ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ನಿಟ್ಟಾಲಿ ಗ್ರಾಮದ ಕಾಲೋನಿಯಲ್ಲಿ ಕಳೆದ ಎರಡು-ಮೂರು ತಿಂಗಳುಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇಡೀ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲ, ಆದರೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ನಿತ್ಯ ನೀರಿಗಾಗಿ ಅಲೆದಾಡುವಂತಾಗಿದೆ.
ಮೊಸಬ ಹಂಚಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮಕ್ಕೆ ಎರಡು ಅಥವಾ ಮೂರು ದಿನಕ್ಕೊಮ್ಮೆ ಕೇವಲ ಒಂದು ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಕಾಲೋನಿ ಜನಸಂಖ್ಯೆಗೆ ಅದು ಸಮರ್ಪಕವಾಗಿ ಸಾಕಾಗುತ್ತಿಲ್ಲ. ಪರಿಣಾಮ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಕುಡಿಯುವ ನೀರಿಗಾಗಿ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಟ್ಯಾಂಕರ್ ಗ್ರಾಮಕ್ಕೆ ಆಗಮಿಸುವ ವೇಳೆಯಲ್ಲಿ ಮಹಿಳೆಯರು ಕೊಡಪಾನ, ಬಿಂದಿಗೆ ಹಾಗೂ ಇತರ ಪಾತ್ರೆಗಳನ್ನು ಸಾಲಾಗಿ ಇಟ್ಟು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ತಲುಪದಿದ್ದರೆ ನೀರು ಸಿಗದೆ ಖಾಲಿ ಕೈಯಲ್ಲಿ ವಾಪಸ್ ಹೋಗಬೇಕಾಗುತ್ತಿದೆ. ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ನೀರಿಗಾಗಿ ಪರದಾಟ ಜಾಸ್ತಿಯಾಗಿದೆ. ಹೀಗಾಗಿ, ಜಮೀನುಗಳಲ್ಲಿ ತೆರಳಿ ಬಿಂದಿಗೆ ತುಂಬಿಸಿಕೊಂಡು ನೀರು ತರಬೇಕಾಗಿದೆ.
ಟ್ಯಾಂಕರ್ ನೀರು ಪೂರೈಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥ ಸ್ವಾರೆಪ್ಪ ಬೆಟಗೇರಿ, “ಎಲ್ಲಿಂದಲೋ ನೀರು ಪೂರೈಕೆ ಮಾಡ್ತಿದ್ದಾರೆ. ಆ ಟ್ಯಾಂಕರ್ ನೀರು ಕುಡಿದು ಜನರು ವಾಂತಿ ಬೇಧಿಯಾಗಿ ನರಳಾಡುತ್ತಿದ್ದಾರೆ, ಇದಕ್ಕೆಲ್ಲಾ ಯಾರು ಹೊಣೆ?” ಎಂದು ಪ್ರಶ್ನಿಸಿದರು.
ಮತ್ತೊಬ್ಬ ನಿವಾಸಿ ಮಾತನಾಡಿ “ನಾವು ನೀರಿಗಾಗಿ ಒಂದೂವರೆ ತಿಂಗಳಿಂದ ಅಲೆದಾಡುತ್ತಿದ್ದೇವೆ. ಮಕ್ಕಳು ಕಳಿಸಿ ಊರಿನ ತುಂಬೆಲ್ಲ ಅಲೆದಾಡಿ ನೀರು ತರುತ್ತಿದ್ದಾರೆ. ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಕ್ಯಾರೆ ಅಂತಿಲ್ಲ. ಮೊನ್ನೆಯೂ ಪಿಡಿಒ ವೈಜನಾಥ್ ಅವರಿಗೆ ಮನವಿ ಮಾಡಿದರೂ ಭರವಸೆ ನೀಡಿ ಸುಮ್ಮನಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಮಾತ್ರವಲ್ಲದೆ, ಶಾಶ್ವತ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿಯ ಮಹಿಳೆಯರು ಒತ್ತಾಯಿಸಿದ್ದಾರೆ.
ಈ ವಿಚಾರವನ್ನು ಈದಿನ.ಕಾಮ್ ತಂಡ ಮೊಸಬ ಹಂಚಿನಾಳ ಗ್ರಾಮ ಪಂಚಾಯಿತಿ ಪಿಡಿಓ ವೈಜನಾಥ್ ಅವರ ಗಮನಕ್ಕೆ ತಂದಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. “ಕಳೆದ ಕೆಲವು ದಿನಗಳಿಂದ ಎಲ್ & ಟಿ ನೀರು ಸರಬರಾಜು ಆಗಿಲ್ಲ. ರಾಜೂರು ಬಳಿ ಮಳೆಯಿಂದಾಗಿ ಕಂಬಗಳು ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದರಿಂದಾಗಿ ಎಲ್&ಟಿ ನೀರು ಪೂರೈಕೆ ಆಗಿಲ್ಲ. ಈಗ ಗ್ರಾಮಸ್ಥರ ಕುಡಿಯುವ ನೀರಿಗಾಗಿ ಹೊಸದಾಗಿ ನಾಳೆ ಬೋರ್ ವೆಲ್ ಕೊರೆಸಲಾಗುತ್ತದೆ. ಆದಷ್ಟು ಬೇಗನೇ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ” ಎಂದು ಭರವಸೆ ನೀಡಿದರು.
ಅದೇನೆ ಇರಲಿ, ಒಂದು ದಿನ ನೀರಿನ ಸಮಸ್ಯೆ ಎದುರಾದರೂ ಅದರ ಕಷ್ಟ ಅನುಭವಿಸಿದವರಿಗೇ ಗೊತ್ತು ವಿನಃ ಎಸಿ ರೂಂನಲ್ಲಿ ಕೂರುವ ಅಧಿಕಾಗಳಿಗೆ ಅಲ್ಲ. ಒಂದು ತಿಂಗಳುಗಳ ಕಾಲ ನೀರು ಪೂರೈಕೆ ಆಗಿಲ್ಲ ಎಂದರೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕೆಲಸ ಮಾಡ್ತಾರೆ ಎನ್ನುವುದು ತೋರಿಸುತ್ತದೆ. ಇನ್ಮುಂದಾದರೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಎಚ್ಚೆತ್ತುಕೊಂಡು ಮತ್ತೊಮ್ಮೆ ಹೀಗಾಗದಂತೆ ಎಚ್ಚರವಹಿಸುವ ಅಗತ್ಯವಿದೆ.

ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್




