ನಮ್ಮ ಸಚಿವರು | ‘ಅಂದರಿಕಿ ಮಂಚಿವಾಳ್ಳು’ ರೆಡ್ಡಿ: ಉಗ್ರ ಪಕ್ಷ ನಿಷ್ಠೆ; ವಿರೋಧಿಗಳೊಂದಿಗೂ ‘ಸ್ನೇಹ’     

Date:

ಉಗ್ರ ಪಕ್ಷ ನಿಷ್ಠೆಯ ರಾಮಲಿಂಗಾರೆಡ್ಡಿ ಡಿ ಕೆ ಶಿವಕುಮಾರ್ ಅವರ ಆತ್ಮೀಯರು. ಹಾಗೆಂದು ಸಿದ್ದರಾಮಯ್ಯನವರ ಜೊತೆಗೆ ವಿರೋಧ ಕಟ್ಟಿಕೊಳ್ಳುವವರಲ್ಲ. ತಮ್ಮ ಸ್ವಂತ ಪಕ್ಷದವರ ಜೊತೆ ಇರಲಿ, ವಿರೋಧ ಪಕ್ಷಗಳ ಮುಖಂಡರೊಂದಿಗೂ ಅವರು ವೈರತ್ವ ಸಾಧಿಸುವವರಲ್ಲ. ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಅವರಿಗೆ ಮಂತ್ರಿಗಿರಿ ದಯಪಾಲಿಸಲಾಗಿದೆ ಎನ್ನುವ ಸುದ್ದಿ ಇದೆ.    

ಸಿದ್ದರಾಮಯ್ಯ ಅವರ ನೂತನ ಸಂಪುಟದಲ್ಲಿ ರಾಮಲಿಂಗಾರೆಡ್ಡಿ ಸಾರಿಗೆ ಮತ್ತು ಮುಜರಾಯಿ ಸಚಿವರು. ಮೊದಲಿಗೆ ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆಯನ್ನು ಮಾತ್ರವೇ ನೀಡಲಾಗಿತ್ತು. ನಷ್ಟದಲ್ಲಿರುವ ಖಾತೆ ತನಗೆ ಬೇಡ ಎಂದು ಮೊಂಡು ಹಿಡಿದ ಅವರನ್ನು ಆತ್ಮೀಯರಾದ ಡಿ ಕೆ ಶಿವಕುಮಾರ್ ಸಂತೈಸಿ, ಮುಜರಾಯಿ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಸಂತೈಸಿದ್ದಾರೆ.

ರಾಮಲಿಂಗಾರೆಡ್ಡಿ ಒಂದು ರೀತಿ ನಿಷ್ಠಾವಂತ ಕಾಂಗ್ರೆಸ್ಸಿಗ. ಕಾಂಗ್ರೆಸ್ ಜೆಡಿಎಸ್ ಸರ್ಕಾರ ಇದ್ದಾಗ ರಾಮಲಿಂಗಾ ರೆಡ್ಡಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆಗ ಅವರು ಬಿಜೆಪಿಗೆ ಹೋಗುತ್ತಾರೆ ಎನ್ನುವ ಗುಸುಗುಸು ಕೂಡ ಹಬ್ಬಿತ್ತು. ಅದು ಬಿಟ್ಟರೆ ರಾಮಲಿಂಗಾರೆಡ್ಡಿ ಎಂದೂ ಪಕ್ಷ ಬಿಡುವ ಬಗ್ಗೆ ಯೋಚಿಸಿದವರೂ ಅಲ್ಲ. ಅವರು ಬೆಂಗಳೂರಿನ ‘ಕಾಂಗ್ರೆಸ್ ಮುಖ’ ಎಂದೇ ಖ್ಯಾತರಾದವರು.

69 ವರ್ಷದ ರಾಮಲಿಂಗಾ ರೆಡ್ಡಿ ಇದುವರೆಗೆ ಎಂಟು ಬಾರಿ ಶಾಸಕರಾಗಿದ್ದಾರೆ. 1989ರ ಮೊದಲ ವಿಧಾನಸಭಾ ಚುನಾವಣೆಯಿಂದ ಹಿಡಿದು 2023ರ ಚುನಾವಣೆವರೆಗೂ ಅವರು ಎಂದೂ ಸೋತವರೇ ಅಲ್ಲ. ಮೊದಲಿಗೆ ಜಯನಗರ ಅವರ ಕ್ಷೇತ್ರವಾಗಿತ್ತು. ಅಲ್ಲಿ ಅವರು ನಾಲ್ಕು ಬಾರಿ ಶಾಸಕರಾಗಿದ್ದರು. 2008ರ ನಂತರ ಬಿಟಿಎಂ ಲೇಔಟ್‌ಗೆ ಬಂದ ಅವರು, ಅಲ್ಲಿಂದಲೂ ನಾಲ್ಕು ಬಾರಿ ಶಾಸಕರಾಗಿದ್ದಾರೆ.

ರಾಮಲಿಂಗಾ ರೆಡ್ಡಿ ಇದುವರೆಗೆ ಐದು ಬಾರಿ ಸಚಿವರಾಗಿದ್ದಾರೆ. ಎಂ ವೀರಪ್ಪ ಮೊಯ್ಲಿ, ಎನ್ ಧರ್ಮಸಿಂಗ್, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ ಅವರ ಸಂಪುಟಗಳಲ್ಲಿ ಅವರು ಸಚಿವರಾಗಿ ವಿವಿಧ ಖಾತೆಗಳನ್ನು ನಿಭಾಯಿಸಿದ್ದಾರೆ. 2013ರಲ್ಲಿ ಅವರು ಗೃಹಸಚಿವರಾಗಿ ಕೆಲಸ ಮಾಡಿದ್ದರು.

ತಮ್ಮ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ವಿಶ್ವಾಸವನ್ನೂ ಗಳಿಸಿರುವುದು ಅವರ ಹೆಗ್ಗಳಿಕೆ. ಅವರು ತಲಾ ನಾಲ್ಕು ಬಾರಿ ಶಾಸಕರಾಗಿದ್ದರೂ ಹಿಂದಿನ ಜಯನಗರವಾಗಲಿ, ಈಗಿನ ಬಿಟಿಎಂ ಲೇಔಟ್ ಆಗಲಿ, ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಇಷ್ಟಾದರೂ ಅವರು ತನ್ನ ಕ್ಷೇತ್ರಗಳಲ್ಲಿ ತಕ್ಕ ಮಟ್ಟಿಗೆ ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದಾರೆ. ಹೀಗಾಗಿಯೋ ಏನೋ, ರಾಮಲಿಂಗಾ ರೆಡ್ಡಿ ಎಂದೂ ಆಡಳಿತ ವಿರೋಧಿ ಅಲೆಗೆ ಗುರಿಯಾದವರಲ್ಲ. ಕ್ಷೇತ್ರದಲ್ಲಾಗಲಿ, ಪಕ್ಷದಲ್ಲಾಗಲಿ ಅವರ ವಿರುದ್ಧ ಮಾತನಾಡುವವರು ತೀರಾ ಕಡಿಮೆ. ಅಷ್ಟರ ಮಟ್ಟಿಗೆ ರಾಮಲಿಂಗಾರೆಡ್ಡಿ ಒಬ್ಬ ನಿಜವಾದ ಮುತ್ಸದ್ದಿ.

ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಬಡವರ ಗ್ಯಾರಂಟಿ ಮತ್ತು ಉಳ್ಳವರ-ಉಂಡವರ ವಿಕೃತಿ

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ರಾಮಲಿಂಗಾರೆಡ್ಡಿ ಡಿ ಕೆ ಶಿವಕುಮಾರ್ ಅವರ ಆತ್ಮೀಯರು. ಹಾಗೆಂದು ಸಿದ್ದರಾಮಯ್ಯನವರ ಜೊತೆಗೆ ವಿರೋಧ ಕಟ್ಟಿಕೊಳ್ಳುವವರಲ್ಲ. ತಮ್ಮ ಸ್ವಂತ ಪಕ್ಷದವರ ಜೊತೆ ಇರಲಿ, ವಿರೋಧ ಪಕ್ಷಗಳ ಮುಖಂಡರೊಂದಿಗೂ ರಾಮಲಿಂಗಾರೆಡ್ಡಿ ವೈರತ್ವ ಸಾಧಿಸುವವರಲ್ಲ. ಅಂದರಿಕಿ ಮಂಚಿವಾಡು ಎಂಬಂತಿರುವ ಅವರು ಬಿಜೆಪಿಯ ಆರ್ ಅಶೋಕ್‌ ಜೊತೆಗೂ ಆತ್ಮೀಯ ಸಂಬಂಧ ಹೊಂದಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಿರಂತರ ಗೆಲ್ಲುವುದಕ್ಕೋಸ್ಕರ ಬಿಜೆಪಿಯ ಅನಂತ್‌ಕುಮಾರ್ ರಾಮಲಿಂಗಾರೆಡ್ಡಿ ಜೊತೆ ‘ಸ್ನೇಹ’ ಕಾಪಾಡಿಕೊಂಡಿದ್ದದ್ದು ಕೂಡ ಕಾರಣವಾಗಿತ್ತು ಎಂದು ಕೆಲವರು ಹೇಳುತ್ತಾರೆ. ಆದರೆ, ಅವೆಲ್ಲ ಕೇವಲ ಗಾಳಿಸುದ್ದಿಗಳು, ಅವಕ್ಕೆಲ್ಲ ಯಾವ ಆಧಾರವೂ ಇಲ್ಲ ಎಂದು ರಾಮಲಿಂಗಾರೆಡ್ಡಿಯವರ ಆಪ್ತರು ಹೇಳುತ್ತಾರೆ.  

ಇದೆಲ್ಲ ಏನೇ ಇದ್ದರೂ ಯಾವುದೇ ವಿವಾದಕ್ಕೆ ಗುರಿಯಾಗದೇ, ಯಾವುದೇ ಹಗರಣಕ್ಕೂ ಸಿಲುಕಿಕೊಳ್ಳದೇ ಸುಮಾರು ನಾಲ್ಕು ದಶಕಗಳ ಕಾಲ ರಾಜಕಾರಣ ಮಾಡಿರುವುದೇ ಅವರ ಹೆಚ್ಚುಗಾರಿಕೆ ಎಂದು ಕೆಲವರು ಹೇಳುತ್ತಾರೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಡೆಯಿಂದ ಭಿನ್ನ ರೀತಿಯ ಮಾಹಿತಿ ನಮಗೆ ಸಿಗುತ್ತದೆ.    

ಬೆಂಗಳೂರು ಮೂಲದ ರಾಜಕಾರಣಿಯಾದ ರಾಮಲಿಂಗಾರೆಡ್ಡಿ, ಬಿಬಿಎಂಪಿ ಮೇಲೆ ಮೊದಲಿನಿಂದಲೂ ಹಿಡಿತ ಹೊಂದಿದ್ದಾರೆ. ಯಾವ ಸರ್ಕಾರವೇ ಇದ್ದರೂ ಪಾಲಿಕೆಯಲ್ಲಿ ರಾಮಲಿಂಗಾರೆಡ್ಡಿಯ ಪ್ರಭಾವ ಇರುತ್ತದೆ ಎನ್ನುವ ಮಾತುಗಳಿವೆ. ಬೆಂಗಳೂರು ಮಹಾನಗರ ಪಾಲಿಕೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಬದಲಾದಾಗ ಅದರ ಮೊದಲ ಮೇಯರ್ ಆಗಿದ್ದವರು ರಾಮಲಿಂಗಾರೆಡ್ಡಿ ಅವರ ಶಿಷ್ಯ, ಅವರ ಕುಲಬಾಂಧವ ಎಸ್ ಕೆ ನಟರಾಜ್.

ಬಿಬಿಎಂಪಿಯಲ್ಲಿ ಕಸದ ಗುತ್ತಿಗೆ ಪಡೆದವರಲ್ಲಿ ಹೆಚ್ಚಿನವರು ರಾಮಲಿಂಗಾರೆಡ್ಡಿ ಅವರ ಕುಲಬಾಂಧವರು. ಚಿಲ್ಲರೆ ಸಂಬಳಕ್ಕೆ ಆಂಧ್ರದ ಚಿತ್ತೂರು, ಮದನಪಲ್ಲಿ ಕಡೆಗಳಿಂದ ದಲಿತರನ್ನು ಕರೆತಂದು ಬೆಂಗಳೂರಿನಲ್ಲಿ ಪೌರ ಕಾರ್ಮಿಕರಾಗಿ ದುಡಿಯಲು ಹಚ್ಚಿದವರೇ ಆ ಗುತ್ತಿಗೆದಾರರು. ಇವತ್ತಿಗೂ ಬೆಂಗಳೂರಿನ ಬೀದಿಗಳಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರ ಪೈಕಿ ಹೆಚ್ಚಿನವರು ತೆಲುಗು ಮಾತನಾಡುವವರಿದ್ದಾರೆ ಎಂದರೆ, ಅದಕ್ಕೆ ರಾಮಲಿಂಗಾರೆಡ್ಡಿಯವರ ಕುಲಬಾಂಧವರೇ ಕಾರಣ. ಹಾಗೆಯೇ ಬೆಂಗಳೂರಿಗೆ ‘ಗಾರ್ಬೇಜ್ ಸಿಟಿ’ ಎನ್ನುವ ಕೆಟ್ಟ ಹೆಸರು ಬರುವುದಕ್ಕೆ ಕಾರಣವಾದ ಕಸದ ಮಾಫಿಯಾ ಹಿಂದಿನ ಶಕ್ತಿಗಳೂ ಅವರೇ ಎನ್ನುವ ಆರೋಪಗಳಿವೆ.                        

ಮುಂದಿನ ದಿನಗಳಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಮಲಿಂಗಾರೆಡ್ಡಿಗೆ ಈ ಬಾರಿ ಮಂತ್ರಿಗಿರಿ ದಯಪಾಲಿಸಲಾಗಿದೆ ಎನ್ನುವ ಸುದ್ದಿ ಇದೆ. ಅದರಲ್ಲಿ ರಾಮಲಿಂಗಾರೆಡ್ಡಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎನ್ನುವುದನ್ನು ನೋಡಬೇಕು.               

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ನಗರ | ಹೈಟೆಕ್‌ ಕ್ರೀಡಾಂಗಣ ನಿರ್ಮಾಣ‌, ₹10 ಕೋಟಿ ಅನುದಾನ: ಡಿಕೆ ಶಿವಕುಮಾರ್

ಆನೇಕಲ್ ಪಟ್ಟಣದಲ್ಲಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಭರವಸೆ ವಕೀಲ ಸಂಘದಿಂದ ಬೇಡಿಕೆ,...

ಕಾವೇರಿ ವಿವಾದ | ಮೇಕೆದಾಟುಗಾಗಿ ಪಾದಯಾತ್ರೆ ಮಾಡಿದವರೇ ರೈತರನ್ನು ಬಂಧಿಸಿದ್ದಾರೆ: ಎಚ್‌ಡಿಕೆ ಕಿಡಿ

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಬೆಂಗಳೂರು...

ಜನತಾ ದರ್ಶನಕ್ಕೆ ಉತ್ತಮ ಸ್ಪಂದನೆ; 6,684 ಅಹವಾಲು, ಮನವಿ ಸ್ವೀಕೃತ

ರಾಜ್ಯಾದ್ಯಂತ ಏಕ ಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲೂ ನಡೆದ ಜನತಾ ದರ್ಶನ ಸ್ವೀಕರಿಸಿದ ಅಹವಾಲುಗಳಲ್ಲಿ...