- ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಹೆಸರು ಇರಲಿದೆ
- ಸುಧಾಕರ್ ಎಚ್ಚರಿಕೆಯಿಂದ ಇದ್ದರೆ ಉತ್ತಮ
ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ನಾಳೆ ಅಥವಾ ಗುರುವಾರ ಬಿಡುಗಡೆ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ದೇವೆಗೌಡರು ದೆಹಲಿಯಿಂದ ವಾಪಸಾದ ನಂತರ ಪಟ್ಟಿ ಹೊರಬರಲಿದೆ ಎಂದಿದ್ದಾರೆ.
ಎರಡನೇ ಪಟ್ಟಿ ಬಿಡುಗಡೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಹಾಸನ ಕ್ಷೇತ್ರವನ್ನೂ ಸೇರಿಸಿ ಪಟ್ಟಿ ಬಿಡುಗಡೆ ಮಾಡುತ್ತೇವೆ. ಆ ಕ್ಷೇತ್ರ ಬಿಟ್ಟು ಮಾಡಿದರೆ ಇನ್ನೊಂದು ಕಥೆ ಹುಟ್ಟಿಕೊಳ್ಳುತ್ತದೆ” ಎಂದು ಹೇಳಿದ್ದಾರೆ.
“ಮೊದಲ ಪಟ್ಟಿ ಬಿಡುಗಡೆಯಾದಗಲೂ ಯಾವುದೇ ಸಮಸ್ಯೆ ಇರಲಿಲ್ಲ. ಎರಡನೇ ಪಟ್ಟಿ ವೇಳೆ ಹಾಸನ ವಿಧಾನಸಭಾ ಕ್ಷೇತ್ರದ್ದು ಹೆಚ್ಚು ಪ್ರಚಾರವಾಗಿದೆ. ಹಾಸನ ವಿಚಾರದಿಂದ ಜನತಾದಳಕ್ಕೂ ಹೆಚ್ಚು ಪ್ರಚಾರವಾಗಿದೆ” ಎಂದು ಹೇಳಿದ್ದಾರೆ.
“ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಶೇ. 2 ರಿಂದ 3ರಷ್ಟು ಮತ ಪ್ರಮಾಣ ಹೆಚ್ಚಾಗಲಿದೆ. ನಮ್ಮ ಗುರಿ ಮುಟ್ಟುವುದಕ್ಕೆ ನಾವು ಯಾವುದೇ ದುಡುಕಿನ ತೀರ್ಮಾನ ಮಾಡುವುದಿಲ್ಲ. ಗೆಲ್ಲುವ ಮಾನದಂಡದಲ್ಲೇ ಟಿಕೆಟ್ ಕೊಡುತ್ತೇವೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಕೈ’ ನಾಯಕರ ಬೆದರಿಸಲು ಬಿಜೆಪಿ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ಛೂ ಬಿಟ್ಟಿದೆ; ಸಿದ್ದರಾಮಯ್ಯ ಕಿಡಿ
ಕಾಂಗ್ರೆಸ್ ಪಟ್ಟಿ ಬಿಡುಗಡೆ ಆಗದ ಹಿನ್ನೆಲೆ ಜೆಡಿಎಸ್ ಪಟ್ಟಿ ವಿಳಂಬ ಆಗುತ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿ, “ಅದರ ಬಗ್ಗೆ ನಾನು ಚಿಂತೆ ಮಾಡಿಲ್ಲ. ನಾವು ನಮ್ಮದೇ ರೀತಿಯಲ್ಲಿ ಅಭ್ಯರ್ಥಿಗಳನ್ನು ತೀರ್ಮಾನ ಮಾಡುತ್ತೇವೆ” ಎಂದಿದ್ದಾರೆ.
ಜೆಡಿಎಸ್ 120 ಸ್ಥಾನ ಗೆದ್ದರೆ ರಾಜಕೀಯ ನಿಲ್ಲಿಸುತ್ತೇನೆ ಎಂದಿರುವ ಸಚಿವ ಕೆ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿ, “ಹೆಚ್ಚು ಕಡಿಮೆ ಆಗಿ ಅವರು ರಾಜಿನಾಮೆ ಕೊಡಬೇಕಾದ ಸಂದರ್ಭ ಬಂದುಬಿಟ್ಟಾತು. ಅವರು ಮಾಡಿದ ಅನಾಚಾರ ಜನರಿಗೆ ಗೊತ್ತಿದೆ” ಎಂದು ಕಿಡಿಕಾರಿದ್ದಾರೆ.
“ರೆಫ್ರಿಜರೇಟರ್, ಸ್ಟವ್ ಎಲ್ಲ ಹಂಚುತ್ತಿದ್ದಾರೆ. ಇಷ್ಟೆಲ್ಲಾ ಕೊಡುತ್ತಿದ್ದಾರೆ ಎಂದರೆ; ಇವರು ಇನ್ನೆಷ್ಟು ಶ್ರೀಮಂತರು ಅಂತ ಜನರು ಮನೇಲಿ ಕೂರಿಸಿಬಿಟ್ಟರೆ ಕಷ್ಟ. ಎಚ್ಚರಿಕೆಯಿಂದ ಇದ್ದರೆ ಉತ್ತಮ” ಎಂದು ತಿರುಗೇಟು ನೀಡಿದ್ದಾರೆ.