- ಖರ್ಗೆಯವರ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ಧ
- ಏಪ್ರಿಲ್ 16ಕ್ಕೆ ರಾಹುಲ್ ಗಾಂಧಿ ಜೈ ಭಾರತ ಸತ್ಯಾಗ್ರಹ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾದರೆ ಅವರ ಜತೆ ಕೆಲಸ ಮಾಡಲು ಸಿದ್ಧನಿದ್ದೇನೆʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಖರ್ಗೆ ನನ್ನ ನಾಯಕರು, ಅವರೇ ನನ್ನ ಅಧ್ಯಕ್ಷರು. ಖರ್ಗೆ ಅವರು ನನಗಿಂತ 20 ವರ್ಷ ಹಿರಿಯರು. ಅವರ ಹಿರಿತನ, ತ್ಯಾಗಕ್ಕೆ ನಾವು ಗೌರವ ನೀಡಬೇಕು ಎಂದರು.
“ಖರ್ಗೆ ಅವರು ನಮ್ಮ ರಾಜ್ಯ ಹಾಗೂ ದೇಶಕ್ಕೆ ಆಸ್ತಿ. ಪಕ್ಷ ಯಾವ ತೀರ್ಮಾನ ಮಾಡುತ್ತದೆಯೋ ನಾನು ಅದಕ್ಕೆ ಬದ್ಧವಾಗಿರುತ್ತೇನೆ. ಅವರು ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿದ್ದಾರೆ. ಮಧ್ಯರಾತ್ರಿ ತಮ್ಮ ಶಾಸಕಾಂಗ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಲಾಕ್ ಅಧ್ಯಕ್ಷರು ಇಂದು ಎಐಸಿಸಿ ಅಧ್ಯಕ್ಷರಾಗಿದ್ದು ಇದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ” ಎಂದರು.
ಮತ್ತೆ ಮುಂದಕ್ಕೆ ಹೋದ ಜೈ ಭಾರತ ಯಾತ್ರೆ:
ಏಪ್ರಿಲ್ 16ರಂದು ಕೋಲಾರದಲ್ಲಿ ರಾಹುಲ್ ಗಾಂಧಿ ಅವರ ಜೈ ಭಾರತ ಸತ್ಯಾಗ್ರಹ ಯಾತ್ರೆ ಮುಂದೂಡಲಾಗಿದೆ. ಹಿಂದೆ ಇದನ್ನು ಏಪ್ರಿಲ್ 9ಕ್ಕೆ ಆಯೋಜನೆ ಮಾಡಲಾಗಿತ್ತು.
ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಒಂದು ವಾರಗಳ ಕಾಲ ಮುಂದೂಡುವಂತೆ ಮುಖಂಡರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ರಾಹುಲ್ ಗಾಂಧಿ ಅವರು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಅದೇ ದಿನ ಕೆಪಿಸಿಸಿ ನೂತನ ಕಟ್ಟಡ ಉದ್ಘಾಟನೆ ಮಾಡಲಾಗುವುದು ಎಂದು ಡಿಕೆಶಿ ಹೇಳಿದರು.
ಬಿಜೆಪಿ ಹಾಲಿ ಶಾಸಕರೂ ಪಕ್ಷಕ್ಕೆ ಬರುತ್ತಾರೆ :
ಇನ್ನು ಪಕ್ಷದ ಟಿಕೆಟ್ ವಿಚಾರದಲ್ಲಿನ ಅಸಮಾಧಾನದ ವಿಚಾರವಾಗಿ ಮಾತನಾಡಿದ ಶಿವಕುಮಾರ್, “ರಾಜಕಾರಣದಲ್ಲಿ ಆಸೆ ಸಹಜ. ಈ ಸಂದರ್ಭದಲ್ಲಿ ನಾವು ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ. ರಾಜಕೀಯ ಎಂದರೆ ಅಧಿಕಾರ ಹಂಚಿ ಸಹಕಾರ ನೀಡುವುದಾಗಿದೆ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರವನ್ನು ಹಂಚಲಾಗುವುದು. ಈ ಕಾರಣಕ್ಕಾಗಿ ಎಲ್ಲರೂ ಸಮಾಧಾನವಾಗಿ ಇರಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? :ಕನ್ನಡಿಗರ ಕಷ್ಟಗಳಿಗೆ ಕರಗಿ ಮೂರೇ ತಿಂಗಳಲ್ಲಿ ಇಗೋ, ಎಂಟನೆಯ ಸಲ ಬರ್ತಿದ್ದಾರೆ ಮೋದಿ!
“ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟಾಗ ಅಸಮಾಧಾನ ಸಹಜ. ನಮ್ಮ ಪಕ್ಷದಲ್ಲಿ ಗೆಲುವಿನ ಸಾಮರ್ಥ್ಯ ಬಹಳ ಮುಖ್ಯ. ಆ ದೃಷ್ಟಿಯಿಂದ ನಾವು ಕೆಲವು ತೀರ್ಮಾನ ಕೈಗೊಂಡಿರುತ್ತೇವೆ.
ಬಿಜೆಪಿಯಲ್ಲೂ ಹಾಲಿ ಶಾಸಕರುಗಳಿದ್ದರು. ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಎಚ್ ವಿಶ್ವನಾಥ್ ಅವರು ಸೋಮವಾರ ಕಾಂಗ್ರೆಸ್ ಸೇರುತ್ತಿದ್ದಾರೆ” ಎಂದು ಹೇಳಿದರು.