ಕನ್ನಡಿಗರ ಕಷ್ಟಗಳಿಗೆ ಕರಗಿ ಮೂರೇ ತಿಂಗಳಲ್ಲಿ ಇಗೋ, ಎಂಟನೆಯ ಸಲ ಬರ್ತಿದ್ದಾರೆ ಮೋದಿ!

Date:

ಕನ್ನಡಿಗರ ಕಷ್ಟಕಣ್ಣೀರುಗಳಿಗೆ ತಡವಾಗಿ ಚುನಾವಣೆಯ ಹೊತ್ತಿಗಾದರೂ ಕರಗಿ ಸ್ಪಂದಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ (ಏ.9) ಎಂಟನೆಯ ಸಲ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಕೇವಲ ಮೂರೇ ತಿಂಗಳು ಹತ್ತು ದಿನಗಳಲ್ಲಿ ರಾಜ್ಯವೊಂದಕ್ಕೆ ಎಂಟನೆಯ ಸಲ ಆಗಮಿಸುವಷ್ಟು ಪ್ರೀತಿ ಉಕ್ಕಿ ಹರಿದಿದೆ. ನೆನಪಿರಲಿ, 2014ರಲ್ಲಿ ತಾವು ಪ್ರಧಾನಮಂತ್ರಿ ಆದಾಗಿನಿಂದ ಈ ಪರಿ ಪ್ರೀತಿ ಕಕ್ಕುಲಾತಿಯನ್ನು ಅವರು ಬೇರೆ ಯಾವ ರಾಜ್ಯಕ್ಕೂ ತೋರಿಸಿಲ್ಲ. ರಾಜ್ಯ ವಿಧಾನಸಭಾ ಚುನಾವಣೆಗಳ ಮತದಾನ ಇದೇ ಮೇ 10ರಂದು ನಡೆಯಲಿದೆ. ಮೇ 8 ಚುನಾವಣಾ ಪ್ರಚಾರಕ್ಕೆ ಕಡೆಯ ದಿನ. ಅರ್ಥಾತ್ ಚುನಾವಣಾ ಪ್ರಚಾರಕ್ಕೆ ಇನ್ನೂ ಒಂದು ತಿಂಗಳ ಕಾಲಾವಕಾಶ ಉಂಟು. ಈಗಾಗಲೇ ಎಂಟು ಸಲ ಬಂದಿರುವ ಪ್ರಧಾನಿಯವರು ಮುಂದಿನ ಮೂವತ್ತು ದಿನಗಳಲ್ಲಿ ಇನ್ನೂ ಹನ್ನೆರಡು ಸಲ ಕರ್ನಾಟಕಕ್ಕೆ ಪಾದ ಬೆಳೆಸುವ ಸಾಧ್ಯತೆಗಳಿವೆ ಎಂದಿವೆ ಬಿಜೆಪಿ ಮೂಲಗಳು.

ಚುನಾವಣಾ ಪ್ರಚಾರದ ಕಡೆಯ ಮೂರು ದಿನಗಳಂದು (ಮೇ 6, 7, 8) ಅವರು ರಾಜ್ಯದಲ್ಲಿಯೇ ಬಿಡಾರ ಹೂಡಿ ಗರಿಷ್ಠ ಸಂಖ್ಯೆಯ ಸಭೆಗಳನ್ನು, ರೋಡ್ ಶೋಗಳನ್ನು ನಡೆಸಿ ಕನ್ನಡಿಗರ ಕಷ್ಟ ಸುಖಗಳನ್ನು ವಿಚಾರಿಸಿಕೊಳ್ಳಲಿದ್ದಾರೆ. ಮೋದಿಯವರು ಚುನಾವಣೆಗಳ ಹೊತ್ತಿನಲ್ಲಿ ನೀಡುತ್ತಿರುವ ಈ ಭೇಟಿಗಳಿಗೆ ಪ್ರತಿಪಕ್ಷಗಳು ರಾಜಕೀಯ ಬಣ್ಣ ಬಳಿದಿವೆ. ಶೇ.40ರಷ್ಟು ಲಂಚ ತಿನ್ನುವ ಸರ್ಕಾರ, ಹತ್ತು ಹಲವು ನೇಮಕಾತಿ ಹಗರಣಗಳ ಸರ್ಕಾರ ಎಂಬ ಆಪಾದನೆಗಳಡಿ ಕುಗ್ಗಿ ಹೋಗಿರುವ ರಾಜ್ಯ ಬಿಜೆಪಿಯನ್ನು ಮತ್ತೆ ಹಿಡಿದೆತ್ತಿ ಅಧಿಕಾರಕ್ಕೆ ತರುವುದೇ ಈ ಭೇಟಿಗಳ ಉದ್ದೇಶ ಎನ್ನುವ ಕಾಂಗ್ರೆಸ್ಸಿಗೆ ಕಾಮಾಲೆ ಕಣ್ಣು. ಕಂಡದ್ದೆಲ್ಲ ಹಳದಿಯೇ.

2015ರ ಜನವರಿಯಿಂದ ಇಲ್ಲಿಯವರೆಗೆ ಮೋದಿಯವರು ರಾಜ್ಯಕ್ಕೆ ಒಟ್ಟು 32 ಸಲ ಭೇಟಿ ನೀಡಿದ್ದಾರೆ. ಈ ಚುನಾವಣೆಯನ್ನು ಬಿಟ್ಟರೆ ರಾಜ್ಯಕ್ಕೆ ಅವರ ಗರಿಷ್ಠ ಭೇಟಿಗಳು ಜರುಗಿದ್ದು 2018ರಲ್ಲಿ. ಆ ವರ್ಷವೂ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದದ್ದು ಕಾಕತಾಳೀಯವೇ ಇದ್ದೀತು. ಆಗಲೂ ಅವರು ಬಂದದ್ದು ಕನ್ನಡಿಗರ ಯೋಗಕ್ಷೇಮ ವಿಚಾರಿಸಲೆಂದೇ. ಆದರೆ ಚುನಾವಣಾ ಭಾಷಣಗಳನ್ನು ಮಾಡಲು ಪದೆ ಪದೇ ಬರುತ್ತಿದ್ದಾರೆಂದು ಅವರನ್ನು ಕಂಡರೆ ಆಗದವರು ವೃಥಾ ಟೀಕೆ ಮಾಡಿದರು. 2018ರ ಏಳು ಸಲ ರಾಜ್ಯಕ್ಕೆ ಬಂದಿದ್ದರು. ಈ ಪೈಕಿ ಆರು ಭೇಟಿಗಳು ಚುನಾವಣೆಯ ಹೊಸ್ತಿಲಲ್ಲೇ ಜರುಗಿದ್ದು ಕೂಡ ಕೇವಲ ಕಾಕತಾಳೀಯ. ಆರರ ಪೈಕಿ ಐದು ಭೇಟಿಗಳ ಸ್ವರೂಪ ಅಧಿಕೃತವಲ್ಲ. ಅಂದರೆ ಸರ್ಕಾರಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಂದಿರಲಿಲ್ಲ. ಯಾಕೆಂದರೆ ಆ ವೇಳೆಗೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿ ಹೋಗಿತ್ತು. ಮಾದರಿ ಚುನಾವಣೆ ಸಂಹಿತೆ ಜಾರಿಗೆ ಬಂದುಬಿಟ್ಟಿತ್ತು. ಹೀಗಾಗಿ ಈ ಭೇಟಿಗಳು ‘ಅಧಿಕೃತ’ದ ಹಣೆಪಟ್ಟಿಯಿಂದ ವಂಚಿತವಾದವು. 2018ರಲ್ಲಿ ಕೂಡ ಮೇ 1-9ರ ಎಂಟೇ ದಿನಗಳ ಅವಧಿಯಲ್ಲಿ ಅವರು ನಾಲ್ಕು ಬಾರಿ ರಾಜ್ಯಕ್ಕೆ ಬಂದು ದೀನ ದಲಿತ ದುಃಖಿತರ ಕಣ್ಣೀರು ಒರೆಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮರುವರ್ಷ ಕೂಡ ಆರು ಸಲ ಬಂದರಲ್ಲ! ಈ ಪೈಕಿ ಮಾರ್ಚ್- ಏಪ್ರಿಲ್ ಎರಡೇ ತಿಂಗಳ ನಡುವೆಯೇ ಐದು ಸಲ ಭೇಟಿ ನೀಡಿದರು. ಆಗ ಲೋಕಸಭಾ ಚುನಾವಣೆ ಇತ್ತೆಂದೂ, ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಲೆಂದು ಬಂದಿದ್ದರೆಂದು ಮೊಸರನ್ನದಲ್ಲಿ ಕಲ್ಲು ಹುಡುಕುವುದು ದೇಶದ್ರೋಹವೇ ಸರಿ.

2020ರ ಮಾರ್ಚ್-2021ರ ಜೂನ್ ನಡುವೆ ಕೋವಿಡ್ ಮಹಾಸಾಂಕ್ರಾಮಿಕದ ಎರಡು ಅಲೆಗಳು ದೇಶವನ್ನು ಅಪ್ಪಳಿಸಿದ್ದವು. ಆಗ ಪ್ರಧಾನಿಯವರು ರಾಜ್ಯದತ್ತ ತಲೆ ಹಾಕಲಿಲಲ್ಲ. ಈ ಕಾರಣಕ್ಕಾಗಿ ಅವರನ್ನು ಟೀಕಿಸುವವರಿದ್ದಾರೆ. ಆದರೆ ಈ ಅವಧಿಯು ಕೋವಿಡ್ ಸಾವು ನೋವುಗಳಿಂದ ಕೂಡಿತ್ತು. ದೇಶವನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಹೊತ್ತ ಜನಪ್ರಿಯ ನಾಯಕರು ಇಂತಹ ಅವಧಿಯಲ್ಲಿ ಮಹಾಸಾಂಕ್ರಾಮಿಕದ ನಟ್ಟ ನಡುವೆ ತಿರುಗುವುದು ಹೇಗೆ ತಾನೇ ಸಾಧ್ಯ?

ಪ್ರಧಾನಮಂತ್ರಿ ಕಾರ್ಯಾಲಯದ ಅಂತರ್ಜಾಲತಾಣದ ಪ್ರಕಾರ 2020ರ ಜನವರಿ- 2022ರ ಜೂನ್ ನಡುವೆ ಎರಡು ವರ್ಷ ಐದು ತಿಂಗಳ ಕಾಲ ಪ್ರಧಾನಿಯವರು ಕರ್ನಾಟಕದತ್ತ ಸುಳಿಯಲಿಲ್ಲ. ಬಹುತೇಕ ಎರಡೂವರೆ ವರ್ಷಗಳ ಸುದೀರ್ಘ ಅಂತರವಿದು ಹೌದು.

ಆದರೆ ಪ್ರತಿಪಕ್ಷಗಳು ವಿನಾಕಾರಣ ಈ ಸಂಗತಿಯನ್ನು ದೊಡ್ಡದು ಮಾಡಿ ರಾಜಕೀಯ ಲೇಪ ಬಳಿಯಬಾರದು.

ಮೋದಿಯವರು ಭಾರತದ ದೇಶದ ಪ್ರಧಾನಿಯೇ ವಿನಾ ಕರ್ನಾಟಕದ ಪ್ರಧಾನಿ ಅಲ್ಲ ಎಂಬ ಅಂಶ ಅರಿವುಗೇಡಿಗಳಿಗೆ ಗೊತ್ತಿಲ್ಲ. ಈ 29 ತಿಂಗಳ ಅವಧಿಯಲ್ಲಿ ಕೋವಿಡ್ ಇತ್ತು, ಬೇರೆ ಬೇರೆ ರಾಜ್ಯಗಳ ಭೇಟಿಯೂ ಇತ್ತು. ಭಾರತದ ವರ್ಚಸ್ಸನ್ನು ವಿದೇಶಗಳಲ್ಲಿ ಸಾರಿ ಹೇಳುವ ಗುರುತರ ಹೊಣೆಗಾರಿಕೆ ಅವರಿಗಿತ್ತು.

ಆಗ ಎರಡೂವರೆ ವರ್ಷ ಬರದಿದ್ದರೇನಾಯಿತು. ಅಂದಿನ ಕೊರತೆಯನ್ನು ಈಗ ಚಕ್ರಬಡ್ಡಿಯ ಸಹಿತ ತೀರಿಸುತ್ತಿದ್ದಾರೆ ಎಂಬುದೇನು ಸಾಮಾನ್ಯ ಸಂಗತಿಯೇ?

ಇದನ್ನು ಓದಿದ್ದೀರಾ?: ಕೆಟ್ಟ ಬಟ್ಟೆ ಧರಿಸುವ ಹುಡುಗಿಯರು ಶೂರ್ಪನಖಿಯಂತೆ ಕಾಣುತ್ತಾರೆ : ಬಿಜೆಪಿ ನಾಯಕ ಕೈಲಾಶ್

ಬರ-ನೆರೆಯಂತಹ ಪ್ರಕೃತಿ ವಿಕೋಪಗಳ ಕಷ್ಟದ ದಿನಗಳಲ್ಲಿ ಪ್ರಧಾನಿ ಬರಲಿಲ್ಲ ಎಂದು ದೂರಿದ ಪ್ರತಿಪಕ್ಷಗಳು ಇದೀಗ ಮೋದಿ ಮತ್ತೆ ಮತ್ತೆ ಬಂದು ಜನರ ತೆರಿಗೆ ಹಣವನ್ನು ಪೋಲು ಮಾಡತೊಡಗಿದ್ದಾರೆ ಎಂದು  ಟೀಕಿಸುತ್ತಿರುವುದು ಅನ್ಯಾಯ. ಬಡಪಾಯಿ ಮೋದಿಯವರು ಬಾರದಿದ್ದರೂ ಕಷ್ಟ, ಬಂದರೂ ಕಷ್ಟ. ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಹಣದ ನ್ಯಾಯಯುತ ಪಾಲನ್ನು, ಬಾಕಿಯನ್ನು ಅವರಂತೆ ಮನ ತೆರೆದು ನೀಡಿದ ಹೃದಯವಂತ ಮತ್ತೊಬ್ಬರಿದ್ದಾರೆಯೇ? ಈಗೀಗ ಅಮಿತ್ ಶಾ ಅವರಿಗೆ ಬುದ್ಧಿ ಹೇಳಿ ಕರ್ನಾಟಕದ ನಂದಿನಿಯನ್ನು ಗುಜರಾತಿನ ಅಮೂಲ್ ನಲ್ಲಿ ವಿಲೀನಗೊಳಿಸಿಕೊಳ್ಳುವ ಮತ್ತು ಕನ್ನಡ ನಾಡಿನಲ್ಲಿ ಒದಗಿರುವ ಹಾಲಿನ ಕೊರತೆಯನ್ನು ಅಮೂಲ್ ಹಾಲನ್ನು ಕರ್ನಾಟಕದ ಮಾರುಕಟ್ಟೆಗೆ ಹರಿಸಿರುವ ಔದಾರ್ಯ ಅವರದು. ಇಂತಹವರನ್ನು ಅನ್ಯಾಯವಾಗಿ ಅಡಕತ್ತರಿಯಲ್ಲಿ ಸಿಕ್ಕಿಸುವುದು ಧರ್ಮವಲ್ಲ.

ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಆಗಮಿಸಿದ್ದ ಪ್ರಧಾನಿಯವರು, ಸಿದ್ದರಾಮಯ್ಯ ಸರ್ಕಾರವನ್ನು ಶೇ.10ರ ಕಮಿಷನ್ ಸರ್ಕಾರ ಎಂದು ಘನತೆಯಿಂದ ಟೀಕಿಸಿದ್ದರು. ಆದರೆ ಇದೀಗ ತಮ್ಮದೇ ಸರ್ಕಾರದ ಮೇಲೆ ಕೇಳಿ ಬಂದಿರುವ ಶೇ.40ರ ಲಂಚದ ಆಪಾದನೆಯನ್ನು ಅವರು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಬಿಜೆಪಿಯ ನಿಗಿನಿಗಿ ಕೆಂಡದಂತಹ ಪ್ರಾಮಾಣಿಕತೆಯನ್ನು ಪ್ರತಿಪಕ್ಷದವರು ನಿತ್ತರಿಸುತ್ತಿಲ್ಲ. ಹೀಗಾಗಿ ಬರಿದೇ ಆಪಾದನೆಯಲ್ಲಿ ತೊಡಗಿದ್ದಾರೆಂಬ ಮೋದಿಯವರ ನಿಲುವು ಅತ್ಯಂತ ರಚನಾತ್ಮಕ.

ಪ್ರತಿಪಕ್ಷಗಳು ಸಹನೆಯಿಂದ ಒಂದು ತಿಂಗಳ ಕಾಲವಾದರೂ ಕಾಯಬೇಕು. ಒಂದು ವೇಳೆ ಆಕಸ್ಮಿಕವಾಗಿ ಕಾಂಗ್ರೆಸ್ ಗೆದ್ದು, ಸರ್ಕಾರ ರಚಿಸಿದರೆ ಕನ್ನಡಿಗರ ಕಣ್ಣೀರು ಒರೆಸಲು ಮೋದಿಯವರು ಪುನಃ ಬರುತ್ತಾರೆ. ಆಗ ಶೇ.50ರ ಸರ್ಕಾರ ಎಂದು ಟೀಕಿಸದಿದ್ದರೆ ಕೇಳಿ. ಈಗಿನ ಕೊರತೆಯನ್ನು ಆಗ ಬಡ್ಡಿ ಸಹಿತ ತುಂಬಿಕೊಡುವುದು ನಿಶ್ಚಿತ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಸ್ಥಾಪಿಸಲಾಗಿರುವ ಕೆಂಪೇಗೌಡರ ಬೃಹತ್ ಪ್ರತಿಮೆಗೆ 59 ಕೋಟಿ ರುಪಾಯಿ ವೆಚ್ಚವಾಯಿತು. ಆದರೆ ಮೋದಿಯವರಿಂದ ಅದನ್ನು ಅನಾವರಣಗೊಳಿಸುವ ಸಮಾರಂಭಕ್ಕೆ 30 ಕೋಟಿ ರುಪಾಯಿ ವೆಚ್ಚ ಮಾಡಿ ಸಾರ್ವಜನಿಕರ ತೆರಿಗೆ ಹಣ ವ್ಯರ್ಥ ಮಾಡಲಾಯಿತು ಎಂಬ ಪ್ರತಿಪಕ್ಷಗಳ ಟೀಕೆ ಅತ್ಯಂತ ಅನುಚಿತ. ಕೇವಲ ಒಂದು ಭೇಟಿಗೆ 30 ಕೋಟಿ ರುಪಾಯಿ ವೆಚ್ಚವಾದರೆ, ಮೂರೇ ತಿಂಗಳಲ್ಲಿ ಎಂಟನೇ ಸಲ ರಾಜ್ಯಕ್ಕೆ ಬರುತ್ತಿರುವ ಪ್ರಧಾನಿಯವರ ವೆಚ್ಚದ ಬಗ್ಗೆ ಮಾತನಾಡುವುದು ಕೇವಲ ಅನುಚಿತವಲ್ಲ, ದೇಶದ್ರೋಹವೇ ಸರಿ.

ರವೀಶ್ ಕುಮಾರ್ ಅವರಂತಹ ಕೆಲ ಉದ್ಧಟ ಪತ್ರಕರ್ತರಿದ್ದಾರೆ. ಮೋದಿಯವರು ಐದು ವರ್ಷಕಾಲವೂ ಬಿಜೆಪಿ ಚುನಾವಣಾ ರ್ಯಾಲಿಗಳಲ್ಲಿ ಭಾಷಣ ಮಾಡುತ್ತಿರುತ್ತಾರೆ. ಅವರು ಆಡಳಿತ ಮಾಡುವುದು ಯಾವಾಗ ಎಂಬ ತಲೆಹರಟೆ ಪ್ರಶ್ನೆಗಳ ಕೇಳುತ್ತಿರುತ್ತಾರೆ. ಇಂತಹವರ ತಿಳಿವಳಿಕೆ ಮೊಣಕಾಲ ಕೆಳಗೆ ಎನ್ನದೆ ವಿಧಿಯಿಲ್ಲ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂಫಾಲ| ಮಣಿಪುರವನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ ಎಂದ ಅಮಿತ್ ಶಾ!

ಮಣಿಪುರದ ಜನರನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ, ಆದರೆ ಬಿಜೆಪಿ ರಾಜ್ಯದ ವಿಭಜನೆಗೆ...

ರೇಟ್ ಫಿಕ್ಸ್, ಬ್ಲ್ಯಾಕ್‌ಮೇಲ್ ಮಾಡುವುದು ಕುಮಾರಸ್ವಾಮಿ ಗುಣ: ಡಿಸಿಎಂ ಡಿ.ಕೆ.ಶಿವಕುಮಾರ್

"ಕುಮಾರಸ್ವಾಮಿ ಅವರು ಯಾವ ರೇಟು, ಎಂತಹ ರೇಟು ಎಂದು ಹೇಳಬೇಕು. ಕುಮಾರಣ್ಣ,...

ಕೇಜ್ರಿವಾಲ್‌ರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗುತ್ತಿದೆ: ಭಗವಂತ್ ಮಾನ್ ಆರೋಪ

ದೆಹಲಿ ಅಬಕಾರಿ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ "ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

ಯತೀಂದ್ರ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಪೇಜ್ ಸೃಷ್ಟಿ; ಸಿದ್ದರಾಮಯ್ಯ ವಿರುದ್ಧ ಅವಹೇಳನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಕಾಂಗ್ರೆಸ್‌ ಮುಖಂಡ ಯತೀಂದ್ರ ಸಿದ್ದರಾಮಯ್ಯರ...