ʼಇಂಕ್ವಿಲಾಬ್ ಜಿಂದಾಬಾದ್ʼ ಹುಟ್ಟಿದ್ದು ಭಗತ್‌ ಸಿಂಗ್‌ ಅವರಿಂದಲ್ಲ…

Date:

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ನಡುಗಿಸಿ, ಕೋಟ್ಯಂತರ ಯುವಕರ ರಕ್ತದಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಮಾಂತ್ರಿಕ ಪದಗಳನ್ನೇನಾದರೂ ಉಲ್ಲೇಖಿಸುವುದಾದರೆ, ಅವು ʼಇಂಕ್ವಿಲಾಬ್ ಜಿಂದಾಬಾದ್ʼ. ಈ ಘೋಷಣೆ ಕೇಳಿದ ಕ್ಷಣ ಬಹುತೇಕರ ಮನಸ್ಸಿನಲ್ಲಿ ಮೂಡುವ ಮೊದಲ ಹೆಸರು ಭಗತ್‌ ಸಿಂಗ್‌. ಆದರೆ ಈ ಘೋಷಣೆಯ ಕಥೆ ಭಗತ್ ಸಿಂಗ್ ಅವರಿಂದ ಆರಂಭವಾಗುವುದಿಲ್ಲ. ಅದರ ಇತಿಹಾಸವೂ, ಅದರ ಅರ್ಥವೂ ಅದಕ್ಕಿಂತಲೂ ಆಳವಾದುದು.

- Advertisement -

ಕಾಲ ಬದಲಾಗಿದೆ. ಸಾಮ್ರಾಜ್ಯಗಳು ಕುಸಿದಿವೆ. ಸ್ವಾತಂತ್ರ್ಯಕ್ಕಾಗಿ ನಡೆದ ಆ ಹೋರಾಟ ಇತಿಹಾಸದ ಪುಟ ಸೇರಿದೆ. ಆದರೆ ಶತಮಾನದ ಹಿಂದೆ ಹುಟ್ಟಿಕೊಂಡ ಈ ಪದಗಳು ಮಾತ್ರ ತಮ್ಮ ಪ್ರಸ್ತುತತೆಯನ್ನ ಕಳೆದುಕೊಂಡಿಲ್ಲ. ಈ ದೇಶದ ಯಾವುದೇ ಮೂಲೆಯಲ್ಲಿ ಜನರು ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ, ಹಕ್ಕುಗಳಿಗಾಗಿ ಬೀದಿಗಿಳಿದಾಗ, ಬದಲಾವಣೆಯ ಕನಸು ಕಂಡಾಗ ಎಲ್ಲೋ ಒಂದು ಕಡೆ “ಇಂಕ್ವಿಲಾಬ್ ಜಿಂದಾಬಾದ್” ಪ್ರತಿಧ್ವನಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಹಾಗಾದರೆ, ಈ ಪದಗಳು ಎಲ್ಲಿಂದ ಬಂದವು? ಅವನ್ನು ಮೊದಲು ಯಾರು ಉಚ್ಚರಿಸಿದರು? ಭಗತ್ ಸಿಂಗ್ ಅವರ ಹೆಸರಿನೊಂದಿಗೆ ಈ ಘೋಷಣೆ ಹೇಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿತು? ಮಿಗಿಲಾಗಿ, ಭಗತ್ ಸಿಂಗ್ ಅವರ ದೃಷ್ಟಿಯಲ್ಲಿ “ಇಂಕ್ವಿಲಾಬ್” ಎಂದರೆ ನಿಜಕ್ಕೂ ಏನಾಗಿತ್ತು? ಈ ಪ್ರಶ್ನೆಗಳ ಉತ್ತರ ಹುಡುಕುತ್ತಾ ಹೋದರೆ, ಭಾರತದ ಸ್ವಾತಂತ್ರ್ಯ ಚಳವಳಿಯ ಅತ್ಯಂತ ರೋಚಕ ಮತ್ತು ಚಿಂತನಾತ್ಮಕ ಅಧ್ಯಾಯವೊಂದು ತೆರೆದುಕೊಳ್ಳುತ್ತದೆ.

Advertisements

“ಇಂಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆ ಕೇಳಿದ ಕ್ಷಣ ಬಹುತೇಕರ ಮನಸ್ಸಿನಲ್ಲಿ ಮೂಡುವ ಮೊದಲ ಹೆಸರು ಭಗತ್ ಸಿಂಗ್. ಆದರೆ ಈ ಘೋಷಣೆಯ ಕಥೆ ಭಗತ್ ಸಿಂಗ್ ಅವರಿಂದ ಆರಂಭವಾಗುವುದಿಲ್ಲ. ಅದರ ಇತಿಹಾಸವೂ, ಅದರ ಅರ್ಥವೂ ಅದಕ್ಕಿಂತಲೂ ಆಳವಾದುದು.

image 158
ಮೌಲಾನಾ ಹಸ್ರತ್ ಮೊಹಾನಿ

“ಇಂಕ್ವಿಲಾಬ್” (Inquilab/ಇಂಕಿಲಾಬ್) ಎಂಬ ಪದದ ಮೂಲ ಅರೇಬಿಕ್‌ನ “ಇನ್‌ಕಿಲಾಬ್” (Inqilāb). ಇದರ ಮೂಲ ಅರ್ಥ, “ಆಮೂಲಾಗ್ರ ಬದಲಾವಣೆ” ಅಥವಾ “ಪರಿವರ್ತನೆ”. ನಂತರ ಈ ಪದ ಪರ್ಷಿಯನ್ ಭಾಷೆಯಲ್ಲಿ ಇನ್ನಷ್ಟು ಜನಪ್ರಿಯಗೊಂಡು, ಅಲ್ಲಿಂದ ಉರ್ದು ಭಾಷೆಗೆ ಪ್ರವೇಶಿಸಿತು. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಪದಕ್ಕೆ ಹೊಸ ರಾಜಕೀಯ ಅರ್ಥ ಸಿಕ್ಕಿತು. ಅದು ಅನ್ಯಾಯ, ಶೋಷಣೆ ಮತ್ತು ದಬ್ಬಾಳಿಕೆಯನ್ನು ಕೊನೆಗೊಳಿಸಿ ನ್ಯಾಯಸಮ್ಮತ ಸಮಾಜವನ್ನು ಕಟ್ಟುವ ‘ಕ್ರಾಂತಿ’ಯ ಸಂಕೇತವಾಗಿ ರೂಪುಗೊಂಡಿತು.

“ಜಿಂದಾಬಾದ್” ಎಂಬ ಪದವೂ ಪರ್ಷಿಯನ್ ಮೂಲದ್ದೇ. “ಜಿಂದಾ” ಎಂದರೆ ಜೀವಂತ ಮತ್ತು “ಬಾದ್” ಎಂದರೆ ಇರಲಿ ಅಥವಾ ಆಗಲಿ. “ಜಿಂದಾಬಾದ್” ಎಂದರೆ ಚಿರಾಯುವಾಗಲಿ, ದೀರ್ಘಕಾಲ ಉಳಿಯಲಿ ಅಥವಾ ಜೀವಂತವಾಗಿರಲಿ .

ಹೀಗಾಗಿ “ಇಂಕ್ವಿಲಾಬ್ ಜಿಂದಾಬಾದ್” ಎಂಬುದರ ಅಕ್ಷರಶಃ ಅರ್ಥ “ಕ್ರಾಂತಿ ಚಿರಾಯುವಾಗಲಿ” ಅಥವಾ ಇಂಗ್ಲಿಷ್‌ನಲ್ಲಿ “Long Live the Revolution.” ಆದರೆ ಈ ಘೋಷಣೆಯ ನಿಜವಾದ ಶಕ್ತಿ ಅದು ಹೊತ್ತಿದ್ದ ಸ್ವಾತಂತ್ರ್ಯದ ಕನಸು, ಅನ್ಯಾಯದ ವಿರುದ್ಧದ ಪ್ರತಿರೋಧ ಮತ್ತು ಹೊಸ ಸಮಾಜವನ್ನು ಕಟ್ಟುವ ಆಶಯದಲ್ಲಿತ್ತು. ಅದಕ್ಕಾಗಿಯೇ ಒಂದು ಶತಮಾನ ಕಳೆದರೂ ಈ ಪದಗಳು ಭಾರತದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ತಮ್ಮ ಕಳೆ ಕಳೆದುಕೊಂಡಿಲ್ಲ.

ಈ ಘೋಷಣೆಯ ಮೂಲ ಹುಡುಕುತ್ತಾ ಹೋದರೆ, ಅದು ಸ್ವಾತಂತ್ರ್ಯ ಹೋರಾಟಗಾರ, ಉರ್ದು ಕವಿ, ಪತ್ರಕರ್ತ ಹಾಗೂ ರಾಜಕೀಯ ಚಿಂತಕ ಮೌಲಾನಾ ಹಸ್ರತ್ ಮೊಹಾನಿ ಅವರ ಬಳಿಗೆ ಕರೆದೊಯ್ಯುತ್ತದೆ. 1921ರ ಸುಮಾರಿಗೆ ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಡೆದ ರಾಜಕೀಯ ಸಭೆಗಳಲ್ಲಿ ಅವರು “ಇಂಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆಯನ್ನು ಬಳಸಲು ಆರಂಭಿಸಿದರು. ಆ ಕಾಲದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಅಸಮಾಧಾನ ಹೆಚ್ಚಾಗುತ್ತಿದ್ದರೂ, ದೇಶದ ಬಹುತೇಕ ರಾಜಕೀಯ ನಾಯಕರು ಇನ್ನೂ ಸೀಮಿತ ಸ್ವಾಯತ್ತತೆಯ ಬೇಡಿಕೆಯ ಸುತ್ತಲೇ ಚರ್ಚಿಸುತ್ತಿದ್ದರು. ಆದರೆ ಮೊಹಾನಿ ಮಾತ್ರ ಭಾರತದ ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯನ್ನು ಬಹಳ ಮುಂಚೆಯೇ ಪ್ರತಿಪಾದಿಸಿದ ನಾಯಕರಲ್ಲಿ ಒಬ್ಬರಾಗಿದ್ದರು.

ಅವರ ಬಾಯಲ್ಲಿ ಹುಟ್ಟಿದ ಈ ಘೋಷಣೆ ಮೊದಲಿಗೆ ರಾಜಕೀಯ ಸಭೆಗಳ ಗಡಿಯಲ್ಲೇ ಸೀಮಿತವಾಗಿತ್ತು. ಕೆಲವೇ ವರ್ಷಗಳಲ್ಲಿ ಅದಕ್ಕೆ ಹೊಸ ಜೀವ ತುಂಬಿದವರು ಯುವ ಕ್ರಾಂತಿಕಾರರು. ವಿಶೇಷವಾಗಿ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಸಂಘಟನೆಯ ಸದಸ್ಯರು ಈ ಘೋಷಣೆಯನ್ನು ತಮ್ಮ ಹೋರಾಟದ ಅವಿಭಾಜ್ಯ ಭಾಗವನ್ನಾಗಿ ಮಾಡಿಕೊಂಡರು. ಅವರ ಬಾಯಲ್ಲಿ “ಇಂಕ್ವಿಲಾಬ್ ಜಿಂದಾಬಾದ್” ಬ್ರಿಟಿಷ್ ವಸಾಹತುಶಾಹಿಯ ವಿರುದ್ಧದ ಸವಾಲು, ಶೋಷಣೆಯ ವಿರುದ್ಧದ ಪ್ರತಿಜ್ಞೆ ಮತ್ತು ಹೊಸ ಭಾರತದ ಕನಸಿನ ಪ್ರತಿಧ್ವನಿಯಾಗಿತ್ತು.

ಆ ಪ್ರತಿಧ್ವನಿಗೆ ಅಮರತ್ವ ತಂದುಕೊಟ್ಟವರು ಭಗತ್ ಸಿಂಗ್. 1929ರ ಏಪ್ರಿಲ್ 8. ದೆಹಲಿಯ ಕೇಂದ್ರ ಶಾಸನ ಸಭೆಯಲ್ಲಿ (Central Legislative Assembly) ಬ್ರಿಟಿಷ್ ಸರ್ಕಾರ Public Safety Bill ಮತ್ತು Trade Disputes Bill ಅನ್ನು ಮಂಡಿಸುತ್ತಿತ್ತು. ಈ ಎರಡೂ ಮಸೂದೆಗಳು ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತವೆ ಮತ್ತು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಉದ್ದೇಶ ಹೊಂದಿವೆ ಎಂದು ಭಾವಿಸಿದ್ದ ಕ್ರಾಂತಿಕಾರರು, ದೇಶದ ಗಮನವನ್ನು ಈ ಬೆಳವಣಿಗೆಯತ್ತ ಸೆಳೆಯಲು ಒಂದು ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಂಡರು.

image 159
ಭಗತ್‌ ಸಿಂಗ್

ಅಂದು ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಸಭಾಂಗಣದ ಪ್ರೇಕ್ಷಕರ ಗ್ಯಾಲರಿಯಿಂದ ಕಡಿಮೆ ತೀವ್ರತೆಯ ಎರಡು ಬಾಂಬ್‌ಗಳನ್ನು ಎಸೆದರು. ಆ ಸ್ಫೋಟದ ಉದ್ದೇಶ ಜೀವಹಾನಿ ಉಂಟುಮಾಡುವುದಲ್ಲ, ಬ್ರಿಟಿಷ್ ಸರ್ಕಾರದ ಕಿವಿಗೆ ಭಾರತೀಯರ ಧ್ವನಿಯನ್ನು ತಲುಪಿಸುವುದಾಗಿತ್ತು. ಸ್ಫೋಟದ ಹೊಗೆ ಸಭಾಂಗಣ ತುಂಬಿಕೊಳ್ಳುತ್ತಿದ್ದು. ಆ ಮಬ್ಬಿನಲ್ಲಿ ಇಬ್ಬರೂ ಓಡಿಹೋಗದೆ, ಅಲ್ಲಿಯೇ ನಿಂತು ಗಟ್ಟಿಯಾಗಿ “ಇಂಕ್ವಿಲಾಬ್ ಜಿಂದಾಬಾದ್” ಮತ್ತು “ಸಾಮ್ರಾಜ್ಯಶಾಹಿ ಮುರ್ದಾಬಾದ್” ಎಂದು ಘೋಷಿಸಿದರು. ಬಳಿಕ ಸಭಾಂಗಣದಲ್ಲಿ ಕರಪತ್ರಗಳನ್ನು ಚದುರಿಸಿದರು.

ಆ ಕರಪತ್ರದಲ್ಲಿ ಫ್ರೆಂಚ್ ಕ್ರಾಂತಿಕಾರಿ ಆಗಸ್ಟ್ ವೈಲಾಂ ಅವರ ಪ್ರಸಿದ್ಧ ಮಾತನ್ನು ಉಲ್ಲೇಖಿಸಲಾಗಿತ್ತು.. “ಕಿವುಡರಿಗೆ ಕೇಳಿಸಬೇಕಾದರೆ ದೊಡ್ಡ ಶಬ್ದ ಮಾಡಬೇಕಾಗುತ್ತದೆ.” ಈ ಒಂದು ವಾಕ್ಯ ಆ ಘಟನೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತಿತ್ತು. ಅದು ಹತ್ಯೆಯ ಪ್ರಯತ್ನವಾಗಿರಲಿಲ್ಲ, ಆಡಳಿತದ ಗಮನ ಸೆಳೆಯುವ ರಾಜಕೀಯ ಸಂದೇಶವಾಗಿತ್ತು. ಆದರೆ ಮುಂದಾಗಿದ್ದು ದುರಂತ.

ಭಗತ್ ಸಿಂಗ್ ಅವರೊಂದಿಗೆ ಈ ಘೋಷಣೆ ಎಷ್ಟು ಆಳವಾಗಿ ಬೆಸೆದುಕೊಂಡಿತ್ತೋ, ಅದರ ಅರ್ಥವೂ ಅಷ್ಟೇ ತಪ್ಪಾಗಿ ಅರ್ಥೈಸಲ್ಪಟ್ಟ ಸಂದರ್ಭಗಳೂ ಇವೆ. ಇಂದಿಗೂ ಕೆಲವರು “ಇಂಕ್ವಿಲಾಬ್” ಎಂದರೆ ಬಾಂಬ್, ಬಂದೂಕು, ರಕ್ತಪಾತ ಮತ್ತು ಹಿಂಸಾತ್ಮಕ ಬಂಡಾಯ ಎಂದು ಭಾವಿಸುತ್ತಾರೆ. ಆದರೆ ಭಗತ್ ಸಿಂಗ್ ಅವರ ಸ್ವಂತ ಬರಹಗಳು ಈ ಕಲ್ಪನೆಯನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತವೆ.

1929ರ ಡಿಸೆಂಬರ್‌ನಲ್ಲಿ ಪ್ರಕಟವಾದ “The Meaning of Inquilab Zindabad” ಎಂಬ ಲೇಖನದಲ್ಲಿ ಭಗತ್ ಸಿಂಗ್ ಈ ಘೋಷಣೆಯ ಅರ್ಥವನ್ನು ಸ್ಪಷ್ಟಪಡಿಸಿದ್ದರು. ಅವರ ಪ್ರಕಾರ, “ಇಂಕ್ವಿಲಾಬ್” ಎಂದರೆ ಪ್ರತಿದಿನ ರಕ್ತಪಾತ ನಡೆಯಬೇಕು ಅಥವಾ ಆಯುಧ ಹಿಡಿದು ಹೋರಾಡಬೇಕು ಎಂಬುದಲ್ಲ. ಸಮಾಜವನ್ನು ಅನ್ಯಾಯ, ಶೋಷಣೆ ಮತ್ತು ಅಸಮಾನತೆಯಿಂದ ಮುಕ್ತಗೊಳಿಸುವ ನಿರಂತರ ಪ್ರಕ್ರಿಯೆಯೇ ನಿಜವಾದ ಕ್ರಾಂತಿ ಎಂದು ಅವರು ವಿವರಿಸುತ್ತಾರೆ.

ಅವರ ಮಾತಿನಲ್ಲಿ, ಸಮಾಜದಲ್ಲಿ ಯಾವುದೇ ಒಂದು ವ್ಯವಸ್ಥೆ ಶಾಶ್ವತವಾಗಿ ಗಟ್ಟಿಯಾಗಿಬಿಟ್ಟಾಗ, ಅದು ಪ್ರಗತಿಗೆ ಅಡ್ಡಿಯಾಗುತ್ತದೆ. ಜನರು ಹಳೆಯ ಚಿಂತನೆಗಳಿಗೆ ಅಂಟಿಕೊಂಡರೆ, ಹೊಸ ವಿಚಾರಗಳಿಗೆ ಜಾಗವೇ ಇರುವುದಿಲ್ಲ. ಅಂತಹ ಜಡತ್ವವನ್ನು ಮುರಿದು, ಸಮಾಜವನ್ನು ಸದಾ ಮುಂದಕ್ಕೆ ಕೊಂಡೊಯ್ಯುವ ಚೈತನ್ಯವೇ “ಇಂಕ್ವಿಲಾಬ್”.

ಈ ಕಾರಣಕ್ಕಾಗಿಯೇ ಭಗತ್ ಸಿಂಗ್ ಅವರಿಗೆ ಕ್ರಾಂತಿ ಎಂದರೆ ಕೇವಲ ರಾಜಕೀಯ ಅಧಿಕಾರದ ಬದಲಾವಣೆಯಾಗಿರಲಿಲ್ಲ. ಅದು ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಶೋಷಣೆಯ ಅಂತ್ಯ ಮತ್ತು ವೈಜ್ಞಾನಿಕ ಮನೋಭಾವದ ಸ್ಥಾಪನೆಯೊಂದಿಗೆ ಸಂಬಂಧಿಸಿದ ವಿಶಾಲ ಪರಿಕಲ್ಪನೆಯಾಗಿತ್ತು. ಅವರ ಪ್ರಸಿದ್ಧ ಮಾತಾದ “ಕ್ರಾಂತಿಯ ಕತ್ತಿಗೆ ವಿಚಾರಗಳ ಸಾಣೆ ಹಿಡಿಯಬೇಕು” ಎಂಬುದು ಇದೇ ಚಿಂತನೆಯ ಸಾರ ಹೇಳುತ್ತದೆ. ನಿಜವಾದ ಕ್ರಾಂತಿ ಬಂದೂಕಿನಿಂದಲ್ಲ, ವಿಚಾರಗಳಿಂದ ಹುಟ್ಟುತ್ತದೆ.

ಇದನ್ನೂ ಓದಿ: ದೆಹಲಿಯ ವಿದ್ಯಾರ್ಥಿ ಚಳವಳಿಯಲ್ಲಿ ಸಿಕ್ಕ ʼಇರ್ಫಾನ್‌ ಹುಸೇನ್ʼ ಎಂಬ ʼಒರಟು ವಜ್ರʼ

ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಿಗೆ 1931ರ ಮಾರ್ಚ್‌ 23ರಂದು ಗಲ್ಲು ಶಿಕ್ಷೆ ಜಾರಿಯಾದ ನಂತರ, “ಇಂಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆ ಇನ್ನಷ್ಟು ಪ್ರಬಲವಾಗಿ ದೇಶದಾದ್ಯಂತ ಮೊಳಗತೊಡಗಿತು. ಬ್ರಿಟಿಷ್ ಸರ್ಕಾರಕ್ಕೆ ಅದು ಸಾಮ್ರಾಜ್ಯಶಾಹಿಯನ್ನು ಸವಾಲು ಹಾಕುವ ಭಾರತೀಯರ ಅಚಲ ಸಂಕಲ್ಪದ ಸಂಕೇತವಾಗಿದ್ದರೆ, ಲಕ್ಷಾಂತರ ಭಾರತೀಯ ಯುವಕರಿಗೆ ಭಯವನ್ನು ಜಯಿಸುವ ಧೈರ್ಯದ ಮಂತ್ರವಾಯಿತು. ಒಂದು ಘೋಷಣೆಯಾಗಿ ಹುಟ್ಟಿಕೊಂಡ ಈ ಪದಗಳು ಕ್ರಮೇಣ ಹೋರಾಟದ ಸಾಂಪ್ರದಾಯಿಕ ಧ್ವನಿಯಾಗಿ, ಕ್ರಾಂತಿಯ ಅಕ್ಷರ ರೂಪವಾಗಿ, ಇಂದಿಗೂ ಇತಿಹಾಸ ನೆನಪಿಸುವ ಜೀವಂತ ಪ್ರತೀಕವಾಗಿ ಉಳಿದುಕೊಂಡಿವೆ.

ಸ್ವಾತಂತ್ರ್ಯ ದೊರೆತ ನಂತರವೂ ಘೋಷಣೆಯ ಪಯಣ ನಿಂತಿಲ್ಲ. ಕಾಲ ಬದಲಾದಂತೆ ಅದರ ಬಳಕೆಯ ಸಂದರ್ಭಗಳೂ ಬದಲಾದವು. ಪ್ರತಿಯೊಂದು ತಲೆಮಾರೂ ತನ್ನ ಕಾಲದ ಸಮಸ್ಯೆಗಳಿಗೆ ಅನುಗುಣವಾಗಿ “ಇಂಕ್ವಿಲಾಬ್” ಎಂಬ ಪದಕ್ಕೆ ಹೊಸ ಅರ್ಥವನ್ನು ನೀಡಿತು. ವಿದ್ಯಾರ್ಥಿ ಚಳವಳಿಗಳಲ್ಲಿ, ಕಾರ್ಮಿಕರ ಹೋರಾಟಗಳಲ್ಲಿ, ರೈತರ ಆಂದೋಲನಗಳಲ್ಲಿ, ಸಾಮಾಜಿಕ ನ್ಯಾಯಕ್ಕಾಗಿ ನಡೆದ ಚಳವಳಿಗಳಲ್ಲಿ ಮತ್ತು ನಾಗರಿಕ ಹಕ್ಕುಗಳ ಹೋರಾಟಗಳಲ್ಲಿ ಈ ಘೋಷಣೆ ಮತ್ತೆ ಮತ್ತೆ ಕೇಳಿಬಂತು. ಕೇಳಿ ಬರುತ್ತಿದೆ. ಕೇಳಿ ಬರಬೇಕು.

ಈ ಘೋಷಣೆಯ ನಿಜವಾದ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಅದನ್ನು ಭಾವೋದ್ರೇಕವಾಗಿ ಘೋಷಿಸುವುದು ಸಾಲದು. ಅದರ ಹಿಂದಿರುವ ಇತಿಹಾಸವನ್ನು, ಅದನ್ನು ಮೊದಲು ಜನಪ್ರಿಯಗೊಳಿಸಿದ ಮೌಲಾನಾ ಹಸ್ರತ್ ಮೊಹಾನಿಯವರ ಪಾತ್ರವನ್ನು, ಅದಕ್ಕೆ ಅಮರತ್ವ ನೀಡಿದ ಭಗತ್ ಸಿಂಗ್ ಅವರ ತ್ಯಾಗವನ್ನು ಮತ್ತು ಅದಕ್ಕಿಂತ ಮುಖ್ಯವಾಗಿ “ಇಂಕ್ವಿಲಾಬ್” ಎಂದರೆ ಸಮಾಜದ ನಿರಂತರ ಪ್ರಗತಿ ಎಂಬ ಅವರ ಚಿಂತನೆಯನ್ನು ಒಳಗಿಳಿಸಿಕೊಳ್ಳಬೇಕು.

WhatsApp Image 2025 05 16 at 6.54.26 PM
Sub Editor at Eedina.com | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್‌ | ನ.4ರಂದು ಸಂಗ್‌ರೂರ್‌ನಲ್ಲಿ ʼಇನ್ಸಾಫ್ ರ‍್ಯಾಲಿʼ; ರಾಹುಲ್ ಗಾಂಧಿ ಭಾಗಿ

ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ...

ಬೀದರ್‌ | ವಸತಿ ಶಾಲೆಗಳ ಪ್ರಾಂಶುಪಾಲರು, ಮೇಲ್ವಿಚಾರಕರ ವರ್ಗಾವಣೆಗೆ ಡಿವಿಪಿ ಆಗ್ರಹ

ಬೀದರ್ ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ...

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...

2027ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ...