ಬಾಗಲಕೋಟೆ ಕ್ಷೇತ್ರದಲ್ಲಿ ರಾಜಕೀಯ ಕಾವು ಜೋರಾಗಿದೆ. ಹಿಂದೆ ಉಪಚುನಾವಣೆಯ ಮೂಲಕ ಈ ಕ್ಷೇತ್ರವನ್ನು ತನ್ನ ಮುಡಿಗೇರಿಸಿಕೊಂಡಿದ್ದ ಬಿಜೆಪಿ, ಮತ್ತೊಮ್ಮೆ ಅದೇ ಮಾರ್ಗದಲ್ಲಿ ಜಯ ಸಾಧಿಸಿ ಕೋಟೆಯನ್ನು ಉಳಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಇನ್ನೊಂದೆಡೆ, ತಂದೆ ಎಚ್‌ವೈ ಮೇಟಿ ಅಕಾಲಿಕ ನಿಧನದಿಂದ ಖಾಲಿಯಾದ ಶಾಸಕ ಸ್ಥಾನವನ್ನು ಪುತ್ರ ಉಮೇಶ್ ಮೇಟಿ ತುಂಬುತ್ತಾರೆಯೇ..? ಎಂಬ ಪ್ರಶ್ನೆ ಜನರಲ್ಲಿ ಮನೆಮಾಡಿದೆ. ಈ ಕೌತುಕಕ್ಕೆ ತೆರೆ ಬೀಳಲು ಬರೀ ಒಂದು ದಿನ ಬಾಕಿಯಿದೆ.
ಶಾಸಕರಾಗಿದ್ದ ಎಚ್ ವೈ ಮೇಟಿ ಅವರ ನಿಧನದಿಂದ ಖಾಲಿಯಾಗಿದ್ದ ಸ್ಥಾನಕ್ಕೆ ಏಪ್ರಿಲ್ 9ರಂದು ಮತದಾನ ನಡೆದಿದ್ದರೂ ಪಂಚರಾಜ್ಯಗಳ ಚುನಾವಣೆಯ ಕಾರಣದಿಂದ ಫಲಿತಾಂಶವನ್ನು ಮೇ 4ಕ್ಕೆ ಮುಂದೂಡಲಾಗಿತ್ತು. ದೀರ್ಘ ನಿರೀಕ್ಷೆಯ ನಂತರ ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆ ಎರಡೂ ಪಕ್ಷಗಳ ಅಭ್ಯರ್ಥಿಗಳು, ನಾಯಕರು ಹಾಗೂ ಕಾರ್ಯಕರ್ತರಲ್ಲಿ ಕಾತುರ ಹೆಚ್ಚಾಗಿದೆ. ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಗೌರವದ ವಿಷಯವಾಗಿದ್ದರೆ, ಕಠಿಣ ಪೈಪೋಟಿಯ ಮಧ್ಯೆ ಜಯಗಳಿಸಿ ಆಡಳಿತಾರೂಢ ಪಕ್ಷಕ್ಕೆ ಸವಾಲು ಹಾಕುವುದು ಬಿಜೆಪಿಯ ಉದ್ದೇಶವಾಗಿದೆ.
ಉಪಚುನಾವಣೆಯಲ್ಲಿ ಮೇಟಿ ಅವರ ಕುಟುಂಬಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಲಾಗಿತ್ತು. ಪಕ್ಷದ ಅಭ್ಯರ್ಥಿ ಗೆಲ್ಲಲೇಬೇಕು ಎಂದು ಹಠ ತೊಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು. ದೀರ್ಘಕಾಲದ ಆತ್ಮೀಯ ಎಚ್ ವೈ ಮೇಟಿ ಅವರ ಪುತ್ರ ಉಮೇಶ ಮೇಟಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರ ಉಳಿಸಿಕೊಳ್ಳಲು ಸಿಎಂ ಐದು ದಿನಗಳವರೆಗೆ ಕ್ಷೇತ್ರದಲ್ಲಿ ಬಿಡಾರ ಹೂಡಿದ್ದರು. ಸಿಎಂ ಸೇರಿದಂತೆ ಸಚಿವರ ದಂಡೇ ಬಾಗಲಕೋಟೆಗೆ ಬಂದಿಳಿದಿತ್ತು. ಜತೆಗೆ ಪ್ರಬಲವಾಗಿರುವ ಬಿಜೆಪಿ ಮಣಿಸಲು ನಾನಾ ತಂತ್ರಗಾರಿಕೆಯನ್ನೂ ಹೆಣೆಯಲಾಗಿತ್ತು.
ಗೆಲುವು ಸಾಧಿಸಬೇಕೆಂಬ ದೃಢ ಸಂಕಲ್ಪದೊಂದಿಗೆ ಬಿಜೆಪಿ ಎಲ್ಲಾ ರೀತಿಯ ತಂತ್ರಗಳನ್ನು ಅಳವಡಿಸಿಕೊಂಡು ಕಣಕ್ಕಿಳಿದಿತ್ತು. ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜೇಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಹಿರಿಯ ನಾಯಕರು ಮತ್ತು ಕೇಂದ್ರ ಸಚಿವರು ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇದಲ್ಲದೆ, ಬಿಜೆಪಿಯಿಂದ ಉಚ್ಚಾಟಿತಗೊಂಡ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಕೂಡ ಪ್ರಚಾರ ವೇದಿಕೆಗೆ ತರಲಾಗಿತ್ತು. ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಎಲ್ಲ ನಾಯಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಬಲ ತುಂಬಿದ್ದರು.
ಆಡಳಿತರೂಢ ಕಾಂಗ್ರೆಸ್ ಪಾಲಿಗೆ ಉಪಚುನಾವಣೆ ಅಗ್ನಿಪರೀಕ್ಷೆಯಿದ್ದಂತೆ. ಕುರ್ಚಿ ಕಾದಾಟ ಜೋರಾಗಿರುವ ಸಂದರ್ಭದಲ್ಲಿ ಗೆಲುವು ಪಡೆದರೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ಲಸ್ ಪಾಯಿಂಟ್. ಜತೆಗೆ ಉತ್ತರ ಕರ್ನಾಟಕದಲ್ಲಿ ತಾವು ಬಲಾಡ್ಯ ನಾಯಕ ಎಂದು ಬಿಂಬಿಸಿದಂತಾಗುತ್ತದೆ. ಕಾಂಗ್ರೆಸ್ ತೆಕ್ಕೆಯಲ್ಲಿರುವ ಕ್ಷೇತ್ರ ಕಸಿದುಕೊಂಡರೆ ಬಿಜೆಪಿಗೆ 2028ರ ಚುನಾವಣೆಯ ಗೆಲುವಿಗೆ ಏಣಿ ದೊರೆತಂತೆ.
ರಾಜಕೀಯ ತಜ್ಞರ ಲೆಕ್ಕಾಚಾರದ ಪ್ರಕಾರ ಕ್ಷೇತ್ರದಲ್ಲಿ ಫೋಟೊ ಫಿನಿಶ್ ಫಲಿತಾಂಶ ಬರಲಿದೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್ ಮುಖಂಡರು 10 ರಿಂದ 12 ಸಾವಿರ ಮತಗಳ ಅಂತರದಿಂದ ಗೆಲುವು ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು 10 ಸಾವಿರ ಮತಗಳಿಂದ ಜಯಗಳಿಸುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಗೆಲುವು ಯಾರ ತೆಕ್ಕೆಗೆ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



