ರೈಲು ದುರಂತಕ್ಕೆ 288 ಮಂದಿ ಪ್ರಯಾಣಿಕರು ಬಲಿ
ತಲಾ 10 ಲಕ್ಷ ಪರಿಹಾರ ಘೋಷಿಸಿರುವ ರೈಲ್ವೆ ಸಚಿವಾಲಯ
ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಭೀಕರ ಅಪಘಾತದಲ್ಲಿ 288 ಮಂದಿ ಪ್ರಯಾಣಿಕರು ಮೃತ ಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೃತ ಪಟ್ಟವರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ಒಡಿಶಾ ಸರ್ಕಾರ ಪರಿಹಾರ ಘೋಷಿಸಿದೆ.
ಭಾನುವಾರ ಭುವನೇಶ್ವರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿರುವ ಪ್ರತಿ ವ್ಯಕ್ತಿಗಳ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಘೋಷಿಸಿದ್ದು, ತೀವ್ರವಾಗಿ ಗಾಯಗೊಂಡಿರುವವರಿಗೆ ತಲಾ ಒಂದು ಲಕ್ಷ ಪರಿಹಾರ ನೀಡುವುದಾಗಿ” ತಿಳಿಸಿದ್ದಾರೆ.
ರೈಲ್ವೆ ಸಚಿವಾಲಯ ಕೂಡ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಪ್ರತಿ ವ್ಯಕ್ತಿಗೆ 2 ಲಕ್ಷ ಮತ್ತು ಸಣ್ಣ ಪುಟ್ಟ ಗಾಯ ಆಗಿರುವವರಿಗೆ ತಲಾ 50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿತ್ತು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಅಪಘಾತದಲ್ಲಿ ಮೃತಪಟ್ಟ ತಮ್ಮ ರಾಜ್ಯದ ವ್ಯಕ್ತಿಗಳ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಭಾನುವಾರ ರೈಲು ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಅವರು ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು. ತೀವ್ರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ಮತ್ತು ಸಣ್ಣ ಪುಟ್ಟ ಗಾಯ ಆಗಿರುವವರಿಗೆ ತಲಾ 50 ಸಾವಿರ ನೀಡುವುದಾಗಿ ತಿಳಿಸಿದ್ದರು.