ಝಾರ್ಖಂಡದ ಜೆಎಂಎಂನಲ್ಲಿ ಕಲ್ಪನಾ ಎಂಬ ಬುಡಕಟ್ಟು ನಾಯಕಿಯ ಉದಯ

Date:

ಝಾರ್ಖಂಡ್ ಮುಕ್ತಿ ಮೋರ್ಚಾ ಎಂಬ ಆದಿವಾಸಿ ಪಕ್ಷದ ಸಾಂಪ್ರದಾಯಿಕ ಭದ್ರಕೋಟೆ ದುಮ್ಕಾ ಲೋಕಸಭಾ ಕ್ಷೇತ್ರ. ಈ ಪಕ್ಷದ ಮುಖ್ಯಸ್ಥ ಶಿಬು ಸೊರೆನ್ ಈ ಕ್ಷೇತ್ರವನ್ನು ಎಂಟು ಸಲ ಗೆದ್ದು 2019ರಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋತಿದ್ದರು. ದುಮ್ಕಾ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕುತೂಹಲಕಾರಿ ಸ್ಪರ್ಧೆ ಏರ್ಪಟ್ಟಿದೆ.

ಶಿಬು ಸೊರೆನ್ ಹಿರಿಯ ಮಗ ದಿವಂಗತ ದುರ್ಗಾ ಸೊರೆನ್. ಆತನ ಪತ್ನಿ ಸೀತಾ ಸೊರೆನ್ ಮಾವನ ಕುಟುಂಬದ ವಿರುದ್ಧ ಬಂಡೆದ್ದು ಬಿಜೆಪಿ ಸೇರಿದ್ದಾರೆ. ಸೊರೆನ್ ಕುಟುಂಬದ ಸೊಸೆಯನ್ನು ಬಿಜೆಪಿ ತನ್ನ ಬತ್ತಳಿಕೆಯ ಅಸ್ತ್ರವಾಗಿ ಜೆಎಂಎಂ ವಿರುದ್ಧ ಹೂಡಿದೆ. ಸೀತಾ ಅವರನ್ನು ದುಮ್ಕಾ ಕ್ಷೇತ್ರದಿಂದ ಕಣಕ್ಕೆ ಇಳಿಸಿದೆ.

ಝಾರ್ಖಂಡ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಪೈಕಿ 11ರಲ್ಲಿ ಈಗಾಗ ಮತದಾನ ಮುಗಿದಿದೆ. ಉಳಿದ ಮೂರು ಕ್ಷೇತ್ರಗಳಾದ ದುಮ್ಕಾ, ರಾಜಮಹಲ್‌ ಮತ್ತು ಗೊಡ್ಡ ಕ್ಷೇತ್ರಗಳಲ್ಲಿ ಜೂನ್ ಒಂದರ ಶನಿವಾರದಂದು ಮತದಾನ ನಡೆಯಲಿದೆ. ಹಾಲಿ ಲೋಕಸಭಾ ಚುನಾವಣೆಯ ಬೆನ್ನಿಗೆ ಝಾರ್ಖಂಡ್ ವಿಧಾನಸಭೆಯ ಚುನಾವಣೆಗಳೂ ಕದ ಬಡಿದಿವೆ. ಇದೇ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿವೆ. ಹೀಗಾಗಿ ಝಾರ್ಖಂಡ್ ಲೋಕಸಭೆ ಚುನಾವಣೆಗಳು ಹೆಚ್ಚಿನ ತುರುಸು ಬಿರುಸನ್ನು ಪಡೆದಿವೆ. ಬಿಜೆಪಿ ಈಗಿನಿಂದಲೇ ವ್ಯೂಹ ರಚಿಸುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇತ್ತೀಚೆಗೆ ಬಿಜೆಪಿ ಸೇರಿರುವ ಸೊರೆನ್ ಮನೆತನದ ಹಿರಿಯ ಸೊಸೆ ಸೀತಾ ಬಹಳ ಕಾಲ ಝಾರ್ಖಂಡ್ ಮುಕ್ತಿ ಮೋರ್ಚಾದಲ್ಲಿದ್ದರು. ಜಾಮಾ ಕ್ಷೇತ್ರದಿಂದ ಮೂರು ಸಲ ವಿಧಾನಸಭೆಗೆ ಆಯ್ಕೆಯಾಗಿದ್ದರು. ‘ಜೆ.ಎಂ.ಎಂ.ನಲ್ಲಿ ನನ್ನನ್ನು ನಿರ್ಲಕ್ಷಿಸಲಾಗಿದೆ…ದೂರ ಮಾಡಲಾಗಿದೆ’ ಎಂಬುದು ಆಕೆಯ ದೂರು.

ಶಿಬು ಸೊರೆನ್‌ ಕುಟುಂಬದ ಸೊಸೆಯಂದಿರು

ಕಳೆದ ನಾಲ್ಕು ದಶಕಗಳಿಂದ ಶಿಬು ಸೊರೆನ್ ಕುಟುಂಬದವರೇ ದುಮ್ಕಾದಿಂದ ಸ್ಪರ್ಧಿಸುತ್ತ ಬಂದಿದ್ದಾರೆ. ಆದರೆ ಈ ಬಾರಿ, ಕುಟುಂಬದಲ್ಲಿ ಕಲಹ ಭುಗಿಲೆದ್ದಿದೆ. ಕುಟುಂಬದ ಸದಸ್ಯರ ನಡುವೆ ನೇರ ಹಣಾಹಣಿ ತಪ್ಪಿಸಲು, ಜೆಎಂಎಂನ ಹಿರಿಯ ನಾಯಕ ಮತ್ತು ಆರು ಬಾರಿ ಶಾಸಕರಾಗಿದ್ದ ನಳಿನ್ ಸೊರೆನ್ ಅವರನ್ನು ಪರಿಶಿಷ್ಟ ಪಂಗಡ(ಎಸ್‌ಟಿ) ಕ್ಷೇತ್ರಕ್ಕೆ ಮೀಸಲಾಗಿರುವ ದುಮ್ಕಾ ಸ್ಥಾನದಿಂದ ಕಣಕ್ಕೆ ಇಳಿಸಲಾಗಿದೆ.

ಜೆಎಂಎಂ ವಿರುದ್ಧ ಸೀತಾ ಅವರನ್ನು ಕಣಕ್ಕೆ ಇಳಿಸುವ ಮೂಲಕ ಸೊರೆನ್ ಕುಟುಂಬದ ಉಗುರಿನಿಂದಲೇ ಸೊರೆನ್ ಕುಟುಂಬದ ಕಣ್ಣನ್ನು ತಿವಿಯುವ ಹಂಚಿಕೆ ಬಿಜೆಪಿಯದು. ಕಳೆದ ಬಾರಿ ಶಿಬು ಅವರನ್ನು ಸೋಲಿಸಿದ್ದ ತನ್ನ ಅಭ್ಯರ್ಥಿ ಸುನೀಲ್ ಸೊರೆನ್ ಅವರಿಗೆ ಟಿಕೆಟ್ ತಪ್ಪಿಸಿ ಸೀತಾ ಅವರಿಗೆ ನೀಡಲಾಗಿದೆ.

ಸೀತಾ ಅವರು ಶಿಬು ಸೊರೆನ್ ಅವರ ಹಿರಿಯ ಮಗ ಮತ್ತು ಹೇಮಂತ್ ಸೊರೆನ್ ಅವರ ಅಣ್ಣ ದುರ್ಗಾ ಸೊರೆನ್ ಅವರ ಪತ್ನಿ. 2009ರಲ್ಲಿ 39ನೇ ವಯಸ್ಸಿನಲ್ಲಿ ದುರ್ಗಾ ಅಕಾಲಿಕ ಮರಣ ಹೊಂದುತ್ತಾರೆ. ಪತ್ನಿ ಸೀತಾ ಸೊರೆನ್‌ 2009ರಲ್ಲಿ ರಾಜಕೀಯ ಪ್ರವೇಶಿಸಿದರು. ಜಾಮಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು.

ಜೀವಂತವಿದ್ದಿದ್ದರೆ ಹಿರಿಯ ಮಗ ದುರ್ಗಾ ಅವರೇ ಶಿಬು ಸೊರೆನ್ ಅವರ ಉತ್ತರಾಧಿಕಾರಿ ಆಗುತ್ತಿದ್ದರು. ದುರ್ಗಾ ಅವರ ಅಕಾಲಿಕ ಮರಣದ ಕಾರಣ ಜೆಎಂಎಂ ನಾಯಕತ್ವ ಹೇಮಂತ್ ಸೊರೆನ್ ಪಾಲಾಯಿತು. ದುಮ್ಕಾ ಜೆಎಂಎಂನ ಭದ್ರಕೋಟೆಯಾಗಿದ್ದು, ಶಿಬು ಸೊರೆನ್ ಈ ಸ್ಥಾನದಿಂದ ಎಂಟು ಬಾರಿ ಆಯ್ಕೆಯಾಗಿದ್ದಾರೆ. ಆದರೆ, 2019ರ ಮೋದಿ ಅಲೆಯಲ್ಲಿ, ಬಿಜೆಪಿಯ ಸುನಿಲ್ ಸೊರೆನ್ ಅವರಿಂದ ಜೆಎಂಎಂನ ಶಿಬು ಸೊರೆನ್ ಅವರು 47,000 ಮತಗಳ ಅಂತರದಿಂದ ಸೋಲುವಂತಾಯಿತು.

ಜೆಎಂಎಂ ನಾಯಕ ಶಿಬು ಸೊರೆನ್

ಇದೀಗ ಬಿಜೆಪಿಯ ಸೀತಾ ಮತ್ತು ಜೆಎಂಎಂನ ನಳಿನ್ ಇಬ್ಬರೂ ಬಲಿಷ್ಠರು. ತಮ್ಮದೇ ಬೆಂಬಲ ನೆಲೆಗಳನ್ನು ಹೊಂದಿದ್ದಾರೆ. ನಳಿನ್ ಸೊರೆನ್ ಅವರು, “ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೆನ್ ಅವರ ಬಂಧನ ಬುಡಕಟ್ಟು ಸಮುದಾಯಗಳಿಗೆ ಮಾಡಿದ ಅವಮಾನವಾಗಿದೆ” ಎನ್ನುವ ಮೂಲಕ ಬುಡಕಟ್ಟು ಸಮುದಾಯದ ಆತ್ಮಗೌರವಕ್ಕೆ ಧಕ್ಕೆಯಾಗಿದೆಯೆಂದು ಬುಡಕಟ್ಟು ಜನರನ್ನು ಬಿಜೆಪಿಯ ವಿರುದ್ಧ ಒಟ್ಟುಗೂಡಿಸಲು ಪ್ರಯತ್ನಿಸುತ್ತಿದ್ದಾರೆ.

“ಮೋದಿ ಕಿ ಗ್ಯಾರಂಟಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬುಡಕಟ್ಟು ಜನಾಂಗದವರಿಗಾಗಿ ಕಲ್ಯಾಣ ಕಾರ್ಯಗಳನ್ನು ಮಾಡಿದೆ. ಹೇಮಂತ್ ಸೊರೆನ್ ಮತ್ತು ಅವರ ಪತ್ನಿ ಕಲ್ಪನಾ ಸೊರೆನ್ ಅವರು ತಮ್ಮನ್ನು ಮತ್ತು ತಮ್ಮ ಹೆಣ್ಣುಮಕ್ಕಳನ್ನು ನಿರ್ಲಕ್ಷಿಸಿದ್ದಾರೆ” ಎಂದು ಸೀತಾ ಸೊರೆನ್ ಪ್ರಚಾರ ಸಭೆಗಳಲ್ಲಿ ಹೇಳುತ್ತಿದ್ದಾರೆ.‌

ಈ ಕ್ಷೇತ್ರದಲ್ಲಿ ಯಾರು ವಿಜಯಶಾಲಿಗಳಾಗಿ ಹೊರಹೊಮ್ಮುತ್ತಾರೆಂದು ಊಹಿಸುವುದು ಕಷ್ಟವಾಗಿದೆ. ಸುಮಾರು ಶೇ.45ರಷ್ಟಿರುವ ಬುಡಕಟ್ಟು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳು ಜೆಎಂಎಂಗೆ ಹಾಗೂ ಉಳಿದ ಸಮುದಾಯಗಳ ಮತಗಳು ಬಿಜೆಪಿಯ ಪಾಲಾಗುವ ನಿರೀಕ್ಷೆಯಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ದುಮ್ಕಾದ ಬುಡಕಟ್ಟು ಮತದಾರರಲ್ಲಿ ಜನಪ್ರಿಯರು. ಹೀಗಾಗಿ ಈ ಬಾರಿ ಹೆಚ್ಚು ಮತಗಳನ್ನು ಗಳಿಸುವ ಭರವಸೆ ಬಿಜೆಪಿಗಿದೆ.

“ಬಾಬುಲಾಲ್ ಮರಾಂಡಿ ಅವರು ಕ್ರಿಶ್ಚಿಯನ್ ಅಲ್ಲದ ಬುಡಕಟ್ಟು ಮತದಾರರಲ್ಲಿ ಶೇ.5ರಷ್ಟು ಜನರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರೆ, ಪರಿಸ್ಥಿತಿ ಬದಲಾಗುತ್ತದೆ ಮತ್ತು ಫಲಿತಾಂಶವು ಬಿಜೆಪಿಯ ಪರ ಆಗಲಿದೆ” ಎಂದು ದುಮ್ಕಾ ಮೂಲದ ಹಿರಿಯ ಪತ್ರಕರ್ತ ಶಿವಶಂಕರ್ ಚೌಧರಿ ಹೇಳಿದ್ದಾರೆ.

“ದುಮ್ಕಾದಲ್ಲಿ ಕ್ರಿಶ್ಚಿಯನ್ ಅಲ್ಲದ ಬುಡಕಟ್ಟು ಮತದಾರರು ಸುಮಾರು ಶೇ.15ರಷ್ಟಿದ್ದಾರೆ. ಹೇಮಂತ್ ಅವರನ್ನು ಬಿಜೆಪಿ ಜೈಲಿಗೆ ಹಾಕಿರುವ ವಿಷಮ ಪರಿಸ್ಥಿತಿಯಲ್ಲಿ ಜೆಎಂಎಂ ತೊರೆಯುವ ಸೀತಾ ಸೊರೆನ್ ನಡೆಯ ಬಗ್ಗೆ ಬುಡಕಟ್ಟು ಜನರಲ್ಲಿ ಸಾಕಷ್ಟು ಅಸಮಾಧಾನವಿದೆ” ಎಂಬುದು ದುಮ್ಕಾದ ಜಾಮ್ತಾಡಾ ಬ್ಲಾಕ್‌ ನಿವಾಸಿಗಳ ಅನಿಸಿಕೆ.

ಮುಖ್ಯಮಂತ್ರಿ ಹೇಮಂತ್ ಸೊರೆನ್ ಜೈಲುಪಾಲಾದ ನಂತರ ಅವರ ಪತ್ನಿ ಕಲ್ಪನಾ ಮುರ್ಮು ಸೊರೆನ್ ಅವರು ರಾಜಕೀಯ ಪ್ರವೇಶ ಮಾಡಿದ್ದಾರೆ. ಹೇಮಂತ್ ಜಾಗದಲ್ಲಿ ಕಲ್ಪನಾ ಅವರನ್ನೇ ಮುಖ್ಯಮಂತ್ರಿ ಹುದ್ದೆಗೆ ಕೂರಿಸುವ ಗಟ್ಟಿ ಆಲೋಚನೆಯನ್ನೂ ಜೆ.ಎಂ.ಎಂ. ಹೊಂದಿತ್ತು.

ಲಾಲೂಪ್ರಸಾದ್ ಯಾದವ್ ಜೈಲುಪಾಲಾದಾಗ ಪತ್ನಿ ರಬಡಿದೇವಿಯನ್ನು ಮುಖ್ಯಮಂತ್ರಿ ಮಾಡಿದ್ದುಂಟು. ಟೀಕೆ ಟಿಪ್ಪಣಿಗಳು ಹೆಚ್ಚಿದಾಗ ಕಲ್ಪನಾ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ನಿರ್ಧಾರದಿಂದ ಹಿಂದೆ ಸರಿಯಲಾಯಿತು. ಪಕ್ಷದ ಮತ್ತೊಬ್ಬ ಹಿರಿಯ ಚಂಪೈ ಸೊರೆನ್ ಮುಖ್ಯಮಂತ್ರಿಯಾದರು.

ಕಲ್ಪನಾ ಅವರು ತಮ್ಮ ಪತಿಯ ಬಂಧನದ ವಿರುದ್ಧ ಆಂದೋಲನವನ್ನೇ ಹೂಡಿದ್ದಾರೆ. ಪತಿ ಹೇಮಂತ್ ಅವರು ಬಿಜೆಪಿಯ ರಾಜಕೀಯ ಸೇಡಿಗೆ ಬಲಿಪಶುವಾಗಿದ್ದಾರೆಂದು ಸಾರುತ್ತಿದ್ದಾರೆ. ಸೊರೆನ್ ಕುಟುಂಬದ ಆತ್ಮಗೌರವದ ಬಾವುಟವನ್ನು ಹಾರಿಸಿದ್ದಾರೆ. ಎಂ.ಬಿ.ಎ. ಡಿಗ್ರಿ ಗಳಿಸಿರುವ ಈ ಎಂಜಿನಿಯರ್ ಹೆಣ್ಣುಮಗಳು ರಾಜಕಾರಣಕ್ಕೆ ಹೊಸಬರಾದರೂ ಹತ್ತಿರದಿಂದ ಕಂಡಿದ್ದಾರೆ. ಪಳಗಿದವರಂತೆ ಭಾಷಣಗಳನ್ನು ಮಾಡಿದ್ದಾರೆ.

ಪಕ್ಷದ ಹಿರಿಯರ ಮುಂದೆ ವಿನಮ್ರರಾಗಿ ನಡೆದುಕೊಂಡಿದ್ದಾರೆ. ಇಂಡಿಯಾ ಮೈತ್ರಿಕೂಟದ ದಿಗ್ಗಜರೊಂದಿಗೆ ವೇದಿಕೆ ಹಂಚಿಕೊಂಡು ಆತ್ಮವಿಶ್ವಾಸ ಸೂಸಿದ್ದಾರೆ. ಜನಮೆಚ್ಚುಗೆ ಗಳಿಸುತ್ತಿದ್ದಾರೆ. ಕಲ್ಪನಾ ರಾಣಿ ಝಾನ್ಸಿಯ ಕೆಚ್ಚಿನಿಂದ ಕಾದಾಡುತ್ತಿದ್ದಾರೆ ಎಂಬುದು ಕೇಜ್ರೀವಾಲ್ ಮೆಚ್ಚುಗೆಯಾದರೆ, ಕಲ್ಪನಾ ನನ್ನ ತಂಗಿ, ನಾರೀಶಕ್ತಿಯ ಪ್ರತೀಕ ಎಂದು ಪ್ರಿಯಾಂಕ ಗಾಂಧೀ ಹೊಗಳಿದ್ದಾರೆ.

ಮೇ 20ರ ಗಾಂಡೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಉಪಚುನಾವಣೆಯಲ್ಲಿ ಜೆ.ಎಂ.ಎಂ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಶಾಸಕಿಯಾಗಿ ಆಯ್ಕೆಯಾಗುವ ಬಾಗಿಲನ್ನೂ ಬಡಿದಿದ್ದಾರೆ.

ಬಿಜೆಪಿ ಸ್ಥಳೀಯ ಮುಸ್ಲಿಂ ಮತ್ತು ಬುಡಕಟ್ಟು ಸಮುದಾಯಗಳ ನಡುವೆ ಒಡೆದಾಳುವ ನೀತಿಯನ್ನು ಅನುಸರಿಸುತ್ತಾ ಪ್ರಚಾರ ಕೈಗೊಂಡಿದ್ದರೆ, ಕಲ್ಪನಾ ಸೊರೆನ್‌ ಅವರು ಜಲ, ಅರಣ್ಯ ಮತ್ತು ಜಮೀನ್‌ನ ಆದಿವಾಸಿ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದು ಮಾತ್ರವಲ್ಲದೆ, ಹೇಮಂತ್ ಸೊರೆನ್ ಅವರ ಅನುಪಸ್ಥಿತಿಯಲ್ಲಿ ತಮ್ಮ ಪಕ್ಷದ ಸ್ಟಾರ್ ಪ್ರಚಾರಕರಾಗಿ ಹೊರಹೊಮ್ಮಿದರು.‌

ದಟ್ಟ ಆದಿವಾಸಿ ಜನಸಾಂದ್ರತೆಯ ಪಟ್ಟಿಗೆ ಸೇರಿದ ಛತ್ತೀಸಗಢ, ಝಾರ್ಖಂಡ, ಒರಿಸ್ಸಾದಲ್ಲಿ ಈ ಜನರ ಬದುಕುಗಳು ಮೂರಾಬಟ್ಟೆ ಆಗುತ್ತಿವೆ. ಶೇ.90ರಷ್ಟು ಕಲ್ಲಿದ್ದಿಲು ಮತ್ತು ಶೇ.50ಕ್ಕೂ ಹೆಚ್ಚಿನ ಖನಿಜಗಳು ಹಾಗೂ ಜಲಾಶಯಗಳನ್ನು ಕಟ್ಟಿರುವ ಜಾಗಗಳು ಇರುವುದು ಆದಿವಾಸಿಗಳು ಜೀವಿಸಿರುವ ಪ್ರದೇಶಗಳಲ್ಲೇ. ಆದಿವಾಸಿಗಳು ತಮ್ಮದೇ ನೆಲದಲ್ಲಿ ನಿರಾಶ್ರಿತರಾಗಿದ್ದಾರೆ. ಕಾಪಾಡಬೇಕಾದವರೇ ಕಾಡಿ ಕೊಲ್ಲುತ್ತಿದ್ದಾರೆ.

ಝಾರ್ಖಂಡ್‌ನಲ್ಲಿ ದಿನದಿಂದ ದಿನಕ್ಕೆ ಆದಿವಾಸಿಗಳ ಸಂಖ್ಯೆ ಕುಸಿಯುತ್ತಿದೆ. ನಿರುದ್ಯೋಗ, ವಲಸೆ, ಮತಾಂತರ, ಬಡತನ, ಅಪೌಷ್ಠಿಕತೆಗಳಂತಹ ಸಮಸ್ಯೆಗಳು ಆದಿವಾಸಿ ಕುಸಿತಕ್ಕೆ ಕಾರಣವೆನ್ನಲಾಗಿದೆ.
ನಿರುದ್ಯೋಗವು ಝಾರ್ಖಂಡಿಗಳನ್ನು ಬೆನ್ನು ಬಿದ್ದು ಕಾಡಿದೆ. ನಾಲ್ಕು ವರ್ಷಗಳ ಹಿಂದೆಯೇ ನಿರುದ್ಯೋಗದ ಪ್ರಮಾಣ ಶೇ.59.2ರ ಪ್ರಮಾಣವನ್ನು ಮುಟ್ಟಿತ್ತು.

ಗಣಿಗಾರಿಕೆಯಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದ್ದರಿಂದ ಇಂದು ಬಹುತೇಕರು ನಿರ್ವಸತಿಗರಾಗಿದ್ದಾರೆ. ಕೋಟಿ ಕೋಟಿ ಆದಿವಾಸಿಗಳನ್ನು ಶೋಷಣೆಯಿಂದ ಬಿಡುಗಡೆ ಮಾಡುವ ಮನಸ್ಸು ಭಾರತ ಸರ್ಕಾರಕ್ಕೆ ಇಲ್ಲ ಎಂಬುದು ವಿಕಿಲೀಕ್ಸ್ ದಾಖಲೆಗಳಿಂದ ಹೊರಬಿದ್ದಿದ್ದ ಅಂಶ.

‘ಅಭಿವೃದ್ಧಿ’ಗೆ ಅಡ್ಡಗಲ್ಲಾಗಿರುವ ಆದಿವಾಸಿಗಳನ್ನು ಅಡವಿಗಳಿಂದ ಒಕ್ಕಲೆಬ್ಬಿಸಿ ಅಲ್ಲಿನ ಭೂಗರ್ಭದಡಿ ಅಡಗಿರುವ ಖನಿಜ ಸಂಪನ್ಮೂಲಗಳನ್ನು ಕಾರ್ಪೊರೇಟುಗಳಿಗೆ ಬಿಡಿಸಿಕೊಡುವುದು ಸರ್ಕಾರದ ಗುಪ್ತ ಕಾರ್ಯಸೂಚಿ. ಅದು ಈಗ ಗೌಪ್ಯವಾಗಿ ಉಳಿದಿಲ್ಲ.‌

ಈವರೆಗೆ 17 ಲಕ್ಷ ಝಾರ್ಖಂಡಿಗಳನ್ನು ಒಕ್ಕಲೆಬ್ಬಿಸಲಾಗಿದೆ. ಇವರ ಪೈಕಿ ಶೇ.85ರಷ್ಟು ಮಂದಿ ಆದಿವಾಸಿಗಳು. ಮರುವಸತಿಯ ಅದೖಷ್ಟ ದಕ್ಕಿದ್ದು ಕೇವಲ ಶೇ.25ರಷ್ಟು ಮಂದಿಗೆ ಮಾತ್ರ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಒಕ್ಕಲೆಬ್ಬಿಸಲಾದವರ ಅಂಕಿ ಅಂಶಗಳಿವು. ಇನ್ನು ಅಂಕಿ ಅಂಶಗಳ ಹೊರಗೆ ಬದುಕಿನ ಬೇರು ಕಡಿದುಕೊಂಡವರ ಲೆಕ್ಕ ಇಟ್ಟವರಾರು?

ಇದನ್ನೂ ಓದಿದ್ದೀರಾ? ಲೋಕಸಭಾ ಚುನಾವಣೆ | ಜಾರ್ಖಂಡ್-ಛತ್ತೀಸ್‌ಗಢ ರಾಜಕೀಯದಲ್ಲಿ ಬುಡಕಟ್ಟು ಜನಾಂಗ ನಿರ್ಣಾಯಕ; ಬಿಜೆಪಿ ಗೆಲುವು ಸಾಧ್ಯವೇ?

ಆದಿವಾಸಿಗಳು ಅವರದೇ ನೆಲದಲ್ಲಿ ಅನಾಥರಾಗುತ್ತಿದ್ದಾರೆ. ಮಾನವ ಹಕ್ಕುಗಳ ಹೋರಾಟಗಾರ ಗ್ಲಾಡ್‌ಸನ್‌ ಡುಂಗ್‌ಡುಂಗ್‌ ಅವರ ʼಅಭಿವೃದ್ಧಿಯ ಮಸಣ ಭೂಮಿʼ ಎಂಬ ಕೃತಿಯಲ್ಲಿ ಉಲ್ಲೇಖಿಸಿರುವಂತೆ 1951ರಿಂದ 1995ರ ನಡುವೆ 15 ಲಕ್ಷಕ್ಕೂ ಅಧಿಕ ಮಂದಿ ನಿರ್ಗತಿಕರಾಗಿದ್ದಾರೆ. ಈ ಪೈಕಿ ಆದಿವಾಸಿಗಳ ಪ್ರಮಾಣ ಶೇ.80ರಿಂದ 90%ರಷ್ಟಿದೆ.

ಆದಿವಾಸಿಗಳ ಬದುಕುಗಳಿಗೆ ಕೊಳ್ಳಿ ಇಟ್ಟಿರುವ ಈ ಸಮಸ್ಯೆಗಳು ಚುನಾವಣೆಗಳಲ್ಲಿ ಚರ್ಚೆಗೆ ಬರುವುದೇ ಇಲ್ಲ ಎಂಬುದು ಅತ್ಯಂತ ಕಳವಳದ ಸಂಗತಿ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇವದಾರಿ ಗಣಿಗಾರಿಕೆ ಯೋಜನೆ ಬಗ್ಗೆ ಕಳವಳ ಬೇಡ: ಕೇಂದ್ರ ಸಚಿವ ಕುಮಾರಸ್ವಾಮಿ

ಬಳ್ಳಾರಿಯ ಸಂಡೂರು ವ್ಯಾಪ್ತಿಯ ದೇವದಾರಿ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ...

ಬಿಹಾರ | ಉದ್ಘಾಟನೆಗೂ ಮುನ್ನ ನದಿಯಲ್ಲಿ ಕೊಚ್ಚಿ ಹೋದ 12 ಕೋಟಿ ರೂ. ವೆಚ್ಚದ ಸೇತುವೆ

ಬಿಹಾರ ದ ಅರಾರಿಯಾ ಜಿಲ್ಲೆಯಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ 12 ಕೋಟಿ...

ಸಾಹಿತಿಗಳೂ ರಾಜಕಾರಣಿಗಳೇ, ಸರ್ಕಾರದಿಂದ ನೇಮಕವಾಗಿದ್ದಾರೆ, ಸಭೆ ಮಾಡಿದ್ದೇನೆ: ಡಿ ಕೆ ಶಿವಕುಮಾರ್

ಇತ್ತೀಚೆಗೆ ಕೆಪಿಸಿಸಿ ಕಚೇರಿಗೆ ಸಾಹಿತ್ಯ, ಸಂಸ್ಕೃತಿ ಹಾಗೂ ಇತರ ಅಕಾಡೆಮಿಗಳ ಅಧ್ಯಕ್ಷರ...

ವಿನೀತ ಮೋದಿಗೆ ಜಾಗತಿಕ ಒತ್ತಡ; ದುರ್ಬಲಗೊಳ್ಳುತ್ತಿದೆ ವಿದೇಶಾಂಗ ಸಂಬಂಧ

ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ...