ಭವ್ಯವಾದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಅಚ್ಚಳಿಯದ ಕುರುಹಾಗಿ ಇಂದಿಗೂ ನಿಂತಿದೆ ಈ ಮುದಗಲ್ ಕೋಟೆ. ಈ ವೈಭವೋಪೇತ ಇತಿಹಾಸವನ್ನು ಹೊಂದಿರುವ, ಹಿಂದೂ-ಮುಸ್ಲಿಮರ ಭಾವನಾತ್ಮಕ ಸಂಬಂಧದ ಬೆಸುಗೆಯಾಗಿರುವ ಮುದಗಲ್ ಕೋಟೆ ಇಂದು ಪುರಸಭೆಯ ಆಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಘೋರ ನಿರ್ಲಕ್ಷ್ಯದಿಂದಾಗಿ ವಿನಾಶದ ಹಾದಿ ಹಿಡಿದಿದೆ. ಮುಂದಿನ ಪೀಳಿಗೆಗೆ ಈ ಇತಿಹಾಸವನ್ನು ಉಳಿಸಬೇಕಾದರೆ, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕೋಟೆಯ ಜೀರ್ಣೋದ್ಧಾರ ಹಾಗೂ ಸ್ವಚ್ಛತೆಗೆ ಮುಂದಾಗಬೇಕಿದೆ.
ಎಲ್ಲೆಂದರಲ್ಲಿ ಬಿದ್ದಿರುವ ಸಾರಾಯಿ ಬಾಟಲಿಗಳು, ಸಿಗರೇಟ್ ಪ್ಯಾಕ್‌ಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಎದೆಯುದ್ದ ಬೆಳೆದು ನಿಂತಿರುವ ಮುಳ್ಳಿನ ಗಿಡಗಂಟೆಗಳು, ರಸ್ತೆ ಮೇಲೆಲ್ಲಾ ಗುಟ್ಕಾ ತಿಂದು ಉಗುಳಿರುವ ಕೆಂಪು ರಂಗೋಲಿ… ಇದನ್ನು ನೋಡುತ್ತಿದ್ದರೆ ಇದೊಂದು ಭವ್ಯ ಇತಿಹಾಸ ಸಾರುವ ಹೆಮ್ಮೆಯ ಕೋಟೆಯೋ ಅಥವಾ ಯಾರಿಗೂ ಬೇಡವಾದ ಪಾಳುಬಿದ್ದ ಪ್ರದೇಶವೋ ಎನ್ನುವ ಅನುಮಾನ ಕಾಡದಿರದು. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿರುವ ಐತಿಹಾಸಿಕ ಕೋಟೆ ಇಂದು ನಿರ್ವಹಣೆಯಿಲ್ಲದೆ ಸಂಪೂರ್ಣ ಅಳಿವಿನಂಚಿಗೆ ತಲುಪಿದೆ. ಇಂದು ತನ್ನ ಅಳಿವು-ಉಳಿವಿನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ.
ಮುದಗಲ್ ಕೇವಲ ಕೋಟೆಯಲ್ಲ, ಶತಶತಮಾನಗಳ ಕೋಮು ಸೌಹಾರ್ದತೆಯ ಜೀವಂತ ಸಾಕ್ಷಿ. ಇಂದಿಗೂ ಮುದಗಲ್ ಪಟ್ಟಣದಲ್ಲಿ 12ಕ್ಕೂ ಹೆಚ್ಚು ಮಸೀದಿಗಳು, 20ಕ್ಕೂ ಹೆಚ್ಚು ದರ್ಗಾಗಳು, ಬಸವ ಪಟ್ಟಣ ಈದ್ಗಾ ಹಾಗೂ ಹೊಸ ಈದ್ಗಾ ಎಂಬ ಎರಡು ಪ್ರಾರ್ಥನಾ ಮಂದಿರಗಳು, 12ಕ್ಕೂ ಹೆಚ್ಚು ಐತಿಹಾಸಿಕ ಬಾವಿಗಳಿವೆ. ಇಲ್ಲಿನ ನೂರಾರು ವರ್ಷಗಳ ಇತಿಹಾಸವಿರುವ ‘ಮೊಹರಂ ಹಬ್ಬ‘ ಹಿಂದೂ-ಮುಸ್ಲಿಂ ಬಾಂಧವರ ಭಾವನಾತ್ಮಕ ಬೆಸುಗೆಯಾಗಿದೆ. ಮಾನವೀಯ ಮೌಲ್ಯ, ಕೋಮು ಸೌಹಾರ್ದತೆ ಮತ್ತು ಜಾತ್ಯತೀತತೆಗೆ ಹೆಸರಾದ ಇಡೀ ಊರಿನ ಭವ್ಯ ಸಂಸ್ಕೃತಿಯನ್ನು ಈ ತಾಣಗಳು ಜಗತ್ತಿಗೆ ಸಾರುತ್ತವೆ. ಆದರೆ, ‘ಕಲ್ಯಾಣ’ ಎಂದು ಹೆಸರಿಟ್ಟುಕೊಂಡಿರುವ ಈ ನಾಡಿನಲ್ಲಿ, ಈ ಸ್ಮಾರಕಗಳ ಕಲ್ಯಾಣ ಮಾತ್ರ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ.
‘ಈದಿನ. ಕಾಮ್’ ತಂಡ ಮುದಗಲ್ ಕೋಟೆಗೆ ಭೇಟಿ ನೀಡಿದಾಗ, ಸ್ಥಳೀಯ ನಿವಾಸಿಗಳು ಪುರಸಭೆಯ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮೂರಿನ ಹೆಮ್ಮೆಯ ಕೋಟೆಯನ್ನು ಉಳಿಸಿಕೊಳ್ಳಲು ಸರ್ಕಾರವಾಗಲಿ, ಪುರಸಭೆಯಾಗಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಕನಿಷ್ಠ ಸ್ವಚ್ಛತೆಯನ್ನೂ ಕಾಪಾಡದೆ ಕೋಟೆಯನ್ನು ಹಾಳುಗೆಡವುತ್ತಿದ್ದಾರೆ. ಕೇವಲ ಕೋಟೆಯಷ್ಟೇ ಅಲ್ಲ, ಇಡೀ ಮುದಗಲ್ ಪಟ್ಟಣದಲ್ಲಿ ರಸ್ತೆಗಳ ಕಾಮಗಾರಿಗಳು ಅಸ್ತವ್ಯಸ್ತಗೊಂಡಿವೆ. ಕುಡಿಯುವ ನೀರಿನ ಸಮಸ್ಯೆಯಂತೂ ಹೇಳತೀರದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಹಿರೆಮನಿ.
ದಲಿತ ಮುಖಂಡ ಬಸವರಾಜ್ ಬಂಕದಮನಿ, “ಕೋಟೆಯ ಒಳಗೆ ಗಲೀಜು ಮನೆ ಮಾಡಿದ್ದು, ಅಲ್ಲಿ ಕನಿಷ್ಠ 2 ನಿಮಿಷ ನಿಲ್ಲಲೂ ಸಾಧ್ಯವಾಗುತ್ತಿಲ್ಲ. ಕಲಬುರಗಿ ಹಾಗೂ ಬೆಂಗಳೂರಿನಿಂದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಬಂದು ಭೇಟಿ ನೀಡಿ ಹೋಗಿದ್ದಾರೆ. ಅವರು ಬಂದಾಗಲೆಲ್ಲಾ ನಾವು ಮನವಿ ಪತ್ರಗಳನ್ನು ನೀಡುತ್ತಲೇ ಇದ್ದೇವೆ, ಆದರೂ ಯಾವ ಪ್ರಯೋಜನವೂ ಆಗಿಲ್ಲ. ಗಿಡಗಂಟೆಗಳು ಬೆಳೆದು ಅರಣ್ಯದಂತಾಗಿರುವುದರಿಂದ ಹೆಣ್ಣುಮಕ್ಕಳು ಇತ್ತ ಸುಳಿಯಲೂ ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಜವಾಬ್ದಾರಿಯಿಂದ ವರ್ತಿಸಬೇಕು” ಎಂದು ಆಗ್ರಹಿಸಿದರು.

ಮುದಗಲ್‌ನ ಐತಿಹಾಸಿಕ ಒಳನೋಟ
ಕಲ್ಯಾಣ ಕರ್ನಾಟಕದ ಹೆಮ್ಮೆಯ ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣ ಐತಿಹಾಸಿಕವಾಗಿ ಅಪ್ರತಿಮ ಚರಿತ್ರೆಯನ್ನು ಹೊಂದಿದೆ. ಉತ್ತರಕ್ಕೆ ಕೃಷ್ಣಾ ಮತ್ತು ದಕ್ಷಿಣಕ್ಕೆ ತುಂಗಭದ್ರಾ ನದಿಗಳ ನಡುವೆ ಇರುವ ಈ ಸಮೃದ್ಧ ಪ್ರದೇಶವನ್ನು ಬಹಮನಿ ಅರಸರ ಕಾಲದಲ್ಲಿ ‘ದೋಆಬ್‘ (ಎರಡು ನದಿಗಳ ನಡುವಣ ಪ್ರದೇಶ) ಎಂದು ಕರೆಯಲಾಗುತ್ತಿತ್ತು. ಸುಮಾರು 2000 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ಪ್ರದೇಶದ ಕೋಟೆ-ಕೊತ್ತಲಗಳು, ಶಾಸನಗಳು, ದೇವಾಲಯ-ಮಸೀದಿಗಳು ಮತ್ತು ಅರಮನೆಯ ಅವಶೇಷಗಳು ಇಲ್ಲಿನ ಶ್ರೀಮಂತ ಸಂಸ್ಕೃತಿಯನ್ನು ಸಾರುತ್ತವೆ.
ಶಾತವಾಹನರು, ಕಲ್ಯಾಣ ಚಾಲುಕ್ಯರು, ಯಾದವರು, ಕುಮ್ಮಟ ನಾಯಕರು, ವಿಜಯನಗರ ಅರಸರು, ಬಹಮನಿ ಮತ್ತು ಆದಿಲ್ ಶಾಹಿಗಳು, ಮೊಘಲರು ಹಾಗೂ ಹೈದರಾಬಾದ್ ನಿಜಾಮರು ಸೇರಿದಂತೆ ಹಲವು ಪ್ರಸಿದ್ಧ ರಾಜವಂಶಗಳು ಈ ಪ್ರಾಚೀನ ನಗರವನ್ನು ಆಳಿವೆ. ಇದರಲ್ಲಿ ವಿಜಯನಗರದ ಅರಸರು ಮತ್ತು ಬಹಮನಿ ಸುಲ್ತಾನರ ಆಡಳಿತಾವಧಿ ಅತ್ಯಂತ ಪ್ರಮುಖ ಘಟ್ಟ.
ಕ್ರಿ.ಶ 1053ರಲ್ಲಿ ದೇವಗಿರಿ ಯಾದವರ ಕಾಲದಲ್ಲಿ ಜಮೀನ್ದಾರ ‘ಮುದ್ದಪ್ಪ ರೆಡ್ಡಿ’ ಅವರು ಮುದಗಲ್‌ನಲ್ಲಿ ಈ ಎರಡು ಸುತ್ತಿನ ಕೋಟೆಯನ್ನು ನಿರ್ಮಿಸಿದರು. ದೇವಗಿರಿ ಯಾದವರ ವಂಶದ ಭಿಲ್ಲಮನ ಆಡಳಿತದಲ್ಲಿ ಮಹಾಮಂಡಳೇಶ್ವರನಾಗಿದ್ದ ಕದಂಬ ಕುಲದ ಬಿಜ್ಜರಸನು ಮುದಗಲ್ ಅನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಈ ನಗರವು ಇಂದ್ರನ ಅಮರಾವತಿಗಿಂತಲೂ ಸುಂದರವಾಗಿತ್ತೆಂದು ಕ್ರಿ.ಶ 1215ರ ಶಾಸನವೊಂದು ಉಲ್ಲೇಖಿಸುತ್ತದೆ.

ದೋಆಬ್ ಪ್ರದೇಶದ ಗಡಿಭಾಗದ ಆಯಕಟ್ಟಿನ ಸೂಕ್ಷ್ಮ ಕೇಂದ್ರವಾಗಿದ್ದರಿಂದ, ಈ ಕೋಟೆಯನ್ನು ಯಾರು ಗೆಲ್ಲುತ್ತಾರೋ ಅವರಿಗೆ ಎರಡು ನದಿಗಳ ಮೇಲಿನ ಆರ್ಥಿಕ ಮತ್ತು ವಾಣಿಜ್ಯ ನಿಯಂತ್ರಣ ಸಿಗುತ್ತಿತ್ತು. ಇದೇ ಕಾರಣಕ್ಕಾಗಿ ವಿಜಯನಗರ ಅರಸರು ಹಾಗೂ ಬಹಮನಿ ಸುಲ್ತಾನರ ನಡುವೆ ಬರೋಬ್ಬರಿ 12 ಯುದ್ಧಗಳು ನಡೆದಿವೆ. ಇತಿಹಾಸದ ಪ್ರಕಾರ, ಒಂದು ಯುದ್ಧವಂತೂ ಮುದಗಲ್ ನಗರದ ಒಬ್ಬ ಅಕ್ಕಸಾಲಿಗ ಯುವತಿಯ ಕಾರಣಕ್ಕಾಗಿ ನಡೆದಿತ್ತು ಎಂಬ ಸ್ವಾರಸ್ಯಕರ ಕಥೆಯೂ ಇದೆ. ಕ್ರಿ.ಶ 1566ರ ತಾಳಿಕೋಟೆ ಯುದ್ಧದ ನಂತರ ಈ ಕೋಟೆ ಆದಿಲ್ ಶಾಹಿಗಳ ವಶವಾಯಿತು.
ಬಯಲು ಪ್ರದೇಶ ಮತ್ತು ಬೆಟ್ಟದ ಮೇಲೆಯೂ ವಿಸ್ತರಿಸಿರುವ ಈ ಕೋಟೆಯು 1,919 ಅಡಿ ಉದ್ದ ಹಾಗೂ 24 ಅಡಿ ಎತ್ತರದ ಬಲಿಷ್ಠ ಗೋಡೆಯನ್ನು ಹೊಂದಿದೆ. 40 ಅಡಿ ಎತ್ತರ ಹಾಗೂ 160 ಅಡಿ ಅಗಲವಿರುವ 16 ಭವ್ಯ ಬುರುಜುಗಳು ಇಲ್ಲಿವೆ. ಶತ್ರುಗಳು ಸುಲಭವಾಗಿ ಒಳಬರದಂತೆ ತಡೆಯಲು ಕೋಟೆಯ ಸುತ್ತ ಸುಮಾರು 300 ಅಡಿ ಅಗಲ ಹಾಗೂ 10 ಅಡಿ ಆಳವಿರುವ ಕಂದಕವಿದ್ದು, ಅದರಲ್ಲಿ ಕಡುಗಲಿ ಮೊಸಳೆಗಳನ್ನು ಬಿಡಲಾಗುತ್ತಿತ್ತು ಎನ್ನಲಾಗುತ್ತದೆ. ಇಲ್ಲಿ ‘ಕಾಟೇ ದರವಾಜ‘ ಮತ್ತು ‘ಫತೇ ದರವಾಜ’ ಎಂಬ ಎರಡು ಬೃಹತ್ ದ್ವಾರಗಳಿವೆ. ಶತ್ರುಗಳನ್ನು ಗೊಂದಲಕ್ಕೀಡುಮಾಡಲು ಬುರುಜುಗಳನ್ನು ದಾಟಿದ ನಂತರವೇ ಕಾಣುವಂತೆ ಪ್ರವೇಶ ದ್ವಾರವನ್ನು ವಿಶಿಷ್ಟವಾಗಿ ನಿರ್ಮಿಸಲಾಗಿದೆ; ಹೀಗಾಗಿ ದೂರದಿಂದ ನೋಡಿದರೆ ಇಲ್ಲಿನ ಬಾಗಿಲು ಕಣ್ಣಿಗೆ ಬೀಳುವುದಿಲ್ಲ.

ಇಂತಹ ಭವ್ಯವಾದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಅಚ್ಚಳಿಯದ ಕುರುಹಾಗಿ ಇಂದಿಗೂ ನಿಂತಿದೆ ಈ ಮುದಗಲ್ ಕೋಟೆ. ಈ ವೈಭವೋಪೇತ ಇತಿಹಾಸವನ್ನು ಹೊಂದಿರುವ, ಹಿಂದೂ-ಮುಸ್ಲಿಮರ ಭಾವನಾತ್ಮಕ ಸಂಬಂಧದ ಬೆಸುಗೆಯಾಗಿರುವ ಮುದಗಲ್ ಕೋಟೆ ಇಂದು ಪುರಸಭೆಯ ಆಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಘೋರ ನಿರ್ಲಕ್ಷ್ಯದಿಂದಾಗಿ ವಿನಾಶದ ಹಾದಿ ಹಿಡಿದಿದೆ. ಮುಂದಿನ ಪೀಳಿಗೆಗೆ ಈ ಇತಿಹಾಸವನ್ನು ಉಳಿಸಬೇಕಾದರೆ, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕೋಟೆಯ ಜೀರ್ಣೋದ್ಧಾರ ಹಾಗೂ ಸ್ವಚ್ಛತೆಗೆ ಮುಂದಾಗಬೇಕಿದೆ.





