ಕರ್ನಾಟಕದಲ್ಲಿ ಅಡಿಕೆ ಬೆಳೆ ಆರ್ಥಿಕವಾಗಿ ಬಲಿಷ್ಠ ಸ್ಥಿತಿಯಲ್ಲಿರಬಹುದು. ಆದರೆ, ನೀರಿನ ಲಭ್ಯತೆ, ರೋಗಬಾಧೆ, ಬೆಲೆಗಳ ಅನಿಶ್ಚಿತತೆಯನ್ನು ಅಲಕ್ಷಿಸುವಂತಿಲ್ಲ. ಹಾಗೆಯೇ ಕೃಷಿಕರು ವಾಣಿಜ್ಯ ಬೆಳೆಗಳತ್ತ ಒಲವು ಹೊಂದುವುದು, ಆಹಾರ ಬೆಳೆಗಳ ಕುಸಿತದಂತಹ ದೀರ್ಘಕಾಲೀನ ಸವಾಲು ಎದುರಾಗುವುದನ್ನು ನಿರ್ಲಕ್ಷಿಸುವಂತಿಲ್ಲ. ಬೆಲೆ ಏರಿಕೆಯಿಂದ ಆಗುವ ಅನಾಹುತವನ್ನು, ಅಧ್ವಾನವನ್ನು ಅಂದಾಜು ಮಾಡಲಾಗುವುದಿಲ್ಲ.
ಎಲ್ ನಿನೊ ಪರಿಣಾಮದಿಂದ ಈ ಬಾರಿಯ ಮುಂಗಾರು ಹಂಗಾಮಿಗೆ ಶೇ. 43ರಷ್ಟು ಮಳೆ ಕೊರತೆ ಕಾಡಲಿದೆ. ಕರ್ನಾಟಕವೂ ಸೇರಿದಂತೆ 12 ರಾಜ್ಯಗಳ 315 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದ್ದು, ರೈತರು ಕಡಿಮೆ ನೀರು ಬೇಡುವ, ಪ್ರತಿಕೂಲ ಹವಾಮಾನವನ್ನು ತಾಳಿಕೊಳ್ಳುವ ಬೆಳೆಗಳನ್ನು ಬೆಳೆಯಬೇಕೆಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೂಚಿಸಿದ್ದಾರೆ.
ಕರ್ನಾಟಕದಲ್ಲಿ ಅಡಿಕೆ ಬೆಳೆ ವಿಸ್ತೀರ್ಣ ವೇಗವಾಗಿ ಹೆಚ್ಚುತ್ತಿರುವುದರಿಂದ ಮುಂದಿನ ಐದತ್ತು ವರ್ಷಗಳಲ್ಲಿ ಉತ್ಪಾದನೆ ಹೆಚ್ಚಾಗಿ ದರ ಕುಸಿತದ ಅಪಾಯ ಎದುರಾಗಬಹುದೆಂದು ಕೃಷಿ ತಜ್ಞರು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈ ಕೊಟ್ಟಿದೆ. ಕೆಲವು ಕಡೆ ಅತಿವೃಷ್ಟಿ, ಹಲವೆಡೆ ಅನಾವೃಷ್ಟಿ ಕಾಣಿಸಿಕೊಂಡಿದೆ. ಪರಿಣಾಮವಾಗಿ ಒಂದು ಕಡೆ, ಬೆಳೆ ನಾಶವಾಗಿ ಕೃಷಿಕರು ಕಷ್ಟಕ್ಕೆ ಸಿಲುಕಿದರೆ; ಮತ್ತೊಂದು ಕಡೆ, ದಿನನಿತ್ಯ ಬಳಕೆಯ ಆಹಾರ ಧಾನ್ಯ-ಹಣ್ಣು-ಸೊಪ್ಪು-ತರಕಾರಿ ಬೆಲೆ ಗಗನಕ್ಕೇರಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಮೇಲಿನ ಮೂರು ಸುದ್ದಿಗಳಲ್ಲಿ ಒಂದು ಅಂಶ ಸ್ಪಷ್ಟವಾಗುತ್ತದೆ- ಅದು ಹವಾಮಾನ ವೈಪರೀತ್ಯ. ಅದನ್ನು ಅರಿತು ಅಳವಡಿಸಿಕೊಳ್ಳದ ಕೃಷಿ ಕ್ಷೇತ್ರ. ಅದು ನೇರವಾಗಿ ಕೃಷಿ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಬೆಲೆ ಏರಿಳಿತಗಳು, ಬೆಳೆಯುವವರ-ಬಳಸುವವರ ಬದುಕಿನ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ದೇಶದ ಆರ್ಥಿಕತೆ ಏರುಪೇರು ಆಗುತ್ತದೆ. ಒಟ್ಟಿನಲ್ಲಿ ಸಮಸ್ಯೆಗಳ ಸರಪಳಿಯೇ ಸೃಷ್ಟಿಯಾಗುತ್ತದೆ.
ಇಷ್ಟಾದರೂ ನಮ್ಮ ಜನಕ್ಕೆ ಮಳೆನೀರು-ಅಂತರ್ಜಲ ಅಮೂಲ್ಯ ಎನಿಸಿಲ್ಲ. ನೀರನ್ನು ಪೋಲು ಮಾಡಬಾರದು, ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಕಲಿಯಲಿಲ್ಲ. ರೈತರು ಮಿಶ್ರ ಬೇಸಾಯ ಬಿಟ್ಟು ಏಕಬೆಳೆಯತ್ತ- ವಾಣಿಜ್ಯ ಬೆಳೆಯತ್ತ ವಾಲುವುದು ನಿಂತಿಲ್ಲ. ಇದರಿಂದ ಹತ್ತು ಹಲವು ಸಮಸ್ಯೆಗಳಿಗೆ ಸಿಲುಕುವುದನ್ನು ಯಾವ ಸರ್ಕಾರಗಳೂ ತಡೆಯಲಾಗುತ್ತಿಲ್ಲ.
ಇದನ್ನು ಓದಿದ್ದೀರಾ?: ತೈಲ ದರ ಬಿಕ್ಕಟ್ಟು: ಗ್ರಾಹಕನಿಗೆ ಬೆಲೆ ಏರಿಕೆಯ ‘ಖಾಯಂ’ ಶಿಕ್ಷೆ?
ಈಗ ರಾಜ್ಯದಲ್ಲಿ ಎಲ್ಲರಿಗೂ ಅಡಿಕೆ ಬೆಳೆಯುವ ಹುಚ್ಚು ಹತ್ತಿದೆ. ಒಂದು ಕ್ವಿಂಟಾಲ್ ಅಡಿಕೆಗೆ 35ರಿಂದ 89 ಸಾವಿರದವರೆಗೆ ಬೆಲೆ- ಎಂದಾಕ್ಷಣ, ಎಲ್ಲರೂ ಅಡಿಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಒಂದೇ ವರ್ಷದಲ್ಲಿ ಸುಮಾರು 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಬೆಳೆಗಳ ಪ್ರಮಾಣ ಕುಸಿದಿದೆ. ಹಾಗೆಯೇ ಅಷ್ಟೇ ಪ್ರಮಾಣದಲ್ಲಿ ಅಡಿಕೆ ಬೆಳೆ ವಿಸ್ತೀರ್ಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಜೊತೆಗೆ ಭಾರತವು ಅಡಿಕೆಯ ಪ್ರಮುಖ ಉತ್ಪಾದಕ ದೇಶಗಳಲ್ಲಿ ಒಂದಾಗಿದ್ದು, ಯುಎಇ, ಮಲೇಷ್ಯಾ, ಶ್ರೀಲಂಕಾ, ಯುಕೆ ಮತ್ತು ಅಮೆರಿಕಕ್ಕೆ ರಫ್ತು ಮಾಡುತ್ತದೆ. 2023–24ರಲ್ಲಿ ಭಾರತ ಸುಮಾರು 10,636 ಮೆಟ್ರಿಕ್ ಟನ್ ಅಡಿಕೆ ರಫ್ತು ಮಾಡಿ ಸುಮಾರು 48 ಮಿಲಿಯನ್ ಡಾಲರ್ ಆದಾಯ ಗಳಿಸಿದೆ.
ಹಣ್ಣು, ತರಕಾರಿ, ಸಾಂಬಾರು ಪದಾರ್ಥ, ಹೂ, ಔಷಧೀಯ ಗಿಡಗಳನ್ನು ತೋಟಗಾರಿಕೆ ಬೆಳೆಗಳೆಂದು ಪರಿಗಣಿಸಲಾಗಿದೆ. ಆದರೆ, ಈ ಬೆಳೆಗಳಿಂದ ಬರುವ ಆದಾಯ ಅಡಿಕೆಗೆ ಹೋಲಿಸಿದರೆ ಚಿಲ್ಲರೆ ಕಾಸಿನದು. ಕ್ವಿಂಟಾಲ್‌ಗೆ 40ರಿಂದ 80 ಸಾವಿರ ತರುವ ಅಡಿಕೆ ಆಸೆ ಹುಟ್ಟಿಸುವಂಥದ್ದು. ಇದರಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ರೈತರು ಭತ್ತ, ಜೋಳ, ರಾಗಿ, ದ್ವಿದಳ ಧಾನ್ಯಗಳು ಮುಂತಾದ ಆಹಾರ ಬೆಳೆಗಳನ್ನು ಬೆಳೆಯುವುದನ್ನು ಕೈಬಿಡುತ್ತಿದ್ದಾರೆ. ಅಡಿಕೆ ಬೆಳೆಯತ್ತ ಒಲವು ತೋರುತ್ತಿದ್ದಾರೆ. ಇದರಿಂದಾಗಿ ಅಡಿಕೆ ಬೆಳೆಯ ವಿಸ್ತೀರ್ಣ ದಿನದಿಂದ ದಿನಕ್ಕೆ ವೇಗವಾಗಿ ವಿಸ್ತರಿಸುತ್ತಿದೆ. ಈ ಮೊದಲು ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯುತ್ತಿದ್ದರು. ಈಗ ನೆರೆಯ ಹಾವೇರಿ, ವಿಜಯನಗರ, ಚಿತ್ರದುರ್ಗ, ಧಾರವಾಡ, ಬಾಗಲಕೋಟೆ, ಗದಗ, ತುಮಕೂರು ಹಾಗೂ ಮೈಸೂರು ಜಿಲ್ಲೆಗಳ ರೈತರೂ ಅಡಿಕೆಯ ‘ಸಮೃದ್ಧಿ’ಗೆ ಮಾರು ಹೋಗುತ್ತಿದ್ದಾರೆ.
ರೈತರು ಅಡಿಕೆಯತ್ತ ಆಕರ್ಷಿತರಾಗುವುದಕ್ಕೆ ಮುಖ್ಯ ಕಾರಣ, ಅದು ಲಾಭದಾಯಕ ವಾಣಿಜ್ಯ ಬೆಳೆಯಾಗಿರುವುದು. ಕೆಲ ಬುದ್ಧಿವಂತ ರೈತರು ಅಂತರ ಬೆಳೆಗಳಾಗಿ ಕರಿಮೆಣಸು, ಕೋಕೋ, ಬಾಳೆ, ಅನಾನಸ್ ಮುಂತಾದ ಬೆಳೆಗಳನ್ನು ಬೆಳೆಸಿ ಹೆಚ್ಚುವರಿ ಆದಾಯ ಪಡೆಯುತ್ತಿರುವುದು. ಅಡಿಕೆ ಬೆಲೆಗಳಲ್ಲಿ ಏರಿಳಿತಗಳಿದ್ದರೂ, ಇತರ ಅನೇಕ ಬೆಳೆಗಳಿಗಿಂತ ಉತ್ತಮ ಆದಾಯ ನೀಡುತ್ತಿರುವುದು. ಇದರಿಂದ ಆಸೆಗೆ ಬಿದ್ದ ಬಯಲುಸೀಮೆಯಾದ ಚಿತ್ರದುರ್ಗ ಜಿಲ್ಲೆ ಕೂಡ ಈಗ ಅಡಿಕೆ ಬೆಳೆಯತ್ತ ವಾಲಿದೆ. ಈ ಭಾಗದ ರೈತರು ಪ್ರತಿ ಐದು ವರ್ಷಕ್ಕೊಮ್ಮೆ ಬೆಳೆ ಬದಲಾಯಿಸುತ್ತಾರೆ. ಮೊದಲು ನೆಲಗಡಲೆ ಬೆಳೆಯುತ್ತಿದ್ದವರು ನಂತರ ಸೂರ್ಯಕಾಂತಿ, ಈರುಳ್ಳಿ, ಶುಂಠಿ, ಮೆಕ್ಕೆಜೋಳ ಬೆಳೆಯಲಾರಂಭಿಸಿದರು. ಈಗ ಅದೆಲ್ಲವನ್ನು ಬಿಟ್ಟು ಅಡಿಕೆ ತೋಟ ಮಾಡುತ್ತಿದ್ದಾರೆ.
ಸಮಸ್ಯೆ ಎಂದರೆ, ಅಡಿಕೆ ವರ್ಷಪೂರ್ತಿ ನೀರು ಬೇಡುವ ಬೆಳೆ. ರಾಜ್ಯದಲ್ಲಿ ಅಂತರ್ಜಲ ಕುಸಿತ ಕಾಣುತ್ತಿದೆ. ನೀರಿನ ನಿರ್ವಹಣೆ ಪ್ರಮುಖ ಸವಾಲಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ಮುಂಗಾರು ಕೈ ಕೊಟ್ಟಿದೆ. ಕರಾವಳಿ, ಮಲೆನಾಡು ಭಾಗದಲ್ಲೂ ನೀರಿನ ಕೊರತೆ ಕಾಡುತ್ತಿದೆ. 4ರಿಂದ 8 ಸಾವಿರ ಲೀಟರ್ ಟ್ಯಾಂಕರ್ ನೀರಿಗೆ 7 ಸಾವಿರ ರೂಪಾಯಿ ಕೊಟ್ಟರೂ ನೀರು ಸಿಗದಾಗಿದೆ. ಜೊತೆಗೆ ಎಲೆ ಚುಕ್ಕೆ ರೋಗ, ಹಳದಿ ಎಲೆ ರೋಗ ಬಾಧಿಸುತ್ತದೆ. ನಿಯಂತ್ರಣಕ್ಕೆ ದುಬಾರಿ ಬೆಲೆಯ ರಾಸಾಯನಿಕ ಔಷಧಿಗಳನ್ನು ಸಿಂಪಡಿಸಬೇಕಾಗಿದೆ. ಸಾಮಾನ್ಯವಾಗಿ ಉತ್ಪಾದನಾ ವೆಚ್ಚ, ಕೂಲಿ, ನೀರಾವರಿ, ಗೊಬ್ಬರ ಮತ್ತು ನಿರ್ವಹಣೆ ಸೇರಿ ಅಡಿಕೆ ಬೆಳೆ ವೆಚ್ಚ ನಿರಂತರವಾಗಿ ಏರುತ್ತಿದೆ. ಕೃಷಿ ತಜ್ಞರು ಮತ್ತು ಸಾಂಪ್ರದಾಯಿಕ ಅಡಿಕೆ ರೈತರ ಅಂದಾಜಿನ ಪ್ರಕಾರ, ಕ್ವಿಂಟಾಲ್ ಅಡಿಕೆಗೆ 45ರಿಂದ 50 ಸಾವಿರ ಮೇಲ್ಪಟ್ಟು ದರ ದೊರೆತರೆ ಅದು ಲಾಭ. 35 ಸಾವಿರಕ್ಕಿಂತ ಕೆಳಗೆ ಇಳಿದರೆ ಸಣ್ಣ ಮತ್ತು ಮಧ್ಯಮ ರೈತರು ನಷ್ಟಕ್ಕೊಳಗಾಗಿ ಸಮಸ್ಯೆಗೆ ಸಿಲುಕುತ್ತಾರೆ. ಆತ್ಮಹತ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಅಡಿಕೆ ಬೆಳೆಗಾರರು ಈಗಾಗಲೇ ಒತ್ತಡ ಮತ್ತು ಆತಂಕದಲ್ಲಿದ್ದಾರೆ. ಮುಂಗಾರು ಕೈ ಕೊಟ್ಟಿರುವುದರಿಂದ ನೀರಿನ ಕೊರತೆ ಕಾಡುತ್ತಿದೆ. ಜೊತೆಗೆ ಅಗ್ಗದ ವಿದೇಶಿ ಅಡಿಕೆ ದೇಶದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಗುಜರಾತಿಗೆ ರವಾನೆಯಾಗುತ್ತಿದ್ದ ಕರ್ನಾಟಕದ ಅಡಿಕೆ, ಈ ಬಾರಿ ಸಾಗಣೆ ಸಮಸ್ಯೆಗೆ ಸಿಲುಕಿದೆ. ಕಳೆದ ಒಂದು ವಾರದಿಂದ ಅಡಿಕೆ ಲಾರಿಗಳು ಜಪ್ತಿಯ ನೆಪದಲ್ಲಿ ಮಹಾರಾಷ್ಟ್ರದ ಗಡಿಯಲ್ಲಿ ಕೊಳೆಯುತ್ತ ನಿಂತಿವೆ. ಇದರಿಂದ ಅಡಿಕೆ ದರ ಕುಸಿಯುವ ಭೀತಿ ಶುರುವಾಗಿದೆ. ಈ ನೆಪದಲ್ಲಿ ಶಿವಮೊಗ್ಗದಲ್ಲಿ ಅಡಿಕೆ ಬೆಳೆಗಾರರ ಸಭೆಯೂ ಜರುಗಿದೆ.
ಇದನ್ನು ಓದಿದ್ದೀರಾ?: ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಬಿಜೆಪಿ ಭಂಡರು
ಕರ್ನಾಟಕದಲ್ಲಿ ಅಡಿಕೆ ಬೆಳೆ ಆರ್ಥಿಕವಾಗಿ ಬಲಿಷ್ಠ ಸ್ಥಿತಿಯಲ್ಲಿರಬಹುದು. ಆದರೆ, ನೀರಿನ ಲಭ್ಯತೆ, ರೋಗಬಾಧೆ, ಬೆಲೆಗಳ ಅನಿಶ್ಚಿತತೆಯನ್ನು ಅಲಕ್ಷಿಸುವಂತಿಲ್ಲ. ಹಾಗೆಯೇ ಕೃಷಿಕರು ವಾಣಿಜ್ಯ ಬೆಳೆಗಳತ್ತ ಒಲವು ಹೊಂದುವುದು, ಆಹಾರ ಬೆಳೆಗಳ ಕುಸಿತದಂತಹ ದೀರ್ಘಕಾಲೀನ ಸವಾಲು ಎದುರಾಗುವುದನ್ನು ನಿರ್ಲಕ್ಷಿಸುವಂತಿಲ್ಲ. ಬೆಲೆ ಏರಿಕೆಯಿಂದ ಆಗುವ ಅನಾಹುತವನ್ನು, ಅಧ್ವಾನವನ್ನು ಅಂದಾಜು ಮಾಡಲಾಗುವುದಿಲ್ಲ.
ಈಗಲಾದರೂ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎನ್ನುವುದರ ಕುರಿತು ಸರ್ಕಾರ, ಕೃಷಿ-ತೋಟಗಾರಿಕೆ ಇಲಾಖೆ, ಕೃಷಿಕರು ಕಲೆತು ಕಾರ್ಯಯೋಜನೆ ರೂಪಿಸುವುದರ ಕಡೆ ಗಮನ ಹರಿಸಬೇಕಾಗಿದೆ.




