ಶ್ರೀಮಂತರ ಬೆಳವಣಿಗೆಯ ದರ ಜೆಟ್ ವೇಗದಲ್ಲಿದ್ದರೆ, ಬಡವರ ಬದುಕು ಶೋಚನೀಯವಾಗಿದೆ. ಸರ್ಕಾರ ಜನರಿಗೆ ಮೂಲ ಸೌಕರ್ಯ ಒದಗಿಸದೆ, ಉದ್ಯೋಗ ಒದಗಿಸದೆ, ಸವಲತ್ತು ನೀಡದೆ ಇದ್ದರೂ, ಭಾರೀ ಪ್ರಮಾಣದಲ್ಲಿ ತೆರಿಗೆ ವಸೂಲಿ ಮಾಡುತ್ತಿರುವುದು ಅತ್ಯಂತ ಕ್ರೂರವಾದ ವಾಸ್ತವವಾಗಿದೆ
ಯುಗಾದಿ ಮರಳಿ ಬಂದಿದೆ. ಪ್ರಕೃತಿಯಲ್ಲಿ ಹೊಸ ಚಿಗುರು, ಹೊಸ ಕಳೆ ಕಾಣುತ್ತಿದೆ. ಬದುಕಿನ ಸುಖ- ದುಃಖಗಳ ಸಂಕೇತವಾಗಿ ಯುಗಾದಿ ಹಬ್ಬದಂದು ಮಾವು ಬೇವು ತಿನ್ನುವುದು ವಾಡಿಕೆ. ಆದರೆ, ಆಳುವ ಸರ್ಕಾರಗಳ ದೆಸೆಯಿಂದ ಜನಸಮುದಾಯಗಳು ಹಬ್ಬದ ಸಂಭ್ರಮದ ಬದಲಿಗೆ ಸೂತಕದ ಕಳೆ ಹೊತ್ತಿವೆ. ಸರ್ಕಾರ ಬೆಲ್ಲಕ್ಕಿಂತ ಹೆಚ್ಚಾಗಿ ಬೇವನ್ನೇ ಹಂಚುತ್ತಿದ್ದು, ಬಡವರ ಬದುಕಲ್ಲಿ ತಳಮಳ ಸೃಷ್ಟಿಸಿದೆ. ನಮ್ಮಲ್ಲಿ ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ ಕೊಳ್ಳುವ ಶಕ್ತಿ ಇರುವ ನಿಜವಾದ ಮಧ್ಯಮ ವರ್ಗ ಇರುವುದು ಒಟ್ಟು ಜನಸಂಖ್ಯೆಯ ಶೇ.5ರಷ್ಟು ಮಾತ್ರ. ಉಳಿದವರೆಲ್ಲ ಕನಿಷ್ಠ ಅಗತ್ಯಗಳನ್ನೂ ಪೂರೈಸಿಕೊಳ್ಳಲಾಗದ ಬಡವರು, ಕಡುಬಡವರು. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಸಂಕಟಗಳ ಸುಳಿಯೊಳಗೆ ಸಿಲುಕಿ ನರಳುತ್ತಿದ್ದಾರೆ.
ಮೋದಿ ಸರ್ಕಾರವು ಬೆಲ್ಲ, ಗೋಧಿ, ಹಿಟ್ಟು, ಹಾಲು, ಮೊಸರಿನಂಥ ದಿನಬಳಕೆಯ ಅಗತ್ಯ ವಸ್ತುಗಳ ಮೇಲೆ ಕೂಡ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೇರಿರುವುದರಿಂದ ಜನ ಹಬ್ಬ ಎಂದರೆ ಹೆದರುವಂತಾಗಿದೆ. ಆಹಾರ ಪದಾರ್ಥಗಳ ಮೇಲೆ ಹಿಂದೆಂದೂ ಕಾಣದ ಪ್ರಮಾಣದಲ್ಲಿ ತೆರಿಗೆ ವಿಧಿಸಿರುವುದು ಮೋದಿ ಸರ್ಕಾರದ ಹೆಚ್ಚುಗಾರಿಕೆ.
ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮುಚ್ಚಲಾಗುತ್ತಿದೆ ಇಲ್ಲವೇ ಖಾಸಗಿಯವರಿಗೆ ಮಾರಲಾಗುತ್ತಿದೆ. ಉತ್ಪಾದನಾ ವಲಯ, ಕೈಗಾರಿಕಾ ವಲಯ, ಕೃಷಿ ವಲಯಗಳ ಬೆಳವಣಿಗೆಯ ದರ ದಶಕಗಳ ಹಿಂದಿನ ಬೆಳವಣಿಗೆಯ ದರಕ್ಕಿಂತ ಕಡಿಮೆ ಇದೆ. ಉತ್ಪಾದನಾ ವಲಯದ ಬೆಳವಣಿಗೆ ಕುಂಠಿತವಾಗಿರುವುದರಿಂದ ನಿರುದ್ಯೋಗ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. 2023ರ ಫೆಬ್ರವರಿಯ ಹೊತ್ತಿಗೆ ದೇಶದ ನಿರುದ್ಯೋಗ ಪ್ರಮಾಣ ಶೇ.7.45ಕ್ಕೆ ಏರಿದೆ. 20-29 ವರ್ಷದ ನಡುವಿನ ಯುವ ಜನರ ನಿರುದ್ಯೋಗದ ಪ್ರಮಾಣ ಶೇ.54. ಮಹಿಳೆಯರ ಪರಿಸ್ಥಿತಿ ಇನ್ನೂ ದಾರುಣ. ದೇಶದ ಶೇ.9ರಷ್ಟು ಮಹಿಳೆಯರು ಮಾತ್ರ ಔಪಚಾರಿಕ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ ಶೇ.14ರಷ್ಟಿರುವ ಮುಸ್ಲಿಂ ಸಮುದಾಯದ ಪೈಕಿ ಶೇ.2.6ರಷ್ಟು ಮಂದಿ ಮಾತ್ರ ಕಾರ್ಪೊರೇಟ್ ವಲಯದಲ್ಲಿದ್ದಾರೆ. ಅವರ ತಲಾದಾಯವೂ ಅತ್ಯಂತ ಕಡಿಮೆ ಇದೆ.
2023ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ವಿಪರ್ಯಾಸವೆಂದರೆ, ರೈತರ ಆದಾಯದ ಬಗ್ಗೆ ಪ್ರಸ್ತುತ ಸರ್ಕಾರದ ಬಳಿ ಇರುವ ಮಾಹಿತಿ 2012-13ರದ್ದು. ಅಂದರೆ, ಅದರ ನಂತರ ಕೇಂದ್ರ ಸರ್ಕಾರ ಆ ಕುರಿತ ಮಾಹಿತಿಯನ್ನೇ ಸಂಗ್ರಹಿಸಿಲ್ಲ. ಹೀಗಾಗಿ ದೇಶದ ಜನರಿಗೆ ರೈತರ ಆದಾಯ ಹೆಚ್ಚಾಗಿದೆಯೋ ಕಡಿಮೆಯಾಗಿದೆಯೋ ಎಂದು ತಿಳಿಯಲು ಸಾಧ್ಯವೇ ಇಲ್ಲ. ದಶಕದ ಹಿಂದಿನ ಮಾಹಿತಿಯ ಆಧಾರದ ಮೇಲೆ ರೈತರ ಆದಾಯ ದ್ವಿಗುಣಗೊಂಡಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದರೂ ಅಚ್ಚರಿಯೇನಿಲ್ಲ. ಮೋದಿ ಸರ್ಕಾರಕ್ಕೆ ಸುಳ್ಳುಗಳನ್ನು ಹೇಳುವ ಸರ್ಕಾರ ಎನ್ನುವ ಅಪಖ್ಯಾತಿ ಇದೆ. ಇಂಥ ಸುಳ್ಳುಗಳನ್ನು ಹೇಳಿ ಜನರನ್ನು ನಂಬಿಸುವ ಕಲೆಯನ್ನು ಮೋದಿ ಕರಗತ ಮಾಡಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ತಮ್ಮ ಸರ್ಕಾರದ ದೊಡ್ಡ ಸಾಧನೆ ಎನ್ನುವಂತೆ ಮೋದಿ ಸರ್ಕಾರ ಬಿಂಬಿಸುತ್ತಿದೆ. 2013ರ ದತ್ತಾಂಶದ ಪ್ರಕಾರ, ದೇಶದಲ್ಲಿ 90.2 ಕೋಟಿ ಕೃಷಿ ಅವಲಂಬಿತ ಕುಟುಂಬಗಳಿವೆ. ರೈತರಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ ಆರು ಸಾವಿರ ರೂಪಾಯಿ ನೀಡುವ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಕೇವಲ 10.74 ಕೋಟಿ. ಅಂದರೆ, ದೇಶದ ಕೃಷಿಕರ ಸಂಖ್ಯೆಯ ಶೇಕಡ 10ರಷ್ಟು ಮಾತ್ರ. ಜಿಡಿಪಿಗೆ ಕೃಷಿಯ ಕೊಡುಗೆ ಕೇವಲ 17-20% ಎನ್ನಲಾಗುತ್ತಿದೆ. ಆದರೆ, ದೇಶದ ಶೇ 60ರಷ್ಟು ಜನ ಕೃಷಿ ಮತ್ತು ಕೃಷಿ ಅವಲಂಬಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ದೇಶದ ಬಹುಸಂಖ್ಯಾತ ರೈತರು, ಕಾರ್ಮಿಕರು ಕೊನೆಯಿಲ್ಲದ ಸಂಕಟಗಳಲ್ಲಿ ಮುಳುಗಿದ್ದರೆ ಅಂಬಾನಿ, ಅದಾನಿಯಂಥ ಬೆರಳೆಣಿಕೆಯ ಬೃಹತ್ ಉದ್ಯಮಿಗಳ ಸಂಪತ್ತು ಕಳೆದ ಎಂಟು ವರ್ಷಗಳಲ್ಲಿ ಅಗಾಧವಾಗಿ ಬೆಳೆದಿದೆ. 2014ರಲ್ಲಿ ಮೋದಿ ಪ್ರಧಾನಿಯಾಗಿ ಆಯ್ಕೆಯಾದಾಗ ಅದಾನಿಯ ಖಾಸಗಿ ವಿಮಾನದಲ್ಲಿ ದೆಹಲಿಗೆ ತೆರಳಿದ್ದರು. ನಂತರ ಅದಾನಿ ಜೆಟ್ ವೇಗದಲ್ಲಿ ಬೆಳೆದರು. ದಶಕಕ್ಕೂ ಕಡಿಮೆ ಅವಧಿಯಲ್ಲಿ ಅವರ ಸಂಪತ್ತು 7 ಶತಕೋಟಿ ಡಾಲರ್‌ನಿಂದ 120 ಶತಕೋಟಿ ಡಾಲರ್‌ಗೆ ನೆಗೆದು ಅದಾನಿ ವಿಶ್ವದ ಎರಡನೇ ಶ್ರೀಮಂತನ ಪಟ್ಟಕ್ಕೆ ಏರಿದ್ದರು. ಅತಿ ಕಡಿಮೆ ಅವಧಿಯಲ್ಲಿ ಅದಾನಿ ಹೇಗೆ ಶ್ರೀಮಂತರಾದರು, ಅವರಿಗೆ ಕೇಂದ್ರ ಸರ್ಕಾರ ಹೇಗೆ ಸಹಾಯ ಮಾಡಿದೆ ಎನ್ನುವುದನ್ನು ಹಿಂಡೆನ್‌ಬರ್ಗ್ ವರದಿ ಬಹಿರಂಗಗೊಳಿಸಿದೆ. ದೇಶದ ಬಂದರು, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ, ಅನಿಲ ವಿತರಣೆ, ಏರ್‌ಪೋರ್ಟ್, ರೈಲ್ವೆ ನಿಲ್ದಾಣ, ಕಲ್ಲಿದ್ದಲು ಹೀಗೆ ಸರ್ಕಾರದ ಸುಪರ್ದಿಯಲ್ಲಿರಬೇಕಾದ ಬಹುತೇಕ ಕ್ಷೇತ್ರಗಳು ಇಂದು ಅಂಬಾನಿ, ಅದಾನಿಯವರ ಹಿಡಿತದಲ್ಲಿವೆ. ಜಗತ್ತಿನ ಯಾವ ದೇಶದಲ್ಲೂ ಶ್ರೀಮಂತರು ಇಷ್ಟು ಬೇಗ ಶತಕೋಟಿ, ಸಹಸ್ರ ಕೋಟಿ ಸಂಪಾದಿಸಿದ ನಿದರ್ಶನಗಳೇ ಇಲ್ಲ.
ಶ್ರೀಮಂತರ ಬೆಳವಣಿಗೆಯ ದರ ಜೆಟ್ ವೇಗದಲ್ಲಿದ್ದರೆ, ದಲಿತರು, ಮಹಿಳೆಯರು, ರೈತರು, ಕಾರ್ಮಿಕರ ಬದುಕು ಶೋಚನೀಯವಾಗಿದೆ. ಮಾಡಲು ಕೆಲಸ ಇಲ್ಲ. ಆದರೆ, ಅಮೆರಿಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಕಟ್ಟಬೇಕು. ಆರೋಗ್ಯದ ಮೇಲೆ ಅತಿ ಕಡಿಮೆ ಖರ್ಚು ಮಾಡುವ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಸರ್ಕಾರ ಜನರಿಗೆ ಮೂಲ ಸೌಕರ್ಯ ಒದಗಿಸದೆ, ಉದ್ಯೋಗ ಒದಗಿಸದೆ, ಸವಲತ್ತು ನೀಡದೇ ಭಾರಿ ಪ್ರಮಾಣದಲ್ಲಿ ತೆರಿಗೆ ವಸೂಲಿ ಮಾಡುತ್ತಿರುವುದು ಅತ್ಯಂತ ಕ್ರೂರವಾದ ವಾಸ್ತವವಾಗಿದೆ.
ಕೆಲವೇ ವ್ಯಕ್ತಿಗಳಲ್ಲಿ ಸಂಪತ್ತಿನ ಕ್ರೋಡೀಕರಣ, ಮಧ್ಯಮ ವರ್ಗದಲ್ಲಿ ಇಳಿಕೆ, ಗ್ರಾಮೀಣ ಯುವಕರಲ್ಲಿ ದಾಖಲೆ ಮುಟ್ಟಿದ ನಿರುದ್ಯೋಗ, ಮಹಿಳೆಯರು ಮತ್ತು ಇತರ ಅಂಚಿನ ಸಮುದಾಯಗಳಿಗೆ ಸಿಗದ ಪ್ರಾತಿನಿಧ್ಯ ಈ ಸಮಸ್ಯೆಗಳ ಬಗ್ಗೆ ಗಂಭೀರವಾದ ಚಿಂತನೆ ಮತ್ತು ಕಾರ್ಯಕ್ರಮಗಳು ಇಲ್ಲದಿದ್ದರೆ ದೇಶ ಮೇಲೇಳಲಾಗದಂತೆ ಪಾತಾಳ ಮುಟ್ಟುವುದು ನಿಶ್ಚಿತ.