- ‘ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸುಗಳ ಬೆಸುಗೆಯಾಗಲಿ‘
- ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ನನಗೆ ಟಿಕೇಟ್ ನೀಡಲಿದೆ ಎಂಬ ವಿಶ್ವಾಸ ಇದೆ
ರಾಜ್ಯ ರಾಜಕಾರಣದಲ್ಲಿ ಸದ್ಯ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಕುರಿತ ಚರ್ಚೆ ಜೋರಾಗಿದೆ. ಈ ನಡುವೆ ಉರಿ ಮತ್ತು ನಂಜೇಗೌಡರ ಕುರಿತು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸಭ್ಯವಾಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮೂರಲ್ಲಿ ಉರಿ ಗೌಡನೂ ಇಲ್ಲ ನಂಜೇಗೌಡನೂ ಇಲ್ಲ. ನಮ್ಮೂರಿನಲ್ಲಿ ಅವರು ಇರುವುದೂ ಬೇಡ, ಶಿವಮೊಗ್ಗ ಶಾಂತವಾಗಿರಲಿ. ಉರಿ, ನಂಜು ನಮ್ಮೂರಿಗೆ ಬಾರದೇ ಇರಲಿ ಎಂದಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಆಯನೂರು ಮಂಜುನಾಥ್ ಅವರು, “ಈಶ್ವರಪ್ಪ ಮತ್ತು ಬಿಜೆಪಿ ನಡುವೆ ನಾನು ಉರಿಗೌಡನೂ ಅಲ್ಲ ನಂಜೇಗೌಡನೂ ಅಲ್ಲ. ನಾನು ಆಯನೂರು ಮಂಜುನಾಥ್. ಯಾರ ಬಾಯಲ್ಲಿ ನಂಜು ಬರುತ್ತದೆಯೋ ಆತ ನಂಜೇಗೌಡ, ಯಾರು ನನ್ನ ಮಾತು ಕೇಳಿ ಉರಿದು ಬೀಳುತ್ತಾರೋ ಅವರು ಉರಿಗೌಡ” ಎಂದು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.
ಹರಿದ ಬಾಯಿಗಳು ಎಂದರೆ ಒಬ್ಬರಿಗೆ ಹೇಳಿದ್ದಲ್ಲ
ಫ್ಲೆಕ್ಸ್ ರಾಜಕೀಯ ವಿಚಾರವಾಗಿ ಮಾತನಾಡಿ, “ಹರಿದ ಬಾಯಿಗಳು ಎಂದರೆ ಓರ್ವರಿಗೆ ಹೇಳಿದ್ದಲ್ಲ. ಬಾಯಿಗೆ ಬಂದಂತೆ ಮಾತನಾಡುವ ಎಲ್ಲರಿಗೂ ಹೇಳಿದ್ದು. ಈಶ್ವರಪ್ಪ ಅವರೂ ಬಾಯಿಗೆ ಬಂದಂತೆ ಮಾತನಾಡಬಾರದು. ಅವರೊಬ್ಬರು ಪ್ರಬುದ್ಧ ನಾಯಕರು. ಅವರು ಸಮಾಜಕ್ಕೆ ಧಕ್ಕೆ ಬರುವಂತ ಹೇಳಿಕೆ ನೀಡಬಾರದು. ನಾನು ಫ್ಲೆಕ್ಸ್ ಹಾಕಿದ್ದು, ಅವರಿಗೆ ಎಂದು ಅನಿಸಿದರೆ ಅವರು ತಮ್ಮ ತಪ್ಪು ತಿದ್ದಿಕೊಳ್ಳಬೇಕು” ಎಂದು ಆಯನೂರು ಹೇಳಿದರು.
ನಿಷ್ಠುರವಾದ ಮಾತನಾಡಿದೆ ಎಂದಾಕ್ಷಣ ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ಹೇಳುವುದು ತಪ್ಪು. ನಿಷ್ಠುರವಾಗಿ ಮಾತನಾಡಿದ ತಕ್ಷಣ ಬೇರೆ ಅರ್ಥ ಕಲ್ಪಿಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಬಿಜೆಪಿ ನನಗೆ ಟಿಕೆಟ್ ನೀಡಲಿದೆ ಎಂದು ಭಾವಿಸಿದ್ದೇನೆ’
“ಕೆ ಎಸ್ ಈಶ್ವರಪ್ಪ ಅವರಿಗೆ 35 ವರ್ಷಗಳಿಂದ ಒಂದೇ ಕ್ಷೇತ್ರದಲ್ಲಿ ಅವಕಾಶ ನೀಡಲಾಗಿದೆ. ಈ ಬಾರಿ ನನಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ. ಈಶ್ವರಪ್ಪ ಈಗ ಅವರ ಮಗನಿಗೆ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಆತನಿನ್ನು ಚಿಕ್ಕವನು, ಮಧ್ಯದಲ್ಲಿ ನಾನೊಬ್ಬ ಇದ್ದೇನೆ ಎಂದು ಹೇಳಿದ್ದೇನೆ” ಎಂದಿದ್ದಾರೆ.
“ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ನನಗೆ ಟಿಕೆಟ್ ನೀಡಿ ಎಂದು ಕೇಳಿದ್ದೇನೆ. ನಾನು ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಟಿಕೆಟ್ ನೀಡಿ ಎಂದು ಕೇಳಿಲ್ಲ. ನನಗೆ ಹಿಂದಿನಿಂದ ನಾನಾ ಅವಕಾಶ ಕೊಟ್ಟಿದ್ದಾರೆ. ಹಾಗೆಯೇ ಬೇರೆಯವರಿಗೂ ಅವಕಾಶ ಕೊಟ್ಟಿದ್ದಾರೆ. ಪಕ್ಷ ನನಗೆ ಟಿಕೆಟ್ ನೀಡಲಿದೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ಯಾವುದೇ ಆಪಾದನೆಗಳಿಲ್ಲ. ಬದಲಿಗೆ ಜನರ ಪ್ರೀತಿಯಿದೆ” ಎಂದರು.

ಚರ್ಚೆ ಹುಟ್ಟುಹಾಕಿದ ಫ್ಲೆಕ್ಸ್
ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶಿವಮೊಗ್ಗದಲ್ಲಿ ಪ್ಲೆಕ್ಸ್ ರಾಜಕೀಯ ಆರಂಭವಾಗಿದೆ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಪರೋಕ್ಷವಾಗಿ ಟಾಂಗ್ ಕೊಟ್ಟು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಫ್ಲೆಕ್ಸ್ ಹಾಕಿಸಿದ್ದು, ಎಲ್ಲರ ಬಾಯಲ್ಲೂ ಅದೇ ಸುದ್ದಿ ಹರಿದಾಡುತ್ತಿದೆ.
ಆಯನೂರು ಮಂಜುನಾಥ್ ಅವರು ಯುಗಾದಿ ಮತ್ತು ರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್ ಹಾಕಿಸಿದ್ದಾರೆ. “ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸುಗಳ ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ” ಎಂದು ಫ್ಲೆಕ್ಸ್ ನಲ್ಲಿ ಬರೆಸಿದ್ದು, ಇದು ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ.