ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ (ಎಸ್‌ಐಆರ್- Special Intensive Revision) ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ (INDIA) ಮೈತ್ರಿಕೂಟದ ನಾಯಕರು ದೆಹಲಿಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು. ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ಹೊರಟಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಆಕಾಶವಾಣಿ ಭವನದ ಬಳಿ ತಡೆದು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಮಧ್ಯಾಹ್ನ 300ಕ್ಕೂ ಹೆಚ್ಚು ವಿರೋಧ ಪಕ್ಷಗಳ ಸಂಸದರು ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ಆರಂಭಿಸಿದರು. ಆದರೆ, ದಾರಿಯ ಮಧ್ಯೆ ಆಕಾಶವಾಣಿ ಭವನದ ಬಳಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಮೆರವಣಿಗೆಯನ್ನು ತಡೆದರು. ಇದರಿಂದ ಆಕ್ರೋಶಗೊಂಡ ನಾಯಕರು ಆಕಾಶವಾಣಿ ಭವನದ ಮುಂದೆಯೇ ಧರಣಿ ಕುಳಿತರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್, ದೀಪೇಂದರ್ ಸಿಂಗ್ ಹೂಡಾ ಸೇರಿದಂತೆ ಹಲವು ಹಿರಿಯ ನಾಯಕರನ್ನು ವಶಕ್ಕೆ ಪಡೆದು ಅಲ್ಲಿಂದ ತೆರವುಗೊಳಿಸಿದರು. ನಿಷೇಧಾಜ್ಞೆ (ಸೆಕ್ಷನ್ 163 ಬಿಎನ್‌ಎಸ್‌ಎಸ್) ಉಲ್ಲಂಘಿಸಿ ಆವರಣದೊಳಗೆ ನುಗ್ಗಲು ಯತ್ನಿಸಿದ ಎನ್‌ಎಸ್‌ಯುಐ (NSUI) ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದರು.
ದೇಶದ್ರೋಹದ ಕೆಲಸ ಎಂದ ರಾಹುಲ್ ಗಾಂಧಿ:
ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಖ್ಯ ಚುನಾವಣಾ ಆಯುಕ್ತರ ನೆರವಿನೊಂದಿಗೆ ದೇಶವನ್ನು ‘ಹೈಜಾಕ್’ ಮಾಡಿದ್ದಾರೆ. ಇವರು ಮತಗಳನ್ನು ಕದಿಯುವ ಮೂಲಕ ಚುನಾವಣಾ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವವನ್ನು ನಾಶಮಾಡುತ್ತಿದ್ದಾರೆ. ಇದು ಅಕ್ಷರಶಃ ‘ದೇಶದ್ರೋಹ’ದ ಕೆಲಸ. ತಪ್ಪು ಮಾಡಿದ ಯಾರೊಬ್ಬರೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ಎಚ್ಚರಿಸಿದರು.
”ದೇಶದ ಶೇ. 64ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ 300 ಸಂಸದರು ಇಂದು ಬೀದಿಗಿಳಿದಿದ್ದೇವೆ. ನಮ್ಮನ್ನು ಭೇಟಿಯಾಗಲು ಚುನಾವಣಾ ಆಯುಕ್ತರು ಏಕೆ ಹಿಂದೇಟು ಹಾಕುತ್ತಿದ್ದಾರೆ? ನಮ್ಮನ್ನು ಏಕೆ ಪೊಲೀಸರು ಬೆದರಿಸಿ ತಡೆಯುತ್ತಿದ್ದಾರೆ?” ಎಂದು ಅವರು ಪ್ರಶ್ನಿಸಿದರು. ಅಲ್ಲದೆ, ಆಕಾಶವಾಣಿ ಭವನದ ಬಳಿ ಸುದ್ದಿ ಸಂಗ್ರಹಿಸುತ್ತಿದ್ದ ಮಾಧ್ಯಮದವರನ್ನೂ ಪೊಲೀಸರು ಬಲವಂತವಾಗಿ ಹೊರಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ವಿಪಕ್ಷಗಳ ಈ ಆರೋಪಗಳು ಮತ್ತು ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, “ಪ್ರತಿಭಟನಾನಿರತ ಯಾವುದೇ ಸಂಸದರಿಂದ ಅಥವಾ ವಿಪಕ್ಷಗಳಿಂದ ಭೇಟಿಗಾಗಿ ನಮ್ಮ ಬಳಿ ಯಾವುದೇ ಅಧಿಕೃತ ಮನವಿ ಬಂದಿಲ್ಲ” ಎಂದು ಸ್ಪಷ್ಟಪಡಿಸಿದೆ. ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿನ ನಿರ್ಧಾರಗಳನ್ನು ಆಯೋಗದ ಮೂವರು ಸದಸ್ಯರ ಸಮಿತಿಯು ಸರ್ವಾನುಮತದಿಂದ ತೆಗೆದುಕೊಂಡಿದೆ ಮತ್ತು ಆಯೋಗದಲ್ಲಿ ಯಾವುದೇ ಒಡಕು ಅಥವಾ ಭಿನ್ನಾಭಿಪ್ರಾಯಗಳಿಲ್ಲ ಎಂದು ಆಯೋಗದ ಮೂಲಗಳು ತಿಳಿಸಿವೆ.
‘ಇಂಡಿಯಾ’ ಒಕ್ಕೂಟದ ಈ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಇದೊಂದು ಕೇವಲ ರಾಜಕೀಯ ನಾಟಕ ಎಂದು ಜರೆದಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಮಾತನಾಡಿ, “ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವ ವಿದೇಶಿ ಮತ್ತು ಭಾರತ ವಿರೋಧಿ ಶಕ್ತಿಗಳ ನಿರೂಪಣೆಗಳಿಗೆ (ನ್ಯರೇಟಿವ್) ಧ್ವನಿಗೂಡಿಸುವುದನ್ನು ನಿಲ್ಲಿಸಬೇಕು. ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದಂತಹ ಸಂಸ್ಥೆಗಳ ಮೇಲೆ ದಾಳಿ ಮಾಡಿ ನಾಟಕವಾಡುವುದನ್ನು ಬಿಟ್ಟು, ಜನರ ಸೇವೆ ಮಾಡುವತ್ತ ಗಮನಹರಿಸಲಿ” ಎಂದು ತಿರುಗೇಟು ನೀಡಿದರು.
ಮತ್ತೋರ್ವ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, “ಚುನಾವಣಾ ಸೋಲಿನ ಹತಾಶೆಯಿಂದಾಗಿ ವಿಪಕ್ಷಗಳು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುತ್ತಿವೆ. ಇದು ರಾಹುಲ್ ಗಾಂಧಿಯವರನ್ನು ಮತ್ತೆ ‘ರಿಲಾಂಚ್’ ಮಾಡಲು ಕಾಂಗ್ರೆಸ್ ಮಾಡುತ್ತಿರುವ ಮತ್ತೊಂದು ಯತ್ನವಷ್ಟೇ,” ಎಂದು ಟೀಕಿಸಿದ್ದಾರೆ.




