ಈ ವ್ಯವಸ್ಥೆಯು ಒಂದೇ ಕೇಂದ್ರದಿಂದ ನಿಯಂತ್ರಿಸಲ್ಪಡುವ ಏಕೈಕ ಗುಪ್ತ ಸಂಘಟನೆಯಾಗಿರಬೇಕೆಂದಿಲ್ಲ; ಪರಸ್ಪರ ಸ್ಪರ್ಧಿಸುವ ಹಲವು ಅಧಿಕಾರ ಜಾಲಗಳ ಸಂಯೋಜನೆಯಾಗಿಯೂ ಇರಬಹುದು. ಹೀಗಾಗಿ Deep State ಅಂದರೆ ʼಸುರಂಗ ಕೋಣೆಗಳಲ್ಲಿ ಹತ್ತು ಜನ ಕೂತು ದೇಶವನ್ನು ನಡೆಸುತ್ತಿದ್ದಾರೆʼ ಎಂಬ ಸಿನಿಮಾ ಕಲ್ಪನೆಯಿಂದ ಹೊರಬರಬೇಕು. ವಾಸ್ತವದಲ್ಲಿ ಡೀಪ್ ಸ್ಟೇಟ್ ಇದ್ದರೆ, ಬಹುತೇಕ ಸಂದರ್ಭಗಳಲ್ಲಿ ಸಂಸ್ಥೆಗಳು, ವ್ಯಕ್ತಿಗಳು, ಹಿತಾಸಕ್ತಿಗಳು, ಗುಪ್ತ ಮಾಹಿತಿ, ಹಣ, ರಾಜಕೀಯ ಸಂಪರ್ಕ ಮತ್ತು ಪರಸ್ಪರ ರಕ್ಷಣೆಯ ಜಾಲದ ರೂಪದಲ್ಲಿರುತ್ತದೆ.
ಪ್ರಸ್ತುತ ರಾಜಕೀಯ ಚರ್ಚೆಯಲ್ಲಿ “Deep State” (ಡೀಪ್ ಸ್ಟೇಟ್) ಎಂದರೆ ಸಾಮಾನ್ಯವಾಗಿ ಚುನಾಯಿತ ಸರ್ಕಾರ ಬದಲಾದರೂ ಮುಂದುವರಿಯುವ ಬ್ಯೂರೋಕ್ರಸಿ, ಗುಪ್ತಚರ–ಭದ್ರತಾ ವ್ಯವಸ್ಥೆ, ಸೇನಾ ಸಂಸ್ಥೆಗಳು ಮತ್ತು ಕೆಲವೊಮ್ಮೆ ಅವುಗಳೊಂದಿಗೆ ಸಂಪರ್ಕ ಹೊಂದಿರುವ ಪ್ರಭಾವಿ ಖಾಸಗಿ ಹಿತಾಸಕ್ತಿ ಜಾಲಗಳು ಸರ್ಕಾರದ ನೀತಿಗಳ ಮೇಲೆ ಅಧಿಕ ಅಥವಾ ಗುಪ್ತ ಪ್ರಭಾವ ಬೀರುತ್ತವೆ ಎಂಬ ಪರಿಕಲ್ಪನೆ. ಆದರೆ ಇದನ್ನು ಎಲ್ಲ ದೇಶಗಳಲ್ಲೂ ಕಾರ್ಯನಿರ್ವಹಿಸುವ ಸಮಾನ ಕೇಂದ್ರಿತ ‘ರಹಸ್ಯ ಸರ್ಕಾರ’ ಎಂದು ಪರಿಗಣಿಸಲಾಗುವುದಿಲ್ಲ.
ಒಂದು ದೇಶದಲ್ಲಿ ಚುನಾಯಿತ ಸರ್ಕಾರದ ಹೊರತಾಗಿಯೂ ಸರ್ಕಾರದ ಪ್ರಮುಖ ನಿರ್ಧಾರಗಳು ಮತ್ತು ನೀತಿಗಳ ಮೇಲೆ ದೀರ್ಘಕಾಲಿಕ ಪ್ರಭಾವ ಬೀರುವ ಕಾಣದ ಕೈಗಳು ಹಾಗೂ ಸಂಪೂರ್ಣವಾಗಿ ಸಾರ್ವಜನಿಕ ಉತ್ತರದಾಯಿತ್ವಕ್ಕೆ ಒಳಪಡದ ಶಕ್ತಿಶಾಲಿ ಜಾಲವನ್ನು ಸೂಚಿಸುವ ರಾಜಕೀಯ ಪದವೇ ಡೀಪ್ ಸ್ಟೇಟ್ (Deep State) ಅಥವಾ ಅದೃಶ್ಯ ಅಧಿಕಾರ.
ನರೇಂದ್ರ ಮೋದಿ ಬಾಲಬಡುಕ ಆಗಿದ್ದ ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ ಇತ್ತೀಚೆಗೆ Deep State ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ. ನಂಬಲಸಾಧ್ಯ ನುಡಿಗಳನ್ನು ಆಡಿದ್ದಾರೆ!
“ದೇಶದ ಅರ್ಥಸ್ಥಿತಿಯನ್ನು ನಡೆಸಿರುವ ಶಕ್ತಿ deep state. ಬಲಿಷ್ಠ ಉದ್ಯಮಿಗಳು ರಾಜಕಾರಣಿಗಳನ್ನು ಬೊಂಬೆಗಳಂತೆ ಆಡಿಸುತ್ತಿದ್ದಾರೆ. ಹಿರಿಯ IAS, IFSಗಳೆಂಬ ಪಾಳೇಗಾರೀ ಕುಲೀನರು ಈ ಬೊಂಬೆಗಳ ಸೂತ್ರ ಹಿಡಿಯಲು ಸಹಾಯಕರಾಗಿದ್ದಾರೆ. ಆಳವಾಗಿ ಬೇರು ಬಿಟ್ಟಿರುವ ಆರ್ಥಿಕ ಮತ್ತು ಅಧಿಕಾರಶಾಹಿ ಹಿತಾಸಕ್ತಿಗಳು ವಾಸ್ತವವಾಗಿ ಆಳವಾಗಿ ಬೇರು ಬಿಟ್ಟಿರುವ ಅಧಿಕಾರಶಾಹಿಗಳು ಮತ್ತು ಬಲಿಷ್ಠ ಉದ್ಯಮಿಗಳೇ ವಿನಾ ರಾಜಕಾರಣಿಗಳಲ್ಲ” ಎಂದಿದ್ದಾರೆ ಮತ್ತು ಅಡಗಿ ಕುಳಿತಿದ್ದ ಮೋದಿಯುಗದ ಕಟು ಸತ್ಯವನ್ನು ಜಗಜ್ಜಾಹೀರು ಮಾಡಿದ್ದಾರೆ.
ಭಾರತದಲ್ಲೂ Deep State ಇದೆಯೇ?
ಭಾರತದಲ್ಲಿ ಡೀಪ್ ಸ್ಟೇಟ್ ಎಂಬ ಪದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ರಾಜಕೀಯ ಬಳಕೆಗೆ ಬಂದಿದೆ. ತನಿಖಾ ಪತ್ರಕರ್ತ ಜೋಸಿ ಜೋಸೆಫ್ ತಮ್ಮ The Silent Coup(ಮೌನ ದಂಗೆ) ಕೃತಿಯಲ್ಲಿ ಭಾರತದ ಭದ್ರತೆ ಮತ್ತು ತನಿಖಾ ಸಂಸ್ಥೆಗಳಾದ ಪೊಲೀಸ್, ಗುಪ್ತಚರ, ಸಿಬಿಐ, ಎನ್‌ಐಎ, ಇ.ಡಿ ಮುಂತಾದ ಸಂಸ್ಥೆಗಳ ಬಳಕೆಯ ʼdeep stateʼ ಕುರಿತು ಒಳನೋಟ ಒದಗಿಸಿದ್ದಾರೆ.
ಭಾರತದಂತಹ ದೊಡ್ಡ ಪ್ರಜಾಪ್ರಭುತ್ವದಲ್ಲಿ, ಮಿಲಿಟರಿ, ಗುಪ್ತಚರ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಅಧಿಕಾರಶಾಹಿ, ಪೊಲೀಸ್ ವ್ಯವಸ್ಥೆ, ವ್ಯವಹಾರ ವಲಯ, ಮಾಧ್ಯಮ ಮತ್ತು ನ್ಯಾಯಾಂಗದಂತಹ ಅನೇಕ ಪ್ರಬಲ ಸಂಸ್ಥೆಗಳು ಸ್ವಾಭಾವಿಕವಾಗಿಯೇ ಇವೆ. ಅಧಿಕಾರ ಸೂತ್ರ ಹಿಡಿದವರು ಬಯಸಿದರೆ ಪ್ರಭಾವಗಳು, ಸಂಘರ್ಷಗಳು, ಲಾಬಿ, ಸಾಂಸ್ಥಿಕ ಹಿತಾಸಕ್ತಿಗಳು ಮತ್ತು ರಾಜಕೀಯ ಸಂಪರ್ಕಗಳು ಕೂಡ ಡೀಪ್ ಸ್ಟೇಟ್ ನ ಭಾಗವಾಗಬಲ್ಲವು.
ಭಾರತದಲ್ಲಿ ಸರ್ಕಾರದ ನಿರ್ಧಾರಗಳಿಗೆ ಅಧಿಕಾರಿಗಳು ಆಕ್ಷೇಪಿಸದಿರುವುದು, ನ್ಯಾಯಾಲಯ ಸರ್ಕಾರದ ಕ್ರಮವನ್ನು ತಡೆಯದಿರುವುದು, ಸೇನೆ ವೃತ್ತಿಪರ ಅಭಿಪ್ರಾಯ ನೀಡದಿರುವುದು, ತನಿಖಾ ಸಂಸ್ಥೆ ಸಚಿವರ ವಿರುದ್ಧ ಪ್ರಕರಣ ದಾಖಲಿಸದಿರುವುದು ಅಥವಾ ಮಾಧ್ಯಮಗಳು ಸರ್ಕಾರವನ್ನು ಟೀಕಿಸದೆ ಒಪ್ಪಿ, ನಡೆಮುಡಿ ಹಾಸುವ ವ್ಯವಸ್ಥಯೇ Deep State. ಅವುಗಳು ಪ್ರಜಾಸತ್ತಾತ್ಮಕ checks and balances ಆಗಿರಬಹುದು. ಇವೇ ಕಾನೂನು ಸಂಸ್ಥೆಗಳು ಆಡಳಿತಸೂತ್ರ ಹಿಡಿದವರ ಪರವಾಗಿ ಗುಪ್ತವಾಗಿ ರಾಜಕೀಯ ಫಲಿತಾಂಶಗಳನ್ನು ರೂಪಿಸುತ್ತಿರುವುದಕ್ಕೆ ಹಲವು ಸಾಕ್ಷ್ಯಗಳಿವೆ.
ಸರ್ಕಾರ ಮತ್ತು Deep State ನಡುವಿನ ಮೂಲಭೂತ ವ್ಯತ್ಯಾಸ
| ಸರ್ಕಾರ (Government) | Deep State (ಡೀಪ್ ಸ್ಟೇಟ್) |
|---|---|
| ಸಂವಿಧಾನ ಮತ್ತು ಕಾನೂನಿನ ಆಧಾರದ ಮೇಲೆ ರಚನೆಯಾಗಿರುವ ಅಧಿಕೃತ ಆಡಳಿತ ವ್ಯವಸ್ಥೆ. | ಚುನಾಯಿತ ಸರ್ಕಾರದ ಹೊರಗಡೆ ಅಥವಾ ಅದರ ಒಳಗೇ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗುವ ಅನೌಪಚಾರಿಕ ಪ್ರಭಾವಿ ಜಾಲ. |
| ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಸರ್ಕಾರ ನಡೆಸುತ್ತಾರೆ. | ಜನರಿಂದ ನೇರವಾಗಿ ಆಯ್ಕೆಯಾಗಿರುವುದಿಲ್ಲ. |
| ಅಧಿಕಾರ ಮತ್ತು ಹೊಣೆಗಾರಿಕೆ ಕಾನೂನಿನಲ್ಲಿ ಸ್ಪಷ್ಟವಾಗಿ ನಿರ್ದಿಷ್ಟವಾಗಿರುತ್ತದೆ. | ಅಧಿಕಾರದ ಮೂಲ ಮತ್ತು ಹೊಣೆಗಾರಿಕೆ ಸ್ಪಷ್ಟವಾಗಿರುವುದಿಲ್ಲ. |
| ಸಂಸತ್ತು/ವಿಧಾನಸಭೆ, ನ್ಯಾಯಾಂಗ, ಲೆಕ್ಕಪರಿಶೋಧನೆ, ಮಾಧ್ಯಮ ಮತ್ತು ಸಾರ್ವಜನಿಕ ಪರಿಶೀಲನೆಗೆ ಒಳಪಟ್ಟಿರುತ್ತದೆ. | ಸಾಮಾನ್ಯವಾಗಿ ಸಾರ್ವಜನಿಕ ಪರಿಶೀಲನೆಯಿಂದ ದೂರವಾಗಿ ಪ್ರಭಾವ ಬೀರುತ್ತದೆ ಎಂಬ ಕಲ್ಪನೆ ಇದೆ. |
| ಅಧಿಕೃತವಾಗಿ ನೀತಿಗಳನ್ನು ರೂಪಿಸಿ ಜಾರಿಗೊಳಿಸುತ್ತದೆ. | ನೀತಿ, ಭದ್ರತೆ, ವಿದೇಶಾಂಗ ಅಥವಾ ಆಡಳಿತಾತ್ಮಕ ನಿರ್ಧಾರಗಳ ಮೇಲೆ ಪರೋಕ್ಷ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. |
| ಚುನಾವಣೆ ಮೂಲಕ ಸರ್ಕಾರವನ್ನು ಬದಲಾಯಿಸಬಹುದು. | ಚುನಾವಣೆ ನಡೆದರೂ ಇಂತಹ ಶಾಶ್ವತ ಪ್ರಭಾವಿ ಜಾಲಗಳು ಮುಂದುವರಿಯಬಹುದು ಎಂಬುದು Deep State ಪರಿಕಲ್ಪನೆಯ ವಾದ. |
| ಮಂತ್ರಿಗಳು, ಸಂಸದರು/ಶಾಸಕರು, ಅಧಿಕೃತ ಆಡಳಿತ ಸಂಸ್ಥೆಗಳು ಅದರ ಭಾಗ. | ಗುಪ್ತಚರ ಸಂಸ್ಥೆಗಳು, ಸೇನಾ/ಭದ್ರತಾ ವ್ಯವಸ್ಥೆಯ ಕೆಲವು ವಿಭಾಗಗಳು, ಉನ್ನತ ಅಧಿಕಾರಿಗಳು ಅಥವಾ ಪ್ರಭಾವಿ ಆರ್ಥಿಕ ಹಿತಾಸಕ್ತಿಗಳ ನಡುವಿನ ಜಾಲವನ್ನು ಕೆಲವೊಮ್ಮೆ ಈ ಪದದಿಂದ ಸೂಚಿಸಲಾಗುತ್ತದೆ. |
| ಕಾನೂನಾತ್ಮಕ ಹಾಗೂ ಗೋಚರ ಅಧಿಕಾರ ಹೊಂದಿರುತ್ತದೆ. | ಅನೌಪಚಾರಿಕ, ಅಸ್ಪಷ್ಟ ಅಥವಾ ನೆರಳಿನ ಪ್ರಭಾವ ಎನ್ನುವುದು ಇದರ ಕೇಂದ್ರ ಕಲ್ಪನೆ. |
Deep State ಹೇಗೆ ಹುಟ್ಟಿದ್ದು ಹೇಗೆ?
Deep State ಒಂದು ದಿನದಲ್ಲಿ ಹುಟ್ಟುವುದಿಲ್ಲ. ಸಾಮಾನ್ಯವಾಗಿ ಅದರ ಹಿಂದೆ ದೀರ್ಘಕಾಲದ ರಾಜಕೀಯ ಮತ್ತು ಭದ್ರತಾ ಇತಿಹಾಸ ಇರುತ್ತದೆ. ಯುದ್ಧ, ಸಂಘರ್ಷ, ಭಯೋತ್ಪಾದನೆ, ಗಡಿ ಸಂಘರ್ಷ ಅಥವಾ ರಾಜಕೀಯ ಅಸ್ಥಿರತೆಯಿಂದ ಬಳಲಿದ ದೇಶಗಳಲ್ಲಿ ಸೇನೆ ಮತ್ತು ಗುಪ್ತಚರ ಸಂಸ್ಥೆಗಳಿಗೆ ಅಸಾಧಾರಣ ಅಧಿಕಾರ ಸಿಗುತ್ತದೆ. ʼರಾಜಕಾರಣಿಗಳು ಬರುತ್ತಾರೆ ಹೋಗುತ್ತಾರೆ; ದೇಶವನ್ನು ಉಳಿಸುವವರು ನಾವುʼ ಎಂಬ ಸಾಂಸ್ಥಿಕ ಸರ್ವಾಧಿಕಾರದ ಧೋರಣೆ ಬೆಳೆಯಬಹುದು.
ಮುಂದಿನ ಹಂತದಲ್ಲಿ ರಾಷ್ಟ್ರೀಯ ಭದ್ರತೆ ಎಂಬ ನೆಪ ಒಡ್ಡಿ ಈ ರಹಸ್ಯ ಕಾರ್ಯಾಚರಣೆಯ ವಲಯ ದೊಡ್ಡದಾಗುತ್ತದೆ. ಸರ್ಕಾರದ ಉಳಿದ ಭಾಗಕ್ಕೂ ತಿಳಿಯದ ಕಾರ್ಯಾಚರಣೆಗಳು, ರಹಸ್ಯ ನಿಧಿಗಳು, ಗುಪ್ತ ಸಂಪರ್ಕಗಳು ಮತ್ತು ಮಾಹಿತಿಯ ಏಕಸ್ವಾಮ್ಯ ಕೆಲವು ಸಂಸ್ಥೆಗಳ ಕೈಯಲ್ಲಿ ಸೇರುತ್ತವೆ. ಮಾಹಿತಿಯನ್ನು ಹೊಂದಿರುವವರು ರಾಜಕೀಯ ನಿರ್ಧಾರಗಳನ್ನು ಪ್ರಭಾವಿಸುವ ಸಾಮರ್ಥ್ಯವನ್ನೂ ಪಡೆಯುತ್ತಾರೆ. ನಂತರ ಈ ಭದ್ರತಾ ಜಾಲಗಳಿಗೆ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳು ಸೇರುತ್ತವೆ.
ನಿವೃತ್ತ ಸೇನಾ ಅಧಿಕಾರಿಗಳು ಉದ್ಯಮಗಳಲ್ಲಿ ಪ್ರವೇಶಿಸಬಹುದು; ಉದ್ಯಮಿಗಳು ರಾಜಕೀಯ ಪಕ್ಷಗಳಿಗೆ ಹಣಕಾಸು ನೀಡಬಹುದು; ಅಧಿಕಾರಿಗಳು ಮಾಧ್ಯಮ ಮಾಲೀಕರೊಂದಿಗೆ ಸಂಬಂಧ ಬೆಳೆಸಬಹುದು; ರಾಜಕೀಯ ನಾಯಕರು ಅಧಿಕಾರ ಉಳಿಸಿಕೊಳ್ಳಲು ಭದ್ರತಾ ಸಂಸ್ಥೆಗಳ ನೆರವು ಪಡೆಯಬಹುದು. ಈ ಸಂಬಂಧಗಳು ಅಧಿಕೃತ ಸಂವಿಧಾನಿಕ ವ್ಯವಸ್ಥೆಯ ಹೊರಗೆ ನಿರ್ಧಾರಗಳನ್ನು ಪ್ರಭಾವಿಸಲು ಆರಂಭಿಸಿದರೆ ʼರಾಜ್ಯದೊಳಗಿನ ರಾಜ್ಯʼ ʼಅದೃಶ ಅಧಿಕಾರʼ ಎಂಬ ಪರಿಸ್ಥಿತಿ ಉಂಟಾಗಬಹುದು.
‘Deep State’ ಎಂಬ ಪದ ಬಂದದ್ದು ಎಲ್ಲಿಂದ?
“Deep State” ಪದದ ಪ್ರಸಿದ್ಧ ಮೂಲ ಟರ್ಕಿಯ ʼDerin Devletʼ(ಡೆರಿನ್ ಡೆವ್ಲೆಟ್) ಎಂಬ ಪದಪ್ರಯೋಗ. ಇತಿಹಾಸಕಾರ Ryan Gingeras(ರಯಾನ್ ಜಿಂಜೇರಾಸ್) ಅವರ ಅಧ್ಯಯನವನ್ನು JSTOR Daily ಸುದ್ದಿ ಸಂಸ್ಥೆ ವಿವರಿಸುವ ಪ್ರಕಾರ, ಟರ್ಕಿಯ ಸಂದರ್ಭದಲ್ಲಿದು ಸಾರ್ವಜನಿಕವಾಗಿ ಗುರುತಿಸಲ್ಪಟ್ಟ ಸರ್ಕಾರದ ಹೊರತಾಗಿ ಅಥವಾ ಅದರೊಳಗೇ ಕಾರ್ಯನಿರ್ವಹಿಸುವ, ಅಧಿಕೃತವಾಗಿ ಒಪ್ಪಿಕೊಳ್ಳದ ವ್ಯಕ್ತಿಗಳು ಮತ್ತು ಜಾಲಗಳು ರಾಜ್ಯದ ನೀತಿಯನ್ನು ರೂಪಿಸುವ ಹಾಗೂ ಜಾರಿಗೆ ತರುವ ವ್ಯವಸ್ಥೆಯನ್ನು ಸೂಚಿಸಿತ್ತು. ಈ ವ್ಯವಸ್ಥೆಯು ಒಂದೇ ಕೇಂದ್ರದಿಂದ ನಿಯಂತ್ರಿಸಲ್ಪಡುವ ಏಕೈಕ ಗುಪ್ತ ಸಂಘಟನೆಯಾಗಿರಬೇಕೆಂದಿಲ್ಲ; ಪರಸ್ಪರ ಸ್ಪರ್ಧಿಸುವ ಹಲವು ಅಧಿಕಾರ ಜಾಲಗಳ ಸಂಯೋಜನೆಯಾಗಿಯೂ ಇರಬಹುದು. ಹೀಗಾಗಿ Deep State ಅಂದರೆ ʼಸುರಂಗ ಕೋಣೆಗಳಲ್ಲಿ ಹತ್ತು ಜನ ಕೂತು ದೇಶವನ್ನು ನಡೆಸುತ್ತಿದ್ದಾರೆʼ ಎಂಬ ಸಿನಿಮಾ ಕಲ್ಪನೆಯಿಂದ ಹೊರಬರಬೇಕು. ವಾಸ್ತವದಲ್ಲಿ ಡೀಪ್ ಸ್ಟೇಟ್ ಇದ್ದರೆ, ಬಹುತೇಕ ಸಂದರ್ಭಗಳಲ್ಲಿ ಸಂಸ್ಥೆಗಳು, ವ್ಯಕ್ತಿಗಳು, ಹಿತಾಸಕ್ತಿಗಳು, ಗುಪ್ತ ಮಾಹಿತಿ, ಹಣ, ರಾಜಕೀಯ ಸಂಪರ್ಕ ಮತ್ತು ಪರಸ್ಪರ ರಕ್ಷಣೆಯ ಜಾಲದ ರೂಪದಲ್ಲಿರುತ್ತದೆ.
Deep State ಅನ್ನು ನಡೆಸುವವರು ಯಾರು?
ಇದಕ್ಕೆ ʼಒಬ್ಬ ಮುಖ್ಯಸ್ಥʼ ಇರಬೇಕು ಎಂಬ ನಿಯಮವಿಲ್ಲ. ವಾಸ್ತವವಾಗಿ, Deep State ಎಂಬ ಪರಿಕಲ್ಪನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ವ್ಯಕ್ತಿಗಳಿಗಿಂತ ಸಂಸ್ಥಾತ್ಮಕ ಜಾಲವನ್ನು ಗಮನಿಸಬೇಕು. ಸೇನೆಯ ಉನ್ನತಾಧಿಕಾರಿಗಳು ಕೆಲವು ದೇಶಗಳಲ್ಲಿ ಅತ್ಯಂತ ಪ್ರಭಾವಿ ಶಕ್ತಿಯಾಗಿರಬಹುದು. ವಿಶೇಷವಾಗಿ ಸೇನೆ ಹಿಂದೆ ಹಲವು ಬಾರಿ ರಾಜಕೀಯ ಆಡಳಿತವನ್ನು ವಶಪಡಿಸಿಕೊಂಡಿರುವ ರಾಷ್ಟ್ರಗಳಲ್ಲಿ, ಚುನಾವಣೆಯ ನಂತರವೂ ವಿದೇಶಾಂಗ ನೀತಿ, ರಕ್ಷಣಾ ನೀತಿ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಅದರ ಪ್ರಭಾವ ಉಳಿಯಬಹುದು. ಗುಪ್ತಚರ ಸಂಸ್ಥೆಗಳು ಮತ್ತೊಂದು ಪ್ರಮುಖ ಕೇಂದ್ರವಾಗಬಹುದು. ಅವು ಸರ್ಕಾರದ ಇತರ ಅಂಗಗಳಿಗಿಂತ ಹೆಚ್ಚು ರಹಸ್ಯ ಮಾಹಿತಿಯನ್ನು ಹೊಂದಿರುತ್ತವೆ. ಹಿರಿಯ ಅಧಿಕಾರಶಾಹಿಯೂ ಕೆಲವು ಸಂದರ್ಭಗಳಲ್ಲಿ ಪಾತ್ರವಹಿಸಬಹುದು.
ಡೀಪ್ ಸ್ಟೇಟ್ ಸರ್ಕಾರದ ಕಾನೂನುಬದ್ಧ ನೀತಿಯನ್ನು ಗುಪ್ತವಾಗಿ ಧ್ವಂಸಗೊಳಿಸಬಲ್ಲದು. ಡೀಪ್ ಸ್ಟೇಟ್ ನಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದ್ದರೆ ಅಧಿಕಾರಿಗಳು ಸರ್ಕಾರದ ಕಾನೂನುಬಾಹಿರ ಆದೇಶವನ್ನು ಪ್ರಶ್ನಿಸಬೇಕು;
ಪೊಲೀಸ್ ಮತ್ತು ಆಂತರಿಕ ಭದ್ರತಾ ಸಂಸ್ಥೆಗಳು, ಕೆಲವು ಸಂದರ್ಭಗಳಲ್ಲಿ ಪ್ರಾಸಿಕ್ಯೂಷನ್ ವ್ಯವಸ್ಥೆ ಅಥವಾ ನ್ಯಾಯಾಂಗದ ಕೆಲವು ವ್ಯಕ್ತಿಗಳು ಇದ್ದಿರಬಹುದು. ಜೊತೆಗೆ ರಾಜಕೀಯ ಸಂಪರ್ಕ ಹೊಂದಿರುವ ಉದ್ಯಮಿಗಳು, ದೊಡ್ಡ ಗುತ್ತಿಗೆದಾರರು, ಮಾಧ್ಯಮದ ಪ್ರಭಾವಿಗಳು ಮತ್ತು ಅರೆಸೈನಿಕ ಅಥವಾ ಸಂಘಟಿತ ಅಪರಾಧ ಜಾಲಗಳೂ ಇಂತಹ ವ್ಯವಸ್ಥೆಯೊಂದಿಗೆ ನಂಟು ಹೊಂದಿರಬಹುದು. ಟರ್ಕಿಯ ಇತಿಹಾಸದಲ್ಲಿ ರಾಜ್ಯಶಕ್ತಿಯ ಕೆಲವು ಅಂಗಗಳು ಮತ್ತು ಅಪರಾಧ ಜಾಲಗಳು ಶಾಮೀಲಾಗಿದ್ದ ಆರೋಪಗಳಿವೆ. ಈ ಬೆಳವಣಿಗೆಗಳು Deep State ಚರ್ಚೆಯನ್ನು ಬಲಪಡಿಸಿದ್ದವು. ಈ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲರೂ Deep State ಸದಸ್ಯರು ಎಂಬುದಲ್ಲ. ಘಟಕಗಳು ಅಥವಾ ವ್ಯಕ್ತಿಗಳು ಜನತಾಂತ್ರಿಕ ವ್ಯವಸ್ಥೆಯ ನಿಯಂತ್ರಣದಾಚೆಗೆ ನಡೆದು ಒಟ್ಟುಗೂಡಿ ಅಧಿಕಾರ ಚಲಾಯಿಸುತ್ತಿದ್ದಾರೆಯೇ ಎಂಬುದು ಡೀಪ್ ಸ್ಟೇಟ್ ಪರಿಕಲ್ಪನೆಯನ್ನು ಪರೀಕ್ಷೆಗೆ ಒಡ್ಡಬಲ್ಲ ಅಂಶ.
ಮಾಹಿತಿಯೇ Deep Stateನ ದೈತ್ಯ ಆಯುಧ : ಇಂದಿನ ಮಾಹಿತಿಯುಗದ ರಾಜಕೀಯದಲ್ಲಿ ಬಂದೂಕಿಗಿಂತ ಮಾಹಿತಿಯೇ ಹೆಚ್ಚು ಬಲಿಷ್ಠ. ಒಂದು ಗುಪ್ತಚರ ಸಂಸ್ಥೆ ಅಥವಾ ತನಿಖಾ ವ್ಯವಸ್ಥೆಯ ಬಳಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳ ಬಗ್ಗೆ ಇತರರಿಗೆ ಸಿಗದ ಮಾಹಿತಿ ಇದ್ದರೆ, ಅದು ಅಪಾರ bargaining power (ಚೌಕಾಸಿ ಮಾಡುವ ಶಕ್ತಿ) ನೀಡುತ್ತದೆ. ಮಾಹಿತಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸದೇ ಇರುವುದು ಒಂದು ವಿಧಾನ. ಆಯ್ದ ಮಾಹಿತಿಯನ್ನು ಮಾತ್ರ ಸರ್ಕಾರಕ್ಕೆ ನೀಡುವುದು ಇನ್ನೊಂದು ವಿಧಾನ. ಸೂಕ್ತ ಸಮಯದಲ್ಲಿ ಮಾಧ್ಯಮಕ್ಕೆ ʼಲೀಕ್ʼ ಮಾಡುವುದು, ತನಿಖೆಯನ್ನು ವೇಗಗೊಳಿಸುವುದು ಅಥವಾ ನಿಧಾನಗೊಳಿಸುವುದು, ಒಂದು ಘಟನೆಯನ್ನು ದೊಡ್ಡ ರಾಷ್ಟ್ರೀಯ ಭದ್ರತಾ ಅಪಾಯವಾಗಿ ರೂಪಿಸುವುದು, ಇವೆಲ್ಲವೂ ಅಧಿಕಾರದ ಸಮತೋಲನವನ್ನು ಬದಲಾಯಿಸಬಹುದು.
ಹಣ ಮತ್ತು ಆರ್ಥಿಕ ಶಕ್ತಿ : Deep State ಕುರಿತು ಚರ್ಚಿಸುವಾಗ ಸಾಮಾನ್ಯವಾಗಿ ಹಣದ ಅಂಶ ಗಮನಕ್ಕೆ ಬರುವುದಿಲ್ಲ. ಸೇನೆ ಅಥವಾ ಭದ್ರತಾ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವ ಉದ್ಯಮ ಸಂಸ್ಥೆಗಳು, ರಕ್ಷಣಾ ಗುತ್ತಿಗೆಗಳು, ಜಮೀನು, ಮೂಲಸೌಕರ್ಯ ಯೋಜನೆಗಳು, ಬ್ಯಾಂಕಿಂಗ್ ಸಂಪರ್ಕಗಳು ಸ್ವತಂತ್ರ ಆರ್ಥಿಕ ಶಕ್ತಿಯನ್ನು ಕಟ್ಟಿಕೊಂಡರೆ, ಜನತಾಂತ್ರಿಕವಾಗಿ ಆಯ್ಕೆಯಾದ ಸರ್ಕಾರಕ್ಕೆ ಸೆಡ್ಡು ಹೊಡೆಯುವ ಪರ್ಯಾಯಶಕ್ತಿಯನ್ನೇ ಹುಟ್ಟಿ ಹಾಕುವ ಅಪಾಯವಿರುತ್ತದೆ.
ಮಾಧ್ಯಮ ಮತ್ತು Narrative Control : ಅಧಿಕಾರ ಎಂದರೆ ಕೇವಲ ಸರ್ಕಾರ ರಚಿಸುವುದಲ್ಲ; ಜನರು ಯಾವ ಘಟನೆಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಮುಂದಾಗಿಯೇ ನಿರ್ಧರಿಸಿ, ಅದೇ ಪ್ರಕಾರ ಅದನ್ನು ರೂಪಿಸುವುದೂ ಅಧಿಕಾರವೇ. ಆದ್ದರಿಂದ Deep State ಮಾದರಿಯ ಜಾಲಗಳ ಕುರಿತು ಅಧ್ಯಯನ ಮಾಡುವಾಗ ಮಾಧ್ಯಮದ ಸಂಬಂಧ ಮುಖ್ಯವಾಗುತ್ತದೆ. ಜನತೆಯ ಒಪ್ಪಿಗೆಯನ್ನು ತಯಾರಿಸುವ ಬಹುದೊಡ್ಡ ಉದ್ಯಮದಂತೆ ಮಾಧ್ಯಮಗಳು ಕೆಲಸ ಮಾಡುತ್ತವೆ. ನೋಮ್ ಚಾಮ್ಸ್ಕಿ ಮತ್ತು ಎಡ್ವರ್ಡ್ ಹರ್ಮನ್ ಅವರ ಚಿರಹಸಿರು ಕೃತಿ Manufacturing Consent- The Political Economy of the Mass Media ಈ ಪರಿಕಲ್ಪನೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ.
ನಾಯಕನೊಬ್ಬನನ್ನು ʼರಾಷ್ಟ್ರೀಯ ಭದ್ರತೆಗೆ ಅಪಾಯಕಾರಿʼ ಎಂದು ನಿರಂತರವಾಗಿ ಬಿತ್ತರಿಸುವುದು, ಮತ್ತೊಬ್ಬರನ್ನು ʼದೇಶದ ರಕ್ಷಕʼ ಎಂದು ಕಟ್ಟಿಕೊಡುವುದು, ಸರ್ಕಾರದ ವೈಫಲ್ಯಗಳನ್ನು ಮರೆ ಮಾಚುವುದು ಅಥವಾ ಅದರ ಅಪಯಶಸ್ಸುಗಳನ್ನೂ ಹಾಡಿ ಹೊಗಳುವುದು—ಇಂತಹ ಮೀಡಿಯಾ ಕಥಾನಕ ನಿರ್ಮಿತಿಯು ರಾಜಕೀಯ ಫಲಿತಾಂಶವನ್ನೇ ಬದಲಿಸಿಬಿಡಬಲ್ಲದು. ಆದರೆ ಇಲ್ಲಿ ಕೂಡ ಎಚ್ಚರಿಕೆ ಬೇಕು. ಸರ್ಕಾರವನ್ನು ಟೀಕಿಸುವ ಪತ್ರಕರ್ತ Deep State ಸದಸ್ಯನಲ್ಲ. ಸ್ವತಂತ್ರ ಮಾಧ್ಯಮವೇ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಭಾರತದ ಇಂದಿನ ಗೋದಿ ಮೀಡಿಯಾದ ವರ್ತನೆಯು ನರೇಂದ್ರ ಮೋದಿ ಸರ್ಕಾರ ಮತ್ತು ಅದಕ್ಕೆ ಇಂಬಾಗಿ ನಿಂತಿರುವ ಡೀಪ್ ಸ್ಟೇಟ್ ಗೆ ಸಹಕರಿಸುವ ಮಾಧ್ಯಮವನ್ನು ಬೆತ್ತಲಾಗಿಸುತ್ತದೆ.
ಚುನಾವಣೆಗಳನ್ನು ರದ್ದುಗೊಳಿಸುವ ಅಗತ್ಯವೇ ಇಲ್ಲದೆ ಅಧಿಕಾರವನ್ನು ನಿಯಂತ್ರಿಸುವ ವಿಧಾನ
ಆಧುನಿಕ Deep State ಎಂಬ ಪರಿಕಲ್ಪನೆಯ ಅತ್ಯಂತ ಕುತೂಹಲಕರ ಅಂಶವೆಂದರೆ ಅದು ಯಾವಾಗಲೂ ಸೇನಾ ಕ್ಷಿಪ್ರ ಕ್ರಾಂತಿಯಾಗಿ ಘಟಿಸಬೇಕಿಲ್ಲ. ಚುನಾವಣೆ ನಡೆಯಬಹುದು, ಸಂಸತ್ತು ಇರಬಹುದು, ಪ್ರಧಾನಿ ಇರಬಹುದು, ಆದರೆ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ʼಅದೃಶ್ಯ ಅಧಿಕಾರʼವಾಗಿ (ಮಬ್ಬು ಪರಿಸ್ಥಿತಿ/ಇನ್ವಿಸಿಬಲ್ ವೀಟೊ) ಅಸ್ತಿತ್ವದಲ್ಲಿರುತ್ತದೆ.
ಡೀಪ್ ಸ್ಟೇಟ್ ಯಾವ್ಯಾವ ದೇಶಗಳಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಪಾಕಿಸ್ತಾನ: ದಕ್ಷಿಣ ಏಷ್ಯಾದಲ್ಲಿ Deep State ಚರ್ಚೆಗೆ ಹೊಳಪಿನ ಉದಾಹರಣೆಯಾಗಬಲ್ಲ ದೇಶ ಪಾಕಿಸ್ತಾನ. ಅಲ್ಲಿ ಸಾಮಾನ್ಯವಾಗಿ “Establishment” ಎಂಬ ಪದವನ್ನು ಬಳಸಲಾಗುತ್ತದೆ. ರಾಜಕೀಯ ಪ್ರಕ್ರಿಯೆ, ಮಾಧ್ಯಮ ಹಾಗೂ ನಾಗರಿಕ ಸರ್ಕಾರಗಳ ಮೇಲೆ ಭದ್ರತಾ ಸಂಸ್ಥೆಗಳ ಪ್ರಭಾವದ ಕುರಿತು ದೀರ್ಘ ಇತಿಹಾಸವಿದೆ ಎಂದು ಅಧ್ಯಯನಗಳು ಹೇಳುತ್ತವೆ.
ಸೇನೆಯು ಪಾಕಿಸ್ತಾನದ ರಾಜಕೀಯ ವ್ಯವಸ್ಥೆಯೊಳಗೆ ತನ್ನ ಬೇರುಗಳನ್ನು ಆಳವಾಗಿ ಇಳಿಸಿರುವ ಕುರಿತ ಅಧ್ಯಯನಗಳಿವೆ. ಪಾಕಿಸ್ತಾನಿ ರಾಜಕೀಯದ ದೀರ್ಘಕಾಲದ ʼkingmakerʼ ಎಂದು ಸೇನೆಯನ್ನು ಬಣ್ಣಿಸಲಾಗಿದೆ. ನಾಗರಿಕ ಸರ್ಕಾರ ಮತ್ತು ಮಾಧ್ಯಮ ನಿಯಂತ್ರಣ ಹಾಗೂ ರಾಜಕೀಯ ವ್ಯವಸ್ಥೆಯೊಂದಿಗೆ ಸೇನೆಯು ಗಾಢ ಸಂಬಂಧ ಹೊಂದಿದೆ. ಹೀಗಾಗಿ ಪಾಕಿಸ್ತಾನದ ವಿಷಯದಲ್ಲಿ Deep State ಎಂದರೆ ಯಾವುದೋ ಸಂಪೂರ್ಣ ರಹಸ್ಯ ಗುಂಪಿಗಿಂತ, ಸೇನೆ–ಗುಪ್ತಚರ ವ್ಯವಸ್ಥೆಯ ದೀರ್ಘಾವಧಿಯ ರಾಜಕೀಯ ಪ್ರಾಬಲ್ಯ ಮತ್ತು ಅದರ ಸುತ್ತಲಿರುವ ಪ್ರಭಾವ ಜಾಲ ಎಂಬ ಅರ್ಥದಲ್ಲಿ ಬಳಸುವುದು ಹೆಚ್ಚು ಸೂಕ್ತ.
ಟರ್ಕಿಯ ಅನುಭವವೇ Deep State ಪದಕ್ಕೆ ಜಾಗತಿಕ ಗುರುತು ನೀಡಿತು. ಇಲ್ಲಿ ವಿಶೇಷವಾಗಿ 1990ರ ದಶಕದ ಘಟನೆಗಳು ಸೇನೆ, ಪೊಲೀಸ್, ಅತಿ ರಾಷ್ಟ್ರವಾದಿ ಅಂಶಗಳು ಮತ್ತು ಸಂಘಟಿತ ಅಪರಾಧ ವಲಯಗಳ ನಡುವಿನ ಸಂಬಂಧದ ಕುರಿತು ದೊಡ್ಡ ಪ್ರಶ್ನೆಗಳನ್ನು ಹುಟ್ಟಿಹಾಕಿದವು. ಇಂತಹ ಜಾಲಗಳು ಏಕಕೇಂದ್ರಿತವಾಗಿರದೇ ಪರಸ್ಪರ ಸ್ಪರ್ಧಿಸುವ ಗುಂಪುಗಳೂ ಆಗಿರಬಹುದು ಎಂದು ಟರ್ಕಿ ಕುರಿತು ಅಧ್ಯಯನಗಳು ಸೂಚಿಸುತ್ತವೆ.
ಇದು Deep State ಅಧ್ಯಯನದ ಪ್ರಮುಖ ಪಾಠವೂ ಹೌದು: ಗುಪ್ತ ಅಧಿಕಾರ ಎಂದರೆ ಯಾವಾಗಲೂ ಶಿಸ್ತಿನಿಂದ ಕಾರ್ಯನಿರ್ವಹಿಸುವ ಒಂದೇ ಸಂಘಟನೆಯಲ್ಲ; ಕೆಲವೊಮ್ಮೆ ರಾಜ್ಯದೊಳಗಿನ ಹಲವು ಗುಂಪುಗಳ ಪರಸ್ಪರ ಸಹಕಾರ ಮತ್ತು ಸಂಘರ್ಷ ಎರಡೂ ಅದರ ಭಾಗವಾಗಿರುತ್ತವೆ.
ಅಮೆರಿಕದಲ್ಲಿ Deep State ಇದೆಯೇ?
ಅಮೆರಿಕದಲ್ಲಿ ವಿಶೇಷವಾಗಿ 2016ರ ನಂತರ ʼDeep Stateʼ ಎಂಬ ಪದ ರಾಜಕೀಯ ಭಾಷೆಯಲ್ಲಿ ಬಹಳ ಜನಪ್ರಿಯವಾಯಿತು. ಒಕ್ಕೂಟ ಅಧಿಕಾರಶಾಹಿ (Federal bureaucracy), ಗುಪ್ತಚರ ಸಮುದಾಯ(Intelligence community) ಮತ್ತು ವೃತ್ತಿಪರ ಅಧಿಕಾರಿಗಳು(Career officials) ಚುನಾಯಿತ ಅಧ್ಯಕ್ಷರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂಬ ದಟ್ಟ ಆರೋಪಗಳು ಚಾಲ್ತಿಗೆ ಬಂದವು.
Jon D. Michaels ಅವರ ದೃಷ್ಟಿಯಲ್ಲಿ ಅಧಿಕಾರಶಾಹಿಯ ಸಾಂಸ್ಥಿಕ ಸ್ವಾಯತ್ತತೆಯೇ ಅಧ್ಯಕ್ಷನ ಅಧಿಕಾರಕ್ಕೆ checks and balances ಆಗಿರುತ್ತವೆ. ಅಂದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳೂ ಪರಸ್ಪರ ನಿಯಂತ್ರಣದಲ್ಲಿರುತ್ತವೆ. ಜನಪರವಾಗಿ ಕೆಲಸ ಮಾಡಬೇಕಾದ ಜನತಾಂತ್ರಿಕ ಸಂಸ್ಥೆಗಳು ಸರ್ವಾಧಿಕಾರಿಗಳ ಕಪಿಮುಷ್ಠಿಗೆ ಸಿಲುಕಿರುವ ಸ್ಥಿತಿಯೇ ಅಪಾಯಕಾರಿ “Deep State” ಚಿತ್ರವನ್ನು ಬಿಡಿಸಿಡುತ್ತದೆ.
ಸರ್ಕಾರದ ಪ್ರತಿಯೊಂದು ನಿಯಂತ್ರಣ ವ್ಯವಸ್ಥೆಯನ್ನೂ Deep State ಎಂದು ಕರೆದರೆ ನ್ಯಾಯಾಲಯ, ಸ್ವತಂತ್ರ ತನಿಖಾ ಸಂಸ್ಥೆ, professional civil service ಮತ್ತು whistleblowerಗಳಂತಹ ಪ್ರಜಾಸತ್ತಾತ್ಮಕ ರಕ್ಷಣಾ ವ್ಯವಸ್ಥೆಗಳನ್ನೂ ಶತ್ರುಗಳೆಂದು ಚಿತ್ರಿಸುವ ಅಪಾಯವಿದೆ.
Deep Stateನ ದೊಡ್ಡ ಅಪಾಯ; ಮತದಾನದ ಅರ್ಥವೇ ಕುಗ್ಗುತ್ತದೆ: ಪ್ರಜಾಪ್ರಭುತ್ವದ ಮೂಲ ತತ್ವ ಬಹಳ ಸರಳ. ಆಡಳಿತ ನಡೆಸುವವರನ್ನು ಜನರು ಆಯ್ಕೆ ಮಾಡಬೇಕು ಮತ್ತು ಅವರು ಜನರಿಗೆ ಉತ್ತರದಾಯಕರಾಗಬೇಕು. ಆದರೆ ಮತದಾರರು ಒಂದು ನೀತಿಗೆ ಮತ ಹಾಕಿದ ನಂತರವೂ ಚುನಾಯಿತ ಸರ್ಕಾರಕ್ಕೆ ಅದನ್ನು ಜಾರಿಗೆ ತರಲು ಅವಕಾಶವಿಲ್ಲದೆ, ಹಿನ್ನೆಲೆಯ ಯಾವುದೋ ಉತ್ತರದಾಯಕವಲ್ಲದ ಶಕ್ತಿ ಅದನ್ನು ತಡೆಯುತ್ತಿದ್ದರೆ ಚುನಾವಣೆ ನಿಧಾನವಾಗಿ ಆಚರಣೆಯಾಗಿ ಮಾತ್ರ ಉಳಿಯುತ್ತದೆ.




