ಚುನಾವಣೆ 2023 | ಆಯನೂರು ಪ್ರವೇಶ; ಗಮನ ಸೆಳೆಯುತ್ತಿರುವ ಶಿವಮೊಗ್ಗ

Date:

ಆಯನೂರು ಮಂಜುನಾಥ್ ಶಿವಮೊಗ್ಗದಲ್ಲಿ ಬಹುಪ್ರಮಾಣದಲ್ಲಿರುವ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಕೋಮುವಾದದ ವಿರುದ್ಧ ವಿಶ್ವಾಸಾರ್ಹ ವ್ಯಕ್ತಿತ್ವ ಹೊಂದಿರುವ ಅವರನ್ನು ಮುಸಲ್ಮಾನ, ಕ್ರೈಸ್ಥ ಮತ್ತುದಲಿತ ಸಂಘಟನೆಗಳು ಬಹಿರಂಗವಾಗಿ ಘೋಷಿಸದಿದ್ದರೂ, ಸಂಪರ್ಕಿಸಿ ಬೆಂಬಲ ಘೋಷಿಸಿದ ಮಾಹಿತಿಯಿದೆ. ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂಬ ಸುದ್ದಿ ಇದೆ. ಆ ಮೂಲಕ ಶಿವಮೊಗ್ಗ ಕ್ಷೇತ್ರ ಎಲ್ಲರ ಗಮನ ಸೆಳೆಯುತ್ತಿದೆ.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಬಿಜೆಪಿಯ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಘೋಷಿಸುತ್ತಿದ್ದಂತೆ ಎಲ್ಲರ ಗಮನ ಸೆಳೆಯುತ್ತಿದೆ.

ಚುನಾವಣೆ ಘೋಷಣೆಯಾಗುವುದಕ್ಕಿಂತ ಕೆಲದಿನಗಳ ಹಿಂದೆ ಶಿವಮೊಗ್ಗದ ಮೂರು ಕಡೆ ಹಾರಾಡಿದ ಫ್ಲೆಕ್ಸಿನ ಬರಹ ತುಂಬ ಸುದ್ದಿ ಮಾಡಿತು. ಅದರಲ್ಲಿದ್ದುದು ಇಷ್ಟೆ: “ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸ್ಸುಗಳ ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ” ಇದರ ಮೇಲುಗಡೆ “ಹಿಂದೂ ಬಾಂಧವರಿಗೆ ಯುಗಾದಿ ಹಬ್ಬದ ಶುಭಾಶಯಗಳು, ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು”.

ಇದು ಆಯನೂರು ಮಂಜುನಾಥ್ ಅವರು ಹಾಕಿಸಿದ ಫ್ಲೆಕ್ಸುಗಳು. ಈಶ್ವರಪ್ಪನವರ ಕೋಮುಪ್ರಚೋದಕ ಹೇಳಿಕೆಗಳನ್ನು ಕುರಿತೇ ಈ ಮಾತುಗಳನ್ನು ಹೇಳಿರುವುದು ಮೇಲ್ನೋಟಕ್ಕೆಯೇ ಕಾಣುತ್ತಿತ್ತು. ಸ್ವತಃ ಬಿಜೆಪಿಯ ವಿಧಾನಪರಿಷತ್ ಸದಸ್ಯರಾಗಿ ಬಿಜೆಪಿಯ ಅನೇಕರಿಗೆ ಇತ್ತೀಚೆಗೆ ಒಪ್ಪಿತವಾಗದ ಮುಸ್ಲಿಮರಿಗೆ ಶುಭಾಶಯ ಹೇಳಿದ್ದು ಸುದ್ದಿ ಹೆಚ್ಚಾಗಲು ಇನ್ನೊಂದು ಕಾರಣವಾಯಿತು.

ರಾಜಕಾರಣಿಗಳ ಪ್ರತಿಯೊಂದು ನಡೆಯನ್ನೂ ಜನ ಅನುಮಾನದಿಂದಲೇ ನೋಡುತ್ತಾರೆ. ಅದೂ ಚುನಾವಣೆ ಸಮೀಪಿಸಿದಾಗ ವಿವಿಧ ಜಾತಿ, ಸಮುದಾಯಗಳನ್ನು ಅಪ್ಪಿಕೊಳ್ಳುವ ಹಿಂದಿನ ಉದ್ದೇಶಗಳನ್ನು ಇನ್ನಷ್ಟು ಅನುಮಾನದಿಂದ ಗಮನಿಸುತ್ತಾರೆ. ಆದರೆ ಆಯನೂರು ಅವರ ಕಳೆದ ಕೆಲವು ವರ್ಷಗಳ ನಡೆಯನ್ನು ಗಮನಿಸುತ್ತ ಬಂದವರಿಗೆ ಮೇಲೆ ಹೇಳಿದ ಫ್ಲೆಕ್ಸಿನ ಬರಹ ಅಚ್ಚರಿಯನ್ನೇನೂ ತರುವುದಿಲ್ಲ.

ಆಯನೂರು ಅವರು ವಿಧಾನಪರಿಷತ್ತಿನಲ್ಲಿ ಸರ್ಕಾರದ ಒಂದು ನಿರ್ಧಾರದ ವಿರುದ್ಧ ಕಟುವಾದ ದನಿಯಲ್ಲಿಯೇ ಹೇಳಿದರು: “ರಾಮನಗರದಲ್ಲಿ ರಾಮಮಂದಿರ ಕಟ್ಟುತ್ತೇವೆ ಎಂದು ಸರ್ಕಾರ ಹೇಳಿದ್ದು ನನಗೆ ಅಷ್ಟು ಸಮಾಧಾನ ಕೊಟ್ಟಿಲ್ಲ. ಸರ್ಕಾರದ ಕೆಲಸ ದೇವಸ್ಥಾನ ಮತ್ತು ಮಸೀದಿಗಳನ್ನು ಕಟ್ಟುವ ಕೆಲಸ ಅಲ್ಲ. ದೇವರ ಕೆಲಸಕ್ಕಿಂತ ಬಹಳ ದೊಡ್ಡದಾದ ಮತ್ತು ಮುಖ್ಯವಾದ ಬಡವರ ಕೆಲಸಗಳಿವೆ. (ಇಲ್ಲಿ) ನಿಮಗೆ (ಯಾರಿಗೂ) ಹೇಳಲು ಧೈರ್ಯವಿಲ್ಲದ್ದನ್ನು ನಾನು ಹೇಳುತ್ತೇನೆ ಕೇಳಿ”.

ರಾಜಕಾರಣದಲ್ಲಿ ದೇವರು, ಧರ್ಮ, ಜಾತಿಗಳೇ ಮುನ್ನೆಲೆಗೆ ಬಂದು ಜನರ ಮೂಲಭೂತ ಸಮಸ್ಯೆಗಳು ಮರೆಗೆ ಸರಿದ ಸಮಕಾಲೀನ ಕಾಲಘಟ್ಟದಲ್ಲಿ ಸದನದಲ್ಲಿ ವಿಧಾನಪರಿಷತ್ ಸದಸ್ಯರೊಬ್ಬರ ಈ ಮಾತುಗಳನ್ನು ಕೇಳಿ ಕರ್ನಾಟಕದ ಪ್ರಜ್ಞಾವಂತ ಜನ ರೋಮಾಂಚಿತರಾದರು. ಕುತೂಹಲದ ಸಂಗತಿಯೆಂದರೆ ಇವರು ಸಮಾಜವಾದಿ ಚಿಂತನೆ ತಮ್ಮ ಸೈದ್ಧಾಂತಿಕ ನೆಲೆ ಎಂದು ಪ್ರತಿಪಾದಿಸುವ ಕಾಂಗ್ರೆಸ್ ಅಥವಾ ಜನತಾದಳದಿಂದ ಬಂದ ಶಾಸಕರಲ್ಲ. ದೇವರು-ಧರ್ಮವೇ ತಮ್ಮ ಸೈದ್ಧಾಂತಿಕ ಮೂಲನೆಲೆ ಎಂದು ಘಂಟಾಘೋಷವಾಗಿ ಸಾರಿಕೊಂಡ ಬಿಜೆಪಿ ಪಕ್ಷದ ಶಾಸಕರು. ಈಗ ಎಡಪಂಥೀಯರಾಗಲಿ, ಕಾಂಗ್ರೆಸ್ಸಿಗರಾಗಲಿ, ಆಯನೂರು ಅವರ ನಿಲುವನ್ನು ಅಂತರಂಗದಲ್ಲಿ ಒಪ್ಪಿದರೂ ಬಹಿರಂಗವಾಗಿ ಹೇಳಲಿಕ್ಕಾಗದ ಸಂದರ್ಭವಿದೆ. ಸ್ಪಷ್ಟವಾಗಿ ಹೇಳುವುದಾದರೆ ಆಯನೂರು ಅವರ ಮಾತು ದೇವರು, ಧರ್ಮವನ್ನು ಸೈದ್ಧಾಂತಿಕವಾಗಿ ತನ್ನ ತಳಪಾಯವಾಗಿಸಿಕೊಂಡ ಬಿಜೆಪಿಯ ಬುಡವನ್ನೇ ಅಲ್ಲಾಡಿಸುವಂತಹದು.

ಇದನ್ನು ಓದಿದ್ದೀರಾ?: ಕನ್ನಡಿಗರ ಕಷ್ಟಗಳಿಗೆ ಕರಗಿ ಮೂರೇ ತಿಂಗಳಲ್ಲಿ ಇಗೋ, ಎಂಟನೆಯ ಸಲ ಬರ್ತಿದ್ದಾರೆ ಮೋದಿ!

ಸದನದಲ್ಲಿನ ಆಯನೂರರ ಈ ಸಮಾಜವಾದಿ ನಿಲುವಿನ ಮಾತುಗಳನ್ನು ಕೇಳಿ ಕರ್ನಾಟಕದ ಮೂಲೆಮೂಲೆಗಳಿಂದ ಅವರಿಗೆ ಮೊಬೈಲಿನಲ್ಲಿ ಅಭಿನಂದನೆಗಳ ಸುರಿಮಳೆಯಾಯಿತು. ಈ ಮೊಬೈಲ್ ಕರೆಗಳು ಬಂದಿದ್ದು ಪ್ರಗತಿಪರ ಮತ್ತು ಸಮಾಜವಾದಿ ಚಿಂತಕರ ವಲಯದಿಂದ. ಅವರಲ್ಲಿ ಒಬ್ಬರು ಶಿವಮೊಗ್ಗದ ಪ್ರಸಿದ್ಧ ವೈದ್ಯರಾದ ಡಾ.ಯು.ಆರ್.ಅನಿಲ್ ಕುಮಾರ್ ಅವರು. ಇವರು ತಮ್ಮ ಕೊನೆಗಾಲದವರೆಗೂ ಕೋಮುವಾದದ ವಿರುದ್ಧ ಸಮರ ಸಾರಿದ್ದ ಲೇಖಕ ಡಾ.ಯು.ಆರ್.ಅನಂತಮೂರ್ತಿ ಅವರ ತಮ್ಮ. ಬಹುಷಃ ಅನಂತಮೂರ್ತಿ ಅವರು ಈ ಸಂದರ್ಭದಲ್ಲಿ ಇದ್ದಿದ್ದರೂ ಅವರೂ ಕೂಡ ಆಯನೂರು ಅವರಿಗೆ ಫೋನ್ ಮಾಡಿ ಇದೇ ರೀತಿ ತಮ್ಮ ಅಭಿನಂದನೆಗಳನ್ನು ತಿಳಿಸುತ್ತಿದ್ದರು ಎನಿಸುತ್ತದೆ.

ಈ ಸರ್ಕಾರದ ಕೊನೆಯ ಅವಧಿಯಲ್ಲಿ ಮಂಡಿಸಿದ ಕಾರ್ಮಿಕ ಕಾನೂನಿಗೆ ತಿದ್ದುಪಡಿಯನ್ನು ಆಡಳಿತ ಪಕ್ಷದ ಆಯನೂರು ತೀವ್ರವಾಗಿ ವಿರೋಧಿಸಿದರು. ಕಾರ್ಖಾನೆ, ಗಾರ್ಮೆಂಟ್ಸು ಇತ್ಯಾದಿ ಕಡೆಗಳಲ್ಲಿ ಪುರುಷ, ಮಹಿಳಾ ಕಾರ್ಮಿಕರು ಈವರೆಗೆ ಇದ್ದ ದಿನಕ್ಕೆ ೮ ಗಂಟೆಯ ಬದಲಿಗೆ ೧೨ ಗಂಟೆಗಳ ಕಾಲ ದುಡಿಯಬೇಕು ಎಂಬುದು ಅಮಾನವೀಯವಾದುದು ಎಂದು ಖಂಡಿಸಿ ಸಭಾತ್ಯಾಗ ಮಾಡಿದರು. ಆಯನೂರು ವಿರೋಧ ವ್ಯಕ್ತಪಡಿಸಿದ ನಂತರ ಕೆಲವು ವಿರೋಧಪಕ್ಷದ ಸದಸ್ಯರು ದನಿಗೂಡಿಸಿದರು. ಗುತ್ತಿಗೆ ಮತ್ತು ಹೊರಗುತ್ತಿಗೆ ಆರೋಗ್ಯ ಕಾರ್ಯಕರ್ತರ ಪರವಾಗಿ ನಿರಂತರವಾಗಿ ಸದನದಲ್ಲಿ ದನಿಎತ್ತಿ ಅವರ ಸಂಬಳ, ಸೌಲಭ್ಯ ಹೆಚ್ಚಳವಾಗುವಂತೆ ನೋಡಿಕೊಂಡರು. ಕಟ್ಟಡ ಕಾರ್ಮಿಕರ, ಪೌರ ಕಾರ್ಮಿಕರ ಪರವಾಗಿ, ಅತಿಥಿ ಉಪನ್ಯಾಸಕರ ಪರವಾಗಿ ಸದನದಲ್ಲಿ ದನಿ ಎತ್ತುತ್ತ ಅವರಿಗೆ ಸಾಧ್ಯವಾದ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಸದಾ ನಿಷ್ಢುರವಾಗಿ ಮಾತನಾಡುತ್ತ ತಮ್ಮ ಸರ್ಕಾರಕ್ಕೆ ವಿರೋಧದ ಬಿಸಿ ಮುಟ್ಟಿಸುತ್ತಿದ್ದ ಆಯನೂರು ಮಂಜುನಾಥರನ್ನು ಉದ್ದೇಶಿಸಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ಸದನದಲ್ಲಿಯೇ “ಲೇ ಮಂಜಣ್ಣ ನೀನು ನಮ್ಮ ಕಡೆ ಬಾರೋ” ಎಂದು ತಮಾಷೆಗೆ ಹೇಳಿದ್ದರು.

ಆಯನೂರ್ ಅವರು ಕಾರ್ಮಿಕ ಸಂಘಟನೆಯ ಮುಖಂಡನಾಗಿ ಬೆಳೆದು ಬಂದವರು. ಈಗಲೂ ಅವರು ಹತ್ತು ಹಲವು ಸಂಘಟನೆಗಳನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಆರೋಗ್ಯ ಕಾರ್ಯಕರ್ತರ (ಎನ್.ಎಚ್.ಎಮ್) ಸಂಘಟನೆ, ಕಟ್ಟಡ ಕಾರ್ಮಿಕರ ಸಂಘಟನೆ, ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಇತ್ಯಾದಿ. ಇಲ್ಲೆಲ್ಲ ಕೇವಲ ಹೆಸರಿಗೆ ಮಾತ್ರ ಇರದೆ ಈ ಸಂಘಟನೆಗಳ ಪ್ರತಿಭಟನೆಗಳಲ್ಲಿ, ಸಭೆಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದಾರೆ. ಸದನದಲ್ಲಿಯೂ ಗಟ್ಟಿದನಿ ಮೊಳಗಿಸಿದ್ದಾರೆ. ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿರುವ ಅವರು ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯರಾಗಿ, ಜನರಿಂದ ನೇರವಾಗಿ ಆಯ್ಕೆಯಾಗಿ ವಿಧಾನಸಭಾ ಸದಸ್ಯರಾಗಿ, ಕಾಂಗ್ರೆಸ್ಸಿನಿಂದ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಆಯನೂರರು ಶಿವಮೊಗ್ಗದಲ್ಲಿ ಬಹುಪ್ರಮಾಣದಲ್ಲಿರುವ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಕೋಮುವಾದದ ವಿರುದ್ಧ ವಿಶ್ವಾಸಾರ್ಹ ವ್ಯಕ್ತಿತ್ವ ಹೊಂದಿರುವ ಆಯನೂರರನ್ನು ಮುಸಲ್ಮಾನ ಮತ್ತು ಕ್ರೈಸ್ಥ ಸಮುದಾಯದವರೂ ಗಮನಿಸುತ್ತಿದ್ದಾರೆ. ದಲಿತ ಸಂಘಟನೆಗಳು ಬಹಿರಂಗವಾಗಿ ಘೋಷಿಸದಿದ್ದರೂ ಆಯನೂರರನ್ನು ಸಂಪರ್ಕಿಸಿ ಬೆಂಬಲ ಘೋಷಿಸಿದ ಮಾಹಿತಿಯಿದೆ. ಗುತ್ತಿಗೆ ಆರೋಗ್ಯ ಕಾರ್ಯಕರ್ತರು, ಕಟ್ಟಡ ಕಾರ್ಮಿಕರು ಮತ್ತು ಅತಿಥಿ ಉಪನ್ಯಾಸಕರ ದೊಡ್ಡ ಪಡೆಯೊಂದು ಆಯನೂರು ಪರ ಪ್ರಚಾರಕ್ಕೆ ಅಣಿಯಾಗಿ ನಿಂತಿದೆ.

ಆಯನೂರರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿಯೇ ಹಲವು ದಿನಗಳಿಂದ ಓಡಾಡುತ್ತಿದೆ. ಮಾಜಿ ಶಾಸಕ ಪ್ರಸನ್ನಕುಮಾರ್ ಆಯನೂರರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಒಟ್ಟಿನಲ್ಲಿ ಆಯನೂರು ಚುನಾವಣೆಗೆ ನಿಲ್ಲಲು ರೆಡಿಯಾಗಿ ನಿಂತಿದ್ದಾರೆ. ಆ ಮೂಲಕ ಶಿವಮೊಗ್ಗ ಕ್ಷೇತ್ರ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ.

ಡಾ. ಸರ್ಜಾಶಂಕರ್ ಹರಳಿಮಠ
+ posts

ಲೇಖಕರು

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಜೋರಾಂ ಮತ ಎಣಿಕೆ: ಬಹುಮತದತ್ತ ಝೆಡ್‌ಪಿಎಂ

ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಒಟ್ಟು...

ವಿರೋಧಪಕ್ಷದವರ ಜಂಟಿ ಹೋರಾಟಕ್ಕೂ ಉತ್ತರಿಸಲು ಸರ್ಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಪ್ರಾರಂಭ ಗ್ಯಾರಂಟಿ ಯೋಜನೆಗಳೆಲ್ಲ ಬಡವರ ಕಾರ್ಯಕ್ರಮಗಳು ಅಧಿವೇಶನದಲ್ಲಿ...

ಉತ್ತರ ಕರ್ನಾಟಕದವರು ಗುಲಾಮರಲ್ಲ, ಬಿಜೆಪಿ ಶಾಸಕಾಂಗ ಸಭೆಗೆ ಹೋಗಲ್ಲ : ಯತ್ನಾಳ್ ಕಿಡಿ

ನ್ಯಾಯ ಕೊಡುವವರೆಗೂ ಬಿಜೆಪಿ ಶಾಸಕಾಂಗ ಸಭೆಗೆ ಹೋಗಲ್ಲ ಮೈಸೂರು ಭಾಗದ...

ಬೆಳಗಾವಿ ಅಧಿವೇಶನ | ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಉಡುಗೊರೆ: ಸ್ಪೀಕರ್

ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ದಿನನಿತ್ಯ ಬೆಳಗ್ಗೆ 11...