ಸ್ವಾತಂತ್ರ್ಯ ದಿನದಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದಾರೆ ಎಂಬುದನ್ನು ನೆನಪಿಸಿರುವ ದೆಹಲಿ ಸಚಿವೆ ಅತಿಶಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ದೇಶದ ಜನರು ತಮ್ಮ ಧ್ವನಿಗಾಗಿ ದನಿ ಎತ್ತಬೇಕು’ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬದಲಾಗಿ ಅತಿಶಿ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ಆದರೆ, ಈ ನಿರ್ಧಾರವನ್ನು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ‘ಅಮಾನ್ಯ’ ಎಂದು ಹೇಳಿದ್ದು, ಸಚಿವ ಕೈಲಾಶ್ ಗಹ್ಲೋಟ್ ಅವರು ಗೃಹ ಇಲಾಖೆಯ ಸಚಿವರಾಗಿದ್ದು, ಅವರೇ ಧ್ವಜಾವರೋಹಣ ಮಾಡುತ್ತಾರೆ ಎಂದು ಹೇಳಿದ್ದರು.
ಸ್ವಾತಂತ್ರ್ಯ ದಿನ ಮತ್ತು ಕೇಜ್ರಿವಾಲ್ ಬಂಧನದ ಬಗ್ಗೆ ಟ್ವೀಟ್ ಮಾಡಿರುವ ಅತಿಶಿ, ಕೇಜ್ರಿವಾಲ್ ತ್ರಿವರ್ಣ ಧ್ವಜವನ್ನು ಬೀಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. “ಇಂದು ಸ್ವಾತಂತ್ರ್ಯ ದಿನ. 1947ರಲ್ಲಿ ಭಾರತವು ಬ್ರಿಟಿಷ್ ಸರ್ವಾಧಿಕಾರದಿಂದ ಸ್ವಾತಂತ್ರ್ಯ ಪಡೆದಾಗ, ನೂರಾರು ಸ್ವಾತಂತ್ರ್ಯ ಹೋರಾಟಗಾರರು ಲಾಠಿಚಾರ್ಜ್ ಎದುರಿಸಿದರು. ಜೈಲಿಗೆ ಹೋಗಿ ತ್ಯಾಗ ಮಾಡಿದರು. ಸ್ವತಂತ್ರ ಭಾರತದಲ್ಲಿ ಒಂದು ದಿನ ಚುನಾಯಿತ ಮುಖ್ಯಮಂತ್ರಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ತಿಂಗಳುಗಟ್ಟಲೆ ಜೈಲಿನಲ್ಲಿ ಇಡುತ್ತಾರೆ ಎಂದು ಅವರು (ಸ್ವಾತಂತ್ರ್ಯ ಹೋರಾಟಗಾರರು) ಕನಸಿನಲ್ಲಿಯೂ ಭಾವಿಸಿರಲಿಲ್ಲ” ಎಂದು ಹೇಳಿದ್ದಾರೆ.
ಅತಿಶಿ ಟ್ವೀಟ್ ಅನ್ನು ಉಲ್ಲೇಖಿಸಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್, “ಸ್ವಾತಂತ್ರ್ಯ ದಿನದಂದು ಮುಖ್ಯಮಂತ್ರಿಗಳ ನಿವಾಸದಲ್ಲಿ ರಾಷ್ಟ್ರಧ್ವಜವನ್ನು ಹಾರಿಸದಿರುವುದು ದುಃಖಕರವಾಗಿದೆ. ಕೇಂದ್ರವು ಚುನಾಯಿತ ಮುಖ್ಯಮಂತ್ರಿಯನ್ನು ಜೈಲಿನಲ್ಲಿ ಇರಿಸಬಹುದು. ಆದರೆ, ದೇಶಭಕ್ತಿಯ ಭಾವನೆಗಳನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ರದ್ದಾದ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಲಾಯಿತು. ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ, ಜೂನ್ 2ರಂದು ಮತ್ತೆ ಅವರನ್ನು ಸಿಬಿಐ ಬಂಧಿಸಿದೆ.
ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಕೇಜ್ರಿವಾಲ್ ಹೊರತುಪಡಿಸಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರನ್ನೂ ಬಂಧಿಸಲಾಗಿತ್ತು. ಸದ್ಯ, ಸಿಸೋಡಿಯಾ ಅವರು 17 ತಿಂಗಳು ಜೈಲಿನಲ್ಲಿದ್ದು, ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದಾರೆ. ಸಂಜಯ್ ಸಿಂಗ್ ಕೂಡ ಜಾಮೀನು ಪಡೆದುಕೊಂಡಿದ್ದಾರೆ.