“ನನಗೆ ಮತ್ತೊಮ್ಮೆ ರಾಜ್ಯಸಭೆ ಸದಸ್ಯನಾಗಬೇಕು ಎಂಬ ಯಾವುದೇ ಆಸೆ ಅಥವಾ ವ್ಯಾಮೋಹವಿಲ್ಲ. ನನ್ನ 70 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅಧಿಕಾರಕ್ಕಿಂತ ಜನಸೇವೆಯೇ ಮುಖ್ಯವಾಗಿತ್ತು” ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ದೇವೇಗೌಡರಿಗೆ ಎನ್‌ಡಿಎ ಮೈತ್ರಿಕೂಟದಿಂದ ರಾಜ್ಯಸಭಾ ಟಿಕೆಟ್ ಕೈತಪ್ಪಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ದೇವೇಗೌಡರಿಗೆ ಬಿಜೆಪಿ ಉದ್ದೇಶಪೂರ್ವಕವಾಗಿಯೇ ಟಿಕೆಟ್ ನೀಡಲು ನಿರಾಕರಿಸಿದೆ ಎಂಬ ಚರ್ಚೆಗಳು ನಡೆಯುತ್ತಿದ್ದವು. ಇದೀಗ, ತಮಗೆ ಟಿಕೆಟ್ ಕೈತಪ್ಪಿದ ಕುರಿತು ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಟಿಕೆಟ್ ಸಿಗದಿದ್ದ ಕಾರಣಕ್ಕೆ ನಾನು ಸುಮ್ಮನೆ ಕೂರುವುದಿಲ್ಲ. ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ರಾಜ್ಯ ಮತ್ತು ದೇಶದ ಹಿತಾಸಕ್ತಿಯ ವಿಚಾರಗಳನ್ನು ಯಾರ ಹಂಗಿಲ್ಲದೆ ಮುಕ್ತವಾಗಿ ಮಾತನಾಡುತ್ತೇನೆ” ಎಂದಿದ್ದಾರೆ.
“ನಾನು 1954-55 ರಿಂದಲೇ ಸಕ್ರಿಯ ರಾಜಕಾರಣದಲ್ಲಿದ್ದೇನೆ. ಅಂದು ಗುತ್ತಿಗೆ ಕೆಲಸ ಮಾಡುತ್ತಿದ್ದ ನಾನು, ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ರಾಜಕೀಯಕ್ಕೆ ಬಂದವನು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನರ ಮಧ್ಯೆಯೇ ಇದ್ದೇನೆ. ಹಾಗಾಗಿ, ಇಂದು ಒಂದು ಸ್ಥಾನಕ್ಕಾಗಿ ನಾನು ಹಾತೊರೆಯುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
“ರಾಜ್ಯಸಭಾ ಟಿಕೆಟ್ ತಪ್ಪಿಸುವ ಮೂಲಕ ದೇವೇಗೌಡರಿಗೆ ಅಪಮಾನ ಮಾಡಲಾಗಿದೆ ಎಂದು ನನ್ನ ಹಿತೈಷಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ನನ್ನ ಮೇಲಿನ ಕಾಳಜಿಯಿಂದ ನೋವು ತೋಡಿಕೊಂಡಿದ್ದಾರೆ. ಆದರೆ, ನನ್ನ ಹೆಸರು ಪರಿಗಣನೆಗೆ ಬರುತ್ತದೆ ಎಂದು ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು ಬಿಟ್ಟರೆ, ನಾನು ಆ ಸ್ಥಾನಕ್ಕಾಗಿ ಎಲ್ಲಿಯೂ ಬೇಡಿಕೆ ಇಟ್ಟಿರಲಿಲ್ಲ. ಹೀಗಿರುವಾಗ ಅಪಮಾನದ ಪ್ರಶ್ನೆ ಎಲ್ಲಿಂದ ಬರುತ್ತದೆ?” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಗೋವು ರಾಷ್ಟ್ರೀಯ ಪ್ರಾಣಿಯಲ್ಲ, ತಾಯಿಯಲ್ಲ; ಬಿಜೆಪಿಯ ಮತಬ್ಯಾಂಕ್
“ನನಗೆ ಸ್ಪರ್ಧಿಸುವ ಆಸಕ್ತಿ ಇದ್ದಿದ್ದರೆ, ಮೇ 26ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಗಿ ದೆಹಲಿಗೆ ಹೋದಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಈ ವಿಷಯವನ್ನು ಚರ್ಚಿಸುತ್ತಿದ್ದೆ. ಆದರೆ, ನಾನು ಯಾರೊಂದಿಗೂ ಈ ಬಗ್ಗೆ ಮಾತನಾಡದೇ ಬೆಂಗಳೂರಿಗೆ ಹಿಂದಿರುಗಿದ್ದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
“ಪ್ರಸ್ತುತ ವಿಧಾನಸಭೆಯಲ್ಲಿ ನಮ್ಮ ಪಕ್ಷದ 18 ಸದಸ್ಯರಿದ್ದಾರೆ. ಈ ಸಂಖ್ಯಾಬಲದಿಂದ ನಾವು ಸ್ವತಂತ್ರವಾಗಿ ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ವಾಸ್ತವ ನಮಗೆ ತಿಳಿದಿದೆ. ಹಾಗಾಗಿ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ” ಎಂದೂ ಹೇಳಿದ್ದಾರೆ.




