- ಅವೈಜ್ಞಾನಿಕ ಕಾಮಗಾರಿಯಲ್ಲ ಎಂದ ಅಧಿಕಾರಿಗಳು
- ಮಳೆಯ ನೀರು ಹೊರಗೆ ಚೆಲ್ಲಲು ಸಿಬ್ಬಂದಿ ಹರಸಾಹಸ
ಕಾಮಗಾರಿ ಪೂರ್ಣವಾಗದಿದ್ದರೂ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಂದ ತರಾತುರಿಯಲ್ಲಿ ಉದ್ಘಾಟನೆಯಾದ ವೈಟ್ ಫೀಲ್ಡ್ ಹಾಗೂ ಕೆ ಆರ್ ಪುರಂ ಮಾರ್ಗದ ನಲ್ಲೂರಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅವೈಜ್ಞಾನಿಕ ಕಾಮಗಾರಿ ಬೆಳಕಿಗೆ ಬಂದಿದೆ.
ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಯಾಗಿದ್ದ ನೇರಳೆ ಮಾರ್ಗದ ನಲ್ಲೂರಳ್ಳಿ ಮೆಟ್ರೋ ನಿಲ್ದಾಣದಲ್ಲಿ ಏ.3ರ ರಾತ್ರಿ ಸುರಿದ ಮಳೆಗೆ, ಟಿಕೆಟ್ ನೀಡುವ ಸ್ಥಳ ಮತ್ತು ರೈಲಿಗಾಗಿ ಪ್ರಯಾಣಿಕರು ಕಾಯುವ ಸ್ಥಳದಲ್ಲಿ ನೀರು ತುಂಬಿಕೊಂಡಿತ್ತು. ಇದರಿಂದ ಪ್ರಯಾಣಿಕರು ಭಾರೀ ಸಮಸ್ಯೆ ಅನುಭವಿಸಬೇಕಾಯಿತು.
ನಲ್ಲೂರಳ್ಳಿ ಮೆಟ್ರೋ ನಿಲ್ದಾಣದ ಅವ್ಯವಸ್ಥೆಯ ಫೋಟೊ ಮತ್ತು ವಿಡಿಯೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ನೆಟ್ಟಿಗರು, ಮೆಟ್ರೋ ನಿಲ್ದಾಣದ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಗೀಳಿಗಾಗಿ ಇನ್ನೂ ಕಾಮಗಾರಿಯೇ ಪೂರ್ಣವಾಗದ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ನೀತಿ ಸಂಹಿತೆ ಜಾರಿಯಾದರೂ ರಾರಾಜಿಸುತ್ತಿವೆ ಫೋಟೊ-ಬ್ಯಾನರ್ ಗಳು: ದಂಡದ ಎಚ್ಚರಿಕೆ
ಕೆಲವು ದಿನಗಳ ಹಿಂದೆ ಕೆ ಆರ್ ಪುರಂ ಮೆಟ್ರೋ ಕಾಮಗಾರಿಯಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಇದೀಗ ಮಳೆ ನೀರು ತುಂಬಿಕೊಂಡಿದೆ. ಅದಲ್ಲದೆ ಮೆಟ್ರೋ ರೈಲಿಗಾಗಿ ಕಾಯುವ ನಿಲ್ದಾಣದಲ್ಲಿ ನಿಲ್ಲಲು ಸಹ ವ್ಯವಸ್ಥಿತವಾದ ಜಾಗ ಇಲ್ಲ. ಅಲ್ಲಿಯೂ ಮಳೆ ಧಾರಕಾರವಾಗಿ ಸುರಿಯುತ್ತಿದೆ. ಇದು 40% ಸರ್ಕಾರದ ಭ್ರಷ್ಟಚಾರ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.
ಕಾಮಗಾರಿ ಅವೈಜ್ಞಾನಿಕವಾಗಿಲ್ಲ: ಸ್ಪಷ್ಟನೆ
ಈ ಕುರಿತು ಬಿಎಂಆರ್‌ಸಿಎಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀವಾಸ್, ಈದಿನ.ಕಾಮ್ ಜೊತೆಗೆ ಮಾತನಾಡಿ, “ಇದು ಅವೈಜ್ಞಾನಿಕ ಕಾಮಗಾರಿಯಲ್ಲ. ಮಳೆ ಜೋರಾಗಿ ಬಂದಿರುವುದೇ ಇದಕ್ಕೆ ಕಾರಣ. ಮಳೆಯ ನೀರು ಹೊರಗಿನಿಂದ ಮೆಟ್ರೋ ನಿಲ್ದಾಣದ ಒಳಕ್ಕೆ ಹರಿದು ಬಂದಿದೆ. ಮಳೆ ನೀರನ್ನು ಹೊರಗೆ ಹಾಕಿ, ಈಗ ಅಲ್ಲಿ ಸ್ವಚ್ಛ ಮಾಡಲಾಗಿದೆ” ಎಂದು ಸ್ಪಷ್ಟನೆ ನೀಡಿದರು.