- ಸಿದ್ದರಾಮಯ್ಯ ಮೈಸೂರು ಭಾಗದಿಂದ ಸ್ಪರ್ಧಿಸುವುದು ಸೂಕ್ತ
- ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರಿಂದ ಸುಳ್ಳು ಪಾತ್ರಗಳ ಸೃಷ್ಠಿ
“ಉರಿಗೌಡ – ನಂಜೇಗೌಡ ಕಾಲ್ಪನಿಕ ಕಥೆಗಳನ್ನು ಸೃಷ್ಟಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಒಕ್ಕಲಿಗರು ಹಾಗೂ ಮುಸ್ಲಿಮರ ಮಧ್ಯೆ ಎತ್ತಿಕಟ್ಟುವ ಕುತಂತ್ರ ಮಾಡುತ್ತಿದ್ದಾರೆ” ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಉರಿಗೌಡ – ನಂಜೇಗೌಡ ವಿವಾದವು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅದಿಚುಂಚನಗಿರಿ ಮಠದ ಪಿಠಾಧಿಪತಿ ನಿರ್ಮಲಾನಂದನಾಥ ಸ್ವಾಮಿಜಿ ಉರಿ – ನಂಜೇಗೌಡ ವಿವಾದವನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಆದರೂ, ವಿವಾದ ಮುಂದುವರಿಸಿರುವ ಸಿ ಟಿ ರವಿ ಅವರಿಗೆ ಸಿ ಎಂ ಇಬ್ರಾಹಿಂ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಜಯಪುರದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ”ಮೈಸೂರು ಭಾಗದಲ್ಲಿ ಒಕ್ಕಲಿಗರು ಮತ್ತು ಮುಸ್ಲಿಂರ ನಡುವಿನ ಒಗ್ಗಟ್ಟು ಮುರಿಯಲು ಉರಿ – ನಂಜೇಗೌಡ ಎಂಬ ಸುಳ್ಳು ಪಾತ್ರಗಳನ್ನು ಸೃಷ್ಟಿಸುತ್ತಿದ್ದಾರೆ. ರಾಜಕೀಯ, ಚುನಾವಣಾ ಲಾಭಕ್ಕಾಗಿ ಸಿ ಟಿ ರವಿ ಅವರು ಸಮಾಜದಲ್ಲಿನ ಶಾಂತಿ ಕದಡುವ ಮತ್ತು ಒಗ್ಗಟ್ಟು ಮುರಿಯುವ ಹೇಳಿಕೆ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಸ್ಪರ್ಧೆಯ ಕುರಿತು ಮಾತನಾಡಿದ ಸಿ ಎಂ ಇಬ್ರಾಹಿಂ, “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ಸ್ಪರ್ಧಿಸುವುದು ಸೂಕ್ತ. ಬಾದಾಮಿ, ಕೋಲಾರ ಸೇರಿದಂತೆ ಇತರೆ ಯಾವ ಕ್ಷೇತ್ರಗಳೂ ಅವರಿಗೆ ಸೂಕ್ತವಲ್ಲ” ಎಂದು ಸಲಹೆ ನೀಡಿದ್ದಾರೆ.