- ರಾಜ್ಯ ರಾಜಕಾರಣದಲ್ಲಿ ಈಗ ವಲಸೆ ಪರ್ವ ಆರಂಭವಾಗಿದೆ
- ಆಪರೇಷನ್ ಕಮಲದಲ್ಲಿ ಬಿಜೆಪಿ ಗಿನ್ನಿಸ್ ದಾಖಲೆ ಮಾಡುತ್ತದೆ
ಚುನಾವಣೆಗೂ ಮೊದಲು ಕಾಂಗ್ರೆಸ್‌ನವರು ಆಪರೇಷನ್ ಹಸ್ತ ಮಾಡಿದರೆ, ಚುನಾವಣೆ ಬಳಿಕ ಅಧಿಕಾರಕ್ಕಾಗಿ ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಾರೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.
ಯಾದಗಿರಿ ಗುರುಮಿಠಕಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಈಗ ರಾಜ್ಯ ರಾಜಕಾರಣದಲ್ಲಿ ವಲಸೆ ಪರ್ವ ಆರಂಭವಾಗಿದೆ.
ಸದ್ಯ ಬಿಜೆಪಿಯಿಂದ ಕಾಂಗ್ರೆಸ್‌ಗೆ ನಾಯಕರ ವಲಸೆ ಪ್ರಾರಂಭವಾಗಿದೆ. ಕಾಂಗ್ರೆಸ್‌ನಿಂದ ಆಪರೇಷನ್ ಹಸ್ತ ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಲೇ ಇರುತ್ತದೆ. ಇದರ ಬಗ್ಗೆ ನಾನು ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ ಎಂದರು.
ಈ ಹಿಂದೆ ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ಭವಿಷ್ಯ ಮುಗಿಸುತ್ತೇನೆ ಎಂದು ಚಿಂಚನಸೂರ್ ಹೇಳಿದ್ದರು. ಈಗ ಅವರು ಅದೇ ಪಕ್ಷಕ್ಕೆ ಹೋಗಿದ್ದಾರೆ. ಇದು ಚಿಂಚನಸೂರು ನೈತಿಕತೆ ಹಾಗೂ ಕಾಂಗ್ರೆಸ್‌ನಲ್ಲಿರುವ ಅಭ್ಯರ್ಥಿಗಳ ಕೊರತೆಗೆ ಹಿಡಿದ ಕೈಗನ್ನಡಿ ಎಂದು ಕುಮಾರಸ್ವಾಮಿ ಹೇಳಿದರು.
ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿರುವ ಸಂಖ್ಯೆ ತೆಗೆದು ನೋಡಿದರೆ, ಈ ವಿಚಾರದಲ್ಲಿ ಇವರು ಗಿನ್ನಿಸ್ ದಾಖಲೆ ಮಾಡಬಹುದು ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು.
ಇದೇ ವೇಳೆ ಸಿದ್ದರಾಮಯ್ಯ ಸ್ಪರ್ಧಾಕ್ಷೇತ್ರ ಆಯ್ಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್. ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಬಗ್ಗೆ ಅನುಕಂಪ ಬೇಡ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಮ್ಮ ಅಭ್ಯರ್ಥಿ ವಿರುದ್ಧ ಯಾರು ಸ್ಪರ್ಧಿಸುತ್ತಾರೆ ಎಂಬುವುದು ನನಗೆ ಬೇಡ. ನನಗೆ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು ಅಷ್ಟೆ. ಈ ಬಾರಿ ಚುನಾವಣೆಯಲ್ಲಿ ನಾವು 123 ಸ್ಥಾನ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.