ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು

Date:

ಒಂದು ಕಾಲದಲ್ಲಿ ಹೋರಾಟಗಳ ಮುಂಚೂಣಿಯಲ್ಲಿದ್ದ ದೇವೇಗೌಡರು ಕಾಲಾನಂತರ ಹೋರಾಟಗಳನ್ನು ಹತ್ತಿಕ್ಕಿದ್ದರು. ಅಂತಹ ಹಾಸನದಲ್ಲಿ ಇಂದು ದೇವೇಗೌಡರ ಕುಟುಂಬದ ಪಾಳೆಗಾರಿಕೆ, ಲೈಂಗಿಕ ದೌರ್ಜನ್ಯ, ದೌರ್ಜನ್ಯಗಳಲ್ಲಿ ಹೆಣ್ಣನ್ನೇ ಅಪರಾಧಿಯನ್ನಾಗಿ ನೋಡುವ ಪುರುಷ ಪ್ರಧಾನ ವ್ಯವಸ್ಥೆಗೆ ಸವಾಲೊಡ್ಡುವ ‘ಹಾಸನ ಚಲೋ’ ಹೋರಾಟದ ಕೂಗು ಎದ್ದಿದೆ. ಆ ಕೂಗಿಗೆ ನಾಡಿನ ಜನತೆ ಒಕ್ಕೊರಲಿನಿಂದ ಸ್ಪಂದಿಸಿದೆ. ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಸಂದೇಶ ರವಾನಿಸಿದೆ.

ಹಾಸನ ಎಂದಾಕ್ಷಣ ದೇವೇಗೌಡ ಎನ್ನುವ ಕಾಲಘಟ್ಟವೊಂದು ಇತ್ತು. ಹರದನಹಳ್ಳಿಯ ಧೂಳಿನಿಂದ ಎದ್ದು ಬಂದ ಬಡ ರೈತನ ಮಗ ಈ ರಾಷ್ಟ್ರದ ಅತ್ಯುನ್ನತ ಹುದ್ದೆಯಾದ ಪ್ರಧಾನಮಂತ್ರಿ ಸ್ಥಾನದಲ್ಲಿ ಕೂತಾಗ, ಕರ್ನಾಟಕಕ್ಕೆ, ಕನ್ನಡಿಗರಿಗೆ, ಅದರಲ್ಲೂ ಹಾಸನದ ಜನತೆಗೆ ಅದು ಹೆಮ್ಮೆಯ ವಿಷಯವಾಗಿತ್ತು.

ಆದರೆ ಈಗ ಹಾಸನ ಎಂದಾಕ್ಷಣ ಪ್ರಜ್ವಲ್ ರೇವಣ್ಣ ಎನ್ನುವಂತಾಗಿದೆ. ಹೆಮ್ಮೆಯ ಬದಲಿಗೆ, ಹೇಳಿಕೊಳ್ಳಲಾಗದ ಹೇಸಿಗೆಯ ವಿಷಯವಾಗಿದೆ. ಹಾಸನದ ಜನತೆಯನ್ನು ಅವಮಾನದಿಂದ ಕುಗ್ಗಿಹೋಗುವಂತೆ ಮಾಡುತ್ತಿದೆ. ಅಂತಹ ಪ್ರಜ್ವಲ್ ರೇವಣ್ಣನ ವಿರುದ್ಧ ಇಡೀ ಮನುಕುಲವೇ ಈಗ ಎದ್ದು ನಿಂತಿದೆ. ಹಾಸನದ ಹಾದಿಗಳಲ್ಲಿ ಮತ್ತೆ ಪ್ರತಿಭಟನೆಯ ಕೂಗು ಮೊಳಗಿದೆ.

1972ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ, ದೇವರಾಜ ಅರಸು ಮುಖ್ಯಮಂತ್ರಿಯಾದಾಗ, ವಿಪಕ್ಷ ನಾಯಕನಾಗಿ ಆಯ್ಕೆಯಾದವರು ಎಚ್.ಡಿ. ದೇವೇಗೌಡ. ಐದು ವರ್ಷಗಳ ಕಾಲ ಜನರ ದನಿಯಾದ ದೇವೇಗೌಡ, ಆಳುವ ಸರ್ಕಾರವನ್ನು ಅಡಿಗಡಿಗೂ ಪ್ರಶ್ನಿಸಿ, ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಿದರು. ಜನಪ್ರಿಯ ರಾಜಕೀಯ ನಾಯಕರಾಗಿ ರೂಪುಗೊಂಡರು. 1975-77ರಲ್ಲಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿ, ಜೈಲಿಗೂ ಹೋಗಿಬಂದರು. 1980ರಲ್ಲಿ ಕಾಂಗ್ರೆಸ್ ದುರಾಡಳಿತದ ವಿರುದ್ಧ ಪ್ರತಿಭಟಿಸಿದ ನರಗುಂದ-ನವಲಗುಂದ ರೈತರ ಮೇಲೆ ನಡೆದ ಗೋಲಿಬಾರ್‌ಗೆ ಇಬ್ಬರು ಬಲಿಯಾದಾಗ ಬೀದಿಗಿಳಿದು, ಮಣ್ಣಿನ ಮಗ ಎಂದು ಹೆಸರು ಪಡೆದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾರ್ವಜನಿಕ ಬದುಕಿನುದ್ದಕ್ಕೂ ಹೋರಾಟಗಳು, ಪ್ರತಿಭಟನೆಗಳು, ಸತ್ಯಾಗ್ರಹಗಳಿಗೆ ಮುಂದಾಳತ್ವ ವಹಿಸುತ್ತಿದ್ದ ದೇವೇಗೌಡರು, ದನಿ ಇಲ್ಲದ ದಮನಿತರ ಧುರೀಣನಾಗಿದ್ದರು. ಶೋಷಣೆಗೊಳಗಾದವರ ಪರ ನಿಂತು ನ್ಯಾಯಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಿದ್ದರು. ಅಸಹಾಯಕರಲ್ಲಿ ಧೈರ್ಯ ತುಂಬುತ್ತಲೇ ಪ್ರಭುತ್ವವನ್ನು ಪ್ರಶ್ನಿಸುತ್ತಿದ್ದರು. ಗೌಡರಿಗೆ 1983, 85ರಲ್ಲಿ ಅಧಿಕಾರ ಸಿಕ್ಕರೂ, ಹೆಸರು ಕೆಡಿಸಿಕೊಳ್ಳದೆ ಉಳಿದರು. 1989ರಲ್ಲಿ ಸೋತಾಗ, ಸಾಮಾನ್ಯರಂತೆ ಬೀದಿ ಬದಿ ಕೂತು ಬಿಕ್ಕಿ ಬಿಕ್ಕಿ ಅತ್ತಿದ್ದರು.

80ರ ದಶಕದಲ್ಲಿ ಹಾಸನ ಜಿಲ್ಲೆಯಲ್ಲಿ ರೈತಸಂಘ ಪ್ರಬಲವಾಗಿತ್ತು. ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಫೈನ್ ಮೆನ್ ಆರ್ಮಿ ಎಂದೇ ಹೆಸರಾಗಿದ್ದ ವೆಂಕಟೇಶಮೂರ್ತಿ, ದತ್ತ, ಪಾಂಡು, ಪೀಟರ್ ಮತ್ತು ವಾಸು- ರೈತ ಹೋರಾಟವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿದ್ದರು. ಅನ್ಯಾಯ ಕಂಡಲ್ಲಿ ಸಿಡಿದೇಳುತ್ತಿದ್ದರು. ಅದೇ ಸಂದರ್ಭದಲ್ಲಿ ದಲಿತ ಹೋರಾಟಗಾರ ಚಂದ್ರಪ್ರಸಾದ್ ತ್ಯಾಗಿ, ದಮನಿತರ ಧ್ವನಿಯಾಗಿ ಗುರುತಿಸಿಕೊಂಡಿದ್ದರು. ಕಾಲಕಾಲಕ್ಕೆ ವಿದ್ಯಾರ್ಥಿ ಚಳವಳಿಗಳು, ಕಾರ್ಮಿಕರ ಹರತಾಳಗಳು ಜರುಗುತ್ತಿದ್ದವು. ಹಾಸನ ಜಿಲ್ಲೆಯಲ್ಲಿ ಎಲ್ಲಾದರೂ ಅನ್ಯಾಯ, ಅಕ್ರಮ ಕಂಡುಬಂದರೆ ಹೋರಾಟದ ಮೂಲಕವೇ ಉತ್ತರಿಸುವ, ಜನರಲ್ಲಿ ಜಾಗೃತಿ ಮೂಡಿಸುವ ವಾತಾವರಣ ಸೃಷ್ಟಿಯಾಗಿತ್ತು.

ಇಂತಹ ಸಂದರ್ಭದಲ್ಲಿ ಹೋರಾಟಗಳಿಂದಲೇ ನಾಯಕನಾಗಿ ರೂಪುಗೊಂಡಿದ್ದ, ಜನಪರ ರಾಜಕೀಯ ನಾಯಕನಾಗಿ ಹೊರಹೊಮ್ಮಿದ್ದ ದೇವೇಗೌಡರ ಪರ ನಿಲುವು ತಾಳುವುದು ಸಹಜವೇ ಆಗಿತ್ತು. ಹಾಗಾಗಿ ಹಾಸನ ಜಿಲ್ಲೆಯ ಹೋರಾಟಗಾರರು, ಪ್ರಗತಿಪರರು ಮತ್ತು ಬುದ್ಧಿಜೀವಿಗಳು ಕಾಂಗ್ರೆಸ್ಸಿಗೆ ವಿರುದ್ಧವಿದ್ದು, ಜನತಾಪಕ್ಷ/ದಳದಲ್ಲಿದ್ದ ಗೌಡರ ಪರವಾಗಿದ್ದರು. ಆದರೆ ಗೌಡರು ಜಿಲ್ಲೆಯ ರೈತಸಂಘ, ದಲಿತಸಂಘ, ಕಾರ್ಮಿಕ/ಮಹಿಳಾ/ವಿದ್ಯಾರ್ಥಿ ಸಂಘಗಳ ನಾಯಕರನ್ನು ತಮ್ಮತ್ತ ಸೆಳೆದುಕೊಂಡು, ಸಣ್ಣಪುಟ್ಟ ಅಧಿಕಾರದ ರುಚಿ ಹತ್ತಿಸಿ, ಹೋರಾಟಗಾರರನ್ನು ದಾರಿ ತಪ್ಪಿಸಿದರು. ಅವರ ಅಸ್ತಿತ್ವವನ್ನೇ ಇಲ್ಲವಾಗಿಸಿದರು. ಜಿಲ್ಲೆ ನಿಧಾನವಾಗಿ ಹೋರಾಟದಿಂದ ವಿಮುಖವಾಗಿ, ಕಾವು ಕಳೆದುಕೊಳ್ಳತೊಡಗಿತು.

ಇದನ್ನು ಓದಿದ್ದೀರಾ?: ಪ್ರಜ್ವಲ್‌ ರೇವಣ್ಣ ಪ್ರಕರಣ ಯಾವುದೇ ಡಿಟರ್ಜೆಂಟ್‌ನಿಂದ ಹೋಗುವ ಕಲೆಯಲ್ಲ: ಮಾಜಿ ರಾಜ್ಯಸಭಾ ಸದಸ್ಯ ಜವರೇಗೌಡ

ಅದರಲ್ಲೂ 90ರ ದಶಕದಲ್ಲಿ, 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾದಾಗ ಹಾಸನದಿಂದ ದೂರವಾದರು. ಪುತ್ರ ರೇವಣ್ಣನವರಿಗೆ ಹಾಸನವನ್ನು ಬಳುವಳಿಯಾಗಿ ನೀಡಿದರು. 1996ರಲ್ಲಿ ಪ್ರಧಾನಮಂತ್ರಿಯಾದಾಗ, ಆ ಹೋರಾಟಗಳಿಗೆ ಅವರೇ ವಸ್ತುವಾದರು. ಅದಕ್ಕೆ ಜ್ವಲಂತ ಉದಾಹರಣೆಯಾಗಿ ಬಾಗೂರು-ನವಿಲೆ ರೈತ ಹೋರಾಟವನ್ನು ನೋಡಬಹುದು.

1994-96ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗಳು. ಆ ಸಂದರ್ಭದಲ್ಲಿ ಬಾಗೂರು-ನವಿಲೆ ಭಾಗದ ರೈತರು ಸುಮಾರು ಒಂದು ವರ್ಷ ಕಾಲ ಧರಣಿ ಕೂತು ಸರ್ಕಾರದ ವಿರುದ್ಧ ಪ್ರತಿಭಟಿಸಿದರು. 10 ಕಿ.ಮೀ. ಸುರಂಗ ಮಾರ್ಗದಿಂದ 50 ಹಳ್ಳಿಗಳ ಅಂತರ್ಜಲ ಕುಸಿದಿದೆ, ತೆಂಗಿನಮರಗಳು ಒಣಗತೊಡಗಿವೆ, ಕೆರೆಗಳಲ್ಲಿ ನೀರಿಲ್ಲದೆ ಬೆಳೆ ನಾಶವಾಗಿದೆ, ನಮ್ಮ ಬದುಕು ಬೀದಿಗೆ ಬಂದಿದೆ ಎಂದು ಪರಿಪರಿಯಾಗಿ ಬೇಡಿಕೊಂಡರೂ, ದೇವೇಗೌಡರು ಅತ್ತ ಹೆಜ್ಜೆ ಹಾಕಲಿಲ್ಲ. ಬದಲಿಗೆ, ಧರಣಿನಿರತ ರೈತರ ಮೇಲೆ ಪೊಲೀಸರನ್ನು ಛೂಬಿಟ್ಟು, ಗೋಲಿಬಾರ್ ಮಾಡಿಸಿ ಹೆಣ ಉರುಳಿಸಿದರು. ಸಾಲದು ಎಂದು ಅವರನ್ನು ಥಳಿಸಿ, ಜೈಲಿಗೆ ಅಟ್ಟಿದರು. ತಮ್ಮದೇ ಪಕ್ಷದ ಶಾಸಕ ಪುಟ್ಟೇಗೌಡರನ್ನು ಖಳನಾಯಕನನ್ನಾಗಿಸಿದರು.

ಬಾಗೂರು-ನವಿಲೆಯ ಹೋರಾಟಗಾರರನ್ನು ಜೈಲಿಗೆ ಹಾಕಿ, ಅವರು ಕೋರ್ಟು, ಕಚೇರಿ ಅಲೆಯುವಂತೆ ಮಾಡಿದ ಗೌಡರು, ಅಲ್ಲಿಗೆ ‘ಮಣ್ಣಿನಮಗ’ ಎಂಬ ಬಿರುದಿನಿಂದ ಅವರಾಗಿಯೇ ಬಿಡಿಸಿಕೊಂಡಿದ್ದರು. ಅದರ ಮುಂದುವರೆದ ಭಾಗವಾಗಿ, ಅವರ ಪುತ್ರ ರೇವಣ್ಣ ಗುಂಡ್ಯ ಜಲವಿದ್ಯುತ್ ಯೋಜನೆ, ಸೂರನಹಳ್ಳಿ ಭೂಸ್ವಾಧೀನ, ಚನ್ನಪಟ್ಟಣ ಕೆರೆ ಒತ್ತುವರಿ, ರಿಂಗ್ ರೋಡ್, ಎಸ್ಇಜೆಡ್ ವಿರುದ್ಧದ ಹೋರಾಟಗಳನ್ನು ಹತ್ತಿಕ್ಕಿದರು. 2000ದಿಂದ ಇಲ್ಲಿಯವರೆಗೆ ಅವರ ಕುಟುಂಬದವರೇ ಶಾಸಕ, ಸಚಿವ, ಸಿಎಂ, ಸಂಸದರಾದ ನಂತರ, ಹಾಸನ ಜಿಲ್ಲೆಯಲ್ಲಿ ಜನಪರ ಹೋರಾಟಗಾರರನ್ನು ಅಧಿಕಾರದ ಅಸ್ತ್ರ ಬಳಸಿ ಬಗ್ಗು ಬಡಿದರು.

ಇಂತಹ ಹಾಸನದಲ್ಲಿ ಇಂದು, ದೇವೇಗೌಡರ ಕುಟುಂಬದ ಪಾಳೆಗಾರಿಕೆ, ಲೈಂಗಿಕ ದೌರ್ಜನ್ಯ, ದೌರ್ಜನ್ಯಗಳಲ್ಲಿ ಹೆಣ್ಣನ್ನೇ ಅಪರಾಧಿಯನ್ನಾಗಿ ನೋಡುವ ಪುರುಷ ಪ್ರಧಾನ ವ್ಯವಸ್ಥೆಗೆ ಸವಾಲೊಡ್ಡುವ ‘ಹಾಸನ ಚಲೋ’ ಹೋರಾಟದ ಕೂಗು ಎದ್ದಿದೆ. ಆ ಕೂಗಿಗೆ ನಾಡಿನ ಜನತೆ ಒಕ್ಕೊರಲಿನಿಂದ ಸ್ಪಂದಿಸಿದೆ. ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಸಂದೇಶ ರವಾನಿಸಿದೆ.

ದೇವೇಗೌಡ ಎಂಬ ಧರ್ಮರಾಯ ಕಾಲಚಕ್ರ ಉರುಳಿದಂತೆ ಧೃತರಾಷ್ಟ್ರನಾದ ವಿಪರ್ಯಾಸಕರ ಕಥನವಿದು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಹೊಸ ಮನುಷ್ಯರಾಗುವರೇ?

ಯಾರಿಗೂ ಸಿಗದ ಅಪೂರ್ವ ಅವಕಾಶ ಮೋದಿಯವರಿಗೆ ಮತ್ತೊಮ್ಮೆ ಸಿಕ್ಕಿದೆ. ಮತ್ತೊಮ್ಮೆ ಬಾಬಾ...

ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ

ದುಬಾರಿ ಚುನಾವಣೆಗಳು ಒಟ್ಟು ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತಲೇ ಸಾಗಿವೆ. ಇಂತಹ ವ್ಯವಸ್ಥೆಯಲ್ಲಿ ಸರಳರು,...

ಈ ದಿನ ಸಂಪಾದಕೀಯ | ಹತಾಶೆಯಿಂದ ಆಶಾವಾದದೆಡೆಗೆ ಕರೆದೊಯ್ಯುವ ಜನಾದೇಶ

ಇಂಡಿಯಾ ಒಕ್ಕೂಟ ಮೈತ್ರಿ ಹುಟ್ಟಿದ್ದೇ ಒಂದು ಚಮತ್ಕಾರ. ಸೀಟು ಹೊಂದಾಣಿಕೆ ಪೂರ್ಣ...

ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ

ಪಾದಯಾತ್ರೆಯ ಮೂಲಕ ಭಾರತದ ಆತ್ಮವನ್ನು ಅರ್ಥ ಮಾಡಿಕೊಂಡಿದ್ದ, ಜನರೊಂದಿಗೆ ಬೆರೆತು ಬೆಂದು...