ಹಿಮಕಂದರದಲ್ಲಿ 6 ದಿನ ಕಳೆದ ದಾವಾ ಶೆರ್ಪಾ: ಎವರೆಸ್ಟ್ ‘ಕುರಿಗಾಹಿ’ಗಳ ‘ಮೂರು ಶ್ವಾಸಕೋಶ’ದ ರಹಸ್ಯ!

Date:

ಮೇ 29ರಂದು ಶಿಖರದಿಂದ ಇಳಿಯುವಾಗ ದಾವಾ ಶೆರ್ಪಾ ಅವರು ತಮ್ಮ ಆರೋಹಣ ತಂಡದಿಂದ ಬೇರ್ಪಟ್ಟು ಕಣ್ಮರೆಯಾಗಿದ್ದರು. 7,000 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದಲ್ಲಿ, ಪ್ರತಿಕೂಲ ಹವಾಮಾನದಲ್ಲಿ ಅವರು ಸುಮಾರು ಮೂರು ದಿನಗಳ ಕಾಲ ಹಿಮಪಾತದಿಂದ ಆವೃತವಾದ ಕಂದಕದಲ್ಲಿ ಸಿಲುಕಿಕೊಂಡಿದ್ದರು. ಆರು ದಿನಗಳ ನಂತರ ಬೇಸ್ ಕ್ಯಾಂಪ್‌ಗೆ ತೆವಳಿಕೊಂಡು ಬರುತ್ತಿದ್ದಾಗ ಅವರನ್ನು ರಕ್ಷಣಾ ತಂಡವು ಪತ್ತೆ ಹಚ್ಚಿದೆ.

ಜಗತ್ತಿನ ಅತ್ಯಂತ ಎತ್ತರದ, ಭೀಕರ ಹಾಗೂ ರಮಣೀಯ ತಾಣ ಹಿಮಾಲಯ. ಸಮುದ್ರ ಮಟ್ಟದಿಂದ 7,300 ಮೀಟರ್‌ಗಿಂತಲೂ (24,000 ಅಡಿ) ಹೆಚ್ಚು ಎತ್ತರವಿರುವ ಹಿಮಾಲಯದಲ್ಲಿ ಸುಮಾರು 110ಕ್ಕೂ ಹೆಚ್ಚು ಶಿಖರಗಳಿವೆ. ಈ ಹಿಮದ ಸಾಮ್ರಾಜ್ಯದಲ್ಲಿ ಸಾಮಾನ್ಯ ಮನುಷ್ಯನಿಗೆ ಉಸಿರಾಡುವುದೂ ಒಂದು ಸವಾಲು. ಯಾಕೆಂದರೆ ಇಲ್ಲಿ ತಾಪಮಾನ ಅತಿ ಕಡಿಮೆ, ಹಿಮಗಾಳಿ ಬೀಸುತ್ತಿರುತ್ತದೆ. ಎತ್ತರಕ್ಕೆ ಸಾಗಿದಂತೆ ಆಮ್ಲಜನಕ ಪ್ರಮಾಣ ಕುಸಿಯುತ್ತದೆ. ಇಂತಹ ಪ್ರದೇಶದಲ್ಲಿ ಸಾವಿಗೂ ಸೆಡ್ಡು ಹೊಡೆದು ನಿಲ್ಲುವ ಒಂದು ಅದ್ಭುತ ಮಾನವ ಸಮುದಾಯವಿದೆ, ಅವರೇ ಶೆರ್ಪಾಗಳು. ಎವರೆಸ್ಟ್ ಶಿಖರವನ್ನು ಏರಬೇಕು ಎಂಬ ಕನಸು ಹೊತ್ತ ಸಾಹಸಿಗಳಿಗೆ ಹೆಗಲಾಗುವವರು, ಹಿಮದ ಹಾದಿಯಲ್ಲಿ ದಾರಿದೀಪವಾಗುವ ಈ ಶೆರ್ಪಾಗಳನ್ನು ‘ಎವರೆಸ್ಟ್‌ನ ಕುರಿಗಾಹಿಗಳು’ ಅಥವಾ ‘ಹಿಮದ ರಾಜಕುಮಾರರು’ ಎಂದೂ ಕರೆಯಲಾಗುತ್ತದೆ.

- Advertisement -

ಇತ್ತೀಚೆಗೆ ಹಿಮಾಲಯದ ಗಿರಿಕಂದರಗಳಲ್ಲಿ ಸಂಭವಿಸಿದ ಒಂದು ಘಟನೆ ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. 52 ವರ್ಷ ವಯಸ್ಸಿನ, ಅನುಭವಿ ಪರ್ವತಾರೋಹಿ ದಾವಾ ಶೆರ್ಪಾ ಅವರು ಹಿಮದ ಕಂದರದಲ್ಲಿ ನಾಪತ್ತೆಯಾಗಿ, ಆರು ದಿನಗಳ ಕಾಲ ಯಾವುದೇ ಆಹಾರವಿಲ್ಲದೆ, ಮೂಳೆ ಹೆಪ್ಪುಗಟ್ಟಿಸುವ ಚಳಿಯಲ್ಲಿಯೂ ಬದುಕಿ ಬಂದಿದ್ದಾರೆ. ಈ ಘಟನೆಯನ್ನು ಹಲವರು ಪವಾಡವೆಂದರೆ, ಇನ್ನು ಕೆಲವರು ಶೆರ್ಪಾ ಸಮುದಾಯದ ಅಸಾಧಾರಣ ಜೈವಿಕ ಶಕ್ತಿಯನ್ನು ವಿವರಿಸಿದ್ದಾರೆ. ವಿಜ್ಞಾನಿಗಳನ್ನು ಮತ್ತು ವೈದ್ಯಕೀಯ ಲೋಕವನ್ನು ದಂಗಾಗಿಸಿರುವ ಈ ಶೆರ್ಪಾಗಳಿಗೆ ಮೂರು ಶ್ವಾಸಕೋಶಗಳಿವೆ ಎಂಬ ನಂಬಿಕೆಯೂ ಇದೆ. ದಾವಾ ಶೆರ್ಪಾ ಅವರು ಸಾವಿನ ದವಡೆಯಿಂದ ಮರಳಿ ಬರಲು ಮೂರು ಶ್ವಾಸಕೋಶಗಳು ಇರುವುದೇ ಕಾರಣ ಎಂದು ಹೇಳುವವರೂ ಇದ್ದಾರೆ. ಎವರೆಸ್ಟ್ ‘ಕುರಿಗಾಹಿ’ಗಳ ಮೂರು ಶ್ವಾಸಕೋಶದ ರಹಸ್ಯವೇನು? ದಾವಾ ಶೆರ್ಪಾ ಬದುಕುಳಿದ ಹಿಂದಿನ ರಹಸ್ಯವೇನು ಎಂಬುದರ ಒಂದು ರೋಚಕ ಸತ್ಯ ತಿಳಿಯೋಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ -1 | ಶಿಖರಗಳ ನಡುವೆ ಸಾಗಿದಷ್ಟು ಸಿಕ್ಕಿದ್ದು ನೆಮ್ಮದಿ

6 ದಿನಗಳ ಕಾಲ ಕಂದರದಲ್ಲಿದ್ದ ದಾವಾ ಶೆರ್ಪಾ!

ಇತ್ತೀಚೆಗೆ ಹಿಮಾಲಯದ ದುರ್ಗಮ ಗಿರಿಕಂದರದಲ್ಲಿ 52 ವರ್ಷದ ಅನುಭವಿ ದಾವಾ ಶೆರ್ಪಾ ಕಾಣೆಯಾಗಿದ್ದರು. ಆರು ದಿನಗಳ ಕಾಲ ಆಹಾರವಿಲ್ಲದೆ ಬದುಕಿ ಬಂದಿದ್ದಾರೆ. ಇದು ಪವಾಡ ಎನ್ನುವವರೂ ಇದ್ದಾರೆ, ಇದು ಶೆರ್ಪಾರ ದೈಹಿಕ ಮತ್ತು ಮಾನಸಿಕ ಶಕ್ತಿಯ ಪ್ರತೀಕ ಎನ್ನುವವರೂ ಇದ್ದಾರೆ. ಹಿಮಾಲಯದ ಕಂದರಗಳಲ್ಲಿ ತಾಪಮಾನವು ಮೈನಸ್ ಡಿಗ್ರಿ ದಾಟುತ್ತದೆ. ಅಲ್ಲಿ ಕೇವಲ ಒಂದೆರಡು ಗಂಟೆಗಳ ಕಾಲ ಸರಿಯಾದ ಬೆಚ್ಚನೆಯ ಬಟ್ಟೆ ಇಲ್ಲದಿದ್ದರೆ ‘ಹೈಪೋಥರ್ಮಿಯಾ’ (ದೇಹದ ಉಷ್ಣತೆ ತೀವ್ರವಾಗಿ ಕುಸಿಯುವುದು) ಆಗಿ ಮನುಷ್ಯರು ಸತ್ತುಹೋಗುತ್ತಾರೆ. ಅಂತಹ ಜಾಗದಲ್ಲೇ ಆರು ದಿನಗಳ ಕಾಲ ದಾವಾ ಶೆರ್ಪಾ ಬದುಕುಳಿದಿದ್ದಾರೆ.

ಮೇ 29 ರಂದು ಶಿಖರದಿಂದ ಇಳಿಯುವಾಗ ದಾವಾ ಶೆರ್ಪಾ ಅವರು ತಮ್ಮ ಆರೋಹಣ ತಂಡದಿಂದ ಬೇರ್ಪಟ್ಟು ಕಣ್ಮರೆಯಾಗಿದ್ದರು. 7,000 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದಲ್ಲಿ, ಪ್ರತಿಕೂಲ ಹವಾಮಾನದಲ್ಲಿ ಅವರು ಸುಮಾರು ಮೂರು ದಿನಗಳ ಕಾಲ ಹಿಮಪಾತದಿಂದ ಆವೃತವಾದ ಕಂದಕದಲ್ಲಿ ಸಿಲುಕಿಕೊಂಡಿದ್ದರು. ಆರು ದಿನಗಳ ನಂತರ ಬೇಸ್ ಕ್ಯಾಂಪ್‌ಗೆ ತೆವಳಿಕೊಂಡು ಬರುತ್ತಿದ್ದಾಗ ಅವರನ್ನು ರಕ್ಷಣಾ ತಂಡವು ಪತ್ತೆ ಹಚ್ಚಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನವನ ದೇಹವು ಸಾಮಾನ್ಯವಾಗಿ ಆಹಾರವಿಲ್ಲದೆ ಕೆಲವು ದಿನಗಳ ಕಾಲ ಇರಬಹುದು. ಆದರೆ ನೀರಿಲ್ಲದೆ ಇರುವುದು ಕಷ್ಟ. ಆದರೆ ಶೆರ್ಪಾ ಆಹಾರ ನೀರಿಲ್ಲದೆ ಬದುಕಿದ್ದಾರೆ. ದಾವಾ ಶೆರ್ಪಾ ಸುತ್ತಲೂ ಇದ್ದ ಹಿಮವನ್ನೇ ಕರಗಿಸಿ ನೀರನ್ನಾಗಿ ಬಳಸಿಕೊಂಡಿರಬಹುದು ಎಂದೂ ತಜ್ಞರು ಹೇಳುತ್ತಾರೆ. ಅವರ ದೇಹದಲ್ಲಿದ್ದ ‘ಶೆರ್ಪಾ ಜೀನ್‌ಗಳು’ ಅವರ ಚಯಾಪಚಯ ಕ್ರಿಯೆಯನ್ನು ಅತ್ಯಂತ ನಿಧಾನಗೊಳಿಸಿ, ದೇಹದಲ್ಲಿದ್ದ ಕೊಬ್ಬನ್ನೇ ಶಕ್ತಿಯಾಗಿ ಬಳಸಿಕೊಳ್ಳಲು ಸಹಾಯ ಮಾಡಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಶೆರ್ಪಾಗಳಿಗೆ ‘ಮೂರು ಶ್ವಾಸಕೋಶಗಳು’ ಇವೆಯೇ?

ದೈಹಿಕವಾಗಿ ಶೆರ್ಪಾಗಳಿಗೆ ಸಾಮಾನ್ಯ ಮನುಷ್ಯರಂತೆ ಎರಡೇ ಶ್ವಾಸಕೋಶಗಳು ಇರುತ್ತವೆ. ಆದರೆ ಅತಿ ಎತ್ತರದ, ಆಮ್ಲಜನಕವೇ ಇಲ್ಲ ಎಂದು ಹೇಳಬಹುದಾದ ಜಾಗಗಳಲ್ಲಿ ಅವರು ಬದುಕುವ, ತೋರುವ ಅದ್ಭುತ ದೈಹಿಕ ಸಾಮರ್ಥ್ಯವನ್ನು ಕಂಡು ಜನಪ್ರಿಯವಾಗಿ ಅವರಿಗೆ “ಮೂರು ಶ್ವಾಸಕೋಶಗಳಿವೆ” ಎಂದು ಹೇಳಲಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಸಾವಿರಾರು ವರ್ಷಗಳಿಂದ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಶೆರ್ಪಾಗಳ ದೇಹದಲ್ಲಿ ಅದ್ಭುತವಾದ ವಿಕಸನ ನಡೆದಿದೆ.

ಸಾಮಾನ್ಯ ಮನುಷ್ಯರು ಎತ್ತರಕ್ಕೆ ಹೋದಂತೆ ಅವರ ರಕ್ತ ದಪ್ಪಗಾಗುತ್ತದೆ ಅಥವಾ ಹೆಪ್ಪುಗಟ್ಟುತ್ತದೆ. ಅಂದರೆ ಆಮ್ಲಜನಕದ ಕೊರತೆಯನ್ನು ನೀಗಿಸಲು ದೇಹವು ಕೆಂಪು ರಕ್ತಕಣಗಳನ್ನು ಹೆಚ್ಚು ಉತ್ಪಾದಿಸುತ್ತದೆ. ಇದರಿಂದಾಗಿ ಹೃದಯದ ಮೇಲೆ ಒತ್ತಡ ಉಂಟಾಗುತ್ತದೆ. ಇದಕ್ಕೆ altitude sickness ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಕಾಶ್ಮೀರ ದಾಟಿ ಕಾರ್ಗಿಲ್, ಲಡಾಖ್ ಸಾಗುವಾಗ ಆ ವಾತಾವರಣಕ್ಕೆ ದೇಹ ಒಗ್ಗಿಕೊಳ್ಳುವವರೆಗೂ ಈ ಒತ್ತಡ ನಮ್ಮ ಅನುಭವಕ್ಕೆ ಬರುತ್ತದೆ. ಆದರೆ ಶೆರ್ಪಾಗಳ ರಕ್ತ ಅಷ್ಟೊಂದು ದಪ್ಪಗಾಗುವುದಿಲ್ಲ.

ಶೆರ್ಪಾಗಳ ರಕ್ತ ಹಿಮೋಗ್ಲೋಬಿನ್ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಾಗಿಯೇ ಉಳಿಯುತ್ತದೆ ಅಥವಾ ಅತಿ ಹೆಚ್ಚು ಏರದೆ ನಿಯಂತ್ರಣದಲ್ಲಿರುತ್ತದೆ. EPAS1 (HIF-2α) ಜೀನ್‌ನ ವ್ಯತ್ಯಾಸದಿಂದಾಗಿ ಇದು ಸಾಧ್ಯವಾಗುತ್ತದೆ. ಹಾಗೆಯೇ ಶೆರ್ಪಾಗಳ ಶ್ವಾಸಕೋಶದ ಗಾತ್ರ ಮತ್ತು ರಕ್ತನಾಳಗಳ ಜಾಲವು ಸಾಮಾನ್ಯರಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಶೆರ್ಪಾಗಳ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಪ್ರಮಾಣ ಹೆಚ್ಚಿರುತ್ತದೆ. ಇದು ರಕ್ತನಾಳಗಳನ್ನು ಅಗಲಗೊಳಿಸಿ, ಆಮ್ಲಜನಕವು ದೇಹದ ಎಲ್ಲಾ ಭಾಗಗಳಿಗೆ ಸರಾಗವಾಗಿ ತಲುಪುವಂತೆ ಮಾಡುತ್ತದೆ. ಇದರಿಂದಾಗಿಯೇ ಸಾಮಾನ್ಯ ಪರ್ವತಾರೋಹಿಗಳು ಆಮ್ಲಜನಕದ ಸಿಲಿಂಡರ್ ಹಿಡಿದು ಸಾಗುವಾಗ ಶೆರ್ಪಾಗಳು ಭಾರವಾದ ಮೂಟೆಗಳನ್ನು ಬೆನ್ನಿಗೆ ಹಾಕಿಕೊಂಡು ಓಡಾಡಬಲ್ಲರು!

ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು (ಮುಖ್ಯವಾಗಿ ಯುಕೆ ನ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ – UCL) ಶೆರ್ಪಾಗಳ ರಕ್ತ ಮತ್ತು ಜೀವಕೋಶಗಳ ಮೇಲೆ ನಡೆಸಿದ ಸುದೀರ್ಘ ಸಂಶೋಧನೆಗಳು ಇದಕ್ಕೆ ಮೂಲ. ಈ ಸಂಶೋಧನಾ ವರದಿಗಳು ಪ್ರಖ್ಯಾತ ಜಾಗತಿಕ ವಿಜ್ಞಾನ ಪತ್ರಿಕೆಯಾದ PNAS (Proceedings of the National Academy of Sciences) ನಲ್ಲಿ ಪ್ರಕಟವಾಗಿವೆ.

ಇದನ್ನು ಓದಿದ್ದೀರಾ? ಎವರೆಸ್ಟ್ ಶಿಖರದಿಂದ ಹಿಂತಿರುಗುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳ ಸಾವು

ನಮ್ಮಂತಲ್ಲ ಶೆರ್ಪಾ ಜೀನ್‌ಗಳು!

ಶೆರ್ಪಾ ಜನರಲ್ಲಿ ಜೀನ್‌ಗಳು ಸಾಮಾನ್ಯ ಜನರಿಗಿಂತ ವಿಭಿನ್ನವಾಗಿವೆ. ಈ ಜೀನ್‌ಗಳು ಹಿಮಾಲಯದಂತಹ ಎತ್ತರ ಪ್ರದೇಶದಲ್ಲಿ ಬದುಕಲು ಸಹಕಾರಿಯಾಗಿದೆ.

EPAS1 (HIF-2α) – (Endothelial PAS Domain-Containing Protein 1): ಇದು ಆಮ್ಲಜನಕದ ಮಟ್ಟವನ್ನು ನಿಯಂತ್ರಿಸುವ ಪ್ರಮುಖ ಜೀನ್. ಶೆರ್ಪಾ ಮತ್ತು ಟಿಬೆಟಿಯನ್ ಜನರಲ್ಲಿ ಇದರ ನಿರ್ದಿಷ್ಟ ವ್ಯತ್ಯಾಸಗಳು ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ನಿರ್ವಹಿಸುತ್ತವೆ. ಆದ್ದರಿಂದ ರಕ್ತ ದಪ್ಪಗಾಗದೆ, ಎತ್ತರದಲ್ಲಿರುವ ಕಡಿಮೆ ಆಮ್ಲಜನಕವನ್ನೇ ಸರಿಯಾಗಿ ಬಳಸಿ ಬದುಕಲು ಸಾಧ್ಯವಾಗುತ್ತದೆ. ಈ ವ್ಯತ್ಯಾಸವು ಡೆನಿಸೋವನ್ (Denisovan – ಮಾನವ ವಿಕಾಸದ ಹಂತದಲ್ಲಿ ಭೂಮಿಯಲ್ಲಿದ್ದ ಒಂದು ಪ್ರತ್ಯೇಕ ಪ್ರಾಚೀನ ಮಾನವ ಪ್ರಭೇದ) ಜನರಿಂದ ಬಂದಿದೆ ಎಂದು ಅಧ್ಯಯನಗಳು ಹೇಳುತ್ತವೆ.

EGLN1 (Egl-9 Family Hypoxia Inducible Factor): ಕುರಿಗಾಹಿಗಳಲ್ಲಿರುವ ಈ ಜೀನ್ ಕೂಡಾ ಆಮ್ಲಜನಕ ಸಂವೇದನೆಗೆ ಸಹಕಾರಿಯಾಗಿದೆ. ಇದು ಹಿಮೋಗ್ಲೋಬಿನ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

PPARA (peroxisome proliferator-activated receptor alpha): ಈ ಜೀನ್ ಚಯಾಪಚಯಕ್ಕೆ ಸಹಾಯ ಮಾಡುತ್ತದೆ. ಶೆರ್ಪಾರಲ್ಲಿ ಇದು ಕೊಬ್ಬಿನ ಬದಲು ಗ್ಲೂಕೋಸ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವಂತೆ ಮಾಡುತ್ತದೆ, ಇದರಿಂದ ಆಮ್ಲಜನಕದ ಅಗತ್ಯ ಕಡಿಮೆಯಾಗುತ್ತದೆ.

ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಡಾ. ಆಂಡ್ರ್ಯೂ ಮುರ್ರೆ (Dr. Andrew Murray) ನೇತೃತ್ವದ ತಂಡವು ಶೆರ್ಪಾಗಳ ಸ್ನಾಯುಗಳ ಬಯಾಪ್ಸಿ ನಡೆಸಿ ಸಂಶೋಧನೆ ಮಾಡಿತ್ತು. ಈ ಅಧ್ಯಯನ ಪ್ರಕಾರ ನಮ್ಮ ಜೀವಕೋಶಗಳಲ್ಲಿರುವ ಮೈಟೋಕಾಂಡ್ರಿಯಾವನ್ನು ದೇಹದ ‘ಶಕ್ತಿ ಕೇಂದ್ರ’ ಎನ್ನಲಾಗುತ್ತದೆ. ಶೆರ್ಪಾಗಳ ದೇಹದಲ್ಲಿರುವ ಮೈಟೋಕಾಂಡ್ರಿಯಾಗಳು ಅತ್ಯಂತ ಕಡಿಮೆ ಆಮ್ಲಜನಕವನ್ನು ಬಳಸಿಕೊಂಡು ಗರಿಷ್ಠ ಪ್ರಮಾಣದ ATP (ಶಕ್ತಿ) ಅನ್ನು ಉತ್ಪಾದಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿವೆ. ಸಾಮಾನ್ಯ ಮನುಷ್ಯರ ದೇಹವು ಶಕ್ತಿಗಾಗಿ ಕೊಬ್ಬನ್ನು ಕರಗಿಸಲು ಯತ್ನಿಸುತ್ತದೆ. ಇದಕ್ಕೆ ಅಧಿಕ ಆಮ್ಲಜನಕ ಬೇಕಾಗುತ್ತದೆ. ಆದರೆ ಶೆರ್ಪಾಗಳ ದೇಹವು ಗ್ಲೂಕೋಸ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿ ಕಡಿಮೆ ಆಮ್ಲಜನಕದಲ್ಲೇ ಅದ್ಭುತ ಶಕ್ತಿಯನ್ನು ಹೊರಹಾಕುತ್ತದೆ.

ಹೀಗೆ ಒಟ್ಟಾರೆಯಾಗಿ ಹೇಳುವುದಾದರೆ ಸಾವಿರಾರು ವರ್ಷಗಳಿಂದ ಹಿಮಾಲಯದ ಎತ್ತರದ ಪ್ರದೇಶಗಳಲ್ಲೇ ವಾಸಿಸುತ್ತಾ ಬಂದಿರುವುದರಿಂದ ಪ್ರಕೃತಿಯೇ ಅವರ ದೇಹದಲ್ಲಿ ಈ ವಿಕಸನೀಯ ಬದಲಾವಣೆಯನ್ನು ಮಾಡಿದೆ. ಇದೇ ಕಾರಣಕ್ಕೆ ಬ್ರಿಟಿಷ್ ಪರ್ವತಾರೋಹಣ ತಜ್ಞರು ಶೆರ್ಪಾಗಳನ್ನು “ಕಿಂಗ್ಸ್ ಆಫ್ ದಿ ಮೌಂಟೇನ್ಸ್” (ಪರ್ವತಗಳ ರಾಜರು) ಎಂದು ಕರೆದಿರುವುದು ಮತ್ತು ಅವರ ಉಸಿರಾಟದ ಸಾಮರ್ಥ್ಯಕ್ಕೆ ‘ಮೂರು ಶ್ವಾಸಕೋಶ’ ಉಳ್ಳವರು ಎಂದು ರೂಪಕವಾಗಿ ಹೇಳಿರುವುದು. ಇದೇ ಜೀವರಾಸಾಯನಿಕ ಶಕ್ತಿಯು ದಾವಾ ಶೆರ್ಪಾ ಅವರಿಗೆ 6 ದಿನಗಳ ಕಾಲ ಆಹಾರವಿಲ್ಲದೆ ಬದುಕಲು ಆಧಾರವಾಯಿತು.

ಹೀಗೆ ಎವರೆಸ್ಟ್ ಶಿಖರವನ್ನು ಏರುವ ಪ್ರತಿಯೊಬ್ಬ ಜಗತ್ಪ್ರಸಿದ್ಧ ಪರ್ವತಾರೋಹಿಯ ಯಶಸ್ಸಿನ ಹಿಂದೆ ಶೆರ್ಪಾಗಳು ಇರುತ್ತಾರೆ. ಶೆರ್ಪಾಗಳು ಕೇವಲ ಪರ್ವತಗಳ ಮಾರ್ಗದರ್ಶಕರಲ್ಲ, ಅವರು ಪ್ರಕೃತಿಯ ಅತ್ಯಂತ ಕಠಿಣ ಪರಿಸ್ಥಿತಿಗೂ ಸವಾಲು ಹಾಕಬಲ್ಲ ಜಗತ್ತಿನ ಅತ್ಯಂತ ಶಕ್ತಿಶಾಲಿ ಮನುಷ್ಯರು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಗೆಲುವು

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...