಹೆಚ್ಚು ಎನ್ನುವುದು ಅವರ ಕ್ಷೇತ್ರದ ಜನ ಹೇಳುವ ಮಾತು. ಮಹಾ ಸ್ವಪ್ರತಿಷ್ಠೆಯ ಮತ್ತು ಯಾರ ಮಾತನ್ನೂ ಕೇಳದ ವ್ಯಕ್ತಿ ಎನ್ನುವುದು ಅವರ ವಿರುದ್ಧ ಇರುವ ದೊಡ್ಡ ಆರೋಪ. ತನ್ನ ಎದುರಿಗಿರುವವರ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ತೋರದ ಅವರು, ತಾನೇ ನಿರಂತರವಾಗಿ ಮಾತನಾಡುತ್ತಿರುತ್ತಾರೆ ಎಂದು ಅವರ ಸುತ್ತಲಿರುವವರೇ ಅವರ ಬಗ್ಗೆ ಅಸಮಾಧಾನ ತೋಡಿಕೊಳ್ಳುತ್ತಾರೆ. ಅವರ ತಾತ, ಅಪ್ಪನೂ ಶಾಸಕ, ಮಂತ್ರಿಗಳಾಗಿದ್ದರಿಂದ ಹೀಗಾಗಿರಬಹುದು ಎನ್ನುವ ಅನಿಸಿಕೆ ಜನರಲ್ಲಿದೆ. ಬದಲಿಗೆ, ಅವರು ತಳ ಮಟ್ಟದಿಂದ ಬೆಳೆದು ಬಂದಿದ್ದರೆ ಹೀಗಾಗುತ್ತಿರಲಿಲ್ಲ ಎನ್ನುವವರಿದ್ದಾರೆ. ನಾಯಕನಾದವನಿಗೆ ತನ್ನ ಜನರ ಮಾತನ್ನು ಕೇಳುವ ಗುಣವಿರಬೇಕು. ಇಲ್ಲದಿದ್ದರೆ ಆತ ತನ್ನದೇ ಆದ ಮಾತು, ನಂಬಿಕೆ, ಅನಿಸಿಕೆಗಳ ಹುದಲಿನಲ್ಲಿ ಹೂತು ನಾಶವಾಗುವ ಅಪಾಯವಿರುತ್ತದೆ. ಇದನ್ನು ಎಂ ಸಿ ಸುಧಾಕರ್ ಅರಿಯಬೇಕಾಗಿದೆ.

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಡಾ ಕೆ ಸುಧಾಕರ್, ಎಂ ಸಿ ಸುಧಾಕರ್‌ಗೆ ದೂರದ ಸಂಬಂಧಿ ಎಂದೆವು. ಈಗಿನ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿಯೇ ಅವರ ಹತ್ತಿರದ ಸಂಬಂಧಿಯೊಬ್ಬರಿದ್ದಾರೆ. ಅದುವೇ ಕೃಷ್ಣಬೈರೇಗೌಡ. ಎಂ ಸಿ ಸುಧಾಕರ್, ಕೃಷ್ಣಬೈರೇಗೌಡರಿಗೆ ಭಾವನಾಗಬೇಕು; ಎಂ ಸಿ ಸುಧಾಕರ್ ಅವರ ತಂದೆ ಸಿ ಬೈರೇಗೌಡರ ಸಹೋದರಿಯು ಸುಧಾಕರ್ ತಂದೆ ಚೌಡರೆಡ್ಡಿಯವರ ಪತ್ನಿ. ಸುಧಾಕರ್, ಕೃಷ್ಣಬೈರೇಗೌಡ ಅವರಂತೆಯೇ ಚೌಡರೆಡ್ಡಿ ಮತ್ತು ಸಿ ಬೈರೇಗೌಡ ಕೂಡ ಶಾಸಕರಾಗಿ ಜೊತೆಯಾಗಿಯೇ ಅಧಿಕಾರ ಅನುಭವಿಸಿದ್ದರು.         

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ ಕೇಂದ್ರೀಯ ವಿವಿ ವಿವಾದ: ಆರ್‌ಎಸ್‌ಎಸ್‌ನ ಧ್ಯೇಯಗೀತೆ ಹಾಡಿದರು, ಬೆದರಿಕೆ ಒಡ್ಡಿದರು

ದೇಶದ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಕೇಸರೀಕರಣಗೊಳ್ಳುತ್ತಿವೆ ಎಂದು ದೇಶಾದ್ಯಂತ ವ್ಯಾಪಕ ಚರ್ಚೆಗೊಳಗಾಗುತ್ತಿರುವ...

ಅಜೀಂ ಪ್ರೇಮ್ ಜಿ ಫೌಂಡೇಷನ್‌ನಿಂದ ಶಾಲಾ ಮಕ್ಕಳಿಗೆ ಆರು ದಿನವೂ ಪೌಷ್ಟಿಕ ಆಹಾರ: ಸಿಎಂ ಸಿದ್ದರಾಮಯ್ಯ

"ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆಶಯ. ಈ...

ರೇಣುಕಸ್ವಾಮಿ ಕೊಲೆ ಪ್ರಕರಣ | 4ನೇ ಆರೋಪಿ ತಾಯಿ ಅನಾರೋಗ್ಯದಿಂದ ಸಾವು

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 4ನೇ ಆರೋಪಿ, ದರ್ಶನ್‌ ತೂಗುದೀಪ ಸೇನೆಯ...

ಬೆಳಗಾವಿ | ಮಳೆ ಅಬ್ಬರಕ್ಕೆ ಕುಸಿದು ಬಿದ್ದ ಮನೆ; ಕೂದಲೆಳೆಯಲ್ಲಿ 11 ಮಂದಿ ಪಾರು

ಕಳೆದೊಂದು ವಾರದಿಂದ ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಶುಕ್ರವಾರ...