- ಯಾವ ಕ್ಷಣದಲ್ಲಾದರೂ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ
- ದಿನಾಂಕ ಘೋಷಣೆಗೂ ಮುನ್ನವೇ ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮನ
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿ ಪತ್ರದ ಮೂಲಕ ತುರ್ತು ಸೂಚನೆ ನೀಡಿದ್ದಾರೆ.
ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಪತ್ರ ಹೋಗಿದ್ದು, “ಚುನಾವಣಾ ನೀತಿ ಸಂಹಿತೆ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಿ” ಎಂದು ಪತ್ರದಲ್ಲಿ ಸೂಚಿಸಲಾಗಿದೆ. ಇದರಿಂದಾಗಿ ಯಾವ ಕ್ಷಣದಲ್ಲಾದರೂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಲು ಕೇಂದ್ರ ಚುನಾವಣೆ ಆಯೋಗ ಸಿದ್ಧತೆ ನಡೆಸಿದೆ. ಮಾರ್ಚ್ 27 ಅಥವಾ 28ರಂದು ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ ಚುನಾವಣೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಏಪ್ರಿಲ್ ಮೊದಲ ವಾರದಲ್ಲಿ ಚುನಾವಣೆಯ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಇತರ ಇಬ್ಬರು ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಹಾಗೂ ಅರುಣ್ ಗೋಯೆಲ್ ಅವರು ನವದೆಹಲಿಯಲ್ಲಿ ಚುನಾವಣಾ ವೇಳಾಪಟ್ಟಿ ಘೋಷಿಸಲಿದ್ದಾರೆ. ಆ ಕ್ಷಣದಿಂದಲೇ ನೀತಿ ಸಂಹಿತೆ ರಾಜ್ಯಾದ್ಯಂತ ಜಾರಿಗೆ ಬರಲಿದೆ.
ದಿನಾಂಕ ಘೋಷಣೆಗೂ ಮುನ್ನ ಮೋದಿ ಆಗಮನ
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿವೆ. ಎಎಪಿ, ಕೆಆರ್‌ಪಿಪಿ ಕೂಡ ತಯಾರಿ ನಡೆಸಿವೆ. ಚುನಾವಣೆ ಕಾವು ಏರತೊಡಗಿರುವ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ದಿನಾಂಕ ಘೋಷಣೆ ಮುನ್ನವೇ ಕರ್ನಾಟಕಕ್ಕೆ ಭೇಟಿ ನೀಡಿ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಬೆಂಗಳೂರಿನ ಕೆಆರ್ ಪುರಂ ಹಾಗೂ ವೈಟ್‌ಫೀಲ್ಡ್ ನಡುವಿನ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಮಾರ್ಚ್ 25) ರಾಜ್ಯಕ್ಕೆ ಆಗಮಿಸಲಿದ್ದಾರೆ. ಹಾಗೆಯೇ ದಾವಣಗೆರೆಯಲ್ಲಿ ಬಿಜೆಪಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.