ಅಮಿತ್ ಶಾ ಕಾಲಿಗೆ ಬಿದ್ದ ಅಪ್ಪ; ಹಿಂದಿಯಲ್ಲಿ ಭಾಷಣ ಮಾಡಿದ ಮಗ: ಯಾತಕ್ಕಾಗಿ?

Date:

ಅಮಿತ್ ಶಾ ಇಂದು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರಬಹುದು. ಹಿಂದೊಮ್ಮೆ ಇದೇ ಮನುಷ್ಯ ತನ್ನ ರಾಜ್ಯದಿಂದ ಗಡಿಪಾರಾಗಿ ಜೈಲು ಸೇರಿದ್ದ, ನೈತಿಕತೆ ಇಲ್ಲದ ಚಾರಿತ್ರ್ಯಹೀನ ವ್ಯಕ್ತಿ ಎನಿಸಿಕೊಂಡಿದ್ದ. ಇಂತಹ ವ್ಯಕ್ತಿಗೆ ಅತ್ಯಂತ ಹಿರಿಯ ವ್ಯಕ್ತಿಯಾದ ಯಡಿಯೂರಪ್ಪನವರು ಕಾಲಿಗೆ ಬೀಳುವುದು, ಮಗ ವಿಜಯೇಂದ್ರ ಹಿಂದಿಯಲ್ಲಿ ಭಾಷಣ ಮಾಡುವುದು ಅವರ ಕರ್ಮವಾಗಿರಬಹುದು. ಆ ಕರ್ಮ ನಾಡಿನ ಜನತೆಯದಾಗದಿರಲಿ.

ಮೇ 9ರಂದು ಚಿತ್ರದುರ್ಗದಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿಮಾನೋತ್ಸವ ಏರ್ಪಡಿಸಲಾಗಿತ್ತು. ನಾಡಿನ ಮಠಾಧೀಶರು, ಸ್ವಾಮೀಜಗಳು, ರಾಜಕೀಯ ನಾಯಕರು, ಗಣ್ಯರು ಎಲ್ಲರೂ ಭಾಗವಹಿಸಿದ್ದರು.

- Advertisement -

ಜನರ ನಡುವಿನಿಂದ ಎದ್ದುಬಂದ ಸಾಮಾನ್ಯ ವ್ಯಕ್ತಿಯೊಬ್ಬ ರಾಜಕೀಯ ಕ್ಷೇತ್ರದಲ್ಲಿ ಸಾರ್ವಜನಿಕ ಸೇವೆಯಲ್ಲಿ 50 ವರ್ಷಗಳನ್ನು ಸವೆಸಿದ್ದು ನಿಜಕ್ಕೂ ಶ್ಲಾಘನೀಯ. ಯಡಿಯೂರಪ್ಪನವರ ಸೇವೆಯನ್ನು ಸ್ಮರಣೀಯಗೊಳಿಸಿದ್ದು, ಸನ್ಮಾನಿಸಿದ್ದು ಕೂಡ ಸೂಕ್ತವಾಗಿತ್ತು. ಆದರೆ, ಆ ಭವ್ಯ ಅಭಿಮಾನೋತ್ಸವದ ವೇದಿಕೆಯಲ್ಲಿ ಜರುಗಿದ್ದು ಬೇರೆಯಾಗಿತ್ತು. ಬೇಡವಾಗಿತ್ತು. ಅಭಿಮಾನಿಗಳನ್ನು ಅವಮಾನಿಸುವಂತಿತ್ತು. ಅದು ಬಿಎಸ್‌ವೈ ಅಭಿಮಾನೋತ್ಸವವಾದರೂ, ಅದು ಭಾರತೀಯ ಜನತಾ ಪಕ್ಷದ ರಾಜಕೀಯ ಸಮಾವೇಶವಾಗಿ ಮಾರ್ಪಟ್ಟಿತ್ತು. ಲಿಂಗಾಯತ ಸಮುದಾಯವನ್ನು ಬಿಜೆಪಿಯತ್ತ ಸೆಳೆಯುವ ರಾಜಕೀಯ ವೇದಿಕೆಯಾಗಿತ್ತು. ಅದಕ್ಕೆ ನಾಯಕರು, ಮಠಾಧೀಶರು, ಸ್ವಾಮೀಜಿಗಳನ್ನು ಅಸ್ತ್ರದಂತೆ ಬಳಸಿಕೊಳ್ಳಲಾಗಿತ್ತು. ಮುಂದಿನ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿದ ಸಮಾವೇಶವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದರಲ್ಲೇನು ವಿಶೇಷವಿಲ್ಲ. ಭಾರತೀಯ ಜನತಾ ಪಕ್ಷ ಈ ಸಮಾವೇಶವನ್ನು ಹಮ್ಮಿಕೊಂಡಿದ್ದೇ, 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು. ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿಮಾನೋತ್ಸವ ಎನ್ನುವುದು ನೆಪವಾಗಿತ್ತು. ಅಂದರೆ, ಹಸಿದ ಬಿಜೆಪಿಗೆ ಹಳಸಿದ ಬಿಎಸ್‌ವೈ ಬೇಕಾಗಿತ್ತು. ಇದು ಎಲ್ಲರಿಗೂ ಗೊತ್ತಿದ್ದ ವಿಷಯವೇ ಆಗಿತ್ತು.

ಇದಿಷ್ಟೇ ಆಗಿದ್ದರೆ, ಆ ಅಭಿಮಾನೋತ್ಸವದ ಕುರಿತು ಮಾತನಾಡುವ ಅಗತ್ಯವೇನೂ ಇರಲಿಲ್ಲ. ಆದರೆ, ಅಭಿಮಾನೋತ್ಸವದಲ್ಲಿ ಆದದ್ದೇ ಬೇರೆ. ಇಂದು ದೇಶದಲ್ಲಿ ಬಿಜೆಪಿ ಎಂದಾಕ್ಷಣ ಎರಡು ತಲೆಗಳು ಎದ್ದು ಕಾಣುತ್ತವೆ. ಒಂದು ಮೋದಿ, ಮತ್ತೊಂದು ಅಮಿತ್ ಶಾ. ಇವರನ್ನು ಬಿಟ್ಟರೆ ದೇಶದಲ್ಲಿ ಇನ್ಯಾರೂ ನಾಯಕರೇ ಇಲ್ಲವೆನ್ನುವಂತೆ ಬಿಂಬಿಸಲಾಗುತ್ತಿದೆ. ಅವರ ಕಿಡಿಗೇಡಿ ಕೃತ್ಯಗಳನ್ನು ಮರೆಮಾಚುವ ಮಾಧ್ಯಮಗಳು ಮತ್ತು ಪ್ರಜ್ಞಾಪೂರ್ವಕವಾಗಿ ಮರೆಯುವ ಮತದಾರರ ಕೃಪೆಯಿಂದ ರಾಜ್ಯದಿಂದ ರಾಜ್ಯಕ್ಕೆ ಬಿಜೆಪಿ ವಿಸ್ತರಿಸುತ್ತಲೇ ಸಾಗಿದೆ. ಗೆಲುವು ಅವರ ಕೊಳಕನ್ನು, ಕರಾಳಮುಖವನ್ನು ಮುಚ್ಚಿಹಾಕುತ್ತಿದೆ.

ಇದನ್ನು ಓದಿದ್ದೀರಾ?: ಟೊಳ್ಳು ಘೋಷಣೆಗಷ್ಟೇ ಸೀಮಿತ ಆಯ್ತಾ 5 ಟ್ರಿಲಿಯನ್ ಎಕಾನಮಿ? ದೇಶದ ದಿವಾಳಿ ಮುಚ್ಚಿಡಲು ಪ್ರಧಾನಿಯ 7 ಬೇಡಿಕೆ; ವಿಪಕ್ಷಗಳ ಆಕ್ರೋಶ

ಆದರೆ, ಚಿತ್ರದುರ್ಗದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಅಭಿಮಾನೋತ್ಸವ ಎನ್ನುವುದು ಯಡಿಯೂರಪ್ಪನವರ ಕಾರ್ಯಕ್ರಮ. ಅಲ್ಲಿ ಅವರೇ ಕೇಂದ್ರಬಿಂದು. ಅವರ ಹಿರಿತನ, ಸೇವೆ, ಸಾಧನೆ, ಸಾರ್ಥಕ ಕ್ಷಣಗಳನ್ನು ಸ್ಮರಿಸುವ ಸಮಯ. ಅಂತಹ ಸಮಾವೇಶಕ್ಕೆ ವಿಶೇಷ ಆಹ್ವಾನಿತರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಂತೆ, ಕೂತಿದ್ದ ಯಡಿಯೂರಪ್ಪನವರು ಎದ್ದು ಹೋಗಿ, ಅವರನ್ನು ಬರಮಾಡಿಕೊಂಡರು. ಅದು ಅವರ ಸೌಜನ್ಯ, ಸಾರ್ವಜನಿಕ ಸಭ್ಯತೆ. ಒಪ್ಪಿಕೊಳ್ಳೋಣ. ಆದರೆ, 83 ವರ್ಷಗಳ ಅತ್ಯಂತ ಹಿರಿಯ ವ್ಯಕ್ತಿ ಯಡಿಯೂರಪ್ಪನವರು, ಹೆಚ್ಚೂಕಡಿಮೆ ತಮ್ಮ ಹಿರಿಮಗಳ ವಯಸ್ಸಿನ 61ರ ಅಮಿತ್ ಶಾ ಕಾಲಿಗೆ ಬೀಳುವುದು ಎಂದರೇನು? ಅಷ್ಟಕ್ಕೂ ಯಾರು ಆ ಅಮಿತ್ ಶಾ?

ಅಮಿತ್ ಶಾ ಎಂಬ ಗುಜರಾತಿನ ಸಾಮಾನ್ಯ ವ್ಯಕ್ತಿ ಇಡೀ ದೇಶಕ್ಕೆ ಮತ್ತು ಪ್ರಪಂಚಕ್ಕೆ ಪರಿಚಯವಾಗಿದ್ದು 2002ರ ಗುಜರಾತ್ ನರಮೇಧದಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ 10 ಖಾತೆಗಳನ್ನು ನಿರ್ವಹಿಸುವ ಸಚಿವನನ್ನಾಗಿ ಮಾಡಲಾಯಿತು. ಗೃಹಮಂತ್ರಿ ಅಮಿತ್ ಶಾ 2002ರಲ್ಲಿ ನಡೆದ ಗುಜರಾತ್ ನರಮೇಧದಲ್ಲಿ ಅದರಲ್ಲೂ ಸೋಹ್ರಾಬುದ್ದೀನ್, ಇಶ್ರತ್ ಜಹಾನ್, ಹರೇನ್ ಪಾಂಡ್ಯರ ನಕಲಿ ಎನ್‌ಕೌಂಟರ್ ಪ್ರಕರಣ ಹಾಗೂ ರಾಜ್ಯ ಪೊಲೀಸರಿಗೆ ಆದೇಶ ನೀಡಿ ಹಲವಾರು ಜನರನ್ನು ಕೊಲ್ಲಿಸಲು ಕಾರಣರಾದರೆಂಬ ಆಪಾದನೆಗೆ ಗುರಿಯಾಗಿದ್ದರು. ಹಲವಾರು ಕೇಸುಗಳು ಮೈ ಮೆತ್ತಿಕೊಂಡವು. ಅಷ್ಟೇ ಅಲ್ಲ ಸಿಬಿಐ ತನಿಖೆ ಕೈಗೆತ್ತಿಕೊಂಡು ಅಮಿತ್ ಶಾರನ್ನು ಮುಖ್ಯ ಆರೋಪಿಯನ್ನಾಗಿಸಿ ಜುಲೈ 25, 2010ರಂದು ಬಂಧಿಸಿ, ಜೈಲಿಗೂ ಅಟ್ಟಿತ್ತು. ಮೂರು ತಿಂಗಳ ಕಾಲ ಕಂಬಿಗಳ ಹಿಂದೆ ಕೂರಿಸಿತ್ತು.

ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ, ಶಿಕಾರಿಪುರದ ಸಾಮಾನ್ಯ ರೈತಕುಟುಂಬದಿಂದ ಬಂದ ಯಡಿಯೂರಪ್ಪನವರು, ಸೈಕಲ್‌ನಲ್ಲಿ ಊರೂರು ಸುತ್ತಿ ಸ್ವಂತ ಶಕ್ತಿಯಿಂದ ಪಕ್ಷ ಸಂಘಟಿಸಿದವರು. ಯಶಸ್ಸಿನ ಏಣಿಯನ್ನು ಒಂದೊಂದೇ ಮೆಟ್ಟಿಲು ಹತ್ತಿದವರು. ಜನನಾಯಕನೆನಿಸಿಕೊಂಡವರು. ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾದವರು. ಮತ್ತು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ಇವರು ಪಕ್ಷ ಕಟ್ಟುವ ಕಾಲದಲ್ಲಿ ಅಮಿತ್ ಶಾ ಆರೆಸ್ಸೆಸ್ ಅಂಗಳದಲ್ಲಿ ದೊಣ್ಣೆ ಬೀಸುತ್ತಿದ್ದರು. ಇಂತಹ ವ್ಯಕ್ತಿ ಇಂದು ಕೇಂದ್ರ ಗೃಹ ಸಚಿವರಾಗಿರಬಹುದು. ಅಧಿಕಾರದ ಕೇಂದ್ರಸ್ಥಾನದಲ್ಲಿರಬಹುದು. ಬಿಜೆಪಿಯನ್ನು ಗೆಲ್ಲಿಸಿಕೊಂಡುಬರುವ ಛಾತಿ ಹೊಂದಿರಬಹುದು. ಅಷ್ಟಕ್ಕೇ ಹಿರಿಯ ನಾಯಕ ಯಡಿಯೂರಪ್ಪ, ಅವರ ಕಾಲಿಗೆ ಬೀಳುವುದೇ?  

HH4yj8 aAAEiHMc
ಬಿಎಸ್‌ವೈ ಅಭಿಮಾನೋತ್ಸವ

83ರ ಅಪ್ಪನಿಗೇನೋ ಅರುಳು ಮರುಳು ಇರಬಹುದು, ಅಪಾತ್ರನ ಕಾಲಿಗೆ ಬಿದ್ದಿರಬಹುದು. ಮಗ ಬಿ.ವೈ. ವಿಜಯೇಂದ್ರರಿಗೆ ಏನಾಗಿದೆ? ಅದು ರಾಜ್ಯದ ಉತ್ತರ-ದಕ್ಷಿಣವನ್ನು ಬೆಸೆಯುವ ಚಿತ್ರದುರ್ಗ. ಅಲ್ಲಿದ್ದವರು ಕನ್ನಡಿಗರು. ಅಪ್ಪನ ಅಭಿಮಾನಿಗಳು. ಅಲ್ಲಿ ಮಾತನಾಡಬೇಕಾದ್ದು ಅಪ್ಪನ ಸಾಧನೆ ಕುರಿತು. ಆದರೆ ವಿಜಯೇಂದ್ರ, ಗೃಹ ಮಂತ್ರಿ ಅಮಿತ್ ಶಾ ಅವರನ್ನು ಮೆಚ್ಚಿಸಲು ಹಿಂದಿಯಲ್ಲಿ ಮಾತನಾಡಿದರು. ಅಗತ್ಯವಿತ್ತೇ? ಇದು ಗುಲಾಮಗಿರಿಯಲ್ಲವೇ? ಕನ್ನಡಕ್ಕೆ, ಕನ್ನಡಿಗರಿಗೆ ಮಾಡಿದ ಅವಮಾನವಲ್ಲವೇ?

2008ರಲ್ಲಿ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾದದ್ದು ‘ಆಪರೇಷನ್ ಕಮಲ’ದ ಮೂಲಕ. ಅಕ್ಷರಶಃ ಶಾಸಕರನ್ನು ಖರೀದಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಯಡಿಯೂರಪ್ಪನವರು, ಪ್ರಜಾಪ್ರಭುತ್ವದ ಕತ್ತು ಹಿಸುಕಿದ ವ್ಯಕ್ತಿಯಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದರು. ಅದೇ ಅವಧಿಯಲ್ಲಿ ಚೆಕ್ ಮುಖಾಂತರ ಲಂಚ ಸ್ವೀಕರಿಸಿ, ಗಣಿ ಹಗರಣದಲ್ಲಿ ಜೈಲು ಪಾಲಾಗಿದ್ದರು. ಮುಖ್ಯಮಂತ್ರಿಯಾಗಿದ್ದಾಗಲೇ ಜೈಲು ಸೇರಿದ ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಎನ್ನುವ ಕುಖ್ಯಾತಿಗೂ ಪಾತ್ರರಾದರು.

ಅದಾದ ನಂತರ, 2019ರಲ್ಲಿ ಜುಲೈ 26ರಂದು ಬಿ.ಎಸ್. ಯಡಿಯೂರಪ್ಪನವರು, ನಾಲ್ಕನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾದರು. ಆಗಲೂ ಅವರು ‘ಆಪರೇಷನ್ ಕಮಲ’ದ ಮೂಲಕವೇ ಅಧಿಕಾರ ಹಿಡಿದರು. ಶಾಸಕರನ್ನು ಅಪಹರಿಸಿ, ಮುಂಬೈ ಹೋಟೆಲ್‌ನಲ್ಲಿ ಕೂಡಿಟ್ಟು ಖರೀದಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದರು. 2019ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೂ, ಅಧಿಕಾರ ಚಲಾಯಿಸಿದ್ದು ಅವರ ಪುತ್ರ ಬಿ.ವೈ. ವಿಜಯೇಂದ್ರ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸತ್ಯವಾಗಿತ್ತು. ಅಪ್ಪನನ್ನೇ ಮೂಲೆಗೆ ಸರಿಸಿ ಸಚಿವರ ಫೈಲ್ ವಿಲೇವಾರಿ ಮಾಡುವುದು, ವರ್ಗಾವಣೆ ದಂಧೆಯಲ್ಲಿ ನೇರವಾಗಿ ಪಾಲ್ಗೊಳ್ಳುವುದನ್ನು ಕಂಡು ಸಹಿಸದಾದ ಬಿಜೆಪಿ ನಾಯಕರೇ ಬಹಿರಂಗವಾಗಿ ದೂರತೊಡಗಿದರು.

ದೂರು ದಿಲ್ಲಿ ಮುಟ್ಟಿದಾಗ ಇದೇ ಮೋದಿ ಮತ್ತು ಅಮಿತ್ ಶಾ ಎಂಬ ನಾಯಕರು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿದ್ದರು. ಕುರ್ಚಿ ಬಿಡದ ಅಪ್ಪ-ಮಗ, ಇಂದು ಅಭಿಮಾನೋತ್ಸವದಲ್ಲಿ ಯಾರೆಲ್ಲ ಮಠಾಧೀಶರು, ಸ್ವಾಮೀಜಿಗಳನ್ನು ವೇದಿಕೆ ಮೇಲೆ ಕೂರಿಸಿಕೊಂಡು ಬಿಜೆಪಿ ಬೆಂಬಲಕ್ಕಿದ್ದಾರೆ ಎಂದು ತೋರಿಸುತ್ತಿದ್ದಾರೋ, ಅವರೇ ಅಂದು ಮೋದಿ-ಅಮಿತ್ ಶಾಗಳ ವಿರುದ್ಧ ಗುಡುಗುವಂತೆ ನೋಡಿಕೊಂಡಿದ್ದರು. ಆದರೂ, ಸ್ವಾಮೀಜಿಗಳಿಗೆ ಸೊಪ್ಪು ಹಾಕದ ಮೋದಿ-ಶಾ, ಬಲವಂತವಾಗಿ ಕುರ್ಚಿಯಿಂದ ಕೆಳಗಿಳಿಸಿ, ಅವಮಾನಿಸಿ, ಮನೆಗೆ ಕಳಿಸಿದ್ದರು. ವಿಪರ್ಯಾಸವೆಂದರೆ, ಇಂದು ಅದೇ ಮೋದಿ-ಶಾಗಳಿಗಾಗಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲಿಕ್ಕಾಗಿ ಲಿಂಗಾಯತ ಸಮುದಾಯದ ಮುಂದೆ ಕೈ ಮುಗಿದು ನಿಲ್ಲುತ್ತಿದ್ದಾರೆ. ಅಷ್ಟೇ ಏಕೆ, ಸಾರ್ವಜನಿಕ ಸಮಾರಂಭವೊಂದರಲ್ಲಿ, ಇದೇ ಗೃಹ ಸಚಿವ ಅಮಿತ್ ಶಾ, ‘ಕರ್ನಾಟಕದಲ್ಲಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಅಂತ ಯಾರಾದರೂ ಇದ್ದರೆ, ಅದು ಯಡಿಯೂರಪ್ಪ’ ಎಂದಿದ್ದರು. ಪಕ್ಕದಲ್ಲಿದ್ದ ಯಡಿಯೂರಪ್ಪ ಬಾಯಿಬಿಡದೆ ಕೂತಿದ್ದರು.

ಇಂತಹ ಅಮಿತ್ ಶಾ ಇಂದು ಸಂಘ ಪರಿವಾರ, ಬಿಜೆಪಿ ಮತ್ತು ದಿಲ್ಲಿ ಮಟ್ಟದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರಬಹುದು. ಹಿಂದೊಮ್ಮೆ ಇದೇ ಮನುಷ್ಯ ತನ್ನ ರಾಜ್ಯದಿಂದ ಗಡಿಪಾರಾಗಿ ಜೈಲು ಸೇರಿದ್ದ, ನೈತಿಕತೆ ಇಲ್ಲದ ಚಾರಿತ್ರ್ಯಹೀನ ವ್ಯಕ್ತಿ ಎನಿಸಿಕೊಂಡಿದ್ದ. ಇಂತಹ ವ್ಯಕ್ತಿಗೆ ಅತ್ಯಂತ ಹಿರಿಯ ವ್ಯಕ್ತಿಯಾದ ಯಡಿಯೂರಪ್ಪನವರು ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ ಎಂದರೆ, ಇವರಿಗೆ ನೈತಿಕತೆ ಇದೆಯಾ? ಇನ್ನು ದಕ್ಷಿಣ ರಾಜ್ಯಗಳನ್ನು ಗುಲಾಮರಂತೆ ಕಾಣುವ, ಕನ್ನಡವನ್ನು ಕಡೆಗಣಿಸಿ ಹಿಂದಿ ಹೇರಲು ನೋಡುವ, ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುವ ಅಮಿತ್ ಶಾರನ್ನು ಮೆಚ್ಚಿಸಲು ಹಿಂದಿಯಲ್ಲಿ ಮಾತಾಡಿದ ವಿಜಯೇಂದ್ರರನ್ನು ನಾಡಿನ ಯುವ ಸಮುದಾಯ ಮಾದರಿಯಾಗಿ ನೋಡುವುದು ಸಾಧ್ಯವೇ?

HH5HAtobEAAjXMt
ಬಿಎಸ್‌ವೈ ಅಭಿಮಾನೋತ್ಸವ

ಕರ್ನಾಟಕವೆಂದರೆ ಬಸವಣ್ಣ, ಟಿಪ್ಪು, ಕುವೆಂಪುರಂತಹ ಗಟ್ಟಿ ವ್ಯಕ್ತಿತ್ವಗಳಿದ್ದ ಸ್ವಾಭಿಮಾನಿಗಳ ನಾಡು. ಇವರು ಬದುಕಿ ಬಾಳಿದ ಭವ್ಯ ಪರಂಪರೆಯ ಬೀಡು. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಸಮೃದ್ಧವಾದ ನಾಡಿನಲ್ಲಿ ಕೋಮುವಾದ ಹರಡುವ, ದ್ವೇಷಾಸೂಯೆ ಬಿತ್ತುವ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅಪ್ಪ-ಮಗ, ಮೋದಿ-ಶಾಗಳ ಬ್ಲ್ಯಾಕ್‌ಮೇಲ್‌ಗೆ ಬಲಿಯಾಗಿ ಕಾಲಿಗೆ ಬೀಳುತ್ತಿದ್ದಾರೆ. ಅದು ಅವರ ಕರ್ಮ. ಆ ಕರ್ಮಕ್ಕೆ ನಾಡು ಬಲಿಯಾಗದಿರಲಿ.  

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಸ್ಸಾಂ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ನಮ್ಮ ಬಂಧನ: ಸಿಜೆಪಿ ನಾಯಕ ಅಶುತೋಷ್ ರಂಕಾ ಆರೋಪ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಅಶುತೋಷ್ ರಂಕಾ ಮತ್ತು ಅವರ...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ವಿಜಯಪುರ | ವಿಕಲಚೇತನರು, ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ: ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನ

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 14 ಫಲಾನುಭವಿ ಆಧಾರಿತ...