- ವಿವೇಕಾನಂದ ಎಂಬುವವರು ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್
- 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದೆ: ಕುಮಾರಸ್ವಾಮಿ ಆರೋಪ
”ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್ ಪಡೆದಿದ್ದು ಹೇಗೆ? ‘ಬರ್ಮುಡಾ ಟ್ರ್ಯಾಂಗಲ್’ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಲೇಬೇಕು. ಅದು ನಿಮ್ಮ ದುರ್ವಿಧಿ. ಆನ್ಸರ್ ಮಾಡಿ ಸಿದ್ದರಾಮಯ್ಯನವರೇ” ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, “ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಓಹ್! ಒಂದು ಸರಕಾರ! ವಿಸ್ಮಯಗಳ ಆಗರ!” ಎಂದು ಲೇವಡಿ ಮಾಡಿದ್ದಾರೆ.
“ಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ. ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು” ಎಂದು ವಾಗ್ದಾಳಿ ನಡೆಸಿದ್ದಾರೆ.
“ಡೂಪ್ಲಿಕೇಟ್ ಸಿಎಂ-ಡಿಸಿಎಂ ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ ಸಿಎಸ್‌ಆರ್ ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ. ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಲ್ಲವೇ ನೀವು ಹೇಳಿದ್ದು. ಹಾಗಾದರೆ; 71 ಪೊಲೀಸ್ ಇನ್‌ಸ್ಪೆಕ್ಟರ್ʼಗಳ ವರ್ಗದ ಈ ಯಾದಿಯ 4ನೇ ಹೆಸರಿನಲ್ಲೇ ಅಡಗಿದೆಯಲ್ಲಾ ನಿಮ್ಮ ‘ಸುಲಿಗೆಪುತ್ರ’ನ ಕೆಚ್ಚು! ಕ್ಷೇತ್ರತ್ಯಾಗದ ತ್ಯಾಗಮಯಿ, ಈಗ ವರುಣಾಕ್ಕೆ ವಕ್ಕರಿಸಿದ ಕೆಡಿಪಿ ಕಲಿ. ಏನಂತೀರಿ?” ಎಂದು ಕುಟುಕಿದ್ದಾರೆ.
ಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ…
ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು. 1/6#ಕಾಸಿಗಾಗಿಹುದ್ದೆ #CashForPosting pic.twitter.com/Ss55GDJmr0— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 18, 2023
“ಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. ‘ವರ್ಗಾವರ್ಗಿ ಬಜೆಟ್’ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರೀಯʼ ಅಟ್ಟಹಾಸ!! ‘ಕಾಸಿಗಾಗಿ ಹುದ್ದೆ & ಕಾಂಗ್ರೆಸ್ ಹುಂಡಿ’ ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-TCM ನಿರ್ಮಾಪಕ, ಡೂಪ್ಲಿಕೇಟ್ ಸಿಎಂ-DCM ನಿರ್ದೇಶಕ.. ಹೇಗಿದೆ?” ಎಂದು ವ್ಯಂಗ್ಯವಾಡಿದ್ದಾರೆ.
“ಸತ್ಯ ಹೇಳಿದರೆ ಗುಂಪುಗುಂಪಾಗಿ ಮೇಲೆ ಬೀಳುತ್ತೀರಿ.. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್ & ರನ್ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಈ ಪರಿ ನರಮೇಧದ ನಂತರವೂ ಮೇಲೇಳದೇಕೆ ನೆತ್ತರದಾಹಿಗಳ ತಕ್ಕಡಿ?
ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ
ಕುಮಾರಸ್ವಾಮಿ ಆರೋಪಗಳಿಗೆ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, “ಸಿಎಸ್‌ಆರ್ ಫಂಡ್ ಬಗ್ಗೆ ನಾನು ಅವತ್ತು ಮಾತನಾಡಿರುವೆ. ಒಬ್ಬ ಸಿಎಂ ಮೇಲೆ ಆರೋಪ ಮಾಡಬೇಕಾದರೆ ಸಾಕ್ಷ್ಯ ಇಟ್ಟುಕೊಳ್ಳಬೇಕು. ನಮ್ಮ ತಂದೆ ಆಗಲಿ, ನಾನಾಗಲಿ ಯಾವುದೇ ದಂಧೆ ನಡೆಸುತ್ತಿಲ್ಲ” ಎಂದರು.
“ವಿವೇಕಾನಂದ ಯಾರು ಅಂತಾ ನನಗೆ ಗೊತ್ತಿಲ್ಲ. ಇನ್‌ಸ್ಪೆಕ್ಟರ್ ವಿವೇಕಾನಂದ ವರ್ಗಾವಣೆಗೂ ನನಗೂ ಸಂಬಂಧವಿಲ್ಲ. ವಿಪಕ್ಷಗಳು ಹತಾಶರಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದರು, ಸಿಎಂ ಆಗಿಯೂ ಕೆಲಸ ಮಾಡಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ದಂಧೆಯನ್ನೇ ಮಾಡುತ್ತಿದ್ದರಾ?” ಎಂದು ವಾಗ್ದಾಳಿ ನಡೆಸಿದರು.