ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಎದುರಾದ ಚುನಾವಣಾ ಹಿನ್ನಡೆಯ ಬೆನ್ನಲ್ಲೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಟ್ಟಾ ಬೆಂಬಲಿಗ ಹಾಗೂ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಇಂದು ಪಕ್ಷದ ವರಿಷ್ಠರಿಗೆ ನೇರ ಸಂದೇಶ ರವಾನಿಸಿದ್ದು, “ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅಥವಾ ನನ್ನಂತಹ ಹಿರಿಯ ಕಾರ್ಯಕರ್ತ- ಇವರಿಬ್ಬರಲ್ಲಿ ಒಬ್ಬರನ್ನು ದೀದಿ ಆಯ್ಕೆ ಮಾಡಿಕೊಳ್ಳಲೇಬೇಕು” ಎಂದು ಹೇಳಿದ್ದಾರೆ.
ನಾಲ್ಕು ಬಾರಿಯ ಲೋಕಸಭಾ ಸಂಸದ ಹಾಗೂ ಹಿರಿಯ ವಕೀಲರಾಗಿರುವ ಕಲ್ಯಾಣ್ ಬ್ಯಾನರ್ಜಿ ಈ ಕುರಿತು ‘ಐಎಎನ್‌ಎಸ್’ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ. “ನಾನು ಮಮತಾ ಬ್ಯಾನರ್ಜಿ ಅವರೊಂದಿಗಿದ್ದೇನೆ. ಆದರೆ ಅವರು ಅಭಿಷೇಕ್ ಪರವಾಗಿದ್ದಾರೆಯೇ ಅಥವಾ ಟಿಎಂಸಿ ಪರವಾಗಿದ್ದಾರೆಯೇ ಎಂಬುದನ್ನು ಮೊದಲು ನಿರ್ಧರಿಸಬೇಕು. ಒಂದು ವೇಳೆ ಅಭಿಷೇಕ್ ಇಲ್ಲದೆ ಪಕ್ಷವನ್ನು ಮುನ್ನಡೆಸಲು ಅವರಿಂದ ಸಾಧ್ಯವಿಲ್ಲ ಎಂದಾದರೆ, ನಾನು ಪಕ್ಷದಲ್ಲಿ ಮುಂದುವರಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, “ಅಭಿಷೇಕ್ ಬ್ಯಾನರ್ಜಿ ಅಥವಾ ನನ್ನಂತಹ ಕಾರ್ಯಕರ್ತನ ನಡುವೆ ಯಾರಾದರೊಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಮಮತಾಗೆ ತಿಳಿಸುವಂತೆ ನಾನು ಡೆರೆಕ್ ಓಬ್ರಿಯಾನ್ ಅವರಿಗೂ ಹೇಳಿದ್ದೇನೆ” ಎಂದು ಅವರು ‘ಪಿಟಿಐ’ಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಫ್ರೆಂಚ್ ಓಪನ್ ಟೆನಿಸ್: ಅಲೆಕ್ಸಾಂಡರ್ ಜ಼್ವೆರೇವ್‌ಗೆ ಚೊಚ್ಚಲ ಗ್ರಾನ್‌ಸ್ಲಾಮ್ ಕಿರೀಟ
ಈ ರಾಜಕೀಯ ಬೆಳವಣಿಗೆಯ ಜೊತೆಗೆ, ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ಯಾವುದೇ ಕಾನೂನು ಪ್ರಕ್ರಿಯೆಗಳಲ್ಲಿ ಇನ್ನು ಮುಂದೆ ವಕಾಲತ್ತು ವಹಿಸುವುದಿಲ್ಲ ಎಂದು ಕಲ್ಯಾಣ್ ಬ್ಯಾನರ್ಜಿ ಘೋಷಿಸಿದ್ದಾರೆ. ಶಾಸಕರ ಸಹಿ ವ್ಯತ್ಯಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಿಐಡಿ ನೀಡಿದ್ದ ಸಮನ್ಸ್ ಅನ್ನು ಪ್ರಶ್ನಿಸಿ ಅಭಿಷೇಕ್ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ, ಗುರುವಾರ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಕೌಶಿಕ್ ಚಂದಾ ಅವರ ರಜಾಕಾಲದ ಪೀಠದ ಮುಂದೆ ಅಭಿಷೇಕ್ ಪರವಾಗಿ ವಕೀಲ ಅಯನ್ ಭಟ್ಟಾಚಾರ್ಯ ಹಾಜರಾದ ಹಿನ್ನೆಲೆಯಲ್ಲಿ ಕಲ್ಯಾಣ್ ಬ್ಯಾನರ್ಜಿ ಈ ನಿರ್ಧಾರ ಪ್ರಕಟಿಸಿದ್ದಾರೆ.
“ಎಲ್ಲರೂ ತನಗಿಂತ ಕೀಳು ಎಂಬುದು ಅಭಿಷೇಕ್ ಅವರ ಭಾವನೆ. ಎಲ್ಲರೂ ಕ್ಯಾಮಕ್ ಸ್ಟ್ರೀಟ್‌ನ ಉದ್ಯೋಗಿಗಳೇನೋ ಎಂಬಂತೆ ಅವರು ವರ್ತಿಸುತ್ತಾರೆ. ನಾನು ಈ ಕಾನೂನು ವೃತ್ತಿಯಲ್ಲಿ 45 ವರ್ಷಗಳಿಂದ ಇದ್ದೇನೆ. ಹಿರಿಯ ವಕೀಲನಾಗಿ ಸುಪ್ರೀಂ ಕೋರ್ಟ್‌ನಲ್ಲಿಯೂ ನನ್ನದೇ ಆದ ಗುರ್ತಿಂಪಿದೆ. ಆದರೆ, ಅವರು ಅಹಂಕಾರದಿಂದ ಯಾರನ್ನೂ ಗೌರವಿಸುತ್ತಿಲ್ಲ. ನನ್ನ ಶ್ರಮವನ್ನು ಕಡೆಗಣಿಸುವ ಅವರ ಅಗೌರವದ ವರ್ತನೆ ಬದಲಾಗದ ಕಾರಣ ನಾನು ಈ ಪ್ರಕರಣಗಳಿಂದ ಹಿಂದೆ ಸರಿದಿದ್ದೇನೆ” ಎಂದು ಕಲ್ಯಾಣ್ ಬ್ಯಾನರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಟಿಎಂಸಿ ತೊರೆಯುವುದಿಲ್ಲ ಎಂದ ಶತ್ರುಘ್ನ ಸಿನ್ಹಾ
ಈ ನಡುವೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆಯಲಿದ್ದಾರೆ ಎಂಬ ಊಹಾಪೋಹಗಳನ್ನು ಪಕ್ಷದ ಸಂಸದ ಶತ್ರುಘ್ನ ಸಿನ್ಹಾ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಪಕ್ಷವು ಸದ್ಯ ಎದುರಿಸುತ್ತಿರುವ ಈ ಕಷ್ಟದ ಸಮಯದಲ್ಲಿ ತಾವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಟಿಎಂಸಿಯಲ್ಲಿಯೇ ಮುಂದುವರಿಯುವುದಾಗಿ ಖಚಿತಪಡಿಸಿದ್ದಾರೆ. ಈ ಮೂಲಕ, ಇತ್ತೀಚಿನ ರಾಜಕೀಯ ಬಿಕ್ಕಟ್ಟು ಹಾಗೂ ಪಕ್ಷದ ಆಂತರಿಕ ಬೆಳವಣಿಗೆಗಳ ನಡುವೆ ತಾವು ಬೇರೆ ಪಕ್ಷದತ್ತ ಮುಖಮಾಡಲಿದ್ದಾರೆ ಎಂದು ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೂ ಸಿನ್ಹಾ ಅವರು ಪೂರ್ಣವಿರಾಮ ಇಟ್ಟಿದ್ದಾರೆ.





